‘ಸೈಬರ್ ಸ್ಟಾಕಿಂಗ್’ನ ಹೆಚ್ಚುತ್ತಿರುವ ಸಂಕಟ !

ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ‘ಪೋಸ್ಟ್ (ಲೇಖನ)’, ನೀವು ಮಾಡುತ್ತಿರುವ ‘ಚಾಟಿಂಗ್’ (ಸಂಭಾಷಣೆ) ಮತ್ತು ನೀವು ಗಣಕಯಂತ್ರದಿಂದ ಅಂತರ್ಜಾಲದಲ್ಲಿ (ಇಂಟರನೆಟ್‌ದಲ್ಲಿ) ನೋಡುವ ಜಾಲತಾಣ (ಸೈಟ್ಸ್) ಇವುಗಳಿಂದ ನೀವು ತೊಂದರೆಯಲ್ಲಿ ಸಿಲುಕಬಹುದು. ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು; ಆದರೆ ಇದರಿಂದ ನಿಮ್ಮನ್ನು ‘ಬ್ಲ್ಯಾಕ್ ಮೇಲ್’ (ಬೆದರಿಸಿ ಹಣ ಕೇಳುವುದು) ಮಾಡುವ ಸಾಧ್ಯತೆಯಿದೆ. ಸಾಮಾಜಿಕ ಮಾಧ್ಯಮಗಳು ಅಥವಾ ಜಾಲತಾಣಗಳಲ್ಲಿ ನಿಮ್ಮನ್ನು ಹಿಂಬಾಲಿಸುವವರೂ ಇರುತ್ತಾರೆ. ಹೀಗಾಗಬಾರದೆಂದು ಮತ್ತು ಈ ಹಿಂಬಾಲಿಸುವಿಕೆ ನಿಲ್ಲಬೇಕೆಂದು ಏನು ಮಾಡುವುದು ?

 

ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ

 

‘ಸೈಬರ್ ಸ್ಟಾಕಿಂಗ್’ ಅಂದರೆ ಏನು ?

‘ಸೈಬರ್ ಸ್ಟಾಕಿಂಗ್’ (Cyber Stalking) ಇದು ಸೈಬರ್ ಅಪರಾಧದ ಒಂದು ಮುಖವೇ ಆಗಿದೆ. ಇದರಲ್ಲಿ ಯಾರಾದರೂ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹವು ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹವನ್ನು ಅವರ ಅಂತರ್ಜಾಲದ ಮಾಧ್ಯಮದಿಂದ ಹಿಂಬಾಲಿಸುತ್ತಾರೆ ಮತ್ತು ಅವನಿಗೆ ಅಥವಾ ಅವರಿಗೆ ಅನೇಕ ರೀತಿಯಲ್ಲಿ ಹಾನಿ ಮಾಡಲು ಮತ್ತು ಅವನನ್ನು ಅಥವಾ ಅವರನ್ನು ಪೀಡಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ‘ಸೈಬರ್ ಸ್ಟಾಕಿಂಗ್’ ಎಂದು ಹೇಳುತ್ತಾರೆ.

೧. ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿರುವಾಗ ಅಥವಾ ಅವುಗಳನ್ನು ಉಪಯೋಗಿಸುವಾಗ ವಿವಿಧ ತಪ್ಪುಗಳನ್ನು ಮಾಡುತ್ತಾರೆ

‘ಲೈಕ್ (ಇಷ್ಟವಾಯಿತು)’, ‘ಶೇರ್ (ಇತರರಿಗೆ ಹಂಚಿರಿ)’ ಮತ್ತು ‘ಸಬ್‌ಸ್ಕ್ರೈಬ (ಸದಸ್ಯರಾಗಿರಿ)’ ಇವುಗಳಿಂದ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ದಿನದ ಪ್ರಾರಂಭ ಹಾಗೂ ಮುಕ್ತಾಯವು ಸಾಮಾಜಿಕ ಮಾಧ್ಯಮಗಳ ಮೇಲೆ ಒಂದು ಸಲ ಕಣ್ಣಾಡಿಸದೇ ಆಗುವುದಿಲ್ಲ. ನಾವು ವಿವಿಧ ಜಾಲತಾಣಗಳಲ್ಲಿ ‘ಪೋಸ್ಟ್’ಗಳನ್ನು ಪ್ರಸಾರ ಮಾಡುತ್ತಿರುತ್ತೇವೆ. ಅವು ಎಷ್ಟು ಜನರಿಗೆ ಇಷ್ಟವಾದವು ಮತ್ತು ಅವುಗಳನ್ನು ಎಷ್ಟು ಜನರು ಮುಂದಕ್ಕೆ ಕಳುಹಿಸಿದರು, ಎನ್ನುವುದನ್ನು ತಿಳಿದುಕೊಳ್ಳಲು ಅನೇಕರಿಗೆ ಕುತೂಹಲವಿರುತ್ತದೆ. ಇದರಿಂದಾಗಿ ನಾವು ತಿಳಿದೋ ತಿಳಿಯದೆಯೋ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಈ ತಪ್ಪುಗಳು ಕೆಲವೊಮ್ಮೆ ನಮ್ಮನ್ನು ತೊಂದರೆಗಳಲ್ಲಿ ಸಿಲುಕಿಸಬಹುದು. ನಮಗೆ ತಿಳಿಯದೇ ಅನೇಕರು ನಮ್ಮನ್ನು ಹಿಂಬಾಲಿಸುತ್ತಿರುತ್ತಾರೆ, ನಮ್ಮನ್ನು ‘ಫಾಲೋ’ (ಅನುಸರಣೆಯನ್ನು) ಮಾಡುತ್ತಿರುತ್ತಾರೆ. ಅನೇಕರು ತಮ್ಮ ‘ವಾಲ್’ (ಸಾಮಾಜಿಕ ಮಾಧ್ಯಮಗಳ ಮುಖ್ಯ ಪುಟದ ಮೇಲೆ) ಮೇಲೆ ಜನರು ನೋಡಬೇಕೆಂದೇ ‘ಪೋಸ್ಟ’ಗಳನ್ನು ಮಾಡುತ್ತಾರೆ. ಸಹಜವಾಗಿ ಯಾರದಾದರೂ ‘ವಾಲ್’ ಮೇಲೆ ಕಣ್ಣಾಡಿಸಿ ಬಂದರೆ ಮತ್ತು ಅದರಿಂದ ಅವರಿಗೆ ಯಾವುದೇ ತೊಂದರೆಯಾಗದೇ ಇದ್ದರೆ, ಅದು ಅಪರಾಧವಾಗುವುದಿಲ್ಲ. ಆದರೆ ಈ ರೀತಿ ಕಣ್ಣಾಡಿಸುವುದರ ಹಿಂದೆ ಏನಾದರೂ ಬೇರೆ ಉದ್ದೇಶವಿದ್ದರೆ, ಆ ಹಿಂಬಾಲಿಸುವಿಕೆ ಅಪರಾಧ ಆಗಬಹುದು.

೨. ಸಾಮಾಜಿಕ ಮಾಧ್ಯಮಗಳ ಮೇಲೆ ವಿಶಿಷ್ಟ ಉದ್ದೇಶವನ್ನಿಟ್ಟು ಯಾವುದಾದರೊಬ್ಬ ಮಹಿಳೆಯನ್ನು ‘ಆನ್‌ಲೈನ್’ನಲ್ಲಿ ಹಿಂಬಾಲಿಸುವುದು

೨೦೧೩ ರ ಬಳಿಕ ‘ಕ್ರಿಮಿನಲ್ ಲಾ ಅಮೆಂಡಮೆಂಟ್’, ಅಂದರೆ ಅಪರಾಧಗಳ ಕಾಯ್ದೆ ತಿದ್ದುಪಡಿಗನುಸಾರ ೩೫೪ (ಡ) ಈ ಕಲಂ ‘ಸ್ಟಾಕಿಂಗ’ ಅಂದರೆ ಹಿಂಬಾಲಿಸುವುದು, ಈ ಕಾರಣಕ್ಕಾಗಿ ಅಸ್ತಿತ್ವಕ್ಕೆ ಬಂದಿದೆ. ಅದರಂತೆ ಯಾವುದಾದರೊಬ್ಬ ಮಹಿಳೆಯನ್ನು ಹಿಂಬಾಲಿಸುವುದು ಅಪರಾಧವಾಗಿದೆ ಮತ್ತು ಇಂತಹ ಅಪರಾಧಕ್ಕೆ ನಿಗದಿತ ಶಿಕ್ಷೆಯನ್ನು ಅನ್ವಯಿಸಲಗಿದೆ. ಅಪರಾಧ ಮೊದಲ ಬಾರಿಗೆ ಮಾಡಿದ್ದರೆ, ೩ ವರ್ಷಗಳ ವರೆಗೆ ಶಿಕ್ಷೆಯಾಗ ಬಹುದು, ಎರಡನೆಯ ಬಾರಿಯ ಅಪರಾಧಕ್ಕಾಗಿ ೫ ವರ್ಷಗಳ ವರೆಗೆ ಶಿಕ್ಷಿಸಲು ಅವಕಾಶವಿದೆ. ಈ ಶಿಕ್ಷೆಯೊಂದಿಗೆ ದಂಡವನ್ನೂ ವಿಧಿಸಬಹುದು. ಒಂದು ವೇಳೆ ಯಾವುದಾದರೊಬ್ಬ ಮಹಿಳೆಯು ಯಾವುದಾದರೊಬ್ಬ ಪುರುಷನಿಗೆ ಸ್ಪಷ್ಟವಾಗಿ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರೆ ಮತ್ತು ಆದರೂ ಆ ಪುರುಷನು ಅವಳನ್ನು ಹಿಂಬಾಲಿಸುತ್ತಿದ್ದರೆ ಅಥವಾ ‘ಅವಳಿಗೆ ಮಾನಸಿಕ ಹಿಂಸೆ ಆಗುವಂತೆ ವರ್ತಿಸುತ್ತಿದ್ದರೆ, ಅವನನ್ನು ಅಪರಾಧಿಯೆಂದು ಪರಿಗಣಿಸಲಾಗುವುದು. ಇವೆಲ್ಲವೂ ‘ಇಂಟರನೆಟ್’ ಅಥವಾ ‘ಇ-ಮೇಲ್’ ಅಥವಾ ಸಂಚಾರಿವಾಣಿ ಉಪಯೋಗದಿಂದ ನಡೆಯುತ್ತಿದ್ದರೆ, ಅದನ್ನು ಕಿರುಕುಳವೆಂದು ತಿಳಿಯಲಾಗುವುದು. ಈ ತಿದ್ದುಪಡಿಗೊಂಡ ಕಾಯ್ದೆಗನುಸಾರ ಯಾವುದಾದರೊಬ್ಬ ಮಹಿಳೆಗೆ ಯಾವುದಾದರೊಬ್ಬ ಪುರುಷನಿಂದ ದೂರವಾಣಿ, ಸಂದೇಶ, ‘ವಾಟ್ಸ್ ಆಪ್ ಕಾಲ್’, ‘ವಾಟ್ಸ್ ಆಪ್ ಸಂದೇಶ’, ಫೇಸಬುಕ ಕಾಲ್, ಫೇಸ್‌ಬುಕ್ ಸಂದೇಶ ಬರುವುದು, ಅವಳ ಇಚ್ಛೆ ಇಲ್ಲದಿರುವಾಗಲೂ ವಿವಿಧ ‘ಸಿಂಬಾಲ್(ಚಿಹ್ನೆ)’ ಗಳನ್ನು ಕಳುಹಿಸುವುದು, ಇದಕ್ಕೆ ಅವಳನ್ನು ‘ಆನ್‌ಲೈನ್ ಹಿಂಬಾಲಿಸುವುದು’ ಎನ್ನುತ್ತಾರೆ. ಈ ಕಲಂ ಜಾರಿಗೊಳಿಸಿದ ಬಳಿಕ ಈ ವಿಷಯದಲ್ಲಿ ಬಹಳ ಚರ್ಚೆಗಳಾದವು. ಆಗ ಅನೇಕ ಜನರು ‘ಕೇವಲ ಮಹಿಳೆಯರನ್ನು ಮಾತ್ರ ಹಿಂಬಾಲಿಸುತ್ತಾರೆಯೇ?’, ಎನ್ನುವ ಪ್ರಶ್ನೆಯನ್ನು ಕೇಳಿದರು. ಈ ಕಾಯ್ದೆಯಲ್ಲಿ ‘ಪುರುಷರೇ ಆರೋಪಿಗಳಾಗುತ್ತಾರೆ’ ಎಂದು ಪರಿಗಣಿಸಿರುವುದರಿಂದ ‘ಅದು ಸಮಾನತೆಯ ತತ್ತ್ವಕ್ಕೆ ಅಡ್ಡಿ ತರುವಂತಹದ್ದಾಗಿದೆ’, ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು, ಈ ಹಿಂಬಾಲಿಸುವುದರಲ್ಲಿ ಅತ್ಯಧಿಕ ಅಪರಾಧಗಳು ಮಹಿಳೆಯರ ಸಂದರ್ಭದಲ್ಲಿ ನಡೆಯುತ್ತವೆ ಎನ್ನುವ ಸತ್ಯವನ್ನು ನಾವು ನಿರಾಕರಿಸಲಾರೆವು.

೩. ‘ಸ್ಟಾಕಿಂಗ’ನ್ನು ಮಹಿಳೆಯರು ಅಥವಾ ಪುರುಷರು ನಿರ್ಲಕ್ಷಿಸಬಾರದು !

‘ಸ್ಟಾಕಿಂಗ್’ ಎಂಬ ಅಪರಾಧದ ಬಗ್ಗೆ ಹೇಳುವುದಾದರೆ, ಯಾವುದೇ ದೊಡ್ಡ ಅಪರಾಧದ ಮೊದಲ ಹೆಜ್ಜೆಯೆಂದರೆ ಹಿಂಬಾಲಿಸುವಿಕೆ ಆಗಿರುತ್ತದೆ. ಆದುದರಿಂದ ಯಾವುದೇ ‘ಸ್ಟಾಕಿಂಗ್’ ಅನ್ನು ಮಹಿಳೆಯರು ಅಥವಾ ಪುರುಷರು ನಿರ್ಲಕ್ಷಿಸುವುದು ಹಿತಕರವಲ್ಲ. ಒಂದು ವೇಳೆ ಆರೋಪಿಯಿಂದ ಆಗುವ ತೊಂದರೆಯ ಬಗ್ಗೆ ಎಲ್ಲಿಯೂ ದೂರು ಸಲ್ಲಿಸದೇ ಇದ್ದರೆ, ಅವನು ಹಿಂಬಾಲಿಸುವಿಕೆಯು ನಿಮಗೆ ಸಂತೋಷ ನೀಡುತ್ತಿರುವ ಭಾವನೆ ಆರೋಪಿಯ ಮನಸ್ಸಿನಲ್ಲಿ ಬಂದು ತಪ್ಪು ಕಲ್ಪನೆ ನಿರ್ಮಾಣವಾಗಬಹುದು. ಇದರಿಂದ ದೊಡ್ಡ ಅಪರಾಧ ನಡೆಯುವ ಸಾಧ್ಯತೆಯಿರುತ್ತದೆ. ಆದುದರಿಂದ ಸೂಕ್ತ ಸಮಯದಲ್ಲಿ ಇಂತಹ ವಿಷಯಗಳು ಮೊದಲ ಬಾರಿಗೆ ಕಂಡು ಬಂದರೆ, ಅವುಗಳನ್ನು ತಡೆಯಲು ಪ್ರಯತ್ನಿಸಬೇಕು. ಆವಶ್ಯಕತೆಯೆನಿಸಿದರೆ, ಈ ಸಂದರ್ಭದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಬೇಕು.

೪. ‘ಸೈಬರ್ ಸ್ಟಾಕಿಂಗ್’ನಿಂದ ಸಂಬಂಧಿತ ವ್ಯಕ್ತಿಯನ್ನು ‘ಬ್ಲ್ಯಾಕ್ ಮೇಲ್’ ಮಾಡುವುದು

‘ಸೈಬರ್ ಸ್ಟಾಕಿಂಗ್’ನಲ್ಲಿ ಕೆಲವೊಮ್ಮೆ ತಮಾಷೆಗಾಗಿ, ಕೆಲವೊಮ್ಮೆ ಯಾರನ್ನಾದರೂ ಮೋಸಗೊಳಿಸಲು, ಕೆಲವೊಮ್ಮೆ ಮಾಹಿತಿಯನ್ನು ಕ್ರೋಢೀಕರಿಸಲು ‘ಆನ್‌ಲೈನ್’ ಹಿಂಬಾಲಿಸುವಿಕೆಯನ್ನು ಮಾಡಲಾಗುತ್ತದೆ. (ಇಂತಹ ಮಾಹಿತಿಯನ್ನು ಮಾರಾಟ ಮಾಡಿ ಹಣ ಗಳಿಸುವುದು ಒಂದು ಉದ್ಯೋಗವಾಗಿದೆ) ವಿವಿಧ ಸಂಘಟನೆಗಳು ಮತ್ತು ‘ಕಾರ್ಪೊರೇಟ್’ ಸಂಸ್ಥೆಗಳು ಕೆಲವೊಮ್ಮೆ ತಮ್ಮ ಮಾಹಿತಿಗಾಗಿ ಅಥವಾ ಇನ್ನಿತರ ವಿಷಯಗಳಿಗಾಗಿ ತಮ್ಮ ನೌಕರರ ಅಥವಾ ಗ್ರಾಹಕರ ‘ಸೈಬರ ಸ್ಟಾಕಿಂಗ’ ಮಾಡುತ್ತಾರೆ. ಅನೇಕ ಪ್ರಕರಣಗಳಲ್ಲಿ ಗಮನಕ್ಕೆ ಬಂದಿರುವುದೇನೆಂದರೆ, ಯಾವುದಾದರೊಬ್ಬ ವ್ಯಕ್ತಿ ಯಾವೆಲ್ಲ ಜಾಲತಾಣಗಳಿಗೆ ಭೇಟಿ ನೀಡುತ್ತಾನೆ ಎನ್ನುವ ಮಾಹಿತಿಯನ್ನು ಆರೋಪಿ ಪಡೆದುಕೊಳ್ಳುತ್ತಾನೆ. ಈ ಮಾಹಿತಿಯ ಆಧಾರದಲ್ಲಿ ಸಂಬಂಧಿತನನ್ನು ‘ಬ್ಲ್ಯಾಕ ಮೇಲ್’ ಮಾಡಲಾಗುತ್ತದೆ. ಈ ಮಾಹಿತಿಯನ್ನು ಬಹಿರಂಗಗೊಳಿಸದಿರಲು ಹಣದ ಬೇಡಿಕೆಯನ್ನಿಡುವ ಪ್ರಕರಣಗಳು ಕೂಡ ನಡೆಯುತ್ತವೆ.

೫. ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವಾಗ ‘ಪ್ರೈವಸಿ ಸೆಟ್ಟಿಂಗ’ ಮಾಡುವುದು ಆವಶ್ಯಕ !

ಕೆಲವು ಜನರಿಂದ ಖಾಸಗಿ ಜಾಲತಾಣಗಳಲ್ಲಿನ ಅಶ್ಲೀಲ ಸೈಟ್ಸ, ಡೇಟಿಂಗ ಸೈಟ್ಸ, ಫ್ರೆಂಡಶಿಪ್ ಸೈಟ್ಸ, ಚಾಟಿಂಗ ಆಪ್ ಇತ್ಯಾದಿಗಳನ್ನು ಶೋಧಿಸಲಾಗುತ್ತದೆ, ಈ ವಿಷಯ ಇತರರಿಗೆ ತಿಳಿಯಬಾರದು ಎಂಬ ಇಚ್ಛೆ ಎಲ್ಲರಿಗೂ ಇರುತ್ತದೆ. ‘ಸ್ಟಾಕರ್ಸ’ ಇದನ್ನೇ ದುರುಪಯೋಗಿಸಿಕೊಳ್ಳುತ್ತಾರೆ. ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ‘ವೆಬ್ ಕ್ಯಾಮೆರಾ ಹ್ಯಾಕ್ ಮಾಡುವುದು’, ‘ಟೀಮ ವ್ಯೂವರ’ನ ಸಹಾಯದಿಂದ ನಮ್ಮ ಗಣಕಯಂತ್ರದ ಮೇಲೆ ನಿಯಂತ್ರಣವನ್ನು ಸಾಧಿಸುವುದು. ಯಾವುದಾದರೊಂದು ‘ಸಾಫ್ಟವೇರ’ ಅಥವಾ ‘ವೈರಸ್’ಗಳನ್ನು ನಮ್ಮ ಗಣಕಯಂತ್ರದಲ್ಲಿ ಬಿಡುವುದು, ಈ ಮಾರ್ಗಗಳಿಂದ ‘ಸೈಬರ್ ಸ್ಟಾಕಿಂಗ್’ ಆಗುತ್ತಿರುತ್ತದೆ. ಇದನ್ನು ತಡೆಗಟ್ಟಲು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವಾಗ ‘ಪ್ರೈವೆಸಿ ಸೆಟಿಂಗ್’ ಮಾಡಿಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ನಮ್ಮ ಒಪ್ಪಿಗೆಯಿರುವ ವ್ಯಕ್ತಿ ಮಾತ್ರ ನಮ್ಮ ‘ಪೋಸ್ಟ್’ ಅಥವಾ ‘ವಾಲ್’ ನೋಡಬಹುದು. ಪ್ರಚೋದನಾತ್ಮಕ ಮತ್ತು ಅನಾವಶ್ಯಕ ವಿಷಯಗಳನ್ನು ‘ಪೋಸ್ಟ್’ ಮಾಡಬಾರದು, ಅಪರಿಚಿತ ಜನರ ‘ಫ್ರೆಂಡ್ ರಿಕ್ವೆಸ್ಟ್’ ಸಾಮಾಜಿಕ ಮಾಧ್ಯಮಗಳಿಂದ ಸ್ವೀಕರಿಸಬಾರದು, ನಿಮ್ಮ ‘ಲೊಕೇಶನ್’ (ಕಾರ್ಯ ಸ್ಥಳ) ಇತರರಿಗೆ ತಿಳಿಯಬಾರದಂತೆ ಜಾಗರೂಕತೆ ವಹಿಸಬೇಕು, ‘ಪಾಸವರ್ಡ’ (ಸಂಕೇತಾಂಕ)‘ ಸ್ಟ್ರಾಂಗ್’ ಇರಬೇಕು. ಹೀಗೆ ಮಾಡಿ ನಿಮ್ಮನ್ನು ‘ಸ್ಟಾಕಿಂಗ್’ನಿಂದ ರಕ್ಷಿಸಿಕೊಳ್ಳಬಹುದು. ಆವಶ್ಯಕತೆಯಿಲ್ಲದಿರುವಾಗ ‘ವೆಬ್’ ಕ್ಯಾಮೆರಾವನ್ನು ಮುಚ್ಚಿಡಬೇಕು. ಅಪರಿಚಿತ ನಂಬರಿನಿಂದ ಅಥವಾ ಖಾತೆಯಿಂದ ಬಂದ ‘ಲಿಂಕ’ನ್ನು ‘ಕ್ಲಿಕ್’ ಮಾಡಬಾರದು. ಸಂಶಯಾಸ್ಪದ ಅನಿಸುವಂತಹ ಖಾತೆಗಳನ್ನು ‘ಬ್ಲಾಕ್’ ಮಾಡಬೇಕು. ಹೀಗೆ ಮಾಡಿದರೆ, ನಮ್ಮನ್ನು ಯಾರೂ ಮೋಸಗೊಳಿಸಲಾರರು.

– ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ, ವಿಶೇಷ ಸರಕಾರಿ ನ್ಯಾಯವಾದಿಗಳು, ಮುಂಬಯಿ