E-Commerce Warehouse Raid : ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ವೆಬ್‌ಸೈಟ್‌ಗಳಿಂದ ನಕಲಿ ಉತ್ಪಾದನೆಗಳ ಮಾರಾಟ!

ನವದೆಹಲಿ – ಆನ್ಲೈನ್ ವಸ್ತು ಮಾರಾಟ ಮಾಡುವ ವೆಬ್‌ಸೈಟ್‌ಗಳಿಂದ ಪ್ರಮಾಣೀಕೃತವಲ್ಲದ ಉತ್ಪಾದನೆಗಳ ಮಾರಾಟವಾಗುತ್ತಿರುವುದರಿಂದ ಭಾರತೀಯ ಗುಣಮಟ್ಟಗಳ ವಿಭಾಗ (ಬಿಐಎಸ್-ಬ್ಯೂರೋ ಆಫ್ ಇಂಡಿಯನ ಸ್ಟ್ಯಾಂಡರ್ಡ್ಸ) ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಅನೇಕ ಸಂಸ್ಥೆಗಳ ಗೋದಾಮುಗಳ ಮೇಲೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಬಿಐಎಸ್ ಪ್ರಮಾಣಪತ್ರವಿಲ್ಲದ ಸಾವಿರಾರು ಗ್ರಾಹಕ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಾರ್ಚ್ 15 ರಂದು ಈ ಮಾಹಿತಿಯನ್ನು ನೀಡಿದೆ.

ಬಿಐಎಸ್ ತಂಡವು ಮಾರ್ಚ್ 7 ರಂದು ಲಕ್ಷ್ಮಣಪುರಿ (ಉತ್ತರ ಪ್ರದೇಶ) ದಲ್ಲಿನ ಅಮೆಜಾನ್‌ ಗೋದಾಮಿನ ಮೇಲೆ ದಾಳಿ ನಡೆಸಿದಾಗ, ಇಲ್ಲಿ ಬಿಐಎಸ್ ಪ್ರಮಾಣಪತ್ರವಿಲ್ಲದೆ ಮಾರಾಟ ಮಾಡುತ್ತಿದ್ದ 215 ಆಟಿಕೆಗಳು ಮತ್ತು 24 ‘ಹ್ಯಾಂಡ್ ಬ್ಲೆಂಡರ್’ಗಳನ್ನು ವಶಪಡಿಸಿಕೊಂಡಿದೆ. ಫೆಬ್ರವರಿಯಲ್ಲಿ ಹರಿಯಾಣದ ಗುರುಗ್ರಾಮದಲ್ಲಿರುವ ಅಮೆಜಾನ್ ಗೋದಾಮಿನಿಂದ 58 ಅಲ್ಯೂಮಿನಿಯಂ ಫಾಯಿಲ್, 34 ಲೋಹದ ನೀರಿನ ಬಾಟಲಿಗಳು, 25 ಆಟಿಕೆಗಳು, 20 ಹ್ಯಾಂಡ್ ಬ್ಲೆಂಡರ್ ಗಳು, 7 ಪಿವಿ ಸಿ ಕೇಬಲ್‌ಗಳು, 2 ಫುಡ್ ಮಿಕ್ಸರ್‍‌ಗಳು ಮತ್ತು 1 ಸ್ಪೀಕರ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಫ್ಲಿಪ್ಕಾರ್ಟ್ ಗೋದಾಮಿನಿಂದ 500 ಕ್ಕೂ ಹೆಚ್ಚು ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ

ಬಿಐಎಸ್ ಗುರುಗ್ರಾಮದಲ್ಲಿರುವ ‘ಇನ್ಸ್ಟಾಕಾರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್’ ಮೂಲಕ ನಡೆಸಲ್ಪಡುವ ಫ್ಲಿಪ್ಕಾರ್ಟ್ ಗೋದಾಮಿನ ಮೇಲೂ ದಾಳಿ ನಡೆಸಿದೆ. ಇಲ್ಲಿಂದ 534 ಸ್ಟೇನ್ಲೆಸ್ ಸ್ಟೀಲ್ ವ್ಯಾಕ್ಯೂಮ್ ಇನ್ಸುಲೇಟೆಡ್ ಬಾಟಲಿಗಳು, 134 ಆಟಿಕೆಗಳು ಮತ್ತು 41 ಸ್ಪೀಕರ್‍‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿಯಲ್ಲಿ 2 ಗೋದಾಮುಗಳ ಮೇಲೆ ದಾಳಿ ನಡೆಸಿ ಅಂದಾಜು 7 ಸಾವಿರ ಎಲೆಕ್ಟ್ರಿಕ್ ವಾಟರ್ ಹೀಟರ್‍ಗಳು, 4 ಸಾವಿರ ಎಲೆಕ್ಟ್ರಿಕ್ ಫುಡ್ ಮಿಕ್ಸರ್‍ಗಳು, 95 ಎಲೆಕ್ಟ್ರಿಕ್ ರೂಮ್ ಹೀಟರ್‍‌ಗಳು ಮತ್ತು 40 ಗ್ಯಾಸ್ ಸ್ಟವ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾನೂನಿನಲ್ಲಿ ಕಠಿಣ ಶಿಕ್ಷೆ ಮತ್ತು ಭಾರೀ ದಂಡಕ್ಕೆ ಅವಕಾಶವಿದೆ

ಬಿಐಎಸ್ ಕಾನೂನಿನ ಅಡಿಯಲ್ಲಿ, ಅಂತಹ ಅಪರಾಧಗಳಿಗೆ ಕನಿಷ್ಠ 2 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಬಹುದು, ಇದು ಕಳಪೆ ಗುಣಮಟ್ಟದ ಉತ್ಪನ್ನಗಳ ಮೌಲ್ಯಕ್ಕಿಂತ 10 ಪಟ್ಟು ಹೆಚ್ಚಾಗಬಹುದು. ಗಂಭೀರ ಪ್ರಕರಣಗಳಲ್ಲಿ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ.

ಇ-ಕಾಮರ್ಸ್ ಸಂಸ್ಥೆಗಳಿಗೆ ಬಿಐಎಸ್ ನೋಟಿಸ್ ಜಾರಿ

ಅಮೆಜಾನ್, ಫ್ಲಿಪ್ಕಾರ್ಟ್, ಮೀಶೋ, ಮೈಂತ್ರಾ ಬಿಗ್‌ಬಾಸ್ಕೆಟ್‌ನಂತಹ ಪ್ರಮುಖ ಆನ್ಲೈನ್ ಸಂಸ್ಥೆಗಳಿಗೆ ಬಿಐಎಸ್ ನೋಟಿಸ್ ಕಳುಹಿಸಿದೆ ಮತ್ತು ಅವುಗಳಿಗೆ ಬಿಐಎಸ್‌ನಿಂದ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರಾಟಕ್ಕೆ ಪಟ್ಟಿ ಮಾಡಬೇಕೆಂದು ಸೂಚಿಸಲಾಗಿದೆ.