NASA and SpaceX’s’ : ಕೊನೆಗೂ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ !

  • ಜಂಟಿ ಬಾಹ್ಯಾಕಾಶ ಕಾರ್ಯಾಚರಣೆ ಯಶಸ್ವಿ

  • 9 ತಿಂಗಳಲ್ಲಿ ಭೂಮಿ ಮತ್ತು ಸೂರ್ಯನ ನಡುವಿನ ಅಂತರಕ್ಕಿಂತ ಹೆಚ್ಚಿನ ಪ್ರಯಾಣ!

ವಾಷಿಂಗ್ಟನ್ (ಅಮೇರಿಕ) – ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಅಡಚಣೆಗಳಿಂದಾಗಿ ಸುಮಾರು 9 ತಿಂಗಳುಗಳು (286 ದಿನಗಳು) ಬಾಹ್ಯಾಕಾಶದಲ್ಲಿ ಕಳೆದ ನಂತರ, ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕೊನೆಗೂ ಭೂಮಿಗೆ ಮರಳಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 19ರ ಮುಂಜಾನೆ 3.30 ಕ್ಕೆ, ನಾಸಾದ ಈ ಇಬ್ಬರು ಗಗನಯಾತ್ರಿಗಳು ಫ್ಲೋರಿಡಾ ಕರಾವಳಿಯ ಬಳಿ ಸುರಕ್ಷಿತವಾಗಿ ಇಳಿದರು. ಈ ಗಗನಯಾತ್ರಿಗಳ ಕಾರ್ಯಾಚರಣೆ 8 ದಿನಗಳದ್ದಾಗಿತ್ತು; ಆದರೆ ಕೆಲವು ತಾಂತ್ರಿಕ ದೋಷಗಳಿಂದಾಗಿ ಗಗನಯಾತ್ರಿಗಳು 286 ದಿನಗಳ ಕಾಲ ಬಾಹ್ಯಾಕಾಶದಲ್ಲಿಯೇ ಉಳಿಯಬೇಕಾಯಿತು. ಗಗನಯಾತ್ರಿಗಳು ಭೂಮಿಗೆ ಇಳಿದ ಕ್ಷಣದ ವೀಡಿಯೊವನ್ನು ನಾಸಾ ಬಿಡುಗಡೆ ಮಾಡಿದೆ. ವಿಸ್ತೃತ ಕಾರ್ಯಾಚರಣೆಯ ಸಮಯದಲ್ಲಿ, ಇಬ್ಬರು ಗಗನಯಾತ್ರಿಗಳು ಭೂಮಿಯನ್ನು 4,576 ಬಾರಿ ಸುತ್ತಿದರು ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳುವ ಮೊದಲು ಸುಮಾರು 195 ಮಿಲಿಯನ್ ಕಿಲೋಮೀಟರ್ ಪ್ರಯಾಣಿಸಿದರು. ಈ ದೂರವು ಭೂಮಿ ಮತ್ತು ಸೂರ್ಯನ ನಡುವಿನ ಅಂತರಕ್ಕಿಂತ ಹೆಚ್ಚಾಗಿದೆ. ಸೂರ್ಯನು ಭೂಮಿಯಿಂದ ಸುಮಾರು 150 ಮಿಲಿಯನ್ ಕಿಲೋಮೀಟರ್ ದೂರದಲ್ಲಿದ್ದಾನೆ.

1 .ಇಬ್ಬರನ್ನು ವಾಪಸ್ ಕರೆತರಲು ಪ್ರಯತ್ನಗಳು ನಡೆದವು. ಒಂದು ಸಮಯದಲ್ಲಿ ಇಬ್ಬರೂ ಬದುಕಿ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತು; ಆದರೆ ‘ಸ್ಪೇಸ್‌ಎಕ್ಸ್’ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಮುಂದಾಳತ್ವ ಮತ್ತು ‘ನಾಸಾ’ ಸಹಕಾರದಿಂದ ಈ ಕಾರ್ಯಾಚರಣೆ ಯಶಸ್ವಿಯಾಯಿತು.

2.’ನಾಸಾ’ ಮತ್ತು ‘ಸ್ಪೇಸ್‌ಎಕ್ಸ್’ ತಂತ್ರಜ್ಞರ ಸಭೆ ನಡೆಸಿ ಫ್ಲೋರಿಡಾ ಹವಾಮಾನದ ಮುನ್ಸೂಚನೆ ಪಡೆದ ನಂತರ ಹಿಂದಿರುಗುವ ಪ್ರಯಾಣವನ್ನು ಒಂದು ದಿನ ಮುಂಚಿತವಾಗಿ ಪ್ರಾರಂಭಿಸಲು ನಿರ್ಧರಿಸಲಾಯಿತು. ಇಬ್ಬರು ಗಗನಯಾತ್ರಿಗಳು ‘ಸ್ಪೇಸ್‌ಎಕ್ಸ್ ಕ್ಯಾಪ್ಸುಲ್’ ಮೂಲಕ ‘ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ದಿಂದ ಹೊರಟು ಕೆಲವು ಗಂಟೆಗಳ ನಂತರ ‘ಗಲ್ಫ್ ಆಫ್ ಮೆಕ್ಸಿಕೋ’ದಲ್ಲಿ ಇಳಿದರು.

ಜೋ ಬಾಯಡೆನ್ ವಿರುದ್ಧ ಎಲಾನ್ ಮಸ್ಕ್ ಆರೋಪ!

‘ಸ್ಪೇಸ್‌ಎಕ್ಸ್’ ಮುಖ್ಯ ಇಂಜಿನಿಯರ್ ಮತ್ತು ಮುಖ್ಯಸ್ಥ ಎಲಾನ್ ಮಸ್ಕ್ ಈ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ‘ಫಾಕ್ಸ್ ನ್ಯೂಸ್’ ಜೊತೆ ಮಾತನಾಡುವಾಗ, ನಾನು ಈ ಕಾರ್ಯಾಚರಣೆಯನ್ನು ಯೋಜಿಸಲು ಬಾಯಡೆನ್ ಸರ್ಕಾರದ ಅನುಮತಿ ಕೇಳುತ್ತಿದ್ದೆ; ಆದರೆ ಅವರು ಇದಕ್ಕೆ ಆದ್ಯತೆ ನೀಡಲಿಲ್ಲ, ಇಲ್ಲದಿದ್ದರೆ ಹಲವು ತಿಂಗಳುಗಳ ಹಿಂದೆಯೇ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕರೆತರಬಹುದಿತ್ತು. ಟ್ರಂಪ್ ಈ ಕಾರ್ಯಾಚರಣೆಗೆ ಆದ್ಯತೆ ನೀಡಿದ್ದರಿಂದ ಈ ಕ್ಷಣವನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

45 ದಿನಗಳ ‘ಅಕ್ಲಿಮಟೈಸೇಶನ್ ಕಾರ್ಯಕ್ರಮ’ಕ್ಕೆ ಒಳಗಾಗಬೇಕು!

(ಅಕ್ಲಿಮಟೈಸೇಶನ್ ಎಂದರೆ ತೇವಾಂಶ, ಗುರುತ್ವಾಕರ್ಷಣೆ, ತಾಪಮಾನ ಇತ್ಯಾದಿಗಳನ್ನು ಪರಿಗಣಿಸಿ ಪರಿಸರಕ್ಕೆ ಒಗ್ಗಿಕೊಳ್ಳಲು ಮಾಡುವ ಪ್ರಯತ್ನಗಳು!)

ಸುಮಾರು 9 ತಿಂಗಳು ಸಂಪೂರ್ಣವಾಗಿ ವಿಭಿನ್ನ ವಾತಾವರಣದಲ್ಲಿ ವಾಸಿಸಿದ ನಂತರ, ಇಬ್ಬರು ಗಗನಯಾತ್ರಿಗಳ ದೇಹದಲ್ಲಿನ ಬದಲಾವಣೆಯನ್ನು ಸರಿದೂಗಿಸಲು 45 ದಿನಗಳ ‘ಅಕ್ಲಿಮಟೈಸೇಶನ್ ಕಾರ್ಯಕ್ರಮ’ದಲ್ಲಿ ಇರಬೇಕು. ಅದಾದ ನಂತರವಷ್ಟೇ ಇಬ್ಬರೂ ಮೊದಲಿನಂತೆ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಗುವುದು. ಸಂಪೂರ್ಣವಾಗಿ ವಿಭಿನ್ನ ವಾತಾವರಣದಲ್ಲಿ ವಾಸಿಸಿದ್ದರಿಂದ ಇಬ್ಬರ ದೇಹದಲ್ಲಿನ ಬದಲಾವಣೆಗಳು, ದೇಹದಲ್ಲಿನ ಸವೆತ ಅಥವಾ ಬಾಹ್ಯಾಕಾಶ ನಿಲ್ದಾಣದ ವಾತಾವರಣಕ್ಕೆ ಒಗ್ಗಿಕೊಂಡಿರುವುದರಿಂದ ದೇಹದಲ್ಲಿನ ಬದಲಾವಣೆಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಈ ಸಮಯವು ಯೋಜಿತ ಚಿಕಿತ್ಸೆಗೆ ಅವಶ್ಯಕವಾಗಿರುತ್ತದೆ.

45 ದಿನಗಳಲ್ಲಿ, ಭೂಮಿಯ ವಾತಾವರಣ ಮತ್ತು ಮುಖ್ಯವಾಗಿ ಭೂಮಿಯ ಗುರುತ್ವಾಕರ್ಷಣೆಯ ಬಲ ಮತ್ತು ಅದರಿಂದ ಪ್ರಭಾವಿತವಾಗುವ ದೇಹದ ಕ್ರಿಯೆಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಇಬ್ಬರಿಗೆ ಸಹಾಯ ಮಾಡಲಾಗುವುದು.

ಸುನೀತಾ ವಿಲಿಯಮ್ಸ್ ಅವರ ತವರು ಗ್ರಾಮದಲ್ಲಿ ದೇವಿಗೆ ಸಾವಿರಾರು ಕಿಲೋ ತುಪ್ಪ ಅರ್ಪಣೆ!

ಸುನೀತಾ ವಿಲಿಯಮ್ಸ್ ಅವರ ಮೂಲ ಗ್ರಾಮ ಗುಜರಾತ್‌ನ ಝುಲಾಸನ್! ಅವರ ಕುಟುಂಬ ಸದಸ್ಯರು ಇಲ್ಲಿ ವಾಸಿಸುತ್ತಾರೆ. ಅವರು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಾಗ, ಅವರ ಸಂಬಂಧಿಕರು ಹಾಗೂ ಇಡೀ ಗ್ರಾಮವು ಚಿಂತೆಗೆ ಒಳಗಾಯಿತು. ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಹಿಂತಿರುಗಲೆಂದು ಗುಜರಾತ್‌ನಲ್ಲಿ ಅವರ ಸೋದರಸಂಬಂಧಿ ದಿನೇಶ್ ರಾವಲ್ ಯಜ್ಞ ಮಾಡಿದರು. ‘ನಮ್ಮ ಗ್ರಾಮದಲ್ಲಿ ದೇವಿಯನ್ನು ಪ್ರಾರ್ಥಿಸಲು ಪ್ರಾರಂಭಿಸಿದೆವು. ವರದಾಯಿ ದೇವಿಗೆ ಸಾವಿರಾರು ಕಿಲೋ ತುಪ್ಪವನ್ನು ಅರ್ಪಿಸಿದ್ದೇವೆ. ಗ್ರಾಮದ ರಘುನಾಥ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಯಜ್ಞವನ್ನು ಆಯೋಜಿಸಲಾಗಿತ್ತು. ಇಂದು ನಮಗೆ ಸುವರ್ಣ ದಿನವೆಂದು ನನಗೆ ಅನಿಸುತ್ತಿದೆ’ ಎಂದು ದಿನೇಶ್ ರಾವಲ್ ಪ್ರತಿಕ್ರಿಯಿಸಿದರು.