‘ನಾವು ಆಹಾರದಲ್ಲಿ ಬದನೆಕಾಯಿಗಳನ್ನು ನಿಯಮಿತವಾಗಿ ಉಪಯೋಗಿಸುತ್ತೇವೆ. ಹೇಗೆ ಬದನೆಕಾಯಿಗಳು ವಿವಿಧ ಆಕಾರಗಳಲ್ಲಿ ಬರುತ್ತವೆಯೋ, ಅದೇ ರೀತಿ ಅಡುಗೆಯಲ್ಲಿ ಅವುಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಬದನೆಕಾಯಿಗಳ ಪಲ್ಯ, ಬೋಂಡಾ, ಎಣ್ಣೆಗಾಯಿ ಇತ್ಯಾದಿ ಅನೇಕ ರೀತಿಯಲ್ಲಿ ನಾವು ಬದನೆಕಾಯಿಗಳನ್ನು ತಿನ್ನುತ್ತೇವೆ. ನಾವು ಮನೆಯಲ್ಲಿಯೇ ವರ್ಷವಿಡಿ ಬದನೆಕಾಯಿಗಳನ್ನು ಬೆಳೆಸಬಹುದು’.
೧. ಬೀಜಗಳಿಂದ ಸಸಿಗಳ ಉತ್ಪತ್ತಿ
ಬದನೆಕಾಯಿ ಗಿಡಗಳನ್ನು ಬೆಳೆಸುವ ಮೊದಲು ನಮಗೆ ಅವುಗಳ ಸಸಿಗಳನ್ನು ತಯಾರಿಸಬೇಕಾಗುತ್ತದೆ. ಬದನೆಕಾಯಿಯ ಬೀಜಗಳನ್ನು ನರ್ಸರಿಯಿಂದ ತರಬೇಕು. (ಕೆಲವು ನಗರಗಳಲ್ಲಿ ಬೀಜಗಳ ಅಂಗಡಿಗಳಿರುತ್ತವೆ. ಅಲ್ಲಿಯೂ ಬದನೆಕಾಯಿಯ ಬೀಜಗಳು ಸಿಗುತ್ತವೆ. – ಸಂಕಲನಕಾರರು) ಬದನೆಕಾಯಿಗಳ ವಿವಿಧ ಪ್ರಕಾರಗಳಿಗನುಸಾರ ಬೇರೆಬೇರೆ ಬೀಜಗಳು ಸಿಗುತ್ತವೆ. ನಮಗೆ ಬೇಕಾಗಿರುವಂತಹ ಬೀಜಗಳನ್ನು ತರಬೇಕು. ಸಸಿಗಳ ಉತ್ಪತ್ತಿ ಮಾಡಲು ಅಗಲವಾದ ಪಾತ್ರೆ (ಟ್ರೇ), ಕಾಗದದ ಲೋಟ ಅಥವಾ ಪ್ಲಾಸ್ಟಿಕ್ ಅಥವಾ ರಟ್ಟಿನ ಚಿಕ್ಕ ಪೆಟ್ಟಿಗೆಯನ್ನು ತೆಗೆದುಕೊಳ್ಳಬೇಕು. ಅವುಗಳಿಗೆ ಕೆಳಗೆ ನೀರು ಹರಿದು ಹೋಗಲು ತೂತುಗಳನ್ನು ಮಾಡಬೇಕು. ಇದರಲ್ಲಿ ‘ಪ್ಯಾಟಿಂಗ್ ಮಿಕ್ಸ’ನ್ನು (ಸಾವಯವ ಗೊಬ್ಬರವನ್ನು ಹಾಕಿದ ಮಣ್ಣನ್ನು) ಅರ್ಧಕ್ಕಿಂತ ಸ್ವಲ್ಪ ಹೆಚ್ಚು ತುಂಬಿಸಿ ಹಸಿ ಮಾಡಿಕೊಳ್ಳಬೇಕು. (‘ಪ್ಯಾಟಿಂಗ್ ಮಿಕ್ಸ್’ ಬದಲಿಗೆ ನೈಸರ್ಗಿಕ ಪದ್ಧತಿಯಿಂದ ಜೀವಾಮೃತವನ್ನು ಬಳಸಿ ಕೊಳೆತು ತಯಾರಿಸಿದ ಕಸಕಡ್ಡಿಗಳ ಹ್ಯೂಮಸ್ (ಫಲವತ್ತಾದ ಮಣ್ಣನ್ನೂ) ಬಳಸಬಹುದು. – ಸಂಕಲನಕಾರರು) ಮಣ್ಣನ್ನು ಸಮನಾಗಿ ಹರಡಿ ಅದರ ಮೇಲೆ ಸಾಲಾಗಿ ಬದನೆಕಾಯಿಯ ಬೀಜಗಳನ್ನು ಹರಡಬೇಕು. ಸಾಧ್ಯವಿದ್ದಷ್ಟು ಬದನೆಕಾಯಿಗಳ ವಿವಿಧ ಪ್ರಕಾರಗಳಿಗಾಗಿ ಬೇರೆ ಬೇರೆ ಅಗಲ ಪಾತ್ರೆ ಅಥವಾ ಪೆಟ್ಟಿಗೆಗಳನ್ನು ಉಪಯೋಗಿಸಬೇಕು. ಬೀಜಗಳ ಮೇಲೆ ಅರ್ಧದಿಂದ ಮುಕ್ಕಾಲು ಇಂಚು ಸಾವಯವ ಗೊಬ್ಬರದ ಮಿಶ್ರಣವನ್ನು ಮಾಡಿದ ಮಣ್ಣನ್ನು ಹರಡಿ ಜಾಳಿಗೆಯಿಂದ ಅಥವಾ ‘ಸ್ಪ್ರೇಯರ್’ನಿಂದ ನೀರನ್ನು ಸಿಂಪಡಿಸಬೇಕು. ಬೀಜಗಳನ್ನು ಇರುವೆ ಬರದಂತಹ ಜಾಗದಲ್ಲಿ ನೆರಳಿನಲ್ಲಿ; ಆದರೆ ಸೂರ್ಯನ ಪ್ರಕಾಶ ಸಿಗುವಂತೆ, ಪೆಟ್ಟಿಗೆಗಳಲ್ಲಿಡಬೇಕು. ೫ ರಿಂದ ೭ ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ‘ಸ್ಪ್ರೇ’ದಿಂದ ನಿಯಮಿತವಾಗಿ ನೀರನ್ನು ಸಿಂಪಡಿಸುತ್ತಿರಬೇಕು. ನೀರು ಹೆಚ್ಚು ಹಾಕಿದರೆ ಸಸಿಗಳು ಅಡ್ಡಬೀಳುತ್ತವೆ. ಆದುದರಿಂದ ನೀರನ್ನು ಸ್ವಲ್ಪವೇ ಸಿಂಪಡಿಸಬೇಕು. ಸುಮಾರು ೩-೪ ವಾರಗಳಲ್ಲಿ ಸಸಿಗಳು ದೊಡ್ಡವಾಗುತ್ತವೆ. ಸಸಿಗಳು ೬ ರಿಂದ ೮ ಇಂಚು ಎತ್ತರವಾದ ಮೇಲೆ ಅಥವಾ ಅವುಗಳಿಗೆ ೪ ರಿಂದ ೬ ಎಲೆಗಳು ಬಂದ ಮೇಲೆ, ನಾವು ಅವುಗಳನ್ನು ಬೇರೆ ಕಡೆ ನೆಡಬಹುದು.
೨. ಬದನೆಕಾಯಿಯ ಸಸಿಗಳ ಮರುನೆಡುವಿಕೆ
ಬದನೆಕಾಯಿಯ ಒಂದು ಸಸಿಗಾಗಿ ೧೫ ರಿಂದ ೨೦ ಲೀಟರ್ ಕ್ಷಮತೆಯ ಒಂದು ಕುಂಡ ಸಾಕಾಗುತ್ತದೆ. ಕುಂಡದ ಆಳವು ಒಂದರಿಂದ ಒಂದೂವರೆ ಅಡಿಯಿರುವುದು ಆವಶ್ಯಕವಾಗಿದೆ. ಕುಂಡದ ತಳದಲ್ಲಿ ಮತ್ತು ಎಲ್ಲ ಬದಿಗಳಲ್ಲಿ ಅವಶ್ಯಕವಿದ್ದಷ್ಟು ತೂತುಗಳನ್ನು ಮಾಡಿ ಕುಂಡವನ್ನು ಮಣ್ಣಿನಿಂದ ತುಂಬಿಕೊಳ್ಳಬೇಕು. ಒಳಗಿನ ಸಾವಯವ ಗೊಬ್ಬರಮಿಶ್ರಿತ ಮಣ್ಣನ್ನು ಹಸಿ ಮಾಡಿಕೊಂಡು ಮಧ್ಯಭಾಗದಲ್ಲಿ ತಗ್ಗು ಮಾಡಿ ಸಸಿಯನ್ನು ನೆಟ್ಟು ಅದರ ಸುತ್ತಲೂ ಕೈಯಿಂದ ನಿಧಾನವಾಗಿ ಮಣ್ಣನ್ನು ಒತ್ತಬೇಕು. ಸ್ವಲ್ಪ ನೀರನ್ನೂ ಹಾಕಬೇಕು. ಬದನೆಕಾಯಿಯ ಸಸಿಗಳಿಗೆ ಬದನೆಕಾಯಿಗಳು ಬಂದ ನಂತರ ಸಸಿಗಳಿಗೆ ಆಧಾರದ ಆವಶ್ಯಕತೆ ಇರುತ್ತದೆ; ಆದುದರಿಂದ ಸಸಿ ಚಿಕ್ಕದಿರುವಾಗಲೇ ಕುಂಡದಲ್ಲಿ ಸಸಿಯ ಬದಿಗೆ ಒಂದು ಕೋಲನ್ನು ನೆಡಬೇಕು. ಕುಂಡವು ದೊಡ್ಡದಿದ್ದರೆ, ೨ ಸಸಿಗಳ ನಡುವೆ ಒಂದರಿಂದ ಒಂದೂವರೆ ಅಡಿ ಅಂತರವಿಡಬೇಕು. ಭೂಮಿಯ ಮೇಲೆ ಸಸಿಗಳನ್ನು ನೆಡುವುದಾದರೆ, ೨ ಸಸಿಗಳ ನಡುವೆ ಒಂದೂವರೆ ಅಡಿ ಮತ್ತು ೨ ಸಾಲುಗಳಲ್ಲಿ ೨ ಅಡಿ ಅಂತರವನ್ನು ಇಡಬೇಕು. ಆಧಾರವನ್ನು ಕೊಡಲು ಪ್ರತಿಯೊಂದಕ್ಕೆ ೧ ಕೋಲನ್ನು ನೆಡಬೇಕು. ಸಸಿ ನೆಟ್ಟಗೆ ನಿಂತ ನಂತರ ಅದನ್ನು ಕೋಲಿಗೆ ದಪ್ಪ ದಾರದಿಂದ (ಹಗ್ಗದಿಂದ) ಕಟ್ಟಬೇಕು; ಆದರೆ ದಾರವನ್ನು ರೆಂಬೆಗೆ ಗಟ್ಟಿಯಾಗಿ ಕಟ್ಟಬಾರದು.
೩. ಬದನೆಕಾಯಿಯ ಗಿಡಗಳ ಬಗ್ಗೆ ವಹಿಸಬೇಕಾದ ಕಾಳಜಿ
೩ ಅ. ಭೂಮಿಯ ಸಮೀಪದ ಎಲೆಗಳನ್ನು ಕತ್ತರಿಸಬೇಕು : ಸಸಿಗಳು ಮಣ್ಣಿನಲ್ಲಿ ಸರಿಯಾಗಿ ಬೇರೂರಿದ ನಂತರ ಚೆನ್ನಾಗಿ ಬೆಳೆಯುತ್ತವೆ. ಸಸಿಯ ಭೂಮಿಯ ಸಮೀಪದ ಎಲೆಗಳನ್ನು ಕತ್ತರಿಸಿ ಸಸಿಯ ಬುಡದಲ್ಲಿ ಹರಡಬೇಕು. ರೆಂಬೆ ಮತ್ತು ಎಲೆಗಳ ಮಧ್ಯಭಾಗದಲ್ಲಿ ಚಿಕ್ಕ ಎಲೆಗಳಿದ್ದರೆ, ಅವುಗಳನ್ನೂ ಕತ್ತರಿಸಬೇಕು. ಮಣ್ಣಿಗೆ ಬಿಸಿಲು ಸರಿಯಾಗಿ ತಲುಪುವಂತೆ ಸಸಿಯ ಕೆಳಗಿನ ಭಾಗದಲ್ಲಿನ ಎಲೆಗಳನ್ನು ಸ್ವಲ್ಪ ಸಮಯ ತೆಗೆಯಬೇಕು. ಸಸಿಯ ಮೇಲ್ಭಾಗವನ್ನು (ತುದಿಯನ್ನು) ಕತ್ತರಿಸಿದರೆ ಸಸಿಗಳು ಅಡ್ಡ ಬೆಳೆದು ಹೆಚ್ಚು ರೆಂಬೆಗಳು ಒಡೆದು ಹೆಚ್ಚು ಬದನೆಕಾಯಿಗಳು ಸಿಗುತ್ತವೆ.
೩ ಆ. ನೀರು ಮತ್ತು ಗೊಬ್ಬರವನ್ನು ಹಾಕುವುದು : ಬದನೆಕಾಯಿಯ ಸಸಿಗಳಿಗೆ ನೀರು ಅಗತ್ಯವಿದ್ದಷ್ಟು ಮತ್ತು ನಿಯಮಿತವಾಗಿ ಹಾಕಬೇಕು. ಇದರಿಂದ ಗಿಡಗಳು ಆರೋಗ್ಯವಂತವಾಗುವವು. ಹೊದಿಕೆಯನ್ನು ಅಗತ್ಯವಿದ್ದಷ್ಟು ಉಪಯೋಗಿಸಿದರೆ ಮಣ್ಣಿನಲ್ಲಿ ತೇವಾಂಶ ಉಳಿಯುವುದು. (ಗಿಡಗಳ ಬುಡದಲ್ಲಿ ಕಸಕಡ್ಡಿಗಳನ್ನು ಹರಡುವುದಕ್ಕೆ ಇಲ್ಲಿ ಹೊದಿಕೆ ಎನ್ನಲಾಗಿದೆ. – ಸಂಕಲನಕಾರರು) ಪ್ರತಿ ೧೫ ದಿನಗಳಿಗೊಮ್ಮೆ (೧೦ ಪಟ್ಟು ನೀರು ಹಾಕಿದ ಜೀವಾಮೃತ ಇತ್ಯಾದಿ) ದ್ರವರೂಪ ಗೊಬ್ಬರವನ್ನು ಸಿಂಪಡಿಸುವುದು ಮತ್ತು ೨-೩ ವಾರಗಳಿಗೊಮ್ಮೆ ಕಂಪೋಸ್ಟ ಗೊಬ್ಬರ (ಒಂದು ರೀತಿಯ ಸಾವಯವ ಗೊಬ್ಬರ) ವನ್ನು ಹಾಕುತ್ತಿರಬೇಕು. ಕಂಪೋಸ್ಟನ್ನು ಹಾಕುವಾಗ ಅದನ್ನು ಹೊದಿಕೆಯ ಕೆಳಗೆ ಹಾಕಿ ಅದರ ಮೇಲೆ ಪುನಃ ಹೊದಿಕೆ ಹಾಕಬೇಕು.
೩ ಇ. ಕೀಟಗಳ ವ್ಯವಸ್ಥೆ : ಬದನೆಕಾಯಿಯ ಗಿಡಗಳಿಗೆ ಗಿಡಹೇನುಗಳು ಮತ್ತು ಹುಡಿ ತಿಗಣೆ ಈ ಕೀಟಗಳ ತೊಂದರೆಯಾಗುತ್ತದೆ. ಇದಕ್ಕಾಗಿ ನಿಯಮಿತವಾಗಿ ಗಿಡಗಳ ನಿರೀಕ್ಷಣೆಯನ್ನು ಮಾಡುತ್ತಿರಬೇಕು. ಇಂತಹ ಕೀಟಗಳು ಕಾಣಿಸಿದ ತಕ್ಷಣ ಅವುಗಳನ್ನು ಕೂಡಲೇ ತೆಗೆದೊಗೆಯಬೇಕು. ಪೈಪನಿಂದ ನೀರನ್ನು ಸ್ಪ್ರೇ ಮಾಡಿದರೂ ಕೀಟಗಳು ಹೋಗುತ್ತವೆ. ‘ನಿಮಾರ್ಕ (ಬೇವುಸೊಪ್ಪಿನ ಅರ್ಕ) ಅಥವಾ ಗೋಮೂತ್ರ ಅಥವಾ ಇತರ ಕೆಲವು ಸಾವಯವ ಕೀಟಕನಾಶಕಗಳಿದ್ದರೆ, ಅವುಗಳನ್ನು ಸಿಂಪಡಿಸಬೇಕು’, ಇದರಿಂದ ಕೀಟಗಳು ಹರಡುವುದಿಲ್ಲ. ಈ ಬೆಳೆಗಳಿಗೆ ಹಣ್ಣಿನನೊಣಗಳ ತೊಂದರೆಯೂ ಬಹಳಷ್ಟು ಇರುತ್ತದೆ. ಅದಕ್ಕಾಗಿ ಮನೆಯಲ್ಲಿಯೇ ಬಲೆಗಳನ್ನು ತಯಾರಿಸಿ ತೋಟದಲ್ಲಿಟ್ಟರೆ, ಅವುಗಳ ಮೇಲೆಯೂ ಒಳ್ಳೆಯ ರೀತಿಯಲ್ಲಿ ನಿಯಂತ್ರಣವನ್ನು ಪಡೆಯಬಹುದು.
೩ ಇ ೧. ಹಣ್ಣಿನನೊಣಗಳಿಗೆ ಬಲೆಗಳನ್ನು ತಯಾರಿಸುವುದು : ಪ್ಲಾಸ್ಟಿಕ್ ಬಾಟಲಿಯ ಬಾಯಿಯನ್ನು ಕತ್ತರಿಸಬೇಕು. ಅದರೊಳಗೆ ಎಣ್ಣೆ, ಜೆಲ್ಲಿ, ತೆಳು ಬೆಲ್ಲ ಮುಂತಾದ ಯಾವುದಾದರೊಂದು ಅಂಟು ಪದಾರ್ಥವನ್ನು ಬಾಟಲಿಯ ಕೆಳಗಡೆಗೆ ಹಾಕಬೇಕು. ಅದರ ಮೇಲೆ ಸಣ್ಣ ಬಟ್ಟಲಿನಲ್ಲಿ ಸಿಹಿ ಹಣ್ಣಿನ ತುಂಡುಗಳನ್ನು ಇಡಬೇಕು. ಬಾಟಲಿಯ ಮೇಲಿನ ಎಲ್ಲ ಬದಿಗಳಲ್ಲಿ ಸುಮಾರು ೧ ಸೆಂ.ಮೀ. ವ್ಯಾಸದ ತೂತುಗಳನ್ನು ಮಾಡಬೇಕು. ಬಾಟಲಿಯ ಮೇಲಿನ ಭಾಗಕ್ಕೆ ಪ್ಲಾಸ್ಟಿಕ್ ಕಾಗದವನ್ನು ಸುತ್ತಿಡಬೇಕು. ಪಕ್ಕದ ತೂತುಗಳಿಂದ ನೊಣಗಳು ಒಳಗೆ ಹೋಗಿ ಹೊರಗೆ ಬರುವ ಪ್ರಯತ್ನವನ್ನು ಮಾಡುವಾಗ ಕೆಳಗಿರುವ ಅಂಟು ದ್ರವದ ಮೇಲೆ ಬಿದ್ದು ಅದಕ್ಕೆ ಅಂಟಿಕೊಳ್ಳುತ್ತವೆ. ಮೇಲ್ಛಾವಣಿಯ ತೋಟಕ್ಕಾಗಿ ಇಂತಹ ೨-೩ ಬಾಟಲಿಗಳು ಹಣ್ಣುನೊಣಗಳಿಗೆ ಬಲೆಗಳೆಂದು ಸಾಕಾಗುತ್ತವೆ.
೩ ಈ. ಪರಾಗಸ್ಪರ್ಶ : ಬದನೆಕಾಯಿಯ ಸಸಿಗೆ ಸುಮಾರು ಒಂದುಕಾಲಿನಿಂದ ಒಂದೂವರೆ ತಿಂಗಳಿನಲ್ಲಿ ಹೂವುಗಳು ಬರತೊಡಗುತ್ತವೆ. ಈ ಬೆಳೆಗಳಲ್ಲಿ ತನ್ನಷ್ಟಕ್ಕೆ ತಾನೇ ಪರಾಗಸ್ಪರ್ಶವಾಗುತ್ತದೆ. ಒಂದೇ
ಹೂವಿನಲ್ಲಿ ಸ್ತ್ರೀ ಮತ್ತು ಪುರುಷ ಹೀಗೆ ಎರೆಡೂ ಕೇಸರವಿರುವುದರಿಂದ ಪರಾಗಸ್ಪರ್ಶ ಮಾಡಲು ಸಣ್ಣಗಾಳಿಯೂ ಸಾಕಾಗುತ್ತದೆ. ಹೂವುಗಳು ಉದುರುತ್ತಿದ್ದರೆ, ಮೆಲ್ಲಗೆ ಚುಟಕಿ ಹೊಡೆದರೆ, ಪರಾಗಸ್ಪರ್ಶವಾಗಿ ಹಣ್ಣುಗಳು ಬರುತ್ತವೆ.
೪. ಬದನೆಕಾಯಿಗಳ ಕೊಯ್ಲು
ಬದನೆಕಾಯಿಗಳು ಆದನಂತರ ೧೫ ರಿಂದ ೨೦ ದಿನಗಳಲ್ಲಿ ಅವುಗಳನ್ನು ತೆಗೆಯಬಹುದು. ಬದನೆಕಾಯಿಯನ್ನು ಒತ್ತಿ ನೋಡಿದಾಗ ಕೆಲವು ಸ್ವಲ್ಪ ಗಟ್ಟಿ ಅನಿಸುತ್ತವೆ, ಅವುಗಳನ್ನು ತೆಗೆಯಬಹುದು. ಬದನೆಕಾಯಿಗಳನ್ನು ಕೈಯಿಂದ ಮುರಿದು ಅಥವಾ ಎಳೆದು ತೆಗೆಯಬಾರದು. ಯಾವಾಗಲೂ ಕತ್ತರಿ ಅಥವಾ ಚೂಪಾಗಿರುವ ಚಾಕುವಿನ ಸಹಾಯದಿಂದ ತೆಗೆಯಬೇಕು. ಗಿಡಕ್ಕೆ ಪೆಟ್ಟಾಗುವಂತಹದನ್ನು ಏನೂ ಮಾಡಬಾರದು.
೫. ಹೆಚ್ಚು ಉತ್ಪನ್ನ ಬರಲು ಮಾಡಬೇಕಾದ ಉಪಾಯಯೋಜನೆ
ಒಮ್ಮೆ ಬದನೆಕಾಯಿಗಳು ಬರತೊಡಗಿದರೆ ಅವು ಮುಂದಿನ ೬-೭ ತಿಂಗಳುಗಳ ವರೆಗೆ ಬರುತ್ತವೆ. ಅನಂತರ ಬದನೆಕಾಯಿಗಳ ಆಕಾರ ಮತ್ತು ಸಂಖ್ಯೆಗಳು ಕಡಿಮೆಯಾಗುತ್ತವೆ. ಇಂತಹ ಸಮಯದಲ್ಲಿ ಸಸಿಗಳ ತುದಿಗಳನ್ನು ಕತ್ತರಿಸಬೇಕು. ಚೆನ್ನಾಗಿರುವ ೩-೪ ರೆಂಬೆಗಳು ಮತ್ತು ೮ ರಿಂದ ೧೦ ಒಳ್ಳೆಯ ಎಲೆಗಳನ್ನಿಟ್ಟು ಉಳಿದ ಭಾಗವನ್ನು ಕತ್ತರಿಸಬೇಕು. ಈ ಕೆಲಸವನ್ನು ಹೆಚ್ಚು ಬಿಸಿಲಿರುವಾಗ ಬೇಸಿಗೆಯಲ್ಲಿ ಮಾಡದೇ ಆದಷ್ಟು ಮಳೆಗಾಲದಲ್ಲಿ ಮಾಡಬೇಕು. ಸುಮಾರು ಒಂದು ತಿಂಗಳಲ್ಲಿ ಪುನಃ ಹೊಸ ಚಿಗುರು ಒಡೆಯುತ್ತದೆ ಮತ್ತು ಪುನಃ ಮೊದಲಿನಂತೆ ಬದನೆಕಾಯಿಗಳು ಸಿಗುತ್ತವೆ; ಆದರೆ ನೀರು ಗೊಬ್ಬರವನ್ನು ಹಾಕುವ ಸಮಯವನ್ನು ಅತ್ಯಂತ ಅಚ್ಚುಕಟ್ಟಾಗಿ ಪಾಲಿಸಬೇಕು. ನಾಲ್ಕು ಜನರ ಕುಟುಂಬಕ್ಕಾಗಿ ೧೫ ರಿಂದ ೨೦ ಸಸಿಗಳನ್ನು ನೆಡಬೇಕು. ಕತ್ತರಿಸಿದ ನಂತರ ಎರಡನೇ ಬೆಳೆಯು ಸಮಾಧಾನಕರವಾಗಿ ಬರದಿದ್ದರೆ, ಎರಡನೇ ಸಲ ಸಸಿಗಳ ನಾಟಿಯನ್ನು ಮಾಡುವ ಸಿದ್ಧತೆಯನ್ನು ಮಾಡಬೇಕು; ಆದರೆ ಪುನಃ ಅದೇ ಮಣ್ಣಿನಲ್ಲಿ ಬದನೆಕಾಯಿಯ ಹೊಸ ಸಸಿಗಳನ್ನು ನೆಡಬಾರದು.
– ಶ್ರೀ. ರಾಜನ ಲೋಹಗಾಂವಕರ, ಟಿಟವಾಳಾ, ಠಾಣೆ ಜಿಲ್ಲೆ. (೨೨.೫.೨೦೨೧)