ಕರ್ಣಾವತಿ (ಗುಜರಾತ) – ಗುಜರಾತದಲ್ಲಿ ಕಳೆದ ಕೆಲವು ದಿನಗಳಿಂದ ಬೀಳುವ ಧಾರಾಕಾರ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ನೆರೆ ಸ್ಥಿತಿ ಉಂಟಾಗಿದೆ. ಕಳೆದ ೩ ದಿನದ ಮಳೆಯಿಂದ ಮತ್ತು ನೆರೆಯಿಂದ ೨೬ ಜನರು ಸಾವನ್ನಪ್ಪಿದ್ದಾರೆ. ನೆರೆಪೀಡಿತ ಪ್ರದೇಶದಿಂದ ೧೮ ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
೧. ಗುಜರಾತ ಸರಕಾರವು ನೀಡಿರುವ ಮಾಹಿತಿಯ ಪ್ರಕಾರ ಮೊರಬಿ, ವಡೋದರ, ಭರೂಚ, ಜಾಮನಗರ, ಅರವಲಿ, ಪಂಚಮಹಲ್, ದ್ವಾರಕಾ ಮತ್ತು ಡಾಂಗ ಈ ಜಿಲ್ಲೆಯಲ್ಲಿನ ತಲಾ ಒಂದೊಂದು ನಾಗರಿಕರು ಸಾವನ್ನಪ್ಪಿದ್ದಾರೆ. ಆನಂದ ಜಿಲ್ಲೆಯಲ್ಲಿ ೬, ಕರ್ಣಾವತಿಯಲ್ಲಿ ೪ ಮತ್ತು ಗಾಂಧಿನಗರ, ಖೇಡಾ, ಮಹಿಸಾಗರ, ದಾಹೊಡ ಮತ್ತು ಸುರೇಂದ್ರ ನಗರ ಜಿಲ್ಲೆಯಲ್ಲಿ ತಲಾ ೨ ಜನರು ಸಾವನ್ನಪ್ಪಿದ್ದಾರೆ. ವಡೋದರ (ಬಡೋದಾಗೆ ಎಲ್ಲಕ್ಕಿಂತ ಹೆಚ್ಚು ಹಾನಿ ಉಂಟಾಗಿದ್ದು ನಗರದಲ್ಲಿನ ಕೆಲವು ಪ್ರದೇಶದಲ್ಲಿ ೧೦ ರಿಂದ ೧೨ ಅಡಿಯವರಿಗೆ ನೀರು ಸಂಗ್ರಹವಾಗಿತ್ತು. ನೆರೆಯಿಂದ ರಕ್ಷಿಸಿಕೊಳ್ಳಲು ಅನೇಕರು ಮನೆಯ ಛಾವಣಿಯ ಆಸರೆ ಪಡೆದರು. ವಡೋದರ ಇಲ್ಲಿಯ ಸಾವಿರಾರು ಜನರನ್ನು ರಾಷ್ಟ್ರೀಯ ಆಪತ್ತು ತಂಡದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಹಾಗೂ ರಾಜ್ಯ ವಿಪತ್ತು ತಂಡದಿಂದ ಕೂಡ ಅನೇಕ ತಂಡಗಳು ಅಲ್ಲಲ್ಲಿ ಸಹಾಯ ಕಾರ್ಯ ಮಾಡುತ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಸೈನ್ಯವೂ ಕೂಡ ಸಹಭಾಗಿ ಆಗಿದೆ.
೨. ಗುಜರಾತ ಸರಕಾರದ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯದಲ್ಲಿನ ೧೪೦ ಜಲಾಶಯಗಳು ಸಂಪೂರ್ಣವಾಗಿ ತುಂಬಿತ್ತು ೨೪ ನದಿಗಳು ತುಂಬಿ ಹರಿಯುತ್ತಿವೆ. ಆದ್ದರಿಂದ ಅಕ್ಕ ಪಕ್ಕದ ಪರಿಸರಕ್ಕೆ ಅಪಾಯದ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿನ ೨೦೬ ಆಣೆಕಟ್ಟುಗಳಲ್ಲಿ ೧೨೨ ಆಣೆಕಟ್ಟಿನ ಪರಿಸರದಲ್ಲಿನ ಅತಿ ಸೂಕ್ಷ್ಮ ಪ್ರದೇಶ ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಧಾನಮಂತ್ರಿ ಮೋದಿ ಇವರಿಂದ ರಾಜ್ಯಕ್ಕೆ ಸಹಾಯದ ಆಶ್ವಾಸನೆ
ಗುಜರಾತ್‌ನ ಕೆಲವು ಪ್ರದೇಶಗಳಲ್ಲಿ ಆಹಾರ ಧಾನ್ಯದ ಕೊರತೆ ಕಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತ ರಾಜ್ಯದಲ್ಲಿನ ಆಹಾರ ಧಾನ್ಯ ಸಂಗ್ರಹದ ಮಾಹಿತಿ ಪಡೆದರು. ಹಾಗೂ ಇದು ನೈಸರ್ಗಿಕ ಆಪತ್ತನ್ನು ಎದುರಿಸುವುದಕ್ಕಾಗಿ ಕೇಂದ್ರ ಸರಕಾರ ಸಂಪೂರ್ಣವಾಗಿ ಗುಜರಾತ್‌ನ ಜೊತೆಗೆ ಇದೆ, ಎಂದು ಪ್ರಧಾನಮಂತ್ರಿ ಮೋದಿ ಇವರು ಆಶ್ವಾಸನೆ ಕೂಡ ನೀಡಿದ್ದಾರೆ.