|
ಪ್ರಯಾಗರಾಜ (ಉತ್ತರ ಪ್ರದೇಶ) – ನವೆಂಬರ್ 24 ರಂದು ಸಂಭಲ್‌ನ ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆಯ ವೇಳೆ ನಡೆದ ಹಿಂಸಾಚಾರದಲ್ಲಿ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ಪ್ರಮುಖ ಆರೋಪಿ ಆಗಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಅಪರಾಧದ ವಿರುದ್ಧ ಅವರು ಅಲಹಾಬಾದ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮ್ಮನ್ನು ಈ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಯಾವುದೇ ಅಪರಾಧ ರದ್ದಾಗುವುದಿಲ್ಲ. ಪೊಲೀಸ್ ತನಿಖೆ ಮುಂದುವರಿಯುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹೀಗಿದ್ದರೂ ಕೂಡ ಸದ್ಯ ಸಂಸದ ಬರ್ಕ್ ಅವರನ್ನು ಬಂಧಿಸದಂತೆ ಉಚ್ಚ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ.
ಬರ್ಕ್ ಅವರ ವಿರುದ್ಧ ಹೇರಲಾದ ಆರೋಪದ ಕಲಂಗಳು ಕನಿಷ್ಠ 7 ವರ್ಷಗಳ ಅಲ್ಪ ಪ್ರಮಾಣದ ಶಿಕ್ಷೆಗೆ ಮಾತ್ರ ಅನುಮತಿ ನೀಡುತ್ತವೆ ಎಂದು ಕೋರ್ಟ್ ಹೇಳಿದೆ. ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಸಬಹುದು. ಅವರು ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಪೊಲೀಸರ ತನಿಖೆಗೆ ಸಹಕರಿಸದಿದ್ದರೆ ಅವರನ್ನು ಬಂಧಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.