ನ್ಯೂಯಾರ್ಕ್ ನ್ಯಾಯಾಲಯದ ಆದೇಶ!
ವಾಷಿಂಗ್ಟನ್ (ಅಮೇರಿಕ) – ಭಾರತದ ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧದ ಲಂಚ ಪ್ರಕರಣದ ವಿಚಾರಣೆ ಬಗ್ಗೆ ನ್ಯೂಯಾರ್ಕ್ ನ್ಯಾಯಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ಅದಾನಿ ವಿರುದ್ಧ ಬಾಕಿ ಇರುವ ಎಲ್ಲಾ ಮೂರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಏಕಕಾಲಕ್ಕೆ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿದೆ. ಅಲ್ಲದೆ ಎಲ್ಲಾ ಮೂರು ಪ್ರಕರಣಗಳನ್ನು ಒಂದೇ ನ್ಯಾಯಾಲಯದಲ್ಲಿ ಒಟ್ಟಿಗೆ ವಿಚಾರಣೆ ನಡೆಸಬೇಕು. ಎಲ್ಲಾ ಮೂರು ಪ್ರಕರಣಗಳು ಒಂದೇ ರೀತಿಯ ಆರೋಪಗಳು ಮತ್ತು ವಹಿವಾಟುಗಳಿಗೆ ಸಂಬಂಧಿಸಿವೆ ಎಂದು ಗಮನಿಸಿದ ನ್ಯಾಯಾಲಯವು ಈ ನಿರ್ಧಾರವನ್ನು ನೀಡಿದೆ ಎಂದು ಹೇಳಲಾಗಿದೆ. ಯಾವುದೇ ರೀತಿಯ ಸಂಘರ್ಷವನ್ನು ತಪ್ಪಿಸಲು, ಈ ಪ್ರಕರಣಗಳನ್ನು ಒಂದೇ ನ್ಯಾಯಾಧೀಶರ ಮುಂದೆ ಇರಿಸಲಾಗಿದೆ.
ಏನಿದು ಪ್ರಕರಣ?
ಇತ್ತೀಚೆಗೆ, ಗೌತಮ್ ಅದಾನಿ ಮತ್ತು ಅವರ ಕೆಲವು ಪಾಲುದಾರರು ಸೌರ ವಿದ್ಯುತ್ ಗುತ್ತಿಗೆಗಳನ್ನು ಪಡೆಯಲು ಅಂದಾಜು 2 ಸಾವಿರದ 300 ಕೋಟಿ ರೂಪಾಯಿಗಳನ್ನು ಲಂಚವಾಗಿ ಪಾವತಿಸಿದ್ದಾರೆ ಎಂದು ಅಮೇರಿಕದಲ್ಲಿ ಆರೋಪಿಸಲಾಗಿತ್ತು. ಕೆಲವು ಅಮೇರಿಕನ್ ವಕೀಲರು, ಹೂಡಿಕೆದಾರರು ಮತ್ತು ಯೋಜನೆಗಾಗಿ ಹಣವನ್ನು ಸಂಗ್ರಹಿಸಿದ ಅಮೇರಿಕನ್ ಬ್ಯಾಂಕುಗಳಿಂದ ಪರಿಸ್ಥಿತಿಯನ್ನು ಮರೆಮಾಚಲಾಗಿದೆ ಎಂದು ಆರೋಪಿಸಲಾಗಿದೆ. ಅದಾನಿ ಸಮೂಹವು ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಪದೇ-ಪದೇ ಹೇಳುತ್ತಿದೆ.