‘ಮೋದಿ’ಯವರ ಭದ್ರತೆಯಲ್ಲಿ ಅಕ್ಷಮ್ಯ ಲೋಪ !

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿಯವರ ಭದ್ರತಾ ವ್ಯವಸ್ಥೆಯ ಅಕ್ಷಮ್ಯ ಲೋಪದಿಂದ ೫ ಜನವರಿ ೨೦೨೨ ರ ದಿನವು ಭಾರತಕ್ಕೆ ಬಹುದೊಡ್ಡ ಭೀಕರದಿನವಾಗಬಹುದಾಗಿತ್ತು. ಅದೃಷ್ಟವಶಾತ್ ಇದು ಸಂಭವಿಸಲಿಲ್ಲ ! ಪಂಜಾಬನ ಫಿರೋಜಪುರಕ್ಕೆ ಪ್ರಧಾನಿ ಮೋದಿಯವರ ಪ್ರವಾಸದ ಸಮಯದಲ್ಲಿ ಈ ಘಟನೆಯಾಗಿದೆ. ಭಟಿಂಡಾ ವಿಮಾನ ನಿಲ್ದಾಣದಿಂದ ಪಾಕಿಸ್ತಾನದ ಗಡಿಯ ಫಿರೋಜಪುರದ ಹುಸೈನಿವಾಲಾದ ಬಳಿಯಿರುವ ಒಂದು ಗ್ರಾಮದ ಕಾರ್ಯಕ್ರಮಕ್ಕಾಗಿ ತೆರಳುವಾಗ ಕೆಲವು ರೈತರು ರಸ್ತೆ ತಡೆ ನಡೆಸಿದ್ದರಿಂದ ಪ್ರಧಾನಿ ಬೆಂಗಾವಲು ಪಡೆ ಸುಮಾರು ೨೦ ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಳ್ಳಬೇಕಾಯಿತು. ಈ ಅವಧಿಯಲ್ಲಿ ಏನು ಬೇಕಾದರೂ ಆಗಬಹುದಿತ್ತು. ಅರಾಜಕತೆಯಿಂದ ಕೂಡಿರುವ ಪಂಜಾಬನಲ್ಲಿ ಖಲಿಸ್ತಾನಿವಾದಿಗಳು ಮತ್ತೊಮ್ಮೆ ಕೋಲಾಹಲವೆಬ್ಬಿಸಲು ಆರಂಭಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಭಾರತವು ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪಂಜಾಬನಲ್ಲಿ ಕೇಂದ್ರ ಸರಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುವ ಮೂಲಕ ಅರಾಜಕತೆ ಮತ್ತು ದೇಶದ್ರೋಹದ ಸರಣಿಯನ್ನು ಕಂಡಿದೆ. ಆಂದೋಲನದಲ್ಲಿ, ರೈತರು ಕಡಿಮೆ ಮತ್ತು ಖಲಿಸ್ತಾನಿಗಳು ಹಾಗೂ ಜಿಹಾದಿಗಳೇ ಹೆಚ್ಚಿರುವುದು ಬೆಳಕಿಗೆ ಬರುತ್ತಾ ಹೋಯಿತು. ವಾಸ್ತವದಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ಈ ‘ದೇಶವಿಘಾತಕ’ ಮತ್ತು ‘ರೈತದ್ರೋಹಿ’ ಚಳುವಳಿಯ ಪರಿಣಾಮದಿಂದ ಅಂತಿಮವಾಗಿ ಕೇಂದ್ರವು ರೈತರ ಹಿತಕ್ಕಾಗಿರುವ ಈ ಮೂರು ಕಾನೂನುಗಳನ್ನು ಹಿಂಪಡೆಯಬೇಕಾಯಿತು. ಅದರಿಂದ ರೈತರ ಸಮಸ್ಯೆಗಳು ಹಾಗೆಯೇ ಉಳಿದವು. ಇದು ಅವರ ಮತ್ತು ಭಾರತದ ದೌರ್ಭಾಗ್ಯ !

ಈ ಘಟನಾವಳಿಯಿಂದ ಕೆನಡಾ, ಅಮೇರಿಕಾ, ಯುನೈಟೆಡ್ ಕಿಂಗ್ಡಮ್ ಮತ್ತು ನೆರೆಯ ಜಿಹಾದಿ ಪಾಕಿಸ್ತಾನ ಈ ರಾಷ್ಟ್ರಗಳ ತೆರೆಮರೆಯ ಬೆಂಬಲವಿರುವ ಖಲಿಸ್ತಾನಿಗಳು ಯಾವ ಮಟ್ಟಕ್ಕೆ ಬೆಳೆದಿದ್ದಾರೆ ? ಎಂಬುದು ಗಮನಕ್ಕೆ ಬಂದಿತು. ಪ್ರಧಾನಿಯವರ ಭದ್ರತಾ ವ್ಯವಸ್ಥೆಯಲ್ಲಿನ ಲೋಪವನ್ನು ಗಮನಿಸಿದರೆ, ೧೯೯೫ ರಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸುವುದು ಅವಶ್ಯಕವಾಗಿದೆ. ಆಗಿನ ಪಂಜಾಬನ ಮುಖ್ಯಮಂತ್ರಿ ಬಿಯಾಂತ ಸಿಂಗ್ ಇವರನ್ನು ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್’ ಈ ಖಲಿಸ್ತಾನಿ ಸಂಘಟನೆಯ ಭಯೋತ್ಪಾದಕನೊಬ್ಬನು ಆತ್ಮಾಹುತಿ ದಾಳಿಯಲ್ಲಿ ಹತ್ಯೆ ಮಾಡಿದ್ದನು. ಕಳೆದ ತಿಂಗಳು ೮ ಡಿಸೆಂಬರ್ ೨೦೨೧ ರಂದು, ಭಾರತದ ಮೊದಲ ಸಿ.ಡಿ.ಎಸ್. (‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ ಮೂರು ಸೇನೆಗಳ ಮುಖ್ಯಸ್ಥ) ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದರು. ದೇಶಕ್ಕೆ ಈಗಿರುವ ಈ ಭೀಕರ ದುರಂತ ಸಂಭವಿಸಿ ಇನ್ನೂ ಒಂದು ತಿಂಗಳು ಸಹ ಆಗದಿರುವಾಗ, ಪ್ರಧಾನಿ ಮೋದಿಯವರ ಭದ್ರತೆಯ ಬಗ್ಗೆ ಅಸಡ್ಡೆಯಾಗುವುದು ಪ್ರತಿಯೊಬ್ಬ ದೇಶಭಕ್ತ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಪಂಜಾಬ ವಿಧಾನಸಭೆ ಚುನಾವಣೆಯು ಈಗ ಎದುರು ಬಂದು ನಿಂತಿದೆ ! ಈ ಹಿನ್ನೆಲೆಯಲ್ಲಿ ಆಧುನಿಕ ಭಾರತದ ಇತಿಹಾಸದಲ್ಲಿ ಪ್ರಧಾನಿಯವರ ಬೆಂಗಾವಲು ಪಡೆಗೆ ಈ ರೀತಿ ನಿಷ್ಕ್ರಿಯತೆ ಎದುರಿಸಬೇಕಾಗಿದ್ದು ಬಹುಶಃ ಇದೇ ಮೊದಲ ಘಟನೆ ಎನ್ನಬಹುದು !

ಜಿಹಾದಿ ಪಾಕಿಸ್ತಾನದ ಕೈವಾಡ ?

ಪ್ರಧಾನಿಯವರ ಭದ್ರತಾ ವ್ಯವಸ್ಥೆಯಲ್ಲಿನ ಲೋಪಕ್ಕೆ ಖಲಿಸ್ತಾನಿಗಳು ಮಾತ್ರವಲ್ಲ, ಜಿಹಾದಿ ಪಾಕಿಸ್ತಾನವೂ ಕಾರಣವಾಗಿರಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪ್ರಧಾನಿ ಹೋಗಲಿದ್ದ ಸ್ಥಳ ಪಾಕಿಸ್ತಾನದಿಂದ ಕೇವಲ ೧೦ ಕಿ.ಮೀ. ದೂರದಲ್ಲಿದೆ ! ಕಳೆದ ಎರಡು ವರ್ಷಗಳಿಂದ ಪಂಜಾಬನಲ್ಲಿ ಭದ್ರತಾ ಸ್ಥಿತಿ, ಹಾಗೆಯೇ ಪಂಜಾಬ ಚುನಾವಣೆ ಸಮೀಪಿಸುತ್ತಿರುವಾಗ ರಾಜ್ಯದಲ್ಲಿ ಬಾಂಬ್ ಸ್ಫೋಟಗಳು, ಧರ್ಮನಿಂದೆಯ ಆರೋಪದ ಮೇಲೆ ಇಬ್ಬರ ಕಗ್ಗೊಲೆ ಮತ್ತು ಅಷ್ಟೇ ಅಲ್ಲ, ಪಂಜಾಬ ನೆಲದಲ್ಲಿ ಹೆಚ್ಚುತ್ತಿರುವ ಪಾಕಿಸ್ತಾನಿ ಡ್ರೋನ್‌ಗಳ ಬಳಕೆ ಇವುಗಳು ಕಳೆದ ಕೆಲವು ದಿನಗಳಿಂದ ಈಗಾಗಲೇ ಕಾಳಜಿಯ ವಿಷಯವಾಗಿದೆ. ಒಂದು ಸಂದರ್ಭದಲ್ಲಿ, ಡ್ರೋನ್ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತದ ನೆಲದಲ್ಲಿ ಬೀಳಿಸಿತು. ಈ ಹಿನ್ನೆಲೆಯಲ್ಲಿ ಜನವರಿ ೫ ರಂದು ನಡೆದ ಘಟನೆಯಲ್ಲಿ ಖಲಿಸ್ತಾನಿ ಮತ್ತು ಜಿಹಾದಿ ಪಡೆಗಳು ಕೈಜೋಡಿಸಿದ್ದರೆ ಅದಕ್ಕೆ ಯಾರು ಹೊಣೆ ? ಇದರ ಬಗ್ಗೆಯೂ ವಿಚಾರವಾಗಬೇಕು ! ಅದಕ್ಕಾಗಿಯೇ ಗೃಹ ಸಚಿವ ಅಮಿತ ಶಾ ಅವರು ‘ಭದ್ರತಾ ವ್ಯವಸ್ಥೆಗಳಲ್ಲಿನ ನ್ಯೂನ್ಯತೆಗಳು ಸ್ವೀಕಾರಾರ್ಹವಲ್ಲ ಮತ್ತು ಅದರ ಜವಾಬ್ದಾರಿಯನ್ನು ಸಹ ನಿಶ್ಚಿತಗೊಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಷಮ್ಯ ರಾಜಕಾರಣ !

ಪ್ರಧಾನಿಯವರು ಫಿರೋಜಪುರದಲ್ಲಿದ್ದ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ೨ ಗಂಟೆಗಳ ಹಿಂದಿರುಗುವ ಪ್ರವಾಸ ಕೈಗೊಳ್ಳಬೇಕಾಯಿತು. ಇದಕ್ಕೆ ಈಗ ರಾಜಕೀಯ ಬಿಸಿ ತಟ್ಟಿದೆ. ಯಾವ ವಿಷಯದಲ್ಲಿ ರಾಜಕೀಯ ಮಾಡಬೇಕು ? ಎಂಬುದರ ಬಗ್ಗೆ ಭಾರತೀಯ ರಾಜಕಾರಣಿಗಳಿಗೆ ಎಳ್ಳಷ್ಟೂ ಮಾಹಿತಿ ಇಲ್ಲ ! ಅದರಲ್ಲಿ ಕಾಂಗ್ರೆಸ್ ಕಥೆ ಏನು ! ‘ದೇಶ ವಿಭಜನೆಗೆ ಶ್ರಮಿಸು ತ್ತಿರುವ ಅಧಿಕೃತ ರಾಜಕೀಯ ಪಕ್ಷ’ವೆಂದರೆ ಕಾಂಗ್ರೆಸ್ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು ! ಕಾಂಗ್ರೆಸ್ ನಾಯಕ ಮತ್ತು ಪಂಜಾಬನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಈ ವಿಷಯದಲ್ಲಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ “ಪ್ರಧಾನಿ ಅವರು ಕಾರ್ಯಕ್ರಮದ ಸ್ಥಳಕ್ಕೆ ವಿಮಾನದಿಂದ  ಹೋಗದೇ ರಸ್ತೆಯ ಮೂಲಕ ಹೋಗುವ ಆಯೋಜನೆ ಹಠಾತ್ತಾಗಿ ಆಗಿದ್ದರಿಂದ ಭದ್ರತಾ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿದೆ”, ಎಂಬ ಹಾಸ್ಯಾಸ್ಪದ ಮತ್ತು ಅತ್ಯಂತ ಸಂವೇದನಾಶೂನ್ಯ ವಿವರಣೆಯನ್ನು ನೀಡಿದ್ದಾರೆ. ಭಾಜಪ ಮತ್ತು ಇತರ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಕಾಂಗ್ರೆಸ್ ಅನ್ನು ಹೊಣೆಗಾರರನ್ನಾಗಿಸಿವೆ; ಆದರೆ ಕಾಂಗ್ರೆಸ್ ಇದರಿಂದ ದೂರ ಸರಿಯುತ್ತಿದೆ. ಮೂಲತಃ, ಪ್ರಧಾನಿಯಂತಹ ಅತಿಗಣ್ಯವ್ಯಕ್ತಿಯ ಭದ್ರತಾ ವ್ಯವಸ್ಥೆಗಳು ತುಂಬಾ ಕಟ್ಟುನಿಟ್ಟಾಗಿರಬೇಕು. ಪ್ರಧಾನಮಂತ್ರಿಯ ಚತುಶ್ಚಕ್ರ ವಾಹನದ ಅತ್ಯಾಧುನಿಕ ಭದ್ರತೆಯ ಬಗ್ಗೆ ಆಗಾಗ ಚರ್ಚಿಸಲಾಗುತ್ತದೆ; ಆದರೆ ಭದ್ರತೆಗೆ ಸಂಬಂಧಿಸಿದ ಕಾರ್ಯಪದ್ಧತಿಯಲ್ಲಿ ಲೋಪವಾದರೆ, ಭದ್ರತಾವ್ಯವಸ್ಥೆಯ ಸಂವಹನದಲ್ಲಿ ಬೇಜವಾಬ್ದಾರಿತನವಾದರೆ ಆ ಆಧುನಿಕ ತಂತ್ರಜ್ಞಾನದಿಂದ ಏನು ಪ್ರಯೋಜನ ? ಮೂಲತಃ ಪಂಜಾಬ್ ಪೊಲೀಸರಿಗೆ ಪ್ರಧಾನಿ ಭೇಟಿಯ ಸಮಯದಲ್ಲಿ ಬದಲಾವಣೆಯ ಬಗ್ಗೆ ಸಮಯಕ್ಕೆ ತಿಳಿಸಲಾಯಿತು. ‘ಪ್ರಧಾನಿ ಯಾವ ಮಾರ್ಗದಲ್ಲಿ ಹೋಗುತ್ತಾರೆ ಎಂಬುದು ಆಂದೋಲನ ಮಾಡುತ್ತಿದ್ದ ರೈತರಿಗೆ ಹೇಗೆ ಗೊತ್ತಾಯಿತು ?’, ಎಂಬುದರ ತನಿಖೆಯಾಗಬೇಕು. ಪ್ರಧಾನಿಯವರ ಭೇಟಿಯ ಮಾಹಿತಿಯು ಪಂಜಾಬ ಸರಕಾರದ ಸಂಬಂಧಪಟ್ಟ ಸಚಿವರು, ಆಡಳಿತ ಅಧಿಕಾರಿಗಳು ಮತ್ತು ಪಂಜಾಬ ಪೊಲೀಸರ ಹಿರಿಯ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿತ್ತು. ಹಾಗಾದರೆ ಈ ಮಾಹಿತಿ ಹೊರಬಿದ್ದಿದ್ದು ಹೇಗೆ ? ಇದನ್ನು ಗಮನದಲ್ಲಿಟ್ಟುಕೊಂಡು ಸಂಬಂಧ ಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಒಟ್ಟಾರೆ ರಾಜಕೀಯಕ್ಕಿಂತ ದೇಶದ ಭದ್ರತೆ ಮತ್ತು ಅದರ ಸರ್ವೋಚ್ಚ ನಾಯಕನ ಭದ್ರತೆ ಮುಖ್ಯವಾಗಿದೆ ಮತ್ತು ಈ ಭದ್ರತಾ ವ್ಯವಸ್ಥೆಯ ಜಟಿಲತೆಗೆ ಪಂಜಾಬ ಸರಕಾರ ಮತ್ತು ಪೊಲೀಸರೇ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ !