ವೈರಾಗ್ಯ ಸ್ವರೂಪ, ಕ್ಷಮಾಶೀಲ ಮತ್ತು ಭಕ್ತವತ್ಸಲರಾಗಿರುವ ಭಗವಾನ ದತ್ತಾತ್ರೇಯ !

೧. ದತ್ತಾತ್ರೇಯ ದೇವರ ಗುಣವೈಶಿಷ್ಟ್ಯಗಳು

೧ ಅ. ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯಗಳ ಸಂಗಮ : ‘ಭಗವಾನ ದತ್ತಾತ್ರೇಯ ಅಂದರೆ ‘ಬ್ರಹ್ಮ, ವಿಷ್ಣು ಮತ್ತು ಮಹೇಶ’ ಈ ತ್ರಿಮೂರ್ತಿಗಳ  ರೂಪವಾಗಿದ್ದಾರೆ. ಬ್ರಹ್ಮದೇವರು ಜ್ಞಾನಸ್ವರೂಪ, ಶ್ರೀವಿಷ್ಣು ವಾತ್ಸಲ್ಯ ಸ್ವರೂಪ ಮತ್ತು ಶಿವನು ವೈರಾಗ್ಯ ಸ್ವರೂಪವಾಗಿದ್ದಾರೆ. ಇಂತಹ ತ್ರಿಮೂರ್ತಿಗಳ ಸಂಯುಕ್ತ ರೂಪವಾಗಿರುವ ದತ್ತಾತ್ರೇಯನು ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯಗಳ ಸುಂದರ ಸಂಗಮವಾಗಿದ್ದಾನೆ.

೧ ಆ. ವೈರಾಗ್ಯ ಮತ್ತು ಸಂನ್ಯಾಸಿ : ದತ್ತಾತ್ರೇಯರಲ್ಲಿ ವೈರಾಗ್ಯವಿರುವುದರಿಂದ ಅವರು ಸಂನ್ಯಾಸಿ ಜೀವನವನ್ನು ಜೀವಿಸುತ್ತಾರೆ. ಅವರ ನಿವಾಸ ಮೇರುಶಿಖರದಲ್ಲಿದೆ. ಸಂಧ್ಯಾಕಾಲ ಮತ್ತು ಇನ್ನಿತರೆ ದಿನಕ್ರಮಗಳನ್ನು ಅವರು ಇತರ ಸ್ಥಳಗಳಲ್ಲಿ ಪೂರ್ಣಗೊಳಿಸುತ್ತಾರೆ. ಅವರಲ್ಲಿ ವೈರಾಗ್ಯ ವೃತ್ತಿ ಪ್ರಬಲವಾಗಿರುವುದರಿಂದ ಅವರಿಗೆ ಯಾವುದೇ ಸ್ಥಾನಗಳ ಮೋಹಬಂಧನವಿಲ್ಲ. ಅವರು ‘ಸ್ವೇಚ್ಛಾ ವಿಹಾರಿ’ಯಾಗಿದ್ದಾರೆ. ಅವರು ಜೀವನ್ಮುಕ್ತರಾಗಿರುವುದರಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ಮುಕ್ತವಾಗಿ ಸಂಚರಿಸುತ್ತಾರೆ. ದತ್ತಾತ್ರೇಯರು ಭಕ್ತರ ಮೇಲೆ ಪ್ರಸನ್ನರಾಗಿ ಅವರಿಗೆ ವೈರಾಗ್ಯವನ್ನು ಪ್ರದಾನಿಸುತ್ತಾರೆ. ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ; ಆದರೆ ದೇವದುರ್ಲಭವಾಗಿರುವ ವೈರಾಗ್ಯವು ಕೇವಲ ಶ್ರೀಗುರುಕೃಪೆಯಿಂದ ಮಾತ್ರ ಸಿಗುತ್ತದೆ.

೧ ಇ. ಅಖಂಡ ಶಿಷ್ಯಭಾವದಲ್ಲಿರುವುದು: ಭಗವಾನ ದತ್ತಾತ್ರೇಯರು ಸದ್ಗುರು ಪದದಲ್ಲಿ ವಿರಾಜಮಾನರಾಗಿದ್ದರೂ, ಅವರು ವೃತ್ತಿಯಿಂದ ಸತತವಾಗಿ ‘ಶಿಷ್ಯಾವಸ್ಥೆಯಲ್ಲಿ’ ವಿಹರಿಸುತ್ತಾರೆ. ‘ಶಿಷ್ಯನೆಂದರೆ ನಿರಂತರವಾಗಿ ಕಲಿಯುತ್ತಿರುವುದು. ಶಿಷ್ಯನ ಮೂರ್ತಸ್ವರೂಪ ಉದಾಹರಣೆಯೆಂದರೆ ಭಗವಾನ ದತ್ತಾತ್ರೇಯರು. ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂದದಲ್ಲಿ ಯದು ಮತ್ತು ಅವಧೂತರ ಸಂವಾದವಿದೆ. ‘ಅವರು ಯಾರನ್ನು ಗುರುವೆಂದು ಸ್ವೀಕರಿಸಿದರು ಮತ್ತು ಅವರಿಂದ ಯಾವ ಜ್ಞಾನವನ್ನು ಪಡೆದರು’, ಎನ್ನುವುದನ್ನು ಅವಧೂತರು ಇದರಲ್ಲಿ ಹೇಳಿದ್ದಾರೆ. ಅವರು ತಮ್ಮ ಶಿಷ್ಯಾವಸ್ಥೆಯಿಂದಲೇ ೨೪ ಗುರುಗಳನ್ನು ಮತ್ತು ೨೪ ಉಪಗುರುಗಳನ್ನು ಮಾಡಿಕೊಂಡರು. ಅವರು ಪ್ರತಿಯೊಂದು ಪ್ರಾಣಿಮಾತ್ರರನ್ನು ಗುಣಗುರುವೆಂದು ತಿಳಿಯುತ್ತಾರೆ ಮತ್ತು ಪ್ರತಿಯೊಬ್ಬರಿಂದಲೂ ಕಲಿಯುತ್ತಿರುತ್ತಾರೆ.

ಕು. ಮಧುರಾ ಭೋಸಲೆ

೧ ಇ. ಅಹಂ ಅಲ್ಪವಿರುವುದು: ಸಂನ್ಯಾಸಿ ಜೀವನವನ್ನು ಜೀವಿಸುತ್ತಿರುವಾಗ ಅವರು ಪ್ರತಿದಿನ ಮಧ್ಯಾಹ್ನದ ಭಿಕ್ಷೆಯನ್ನು ಕೊಲ್ಹಾಪುರಕ್ಕೆ ಬಂದು ಬೇಡುತ್ತಾರೆ. ಅವರ ಅಹಂ ಅಲ್ಪವಿರುವುದರಿಂದ ಅವರು ಜ್ಞಾನಗುರುಪದವಿಯಲ್ಲಿ ಆರೂಢರಾಗಿದ್ದರೂ ಭಿಕ್ಷೆ ಬೇಡುತ್ತಾರೆ. (ಕೊಲ್ಹಾಪುರದಲ್ಲಿರುವ ‘ಭಿಕ್ಷಾಪಾತ್ರ ದತ್ತ ಮಂದಿರದಲ್ಲಿ’ ಪ್ರತಿದಿನ ಮಧ್ಯಾಹ್ನ ಸೂಕ್ಷ್ಮದಿಂದ ದತ್ತಾತ್ರೇಯರು ಭಿಕ್ಷೆಯನ್ನು ಸ್ವೀಕರಿಸಲು ಬರುತ್ತಾರೆ’, ಎಂದು ಭಾವಿಕರ ಶ್ರದ್ಧೆಯಾಗಿದೆ. ಅವರ ಸ್ವಾಗತಕ್ಕಾಗಿ ಮಧ್ಯಾಹ್ನ ೧೨ ಗಂಟೆಗೆ ಆರತಿ ಮಾಡಲಾಗುತ್ತದೆ.)

೧ ಉ.‘ಭಕ್ತವತ್ಸಲ’ ಆಗಿರುವುದರಿಂದ ‘ಸ್ಮರ್ತೃಗಾಮಿ’ ಆಗಿದ್ದಾರೆ :

ದತ್ತಾತ್ರೇಯ ದೇವರಲ್ಲಿ ವೈರಾಗ್ಯಭಾವ ಪ್ರಬಲವಾಗಿರುವುದರಿಂದ ಅವರು ಎಲ್ಲ ಮೋಹ ಮಾಯೆಗಳಿಂದ ಅಲಿಪ್ತರಾಗಿದ್ದಾರೆ; ಆದರೆ ಅವರು ಭಕ್ತರ ಪ್ರೇಮದ ಮಾಯೆಯಲ್ಲಿ ಬಂಧಿತರಾಗಿದ್ದಾರೆ. ಯಾವುದೇ ಭಕ್ತನು ಅವರ ಸ್ಮರಣೆಯನ್ನು ಮಾಡುತ್ತಲೇ ತಕ್ಷಣವೇ ಅವರು ಪ್ರಕಟರಾಗುತ್ತಾರೆ. ಆದುದರಿಂದ ಅವರನ್ನು ‘ಸ್ಮರ್ತೃಗಾಮಿ’ (ಶೀಘ್ರ ಧಾವಿಸಿ ಬರುವವರು)ಎಂದು ಕರೆಯುತ್ತಾರೆ. ಇದರಿಂದ ಅವರಲ್ಲಿರುವ ಭಕ್ತವತ್ಸಲನ ದರ್ಶನ ಲಭಿಸುತ್ತದೆ. ಶ್ರೀ ಗುರುಚರಿತ್ರೆಯಲ್ಲಿ ಶ್ರೀಪಾದಶ್ರೀವಲ್ಲಭ ಮತ್ತು ನೃಸಿಂಹ ಸರಸ್ವತಿ ಇವರು ಭಕ್ತರನ್ನು ಉದ್ಧರಿಸಿರುವ ಉಲ್ಲೇಖಗಳಿವೆ.

೧ ಊ. ಕ್ಷಮಾಶೀಲ : ಶಿಷ್ಯನು ಎಷ್ಟೇ ತಪ್ಪು ಮಾಡಿದರೂ, ಗುರುಗಳು ಅವನನ್ನು ಕ್ಷಮಿಸಿ, ಪುನಃ ಕಲಿಯುವ ಅವಕಾಶವನ್ನು ನೀಡುತ್ತಾರೆ. ಇದರ ಉತ್ತಮ ಉದಾಹರಣೆಯೆಂದರೆ ಭಗವಾನ ದತ್ತಾತ್ರೇಯರಾಗಿದ್ದಾರೆ. ಅವರು ಕೇವಲ ಶಿಷ್ಯನ ದೋಷವನ್ನಷ್ಟೇ ಕ್ಷಮಿಸದೇ ತಮ್ಮನ್ನು ವಿರೋಧಿಸುವವರ ಅಪರಾಧಗಳನ್ನೂ ಕೂಡ ಕ್ಷಮಿಸಿ ಅವರನ್ನು ಉದ್ಧರಿಸುತ್ತಾರೆ. ಶ್ರೀಪಾದಶ್ರೀವಲ್ಲಭರನ್ನು ದ್ವೇಷಿಸುವ ‘ನರಸಾವಧಾನಿ’ ಹೆಸರಿನ ಮನುಷ್ಯನಿಗೆ ಕರ್ಮಫಲನ್ಯಾಯಾನುಸಾರ ಕಠಿಣ ಶಿಕ್ಷೆ ದೊರಕಿತ್ತು. ಆಗ ಅವನು ಶ್ರೀಪಾದಶ್ರೀವಲ್ಲಭರ ಚರಣಗಳಲ್ಲಿ ಶರಣಾದನು. ಆಗ ಕ್ಷಮಾಶೀಲವೃತ್ತಿಯ ಶ್ರೀಪಾದಶ್ರೀವಲ್ಲಭರು ನರಸಾವಧಾನಿಯನ್ನು ಕ್ಷಮಿಸಿ ಅವನನ್ನು ಉದ್ಧರಿಸಿರುವ ಉದಾಹರಣೆ ಶ್ರೀಪಾದಶ್ರೀವಲ್ಲರ ಜೀವನಚರಿತ್ರೆಯಲ್ಲಿ ಕಂಡು ಬರುತ್ತದೆ. ದತ್ತಗುರುಗಳ ಕ್ಷಮಾಶೀಲತೆಯ ಅನೇಕ ಉದಾಹರಣೆ ಗುರುಚರಿತ್ರೆಯಲ್ಲಿ ನಮಗೆ ಕಂಡು ಬರುತ್ತದೆ.

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.