‘೨೬/೧೩ ನೇ ಸಂಚಿಕೆಯ ಲೇಖನದಲ್ಲಿ ನಾವು ವ್ಯಕ್ತಿಯು ಮನಸ್ಸನ್ನು ಶುದ್ಧ ಗೊಳಿಸುವುದರ ಮಹತ್ವ ಮತ್ತು ಅವನು ಪರಮಾರ್ಥದ ಆಶ್ರಯ ಪಡೆಯುವ ಆವಶ್ಯಕತೆ, ಈ ವಿಷಯವನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ‘ಮನಸ್ಸಿಗೆ ದುಃಖವಾಗುವ ಹಿಂದಿನ ಕಾರಣಗಳು, ಮನಸ್ಸನ್ನು ಆನಂದದಿಂದಿಡಲು ಮಾಡಬೇಕಾದ ಪ್ರಯತ್ನ ಮತ್ತು ಜಗತ್ತಿನಲ್ಲಿ ಹೇಗಿರಬೇಕು ?’, ಇವುಗಳ ಬಗ್ಗೆ ತಿಳಿದುಕೊಳ್ಳೋಣ.
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/131397.html |
೪. ಮನಸ್ಸಿನ ದುಃಖಕ್ಕೆ ಕಾರಣಗಳು ಮತ್ತು ಮನಸ್ಸನ್ನು ಆನಂದದಿಂದಿರಿಸಲು ಮಾಡಬೇಕಾದ ಪ್ರಯತ್ನ
೪ ಅ. ‘ಸಂತಸಂಗದ ಅಭಾವ’ವೇ ಮನಸ್ಸಿನ ದುಃಖಕ್ಕೆ ಮೊದಲ ಮುಖ್ಯ ಕಾರಣವಾಗಿದೆ. ಪವಿತ್ರ ಮಹಾತ್ಮರ ಸತ್ಸಂಗ ಕಲ್ಯಾಣಕಾರಿಯಾಗಿರುತ್ತದೆ.
೪ ಆ. ವ್ಯಸನಗಳು ‘ಪೂರ್ವಸಂಸ್ಕಾರ ಮತ್ತು ಕೆಟ್ಟ ಶಕ್ತಿಗಳ ಆಕ್ರಮಣಗಳು’ ಇವುಗಳಿಂದಾಗಿ ವ್ಯಕ್ತಿಗೆ ಅಂಟಿಕೊಂಡಿರುವುದು ಮತ್ತು ಅವುಗಳಿಂದ ಬಿಡುಗಡೆಯಾಗಲು ವ್ಯಕ್ತಿಯು ಧರ್ಮಾಚರಣೆ ಮತ್ತು ಸಂತರ ಸಂಗತಿಯ ಆಶ್ರಯ ಪಡೆಯುವುದು ಆವಶ್ಯಕವಾಗಿರುವುದು ! :
ನಾವು ಅನೇಕ ರೀತಿಯ ವ್ಯಸನಗಳಲ್ಲಿ ಸಿಲುಕಿಕೊಂಡಿದ್ದೇವೆ. ಭೌತಿಕ ವ್ಯಸನಗಳಿಂದ (ಮಾಂಸಾಹಾರ ಮತ್ತು ಮದ್ಯಪಾನ, ಜೂಜಾಟ, ದುರಾಚಾರ, ವ್ಯಭಿಚಾರ ಇತ್ಯಾದಿಗಳಿಂದ) ಬಿಡುಗಡೆ ಇದು ನಿರ್ವ್ಯಸನದ ಮೊದಲ ಭಾಗವಾಗಿದೆ. ವ್ಯಕ್ತಿಗೆ ಈ ವ್ಯಸನಗಳು ‘ಪೂರ್ವಸಂಸ್ಕಾರ ಮತ್ತು ಕೆಟ್ಟ ಶಕ್ತಿಗಳ ಆಕ್ರಮಣಗಳು’ ಇವುಗಳಿಂದ ಅಂಟಿಕೊಂಡಿರುತ್ತವೆ. ಅವುಗಳಿಂದ ಬಿಡುಗಡೆಯಾಗಲು ಧರ್ಮಾಚರಣೆ ಮತ್ತು ಸಂತಸಂಗದ ಆಶ್ರಯ ಪಡೆಯಬೇಕು. ಗೋಂದವಲೇಕರ ಮಹಾರಾಜರು ಹೇಳುತ್ತಾರೆ, ಯಾರು ವಿಷಯಭೋಗಗಳಿಗೆ ಬಲಿಯಾದರೋ, ಅವರು ಭೌತಿಕ ಸುಖಗಳಲ್ಲಿ ಮುಳುಗಿ ಹೋದರು.
೪ ಇ. ಅಂತಃಕರಣದಲ್ಲಿನ ಕೊಳೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಪರಮಾರ್ಥದ ಆಶ್ರಯ ಪಡೆಯಬೇಕು ! : ನಿರ್ವ್ಯಸನಿಯಾಗಲು ಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ನಮ್ಮ ಅಂತಃಕರಣದಲ್ಲಿನ ಕೊಳೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು. ಅಂತಃಕರಣದಲ್ಲಿನ ಕೊಳೆ, ಎಂದರೆ ‘ವ್ಯಕ್ತಿಯ ಚಿತ್ತದಲ್ಲಿರುವ ಅಸಂಖ್ಯಾತ ಸಂಸ್ಕಾರಗಳು ಮತ್ತು ಅದಲ್ಲಿರುವ ಸ್ವಭಾವದೋಷ ಮತ್ತು ಅಹಂ’ಗಳು. ಏನು ಮಾಡಿದರೆ ಇವುಗಳು ದೂರವಾಗುವವು ? ಅದಕ್ಕಾಗಿ ವ್ಯಕ್ತಿಯು ಪರಮಾರ್ಥದ ಆಶ್ರಯ ಪಡೆಯಬೇಕು.
೪ ಈ. ಕಲಿಯುಗದಲ್ಲಿ ಸಾಧನೆಯ ರಾಜಯೋಗಿ ಮಾರ್ಗ : ಕಲಿಯುಗದಲ್ಲಿ ಸಾಧನೆ, ಎಂದರೆ ಸತತ ನಾಮಜಪ ಮಾಡುವುದು. ‘ನಾಮಜಪ ಮತ್ತು ಮಾನಸಪೂಜೆ ಮಾಡುವುದು’ ಇದು ರಾಜಯೋಗಿ ಮಾರ್ಗವಾಗಿದೆ. ಅದನ್ನು ಸಂದೇಹ ಪಡದೇ ಪ್ರಯತ್ನಿಸುತ್ತಿರಬೇಕು.
೪ ಉ. ಪ್ರಾರ್ಥನೆಯಲ್ಲಿನ ಸಾಮರ್ಥ್ಯ ಮತ್ತು ಸಂತ ಮತ್ತು ಸದ್ಗುರುಗಳ ಸತ್ಸಂಗ ಲಭಿಸುವುದರ ಮಹತ್ವ : ಉಪಾಸನೆಗೆ ಪ್ರಾರ್ಥನೆ ಮತ್ತು ಸಂತಸತ್ಸಂಗದ ಜೊತೆ ನೀಡಿದರೆ, ಅಹೋ ಭಾಗ್ಯಮ್ ! ಕೇವಲ ಶಬ್ದವೆಂದರೆ ಪ್ರಾರ್ಥನೆಯಲ್ಲ. ದೇವರು ಮತ್ತು ಸಂತರಲ್ಲಿ ಮಾಡಿದ ಪ್ರಾರ್ಥನೆ ಎಂದಿಗೂ ನಿಷ್ಫಲವಾಗಲಾರದು. ‘ಪ್ರಾರ್ಥನೆಯಿಂದಲೂ ಸಂತ ಮತ್ತು ಸದ್ಗುರುಗಳ ಸಹವಾಸವನ್ನು ಅನುಭವಿಸಲು ಬರುತ್ತದೆ ಮತ್ತು ಅದನ್ನು ಅನುಭವಿಸುವುದು’, ಇದೇ ನಿಜವಾದ ಪ್ರಾರ್ಥನೆಯಾಗಿದೆ. ಸಂತಸಂಗದ ಮಹಿಮೆ ಅಪಾರವಾಗಿದೆ. ವ್ಯಕ್ತಿಯ ಮೇಲೆ ಗುರುಕೃಪೆಯಾದಾಗ ಆ ವ್ಯಕ್ತಿಯು ಮನುಷ್ಯ ಜನ್ಮದಿಂದ ಪಾರಾಗಿ ಹೋಗುತ್ತಾನೆ.
೪ ಊ. ಕೇವಲ ಭಗವಂತನ ಅನುಸಂಧಾನದಿಂದಲೇ ಶಾಶ್ವತ ಆನಂದವನ್ನು ಪಡೆಯಬಹುದಾಗಿದೆ : ‘ಮನುಷ್ಯನು ಆನಂದಪ್ರಾಪ್ತಿಗಾಗಿ ಅಲ್ಲ ಆದರೆ ವಸ್ತುಗಳಿಗಾಗಿ ಬದುಕುತ್ತಾನೆ’, ಎಂಬುದು ಕಂಡು ಬರುತ್ತದೆ. ವಸ್ತುಗಳು ಸತ್ಯವಲ್ಲ ಮತ್ತು ಅದರ ರೂಪವು ಅಶಾಶ್ವತವಾಗಿರುವುದರಿಂದ ಆ ವಸ್ತುವಿನಿಂದ ಸಿಗುವ ಆನಂದವೂ ಅಶಾಶ್ವತವೇ ಆಗಿರುತ್ತದೆ. ಕೇವಲ ಭಗವಂತನು ಶಾಶ್ವತನಾಗಿದ್ದು ಅವನ ಅನುಸಂಧಾನದಿಂದಲೇ ಶಾಶ್ವತ ಆನಂದವು ಸಿಗುತ್ತದೆ.
೪ ಎ. ‘ದೊರಕಿದ ಪರಿಸ್ಥಿತಿಯು ಪರಮೇಶ್ವರನ ಇಚ್ಛೆಯಿಂದ ಬಂದಿದೆ’, ಎಂದು ತಿಳಿದುಕೊಳ್ಳಬೇಕು, ಅಂದರೆ ಇದ್ದ ಪರಿಸ್ಥಿತಿ ಯಲ್ಲಿಯೇ ಸಮಾಧಾನ ಹೊಂದಿದರೆ, ವಿಷಯಗಳ ಮೇಲಿನ ಹಿಡಿತವನ್ನು ಸಡಿಲಿಸಲು ಸಹಾಯವಾಗುತ್ತದೆ.
೪ ಐ. ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸಿದರೆ ಎಲ್ಲ ಸ್ವಭಾವದೋಷಗಳು ಕಡಿಮೆ ಯಾಗಲು ಸಹಾಯವಾಗುವುದು : ಎಲ್ಲ ದುಃಖಗಳಿಗೆ ಮೂಲ ಕಾರಣ ವ್ಯಕ್ತಿಯಲ್ಲಿನ ‘ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ’ ಈ ಷಡ್ರಿಪುಗಳಾಗಿವೆ. ಈ ಷಡ್ರಿಪುಗಳಿಂದಾಗಿ ನಮಗೆ ನಿರಾಶೆ ಬರುತ್ತದೆ, ನಾವು ದುಃಖವನ್ನು ಭೋಗಿಸಬೇಕಾಗುತ್ತದೆ ಮತ್ತು ನಾವು ರೋಗಗಳಿಗೆ ಬಲಿಯಾಗುತ್ತೇವೆ. ಈ ಷಡ್ರಿಪುಗಳಿಂದಾಗಿ ವ್ಯಕ್ತಿಯ ಅಧಃಪತನವಾಗಿ ಅವನು ಜನ್ಮ-ಮೃತ್ಯುವಿನ ಚಕ್ರಗಳಲ್ಲಿ ಸಿಲುಕುತ್ತಾನೆ. ಯಾವ ವ್ಯಕ್ತಿಯಲ್ಲಿ ಮತ್ಸರವಿದೆಯೋ, ಅವನು ನಮ್ರ ಮತ್ತು ಪ್ರೇಮಮಯಿಯಾಗಿರಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ವ್ಯಕ್ತಿಯಲ್ಲಿನ ಭಯಂಕರ ಅಹಂಕಾರ, ಕ್ರೋಧ ಮತ್ತು ದ್ವೇಷ ಇವುಗಳಿಂದ ಒಳ್ಳೆಯ ಕೆಲಸಗಳು ನಿಷ್ಫಲಗೊಳ್ಳುತ್ತಿವೆ. ವ್ಯಕ್ತಿಯು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸಿದರೆ ಅವನಲ್ಲಿರುವ ಎಲ್ಲ ಸ್ವಭಾವದೋಷಗಳು ಕಡಿಮೆಯಾಗಲು ಸಹಾಯವಾಗುತ್ತದೆ.
೫. ಜಗತ್ತಿನಲ್ಲಿ ಹೇಗೆ ಬದುಕಬೇಕು ?
೫ ಅ. ‘ಜೀವನದಲ್ಲಿ ಏನೆಲ್ಲ ಒಳ್ಳೆಯದು-ಕೆಟ್ಟದ್ದು ಘಟಿಸುತ್ತದೆಯೋ, ಅದೆಲ್ಲವೂ ದೇವರ ಇಚ್ಛೆಯಾಗಿದೆ’, ಎಂಬ ಭಾವವನ್ನು ಇಟ್ಟುಕೊಳ್ಳುವುದು
ಠೆವಿಲೆ ಅನಂತೆ ತೈಸೆಚಿ ರಾಹಾವೆ |
ಚಿತ್ತಿ ಅಸೋ ದ್ಯಾವೆ ಸಮಾಧಾನ || – ತುಕಾರಾಮ ಗಾಥಾ, ಅಭಂಗ ೨೮೬೭, ದ್ವಿಪದಿ ೨ (ಮರಾಠಿ)
ಅರ್ಥ : ಭಗವಂತನು ನಮ್ಮನ್ನು ಯಾವ ಸ್ಥಿತಿಯಲ್ಲಿ ಇಟ್ಟಿರುವನೋ,ಆ ಸ್ಥಿತಿಯಲ್ಲಿ ಇರಬೇಕು. ಚಿತ್ತದಲ್ಲಿ ಮಾತ್ರ ಸಮಾಧಾನ ಇರಬೇಕು.
‘ನನ್ನ ಜೀವನದಲ್ಲಿ ಏನೆಲ್ಲ ಒಳ್ಳೆಯದು-ಕೆಟ್ಟದ್ದು ಘಟಿಸುತ್ತಿದೆಯೋ, ಅದೆಲ್ಲವೂ ದೇವರ ಇಚ್ಛೆಯಿಂದ ಘಟಿಸುತ್ತಿದೆ’, ಎಂಬ ವಿಚಾರ ಮಾಡಿದರೆ ದುಃಖವನ್ನು ಭೋಗಿಸುವ ಪ್ರಸಂಗ ಬಂದರೂ, ವ್ಯಕ್ತಿಯು ದೇವರ ಇಚ್ಛೆಯೆಂದು ಆ ದುಃಖವನ್ನು ಆನಂದದಿಂದ ಭೋಗಿಸುತ್ತಾನೆ.
೫ ಆ. ಪ್ರಾರಬ್ಧದ ಭೋಗವನ್ನು ಭೋಗಿಸಲೇ ಬೇಕಾಗುವುದು : ನಮ್ಮ ಜೀವನ ಪ್ರಾರಬ್ಧದಿಂದ ಘಟಿಸುತ್ತದೆ; ಅಂದರೆ ಪೂರ್ವಜನ್ಮಗಳಲ್ಲಿ ಮಾಡಿದ ಕರ್ಮಗಳ ಪರಿಣಾಮವನ್ನು ಕೊನೆಗೊಳಿಸಲು ನಾವು ಜನ್ಮವನ್ನು ಪಡೆಯಬೇಕಾಗುತ್ತದೆ. ನಮಗೆ ಪ್ರಾರಬ್ಧದ ಭೋಗವನ್ನು ಭೋಗಿಸಲೇ ಬೇಕಾಗುತ್ತದೆ. ಮಹಾಪುರುಷರು ಮತ್ತು ಸಂತರು ಸಹ ಪ್ರಾರಬ್ಧವನ್ನು ಭೋಗಿಸಿ ಮುಗಿಸಬೇಕಾಗುತ್ತದೆ.
೫ ಇ. ಭಗವಂತನಲ್ಲಿ ಪೂರ್ಣ ಶ್ರದ್ಧೆಯನ್ನಿಟ್ಟು ಜೀವನವನ್ನು ನಡೆಸಿದರೆ, ನಮ್ಮ ಪಾಲಿಗೆ ಬಹಳ ದುಃಖ ಬರುವುದಿಲ್ಲ. ಭಗವಂತನೇ ಆ ದುಃಖಗಳನ್ನು ದೂರ ಮಾಡಿದುದರ ಅನುಭೂತಿಯನ್ನು ಅನೇಕ ಜನರು ಪಡೆದಿದ್ದಾರೆ.
೫ ಈ. ‘ಭಗವಂತನು ಕರ್ತಾ ಇದ್ದಾನೆ’ ಎಂಬ ಅರಿವು ಬೇಕು ! : ಜೀವನದಲ್ಲಿ ದೇವರ ಆವಶ್ಯಕತೆ ಇದೆ’, ಎಂಬ ಬಗ್ಗೆ ಆಂತರ್ಯದಲ್ಲಿ ಅರಿವು ಬೇಕು. ‘ಭಗವಂತನು ಕರ್ತಾ(ಮಾಡುವವನು)’ ಎಂದರೆ, ಸುಖ ಮತ್ತು ‘ನಾನು ಕರ್ತಾ(ಮಾಡುವವನು)’ ಎಂದರೆ, ಕರ್ತೃತ್ವ ಮತ್ತು ದುಃಖವು ನಮ್ಮ ಪಾಲಿಗೆ ಬರುತ್ತದೆ.
೫ ಉ. ಭೌತಿಕ ಕರ್ಮಗಳನ್ನು ಭಗವಂತನ ಆಜ್ಞೆಯೆಂದು ತಿಳಿದು ಮಾಡಬೇಕು : ಜೀವನದಲ್ಲಿನ ಕರ್ಮಗಳನ್ನು ಭಗವಂತನ ಆಜ್ಞೆಯೆಂದು ತಿಳಿದು ಮಾಡಬೇಕು. ಜೀವನವನ್ನು ನಡೆಸುವಾಗ ನಿಂದೆ-ಸ್ತುತಿ ಮತ್ತು ಮಾನ-ಅಪಮಾನ ಇವುಗಳ ವಿಚಾರ ಮಾಡಬಾರದು.
೫ ಊ. ಸದ್ವಿಚಾರಗಳು ಧರ್ಮಾಚರಣೆಗೆ ಉತ್ತೇಜಿಸುತ್ತದೆ; ಆದುದರಿಂದ ಯಾವಾಗಲೂ ಮನಸ್ಸಿನ ವಿಚಾರಗಳ ಮೇಲೆ ಗಮನವಿಡಬೇಕು. ಮನಸ್ಸಿನಲ್ಲಿ ಯಾವುದಾದರೊಂದು ಕೆಟ್ಟ ವಿಚಾರ ಬಂದರೆ ಅದನ್ನು ತಕ್ಷಣ ದೂರ ಮಾಡಬೇಕು.
೫ ಎ. ಎಲ್ಲರನ್ನು ನಿರಪೇಕ್ಷವಾಗಿ ಪ್ರೀತಿಸುವುದರಿಂದ ಆಗುವ ಲಾಭ : ಪ್ರೀತಿಯು ಕೇವಲ ಅನುಭವಿಸುವ ವಿಷಯವಾಗಿದೆ. ಅದನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ. ಪ್ರೀತಿಯ ಪ್ರಭಾವದಿಂದ ಇಂದ್ರಿಯಗಳು ಸೂಕ್ಷ್ಮ ಮತ್ತು ಉದಾತ್ತವಾಗುತ್ತವೆ. ಮಾನವ ಸಂಬಂಧಗಳಲ್ಲಿ ಶುದ್ಧ ಪ್ರೀತಿಯು ಅಪರೂಪವಾಗಿ ಕಂಡು ಬರುತ್ತದೆ. ಈಶ್ವರನ ಪ್ರೀತಿಯು ನಿರಂತರವಾಗಿರುತ್ತದೆ. ನಾವು ಅಪೇಕ್ಷೆ ಇಟ್ಟುಕೊಳ್ಳದೇ ಜನರನ್ನು ಪ್ರೀತಿಸತೊಡಗಿದರೆ ಜನರೂ ನಮ್ಮನ್ನು ಪ್ರೀತಿಸತೊಡಗುತ್ತಾರೆ, ಪರಸ್ಪರರಲ್ಲಿ ಆತ್ಮೀಯತೆ ಉತ್ಪನ್ನವಾಗುತ್ತದೆ ಮತ್ತು ನಮ್ಮಲ್ಲಿ ವ್ಯಾಪಕತೆ ಬರುತ್ತದೆ. ನಮ್ಮಲ್ಲಿ ಪರಸ್ಪರರಿಗೆ ಸಹಾಯ ಮಾಡುವ ಭಾವನೆ ಬೆಳೆಯುತ್ತದೆ.
೬. ‘ಭಗವಂತನ ಸ್ಮರಣೆ’ಯೇ ದೇವರು ಮಾನವನಿಗೆ ಸಮಾಧಾನ ಪಡೆಯಲು ನೀಡಿದ ದೊಡ್ಡ ಕೊಡುಗೆಯಾಗಿದೆ !
ಜಗತ್ತಿನ ಯಾವುದೇ ವಸ್ತು ನಿಮಗೆ ಸಮಾಧಾನ ನೀಡಲು ಸಾಧ್ಯವಿಲ್ಲ. ‘ಭಗವಂತನ ಸ್ಮರಣೆ’ಯೇ ಅವನು ಮಾನವನಿಗೆ ಸಮಾಧಾನದಿಂದಿರಲು ನೀಡಿದ ದೊಡ್ಡ ಕೊಡುಗೆಯಾಗಿದೆ; ಆದುದರಿಂದ ಅವನ ಸ್ಮರಣೆಯಲ್ಲಿ ಯಾವಾಗಲೂ ಸಮಾಧಾನದಿಂದಿರಬೇಕು. ವ್ಯಕ್ತಿಯ ವೃತ್ತಿ(ಸ್ವಭಾವ) ಸ್ಥಿರಗೊಂಡ ನಂತರ ಅವನಿಗೆ ಸಮಾಧಾನ ಸಿಗತೊಡಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ವಿಚಾರ ನೀಡಿದರು. ಅವರೇ ಅದನ್ನು ಬರೆಸಿಕೊಂಡರು. ಅದನ್ನು ಅವರ ಚರಣಗಳಲ್ಲಿ ಅರ್ಪಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ‘ಲೇಖನದಲ್ಲಿನ ಅಂಶಗಳಿಗನುಸಾರ ಪ್ರಯತ್ನಿಸಿದ ನಂತರ ಎಲ್ಲರಿಗೂ ಆನಂದಪ್ರಾಪ್ತಿಯಾಗಲಿ’, ಎಂದು ನಾನು ಈಶ್ವರನ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥಿಸುತ್ತೇನೆ.’ (ಮುಕ್ತಾಯ)
– ಶ್ರೀ. ಅಶೋಕ ಲಿಮಕರ (ವಯಸ್ಸು ೭೩ ವರ್ಷಗಳು), ಸನಾತನ ಆಶ್ರಮ, ದೇವದ, ಪನವೇಲ. (೨.೯.೨೦೨೪)