ರಷ್ಯಾದ ಕಜಾನ್‌ನಲ್ಲಿ 9/11 ಮಾದರಿಯ ದಾಳಿ
ಮಾಸ್ಕೋ (ರಷ್ಯಾ) – ಡಿಸೆಂಬರ್ 21 ರ ಬೆಳಿಗ್ಗೆ, ರಷ್ಯಾದ ಕಜಾನ್ ನಗರದಲ್ಲಿ 8 ಉಕ್ರೇನ್ ಡ್ರೋನ್‌ಗಳು 6 ಕಟ್ಟಡಗಳಿಗೆ ಡಿಕ್ಕಿ ಹೊಡೆದಿವೆ. ಭಯೋತ್ಪಾದರು ವಿಮಾನವನ್ನು ಅಪಹರಿಸಿ ‘9/11’ ಸೆಪ್ಟೆಂಬರ್ 11, 2001 ರಂದು ಅಮೇರಿಕಾದ ನ್ಯೂಯಾರ್ಕ್‌ನಲ್ಲಿರುವ ‘ವರ್ಲ್ಡ್ ಟ್ರೇಡ್ ಸೆಂಟರ್’ನ 2 ಕಟ್ಟಡಗಳ ಮೇಲೆ ಹೇಗೆ ದಾಳಿ ಮಾಡಿದರೋ, ಅದೇ ರೀತಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಈ ದಾಳಿಯ ನಂತರ, ರಷ್ಯಾದ 2 ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. 4 ತಿಂಗಳ ಹಿಂದೆ ರಷ್ಯಾ ಮೇಲೆ ಇದೇ ರೀತಿಯ ದಾಳಿ ನಡೆದಿತ್ತು. ರಷ್ಯಾದ ಸರಟೋವ್ ನಗರದಲ್ಲಿ 38 ಅಂತಸ್ತಿನ ವಸತಿ ಕಟ್ಟಡವಾದ ವೋಲ್ಗಾ ಸ್ಕೈ ಅನ್ನು ಉಕ್ರೇನ್ ಗುರಿ ಮಾಡಿತ್ತು. ಈ ವೇಳೆ 4 ಮಂದಿ ಗಾಯಗೊಂಡಿದ್ದರು. ನಂತರ ರಷ್ಯಾ ಉಕ್ರೇನ್ ಮೇಲೆ 100 ಕ್ಷಿಪಣಿಗಳು ಮತ್ತು 100 ಡ್ರೋನ್‌ಗಳನ್ನು ಹಾರಿಸಿ ಪ್ರತ್ಯುತ್ತರ ನೀಡಿತು. ಇದರಲ್ಲಿ 6 ಜನರು ಸಾವನ್ನಪ್ಪಿದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಡ್ರೋನ್‌ಗಳು ಕಮ್ಲೆವ್ ಅವೆನ್ಯೂ, ಕ್ಲಾರಾ ಜೆಟ್ಕಿನ್ ಸ್ಟ್ರೀಟ್, ಯುಕೋಜಿನ್ಸ್ಕಾಯಾ, ಖಾದಿ ತಕ್ತಾಶ್ ಮತ್ತು ಕ್ರಾಸ್ನಾಯಾ ಪೊಜಿಟ್ಸಿಯಾದಲ್ಲಿ ಕಟ್ಟಡಗಳಿಗೆ ಡಿಕ್ಕಿ ಹೊಡೆದವು. ಇನ್ನೆರಡು ಡ್ರೋನ್‌ಗಳು ಒರೆನ್‌ಬರ್ಗ್‌ಸ್ಕಿ ಟ್ರಾಕ್ಟ್ ಸ್ಟ್ರೀಟ್‌ನಲ್ಲಿರುವ ಮನೆಯನ್ನು ಗುರಿಯಾಗಿಸಿಕೊಂಡಿವೆ. ದಾಳಿಯ ನಂತರ ಎಲ್ಲಾ ಜನರನ್ನು ಈ ಕಟ್ಟಡಗಳಿಂದ ಸ್ಥಳಾಂತರಿಸಲಾಗಿದೆ. ಅಲ್ಲದೆ, ಇಲ್ಲಿ 2 ದಿನಗಳ ಎಲ್ಲಾ ಸಾಮೂಹಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಕಜಾನ್ ನಗರದ ಮೇಯರ್ ನಾಗರಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಹೇಳಿದ್ದಾರೆ.