ಭಯೋತ್ಪಾದಕರನ್ನು ಹುಡುಕಿ ಕೊಲ್ಲಿ ! – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ-ಬೈಡನ್ ಇವರಿಂದ ಸೈನ್ಯಕ್ಕೆ ಆದೇಶ

 ಕಾಬುಲ ವಿಮಾನ ನಿಲ್ದಾಣದ ಹೊರಗೆ ಬಾಂಬ್‌ ಸ್ಫೋಟವಾದ ಪ್ರಕರಣ

* ಅಮೇರಿಕಾದ ೧೩ ಸೈನಿಕರ ಮೃತ್ಯು

* ಬಾಂಬ ಸ್ಫೋಟದ ಹೊಣೆ ಹೊತ್ತ ‘ಇಸ್ಲಾಮಿಕ್ ಸ್ಟೇಟ್‌ ಖುರಾಸಾನ’   !

ಜೋ ಬೈಡನ್

ವಾಶಿಂಗ್ಟನ್‌ (ಅಮೇರಿಕಾ) – ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ್ ಸ್ಟೇಟ್‌ ನಡೆಸಿದ ೨ ಬಾಂಬ್‌ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಅಮೇರಿಕಾದ ೧೩ ಸೈನಿಕರೂ ಇದ್ದರು. ಈ ಬಗ್ಗೆ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡನ್ ಇವರು ಅಮೇರಿಕಾದ ಸೈನ್ಯಕ್ಕೆ ಭಯೋತ್ಪಾದಕರನ್ನು ಹುಡುಕಿ ಕೊಲ್ಲುವ ಆದೇಶ ನೀಡಿದ್ದಾರೆ. ಈ ಸ್ಫೋಟದಲ್ಲಿ ಸುಮಾರು ೧೫೦ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಆದರೆ ‘ನಮ್ಮ (ಅಮೇರಿಕಾದ) ಸೈನ್ಯದ ೨೮ ಜನರು ಮೃತಪಟ್ಟಿದ್ದಾರೆ ಎಂದು ತಾಲಿಬಾನ ಕೂಡ ಹೇಳಿದೆ.

ರಾಷ್ಟ್ರಾಧ್ಯಕ್ಷ ಬೈಡನ್ ಇವರು ಪತ್ರಿಕಾ ಪರಿಷತ್ತಿನಲ್ಲಿ ‘ಇಸ್ಲಾಮಿಕ ಸ್ಟೇಟ್‌ ವಿಜಯಿಯಾಗಲಾರದು. ನಾವು ಯಾವುದೇ ಪರಿಸ್ಥಿತಿಯಲ್ಲಿ ಅಮೇರಿಕಾದ ನಾಗರಿಕರನ್ನು ಹಾಗೂ ಇತರರನ್ನು ಅಫಘಾನಿಸ್ತಾನದಿಂದ ಹೊರತರಲಿದ್ದೇವೆ. ನಮ್ಮ ಅಭಿಯಾನವು ಮುಂದುವರಿಯುವುದು. ಇಂತಹ ಆಕ್ರಮಣಗಳಿಂದ ಅಮೇರಿಕಾ ಹೆದರದೇ ಭಯೋತ್ಪಾದಕರನ್ನು ಹುಡುಕಿ ಅವರ ಸವರ್ನಾಶ ಮಾಡುವುದು’ ಎಂದು ಹೇಳಿದ್ದಾರೆ. ಇನ್ನೊಂದು ಕಡೆಯಲ್ಲಿ ಬಾಂಬಸ್ಫೋಟದಲ್ಲಿ ತಮ್ಮ ಕೈವಾಡವಿದೆ ಎಂದು ‘ಇಸ್ಲಾಮಿಕ ಸ್ಟೇಟ್‌ ಖುರಾಸಾನ’ ಎಂಬ  ಸಂಘಟನೆಯು ಹೇಳಿಕೊಂಡಿದೆ.

ವಿಮಾನ ನಿಲ್ದಾಣದಲ್ಲಿನ ಆಕ್ರಮಣದ ಹಿಂದೆ ಇಸ್ಲಾಮಿಕ ಸ್ಟೇಟ್‌, ತಾಲಿಬಾನ ಮತ್ತು ಹಕ್ಕಾನಿ ನೆಟವರ್ಕ ! – ಅಫಘಾನಿಸ್ತಾನದ ಮಾಜಿ ಉಪರಾಷ್ಟ್ರಪತಿ ಅಮರುಲ್ಲಾಹ ಸಾಲೇಹರ ಹೇಳಿಕೆ

ಮಾಜಿ ಉಪರಾಷ್ಟ್ರಪತಿ ಅಮರುಲ್ಲಾಹ ಸಾಲೇಹ

ಕಾಬುಲ ವಿಮಾನ ನಿಲ್ದಾಣದ ಹೊರಗಿನ ಆಕ್ರಮಣದ ಬಗ್ಗೆ ಅಫಘಾನಿಸ್ತಾನದ ಮಾಜಿ ಉಪರಾಷ್ಟ್ರಪತಿ ಅಮರುಲ್ಲಾಹ ಸಾಲೇಹರು ‘ಇಸ್ಲಾಮಿಕ್ ಸ್ಟೇಟ್‌, ತಾಲಿಬಾನ ಹಾಗೂ ಹಕ್ಕಾನಿ ನೆಟವರ್ಕಗಳು ಪರಸ್ಪರ ಜೊತೆಗೂಡಿವೆ ಎಂದು ಹೇಳಿದ್ದಾರೆ. ಸಾಲೇಹ ರವರು ಟ್ವೀಟ್‌ ಮಾಡಿ ನಮ್ಮ ಬಳಿ ಇರುವ ಸಾಕ್ಷಿಗಳ ಅನುಸಾರ ‘ಇಸ್ಲಾಮಿಕ್ ಸ್ಟೇಟ್‌ ಖುರಾಸಾನ’ನ ಭಯೋತ್ಪಾದಕರು ಮೂಲತಃ ತಾಲಿಬಾನ ಹಾಗೂ ಹಕ್ಕಾನಿ ನೆಟವರ್ಕಗಳೊಂದಿಗೆ ಸೇರಿಕೊಂಡಿದ್ದಾರೆ. ತಾಲಿಬಾನ ತನ್ನ ‘ಇಸ್ಲಾಮಿಕ್ ಸ್ಟೇಟ್‌ ಖುರಾಸಾನ’ನೊಂದಿಗಿನ ಸಂಬಂಧವನ್ನು ಅಲ್ಲಗಳೆದಿದೆ. ಪಾಕಿಸ್ತಾನವು ತಾಲಿಬಾನಿನ ‘ಕ್ವೆಟಾ ಶೂರಾ’ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿಲ್ಲ ಎಂದು ಹೇಳುವಂತೆಯೇ ತಾಲಿಬಾನ ಕೂಡ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಬಂಧವನ್ನು ಅಲ್ಲಗಳೆಯುತ್ತಿದೆ. ತಾಲಿಬಾನ ತನ್ನ ಮಾರ್ಗದರ್ಶಕರಿಂದ (ಪಾಕಿಸ್ತಾನದಿಂದ) ಬಹಳ ಕಲಿತಿದೆ.

‘ಇಸ್ಲಾಮಿಕ ಸ್ಟೇಟ್‌ ಖುರಾಸಾನ’ ಅಂದರೆ ಏನು ?

‘ಇಸ್ಲಾಮಿಕ ಸ್ಟೇಟ್‌ ಖುರಾಸಾನ’ ಇದು ಮಧ್ಯ ಏಶಿಯಾದಲ್ಲಿನ ಇಸ್ಲಾಮಿಕ ಸ್ಟೇಟ್‌ನ ಸಹಕಾರಿ ಭಯೋತ್ಪಾದಕ ಸಂಘಟನೆಯಾಗಿದೆ. ಇಸ್ಲಾಮಿಕ ಸ್ಟೇಟ್‌ನ ಭಯೋತ್ಪಾದಕರು ೨೦೧೪ನೇ ಇಸವಿಯಲ್ಲಿ ಸಿರಿಯಾ ಮತ್ತು ಇರಾಕನಲ್ಲಿ ಹರಡಿದ್ದಾರೆ. ಅನಂತರ ಕೆಲವೇ ತಿಂಗಳಿನಲ್ಲಿ ‘ಇಸ್ಲಾಮಿಕ ಸ್ಟೇಟ ಖುರಾಸಾನ’ನ ಸ್ಥಾಪನೆಯಾಯಿತು. ‘ಖುರಾಸಾನ’ ಅಂದರೆ ಉತ್ತರ ಪೂರ್ವ ಇರಾನ, ಅಫಘಾನಿಸ್ತಾನ, ಪಾಕಿಸ್ತಾನ, ತುರ್ಕಮೇನಿಸ್ತಾನ ಮತ್ತು ಉಜಬೇಕಿಸ್ತಾನ ಈ ದೇಶಗಳ ಭೂಪ್ರದೇಶ ! ಆರಂಭದಲ್ಲಿ ಈ ಸಂಘಟನೆಯಲ್ಲಿ ಸಾವಿರಾರು ಪಾಕಿಸ್ತಾನಿಗಳು ತಾಲಿಬಾನಿನಲ್ಲಿ ಸೇರಿಕೊಂಡರು. ಪಾಕಿಸ್ತಾನಿ ಸೈನ್ಯವು ಅಭಿಯಾನ ನಡೆಸಿ ಈ ಭಯೋತ್ಪಾದಕರನ್ನು ದೇಶದಿಂದ ಹೊರಗಟ್ಟಿತ್ತು. ಅನಂತರ ಈ ಭಯೋತ್ಪಾದಕರು ಗಡಿಯ ಹತ್ತಿರದಲ್ಲಿರುವ ಭಾಗದಲ್ಲಿ ಆಶ್ರಯ ಪಡೆದರು. ಕಟ್ಟರವಾದಿಗಳು ಸಂಘಟನೆಗೆ ಹೆಚ್ಚಿನ ಬಲ ನೀಡಿದರು. ತಾಲಿಬಾನಿನಿಂದ ಕೆಲವು ಭಯೋತ್ಪಾದಕರು ಇಷ್ಟವಿಲ್ಲದಿದ್ದರೂ ಈ ಸಂಘಟನೆಯನ್ನು ಪ್ರವೇಶಿಸಿದರು.

ಇಸ್ಲಾಮಿಕ ಸ್ಟೇಟ್‌ ಜಗತ್ತನ್ನು ೨೦ ಭಾಗಗಳಲ್ಲಿ ವಿಂಗಡಿಸಿದೆ. ಇದರಲ್ಲಿ ಇಸ್ಲಾಮಿಕ ಸ್ಟೇಟ್ ಆಫ್ ಇರಾಕ ಅಂಡ ಸಿರಿಯಾ, ಇಸ್ಲಾಮಿಕ ಸ್ಟೇಟ್ ಗಾಝಾ, ಇಸ್ಲಾಮಿಕ ಸ್ಟೇಟ್‌ ಆಫ್‌ ಲಿಬಿಯಾ ಹೀಗೆ ವಿಧಗಳಿವೆ. ಇದೇ ರೀತಿಯಲ್ಲಿ ‘ಇಸ್ಲಾಮಿಕ ಸ್ಟೇಟ್‌ ಖುರಾಸಾನ’ ಕೂಡ ಇದ್ದು ಇಸ್ಲಾಮಿಕ ಸ್ಟೇಟ್‌ ‘ಗ್ರೇಟ್‌ ಖುರಾಸಾನ’ ಎಂದು ಒಂದು ಭೂಪ್ರದೇಶವನ್ನು ಘೋಷಿಸಿದೆ. ಇದರಲ್ಲಿ ಖುರಾಸಾನಿನಲ್ಲಿರುವ ದೇಶಗಳೊಂದಿಗೆ ಭಾರತ, ನೇಪಾಳ, ಭೂತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಈ ದೇಶಗಳನ್ನೂ ಸೇರಿಸಲಾಗಿದೆ.