Kerala HC Judge Statement : ತಮ್ಮನ್ನು ದೇವಸ್ಥಾನಗಳ ಮಾಲೀಕರೆಂದು ತಿಳಿಯದಿರಿ ! –  ಕೇರಳ ಉಚ್ಚನ್ಯಾಯಾಲಯ

ಕೇರಳ ಉಚ್ಚನ್ಯಾಯಾಲಯದಿಂದ ಕೇರಳದ ತ್ರಾವಣಕೊರ್ ದೇವಸ್ವಂ ಮಂಡಳಿಗೆ ಛೀಮಾರಿ!

ತಿರುವನಂತಪುರಂ (ಕೇರಳ) – ಕೇರಳ ಸರಕಾರ ಮತ್ತು ತ್ರಾವಣಕೋರ ದೇವಸ್ವಂ ಮಂಡಳಿ (ಟಿಡಿಬಿ)ಯನ್ನು ಅಭಿನಂದಿಸುವ ಫ್ಲೆಕ್ಸ್ ಗಳನ್ನು ದೇವಸ್ಥಾನಗಳಲ್ಲಿ ಹಾಕಲು ಅನುಮತಿ ನೀಡಲಾಗುವುದಿಲ್ಲ. ‘ನೀವು (ಟಿಡಿಬಿ) ದೇವಸ್ಥಾನಗಳ ಮಾಲೀಕರಾಗಿದ್ದೀರಿ’, ಎಂದು ಭಾವಿಸಬೇಡಿ. ಮಂಡಳಿಯು ಟ್ರಸ್ಟಿ ಆಗಿರುತ್ತದೆ, ಇದು ದೇವಸ್ಥಾನಗಳ ಆಡಳಿತವನ್ನು ನಿರ್ವಹಿಸುತ್ತದೆ. ಮುಖ್ಯಮಂತ್ರಿ, ಶಾಸಕರು ಅಥವಾ ಟಿಡಿಬಿ ಸದಸ್ಯರ ಮುಖವನ್ನು ನೋಡದೆ ಭಕ್ತರು ದೇವರ ದರ್ಶನಕ್ಕೆ ಹೋಗುತ್ತಾರೆ, ಎಂದು ಕೇರಳ ಉಚ್ಚನ್ಯಾಯಾಲಯವು ತ್ರಾವಣಕೋರ ದೇವಸ್ವಂ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.

1. ನ್ಯಾಯಮೂರ್ತಿ ಅನಿಲ ನರೇಂದ್ರನ ಮತ್ತು ನ್ಯಾಯಮೂರ್ತಿ ಮುರಳಿ ಕೃಷ್ಣ ಅವರ ವಿಭಾಗೀಯ ಪೀಠವು ತಾವಾಗಿ ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಾಲಯವು ಮೇಲಿನ ಮಾತುಗಳಲ್ಲಿ ಛೀಮಾರಿ ಹಾಕಿತು. ಅಲಪ್ಪುಲಾ ಜಿಲ್ಲೆಯ ಚೆರಥಲಾ ಬಳಿಯ ಥುರಾವುರ ಮಹಾಕ್ಷೇತ್ರಂ ದೇವಸ್ಥಾನದಲ್ಲಿ ಫ್ಲೆಕ್ಸ್ ಫಲಕ ಅಳವಡಿಸಿರುವ ಬಗ್ಗೆ ದೂರು ದಾಖಲಾಗಿತ್ತು. ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ.

2. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದ ದೇವಸ್ವಂ ಸಚಿವ ವಿ.ಎನ್. ವಾಸವನ್, ಟಿಡಿಬಿ ಅಧ್ಯಕ್ಷರು ಮತ್ತು ಸ್ಥಳೀಯ ಶಾಸಕರ ಚಿತ್ರಗಳಿರುವ ಫ್ಲೆಕ್ಸ್ ಗಳನ್ನು ಪ್ರಸ್ತುತ ನಡೆಯುತ್ತಿರುವ ಮಂಡಲಕಲಾ-ಮಕರವಿಳಕ್ಕು ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಹಾಕಲಾಗಿತ್ತು. ವಿಭಾಗೀಯ ಪೀಠ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿತು ಮತ್ತು ‘ಇಂತಹ ಫಲಕಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

3. ನ್ಯಾಯಾಲಯವು ಟಿಡಿಬಿ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ಅಧಿಕಾರಿಗಳಿಂದ ಉತ್ತರವನ್ನು ಕೇಳಿದೆ. ಹಾಗೆಯೇ ಟಿಡಿಬಿ ಬಳಿಯಿರುವ ಯಾತ್ರೆ ನಿಲುಗಡೆಯ ಇನ್ನುಳಿದ ಸ್ಥಳಗಳಲ್ಲಿ ಮತ್ತು ಎಲ್ಲಾ ದೇವಸ್ಥಾನಗಳಲ್ಲಿ ಅಳವಡಿಸಲಾಗಿರುವ ಫ್ಲೆಕ್ಸ್ ಗಳ ಬಗ್ಗೆ ಮಾಹಿತಿ ಕೇಳಿದೆ.

ಮಂಡಳಿಯು ಭಕ್ತರಿಂದ ಪಡೆದ ಹಣದಿಂದ ಫಲಕವನ್ನು ಅಳವಡಿಸಬಾರದು !

ನ್ಯಾಯಾಲಯವು, ಥುರಾವುರ ದೇವಸ್ಥಾನವು ಶಬರಿಮಲೆ ಯಾತ್ರೆಯ ವೇಳೆ ನಿಲುಗಡೆ ಸ್ಥಳವಾಗಿದೆ, ಆದುದರಿಂದ ತೀರ್ಥಯಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ಸೌಲಭ್ಯವನ್ನು ಕಲ್ಪಿಸುವುದು ಟಿಡಿಬಿಯ ಜವಾಬ್ದಾರಿಯಾಗಿದೆ. ಅಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸುವುದು ದೇವಸ್ಥಾನದ ಸಲಹಾ ಸಮಿತಿಯ ಜವಾಬ್ದಾರಿಯಲ್ಲ ಹಾಗೂ ಭಕ್ತರಿಂದ ಸಗುವ ಹಣವನ್ನು ಈ ಕೆಲಸಕ್ಕೆ ಬಳಸಬಾರದು ಎಂದು ಆದೇಶಿಸಿದೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಸರಕಾರೀಕರಣದಿಂದ ಪ್ರಸ್ತುತ ಸರಕಾರದ ದೇವಸ್ಥಾನಗಳ ಸಮಿತಿಗಳಿಗೆ ಹೀಗೆಯೇ ಆಗಿದೆ. ಆದುದರಿಂದ ಹಿಂದೂಗಳು ಈಗಲಾದರೂ ಸಂಘಟಿತರಾಗಿ ಸರಕಾರಗಳ ಮೇಲೆ ಒತ್ತಡ ಹೇರಿ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸಬೇಕು !