೧೨ ವರ್ಷದ ಅವಿವಾಹಿತ ಕನ್ಯೆಗೆ ಕುಮಾರಿ ಎನ್ನುತ್ತಾರೆ. ಪ್ರಾಚೀನ ಕಾಲದಲ್ಲಿ ಕೆಲವು ಸ್ತ್ರೀಯರು ಆಜನ್ಮ ಅವಿವಾಹಿತೆಯರಾಗಿರುತ್ತಿದ್ದರು. ಅವರ ಪ್ರೌಢ ಅಥವಾ ವೃದ್ಧ ವಯಸ್ಸಿನಲ್ಲಿಯೂ ಅವರನ್ನು ಕುಮಾರಿ ಎಂದೇ ಕರೆಯುತ್ತಿದ್ದರು; ಇದು ಅಷ್ಟಾಧ್ಯಾಯಿಯಿಂದ ತಿಳಿಯುತ್ತದೆ, ಉದಾ. ವೃದ್ಧ ಕುಮಾರಿ, ಜರತ್ಕುಮಾರಿ. (ಅಷ್ಟಾಧ್ಯಾಯಿ, ೬.೨.೯೫)
ಕುಮಾರಿಪೂಜೆ ಹೇಗೆ ಮಾಡಬೇಕು ?
ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ. ‘ಅವಳು ನಿರ್ದೋಷ, ನಿರೋಗಿ ಮತ್ತು ಅವ್ಯಂಗಳಾಗಿರಬೇಕು’ ಎಂದೂ ಹೇಳಲಾಗಿದೆ. ದೇವೀ ಪೂಜೆಯಾದ ನಂತರ ಕುಮಾರಿಯ ಪೂಜೆಯನ್ನು ಮಾಡುತ್ತಾರೆ. ಮೊದಲು ಮುಂದಿನ ಮಂತ್ರದಿಂದ ಅವಳ ಆವಾಹನೆಯನ್ನು ಮಾಡುತ್ತಾರೆ.
ಮಂತ್ರಾಕ್ಷರಮಯೀಂ ಲಕ್ಷ್ಮೀಂ ಮಾತೃಣಾಂ ರೂಪ ಧಾರಿಣೀಮ್ |
ನವದುರ್ಗಾತ್ಮಿಕಾಂ ಸಾಕ್ಷಾತ್ ಕನ್ಯಾಮಾವಾಹ ಯಾಮ್ಯಹಮ್ ||
ಅರ್ಥ : ಮಂತ್ರಾಕ್ಷರಮಯ, ಲಕ್ಷ್ಮೀ ಸ್ವರೂಪ, ಮಾತೃಕೆಗಳ ರೂಪವನ್ನು ಧರಿಸುವ ಹಾಗೂ ಸಾಕ್ಷಾತ್ ನವ ದುರ್ಗಾತ್ಮಿಕೆ ಯಾಗಿರುವಂತಹ ಕನ್ಯೆಯನ್ನು ನಾನು ಆವಾಹನೆ ಮಾಡುತ್ತೇನೆ.
ಮೊದಲು ಕುಮಾರಿಯ ಕಾಲುಗಳನ್ನು ತೊಳೆಯುತ್ತಾರೆ, ಅವಳನ್ನು ಸುಶೋಭಿತ ಚೌರಂಗದ ಮೇಲೆ (ಎತ್ತರವಾದ ಮರದ ಮಣೆಯ ಮೇಲೆ) ಕೂರಿಸುತ್ತಾರೆ, ಗಂಧ, ಪುಷ್ಪ, ಲಂಗ-ರವಿಕೆ ಕೊಡುತ್ತಾರೆ ಮತ್ತು ಅವಳ ಕೊರಳಿನಲ್ಲಿ ಹೂಮಾಲೆಯನ್ನು ಹಾಕುತ್ತಾರೆ. ಅವಳಿಗೆ ಪಂಚಾಮೃತ ಮತ್ತು ಮೃಷ್ಠಾನ್ನವನ್ನು ಸಮರ್ಪಿಸುತ್ತಾರೆ. ನಂತರ ಅವಳಿಗೆ ನಮಸ್ಕಾರ ಮಾಡುತ್ತಾರೆ. ಶಾಕ್ತ ತಂತ್ರದಲ್ಲಿ ಕುಮಾರಿಪೂಜೆಗೆ ವಿಶೇಷ ಮಹತ್ವವಿದೆ. (ಆಧಾರ ಗ್ರಂಥ : ಸನಾತನ ಸಂಸ್ಥೆ ಪ್ರಕಾಶಿಸಿದ ಗ್ರಂಥ ‘ಶಕ್ತಿಯ ಪ್ರಾಸ್ತಾವಿಕ ವಿವೇಚನೆ’)