HOLI Row In AMU : “ಅನುಮತಿ ಸಿಗಲಿ ಅಥವಾ ಸಿಗದಿದ್ದರೂ ಮಾರ್ಚ್ 10 ರಂದು ವಿಶ್ವವಿದ್ಯಾಲಯದಲ್ಲಿ ಹೋಳಿ ಆಡುತ್ತೇವೆ!” – ಅಖಿಲ ಭಾರತೀಯ ಕರಣಿ ಸೇನೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ ‘ಹೋಳಿ ಮಿಲನ್’ ಕಾರ್ಯಕ್ರಮಕ್ಕೆ ನಿರಾಕರಣೆ, ಅಖಿಲ ಭಾರತೀಯ ಕರಣಿ ಸೇನೆಯಿಂದ ಎಚ್ಚರಿಕೆ

ಅಲಿಗಢ (ಉತ್ತರ ಪ್ರದೇಶ) – ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಮಾರ್ಚ್ 10 ರಂದು ವಿದ್ಯಾರ್ಥಿಗಳು ಹೋಳಿ ಹಬ್ಬ ಆಚರಿಸಲು ವಿಶ್ವವಿದ್ಯಾಲಯ ಆಡಳಿತ ನಿರಾಕರಿಸಿದ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ‘ಹೋಳಿ ಮಿಲನ್’ ಎಂಬ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದೆ; ಆದರೆ ಅನುಮತಿ ನಿರಾಕರಿಸಿದ್ದರಿಂದ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿವೆ. ಇದರೊಂದಿಗೆ ಅಖಿಲ ಭಾರತೀಯ ಕರಣಿ ಸೇನೆಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿ ಹೆಸರಲ್ಲಿ ಮನವಿ ಸಲ್ಲಿಸಿದರು.

1. ಕರಣಿ ಸೇನೆಯ ಜ್ಞಾನೇಂದ್ರ ಸಿಂಗ್ ಚೌಹಾಣ್ ಇವರು, “ಮಾರ್ಚ್ 10 ರಂದು ರಂಗಭರಿ ಏಕಾದಶಿಯಂದು ವಿಶ್ವವಿದ್ಯಾಲಯದಲ್ಲಿ ಹಿಂದೂ ವಿದ್ಯಾರ್ಥಿಗಳೊಂದಿಗೆ ಹೋಳಿ ಆಡುತ್ತೇವೆ ಮತ್ತು ‘ಹೋಳಿ ಮಿಲನ್’ ಕೂಡ ನಡೆಯುತ್ತದೆ. ಇದಕ್ಕೆ ಅನುಮತಿ ಸಿಕ್ಕರೂ, ಸಿಗದಿದ್ದರೂ ಆಚರಿಸುತ್ತೇವೆ. ಈ ವಿಶ್ವವಿದ್ಯಾಲಯದಲ್ಲಿ ಇಫ್ತಾರ್ (ಮುಸ್ಲಿಮರು ರಂಜಾನ್ ಸಮಯದಲ್ಲಿ ಉಪವಾಸ ಮುರಿಯುವುದು) ಮತ್ತು ‘ಈದ್ ಮಿಲನ್’ ಆಯೋಜಿಸಬಹುದಾದರೆ, ‘ಹೋಳಿ ಮಿಲನ್’ ಏಕೆ ಸಾಧ್ಯವಿಲ್ಲ?” ಎಂದು ಹೇಳಿದರು.

2. ಈ ಬಗ್ಗೆ ಉಪವಿಭಾಗಾಧಿಕಾರಿಗಳು, “ವಿಶ್ವವಿದ್ಯಾಲಯದ ಆವರಣದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಆಡಳಿತವು ಅನುಮತಿ ನೀಡಬೇಕು. ಈ ಬಗ್ಗೆ ಚರ್ಚೆ ನಡೆಯುತ್ತಿದೆ” ಎಂದು ತಿಳಿಸಿದರು.

ವಿದ್ಯಾರ್ಥಿಗಳು ಎಂದಿನಂತೆ ಹೋಳಿ ಆಡಬಹುದು; ಆದರೆ ‘ಹೋಳಿ ಮಿಲನ್’ ಗೆ ಅನುಮತಿ ನೀಡಲಾಗುವುದಿಲ್ಲ! – ವಿಶ್ವವಿದ್ಯಾಲಯ ಆಡಳಿತ

ವಿಶ್ವವಿದ್ಯಾಲಯದ ಆಡಳಿತವು, “ವರ್ಷಗಳಿಂದ ಎಲ್ಲಾ ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಪರಸ್ಪರ ಹೋಳಿ ಆಡುತ್ತಿದ್ದಾರೆ, ಅದಕ್ಕೆ ಯಾವುದೇ ನಿರ್ಬಂಧವಿಲ್ಲ ಮತ್ತು ಅದಕ್ಕೆ ಯಾವುದೇ ಅನುಮತಿಯ ಅಗತ್ಯವಿಲ್ಲ; ಆದರೆ ಪ್ರತ್ಯೇಕ ‘ಹೋಳಿ ಮಿಲನ್’ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ” ಎಂದು ಹೇಳಿದೆ.

ಈದ್ ಆಚರಿಸಲು ಸಹ ಬಿಡುವುದಿಲ್ಲ! – ಮಾಜಿ ಮೇಯರ್ ಮತ್ತು ಭಾಜಪ ನಾಯಕಿ ಶಕುಂತಲಾ ಭಾರತಿ ಎಚ್ಚರಿಕೆ

ಮಾಜಿ ಮೇಯರ್ ಮತ್ತು ಭಾಜಪ ನಾಯಕಿ ಶಕುಂತಲಾ ಭಾರತಿ, “ಇದು ಹಿಂದೂಸ್ಥಾನ, ಪಾಕಿಸ್ತಾನವಲ್ಲ. ವಿಶ್ವವಿದ್ಯಾಲಯವು ಯಾರ ವೈಯಕ್ತಿಕ ಆಸ್ತಿಯಲ್ಲ. ಈ ಜನರು ‘ಹೋಳಿ ಆಡಲು ಬಿಡುವುದಿಲ್ಲ’ ಎಂದು ಹೇಳುತ್ತಿರುವ ರೀತಿಯಲ್ಲಿ, ಅಲ್ಲಿ ಈದ್ ಆಚರಿಸಲು ಸಹ ಬಿಡುವುದಿಲ್ಲ ಎಂದು ನಾನು ಹೇಳುತ್ತೇನೆ. ಇದು ಬಹಿರಂಗ ಎಚ್ಚರಿಕೆಯಾಗಿದೆ. ಇದು ಹಿಂದೂಸ್ಥಾನ. ನಾವು ಹಿಂದೂಗಳ ಭಾವನೆಗಳೊಂದಿಗೆ ಅಥವಾ ಯಾರ ಭಾವನೆಗಳೊಂದಿಗೂ ಆಟವಾಡಲು ಬಿಡುವುದಿಲ್ಲ. ಹೋಳಿ ನಮ್ಮ ಏಕತೆಯ ಸಂಕೇತವಾಗಿದೆ, ಪ್ರೀತಿಯ ಸಂಕೇತ, ತ್ಯಾಗದ ಸಂಕೇತ; ಆದ್ದರಿಂದ ಇಂತಹ ಕೊಳಕು ಕೆಲಸಗಳನ್ನು (ಹೋಳಿ ಮಿಲನ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವುದು) ನಿಲ್ಲಿಸಿ. ಇಂದು ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರಿಗೆ ತಿಳಿಸುತ್ತೇನೆ. ಇಲ್ಲಿ ಹೋಳಿ ಆಚರಿಸುತ್ತೇವೆ ಎಂದು ನಾನು ನಿಮಗೆ ಎಚ್ಚರಿಕೆ ನೀಡುತ್ತೇನೆ. ಆಡಳಿತವು ಬುದ್ಧಿವಂತಿಕೆಯನ್ನು ತೋರಿಸಬೇಕು ಮತ್ತು ಹೋಳಿ ಆಚರಿಸಲು ಅನುಮತಿ ನೀಡಬೇಕು” ಎಂದು ಹೇಳಿದರು.

ಸಂಪಾದಕೀಯ ನಿಲುವು

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಕೇಂದ್ರ ಸರಕಾರದ ಅನುದಾನದಿಂದ ನಡೆಯುತ್ತದೆ. ಇಲ್ಲಿ ಈದ್ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಹಿಂದೂಗಳ ಹಬ್ಬದ ಕಾರ್ಯಕ್ರಮಗಳೂ ನಡೆಯಬೇಕು. ಇಲ್ಲದಿದ್ದರೆ, ‘ಜಾತ್ಯತೀತ’ ಸರಕಾರವು ವಿಶ್ವವಿದ್ಯಾಲಯದ ಅನುದಾನವನ್ನು ನಿಲ್ಲಿಸಬೇಕು !