೧. ಪತಿಯ ದೀರ್ಘಾಯುಷ್ಯಕ್ಕಾಗಿ ಮುತ್ತೈದೆಯರಿಂದ ಆಚರಿಸಲ್ಪಡುವ ಕರವಾ ಚೌಥ ಹಬ್ಬ
ಉತ್ತರಭಾರತದಲ್ಲಿ ಮತ್ತು ಪೂರ್ವದ ಕಡೆಗಿನ ರಾಜ್ಯಗಳಲ್ಲಿ ವಿಶೇಷವಾಗಿ ಪೂರ್ವೋತ್ತರ ಭಾರತದಲ್ಲಿ (ನೇಪಾಳ ಸಹಿತ) ಕರವಾ ಚೌಥ ಈ ಹಬ್ಬವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ತಿಂಗಳ ಕೃಷ್ಣ ಪಕ್ಷದ ಚತುರ್ಥಿಗೆ ಈ ವ್ರತವನ್ನು ಆಚರಿಸಲಾಗುತ್ತದೆ. ಪಾಂಡವರಿಗೆ ಬರುವ ಆಪತ್ತುಗಳಿಂದ ಅವರ ರಕ್ಷಣೆಯಾಗಬೇಕೆಂದು ದ್ರೌಪದಿಯು ಭಗವಾನ ಶ್ರೀಕೃಷ್ಣನಲ್ಲಿ ಉಪಾಯವನ್ನು ಕೇಳುತ್ತಾಳೆ, ಆಗ ಭಗವಾನ ಶ್ರೀಕೃಷ್ಣನು ಅವಳಿಗೆ ಈ ವ್ರತವನ್ನು ಮಾಡಲು ಹೇಳುತ್ತಾನೆ. ಗೌರೀದೇವಿಯ ಉತ್ಸವ ಅಥವಾ ಪಾರ್ವತಿಮಾತೆಯ ಉತ್ಸವ ಈ ಹೆಸರಿನಿಂದಲೂ ಇದು ಗುರುತಿಸಲ್ಪಡುತ್ತದೆ. ಪತಿಗೆ ಉತ್ತಮ ಆರೋಗ್ಯ ಲಭಿಸಬೇಕು, ಅವರ ವೈಯಕ್ತಿಕ ಜೀವನ ಚೆನ್ನಾಗಿರಬೇಕು ಹಾಗೂ ಪತಿಗೆ ದೀರ್ಘಾಯುಷ್ಯ ಲಭಿಸಬೇಕೆಂದು ಮುತ್ತೈದೆಯರು ಈ ವ್ರತವನ್ನು ಮಾಡುತ್ತಾರೆ. ಅವರು ಮುಂಜಾನೆಯಿಂದ ಚಂದ್ರೋದಯದ ವರೆಗೆ ಉಪವಾಸ ಮಾಡುತ್ತಾರೆ, ಸಾಯಂಕಾಲ ಸಾರಣಿಗೆಯಿಂದ (ಜರಡಿಯಿಂದ) ಅಥವಾ ಕನ್ನಡಿಯ ಮೂಲಕ ಚಂದ್ರದರ್ಶನ ಮಾಡಿ ಉಪವಾಸ ಬಿಡುತ್ತಾರೆ ಹಾಗೂ ವ್ರತವನ್ನು ಮುಕ್ತಾಯಗೊಳಿಸುತ್ತಾರೆ.

೨. ಕರವಾ ಚೌಥದಲ್ಲಿ ವಿಘ್ನ ತರುವ ಪ್ರಗತಿಪರರ ಅರ್ಜಿ
ಹಿಂದೂಗಳ ಪ್ರತಿಯೊಂದು ಹಬ್ಬ-ಉತ್ಸವಗಳ ವಿಷಯದಲ್ಲಿ ಹಿಂದೂಗಳ ಮನಸ್ಸನ್ನು ಕೆಡಿಸುವ ಏನಾದರೂ ವಿಚಾರವನ್ನು ಮುಂದಿಟ್ಟು ಅವರನ್ನು ಧರ್ಮಾಚರಣೆಯಿಂದ ದೂರವಿಡಲು ಪ್ರಗತಿಪರರೆಂದು ಹಣೆಪಟ್ಟಿ ಹಚ್ಚಿಕೊಂಡಿರುವ ಧೂರ್ತರಿಂದ ಸತತ ಪ್ರಯತ್ನ ನಡೆಯುತ್ತದೆ. ಅದಕ್ಕಾಗಿ ಅವರು ಹಿಂದೂಗಳ ಪ್ರತಿಯೊಂದು ಹಬ್ಬದಲ್ಲಿ ಹೊಸ ಹೊಸ ವಿಘ್ನಗಳನ್ನು ತರಲು ಪ್ರಯತ್ನಿಸುತ್ತಾರೆ. ‘ಅರಿಶಿನ-ಕುಂಕುಮದ ಕಾರ್ಯಕ್ರಮಗಳಿಗೆ ವಿಚ್ಛೇದಿತ ಮಹಿಳೆ, ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ, ಪತಿಯನ್ನು ಬಿಟ್ಟಿರುವ ಮತ್ತು ವಿಧವೆಯರನ್ನು ಕರೆಯಬೇಕು’, ಎಂಬುದು ಅವರ ಆಗ್ರಹವಾಗಿದೆ. ಅದಕ್ಕಾಗಿ ಅವರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಈ ಪ್ರಗತಿಪರ ಧೂರ್ತರು ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯದಲ್ಲಿ ಇತ್ತೀಚೆಗೆ ಒಂದು ಅರ್ಜಿಯನ್ನು ದಾಖಲಿಸಿ ದ್ದರು. ಅದರಲ್ಲಿ ವಿಚ್ಛೇದಿತ ಮಹಿಳೆ, ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿರುವ, ವಿಧವೆಯರು ಮತ್ತು ಪತಿಯನ್ನು ಬಿಟ್ಟು ಅನೈತಿಕ ಸಂಬಂಧವನ್ನಿಟ್ಟುಕೊಂಡಿರುವಂತಹ ಮಹಿಳೆಯರಿಗೂ ಕೇಂದ್ರ ಸರಕಾರ ಹಾಗೂ ಪಂಜಾಬ್ ಮತ್ತು ಹರಿಯಾಣಾ ಸರಕಾರ ಕರವಾಚೌಥ ವ್ರತವನ್ನು ಎಲ್ಲರಿಗೂ ಕಡ್ಡಾಯಗೊಳಿಸುವ ಕಾನೂನು ಮಾಡಬೇಕು’, ಎಂದು ವಿನಂತಿಸಿದ್ದರು. ಈ ಅರ್ಜಿಯಲ್ಲಿ ಪೊಲೀಸ್ ಮತ್ತು ಆಡಳಿತದವರು ಇಂತಹ ಮಹಿಳೆ ಯರಿಗೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಬಾರದು ಎಂಬ ಇನ್ನೊಂದು ಮಹತ್ವದ ಬೇಡಿಕೆ ಇತ್ತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ವಿವಾಹಿತ, ಅವಿವಾಹಿತ ಅಥವಾ ‘ರಿಲೇಶನ್‌ಶಿಪ್’ನಲ್ಲಿರುವ ಮಹಿಳೆ ಎನ್ನುವ ಭೇದಭಾವ ಮಾಡ ಬಾರದು, ಎಂಬುದು ಅವರ ಹೇಳಿಕೆಯಾಗಿತ್ತು.
೩. ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯದಿಂದ ಅರ್ಜಿದಾರರಿಗೆ ದಂಡ
ಈ ಮೇಲಿನ ಅರ್ಜಿ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶ ಸುಮಿತ ಗೋಯಲ ಇವರ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ಆಲಿಕೆಗೆ ಬಂದಿತ್ತು. ಆಗ ಅವರು ಹೇಳಿದ್ದೇನೆಂದರೆ, ಕಾನೂನು ರೂಪಿಸುವ ಹೊಣೆ ಶಾಸಕಾಂಗದ್ದಾಗಿದೆ. ಈ ಬೇಡಿಕೆ ಉಚ್ಚ ನ್ಯಾಯಾಲಯದ ಕಾರ್ಯಕ್ಷೇತ್ರದ ಹೊರಗಿನದ್ದಾಗಿದೆ. ಆದ್ದರಿಂದ ಇಂತಹ ಕಾನೂನು ತರುವ ವಿಷಯದಲ್ಲಿ ಉಚ್ಚ ನ್ಯಾಯಾಲಯ ಆದೇಶ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವನ್ನು ಸಂಪರ್ಕಿಸಬೇಕು. ಇಂತಹ ಅಭಿಪ್ರಾಯವನ್ನು ನೀಡಿ ನ್ಯಾಯಾಲಯ ಕೇವಲ ಅರ್ಜಿ ಯನ್ನು ನಿರಾಕರಿಸಿದ್ದಲ್ಲ, ಇಂತಹ ಅಗ್ಗದ ಜನಪ್ರಿಯತೆ ಗಳಿಸಲು ಅರ್ಜಿಯನ್ನು ದಾಖಲಿಸಿದ್ದಕ್ಕಾಗಿ ಅರ್ಜಿದಾರರಿಗೆ ೧ ಸಾವಿರ ರೂಪಾಯಿ ದಂಡವನ್ನೂ ವಿಧಿಸಿತು.
ಕೇವಲ ಜನಪ್ರಿಯತೆ ಗಳಿಸಲು ಅಥವಾ ಹಿಂದೂ ಧರ್ಮವನ್ನು ಮುಳುಗಿಸಲು ಪ್ರಗತಿಪರರು ಇಂತಹ ಅರ್ಜಿಗಳನ್ನು ನ್ಯಾಯಾಲಯ ದಲ್ಲಿ ದಾಖಲಿಸುತ್ತಾರೆ. ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯ ಕರವಾಚೌಥದ ವಿಷಯದಲ್ಲಿನ ಅರ್ಜಿಯನ್ನು ನಿರಾಕರಿಸುತ್ತಾ ಅರ್ಜಿದಾರರಿಗೆ ದಂಡವನ್ನೂ ವಿಧಿಸಿತು, ಆದುದರಿಂದ ಒಂದು ಒಳ್ಳೆಯ ವಾಡಿಕೆಯನ್ನು ಮಾಡಿದ್ದಕ್ಕಾಗಿ ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸಬೇಕು !’
ಕರವಾಚೌಥ ಹಬ್ಬ ಎಂದರೇನು ?ಕಾರ್ತಿಕ ತಿಂಗಳ ಕೃಷ್ಣ ಪಕ್ಷದಲ್ಲಿ ಬರುವ ಚತುರ್ಥಿಯಂದು ಕರವಾ ಚೌಥ ವ್ರತವನ್ನು ಆಚರಿಸಲಾಗುತ್ತದೆ. ಕರವಾ ಅಂದರೆ ಮಣ್ಣಿನ ಗಡಿಗೆ ಹಾಗೂ ಚೌಥ ಅಂದರೆ ಚತುರ್ಥಿ. ಈ ದಿನ ಹೊಸ ಗಡಿಗೆಯನ್ನು ತಂದು ಅದನ್ನು ಶೃಂಗರಿಸಲಾಗುತ್ತದೆ. ಅನಂತರ ಗಡಿಗೆಯ ಪೂಜೆಯನ್ನು ಮಾಡಿ ಇದೇ ಗಡಿಗೆಯಿಂದ ಚಂದ್ರನಿಗೆ ಅರ್ಘ್ಯ ನೀಡಲಾಗುತ್ತದೆ. ಕರವಾಚೌಥ ಈ ವ್ರತವನ್ನು ಮುಖ್ಯವಾಗಿ ಮುತ್ತೈದೆಯರು ಮಾಡುತ್ತಾರೆ. ಒಳ್ಳೆಯ ಜೊತೆಗಾರ ಸಿಗಬೇಕೆಂದು ಕೆಲವೊಂದು ಕಡೆಗಳಲ್ಲಿ ಕುಮಾರಿಯರು ಕೂಡ ಈ ವ್ರತವನ್ನು ಮಾಡುತ್ತಾರೆ. ಈ ವ್ರತವನ್ನು ಹೆಚ್ಚಾಗಿ ಉತ್ತರಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಾರೆ. ಈ ದಿನ ಮುಂಜಾನೆ ಬೇಗನೆ ಎದ್ದು ಮಹಿಳೆಯರು ವ್ರತದ ಸಂಕಲ್ಪ ಮಾಡುತ್ತಾರೆ. ದಿನವಿಡೀ ನಿರ್ಜಲ (ನೀರನ್ನು ಕುಡಿಯದಿರುವುದು) ವ್ರತವನ್ನು ಮಾಡಿ ರಾತ್ರಿ ಚಂದ್ರದರ್ಶನ ಮಾಡಿ ಅವನಿಗೆ ಅರ್ಘ್ಯವನ್ನು ಕೊಡುತ್ತಾರೆ, ಅನಂತರವೇ ಯಜಮಾನರ ಕೈಯಿಂದ ನೀರನ್ನು ಸೇವಿಸಿ ವ್ರತವನ್ನು ಮುಕ್ತಾಯಗೊಳಿಸುತ್ತಾರೆ. ಈ ವ್ರತಾಚರಣೆಯಲ್ಲಿ ಬೆಳಗ್ಗೆ ಮಹಾದೇವ ಶಿವಶಂಕರ, ಪಾರ್ವತಿ ದೇವಿ, ಗಣಪತಿ ಮತ್ತು ಕಾರ್ತಿಕೇಯರ ಪೂಜೆಯನ್ನು ಮಾಡಲಾಗುತ್ತದೆ. ಸಾಯಂಕಾಲ ಚಂದ್ರದರ್ಶನ ಆದನಂತರ ಚಂದ್ರದೇವತೆಯ ಪೂಜೆ ಮಾಡಿ ಅವನಿಗೆ ಅರ್ಘ್ಯ ನೀಡಲಾಗುತ್ತದೆ. ಇದೇ ದಿನ ಸಂಕಷ್ಟ ಚತುರ್ಥಿ ಇರುವುದರಿಂದ ಈ ವ್ರತದಲ್ಲಿನ ಗಣಪತಿ ಪೂಜೆಗೆ ಹೆಚ್ಚಿನ ಮಹತ್ವವಿರುತ್ತದೆ, ಎಂದು ಹೇಳಲಾಗುತ್ತದೆ. |
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೩.೨.೨೦೨೫)
|| ಶ್ರೀ ಕೃಷ್ಣಾರ್ಪಣಮಸ್ತು ||