ಹೋಲಿಕಾ ದಹನದ ಅಧ್ಯಾತ್ಮಶಾಸ್ತ್ರ ಮತ್ತು ಮಹತ್ವ !

೧೩ ಮಾರ್ಚ್ ೨೦೨೫ ರಂದು ಹೋಳಿ ಇದೆ. ಅದರ ನಿಮಿತ್ತ…

ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತ ಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾಗಿವೆ. ಶಾಸ್ತ್ರಕ್ಕನುಸಾರ ಧಾರ್ಮಿಕ ಕೃತಿಗಳನ್ನು ಮಾಡಿ ಹಬ್ಬಗಳನ್ನು ಆಚರಿಸಿದರೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಅದರಿಂದ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅನೇಕ ಲಾಭಗಳಾಗುತ್ತವೆ. ಅದರಿಂದ ಸಂಪೂರ್ಣ ಸಮಾಜದ ಆಧ್ಯಾತ್ಮಿಕ ಉನ್ನತಿ ಯಾಗುತ್ತದೆ. ಈ ವಾರದ ಲೇಖನದಲ್ಲಿ ಫಾಲ್ಗುಣ ಹುಣ್ಣಿಮೆಗೆ ಬರುವ ‘ಹೋಳಿ’ ಹಬ್ಬವನ್ನು ಧರ್ಮಶಾಸ್ತ್ರಕ್ಕನುಸಾರ ಹೇಗೆ ಆಚರಿಸಬೇಕು ? ಮತ್ತು ಅದರಿಂದಾಗುವ ಅಸಾಧಾರಣ ಲಾಭದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಭಾರತದಲ್ಲಿ ಹೋಳಿ ಆಚರಣೆ ಮಾಡುವ ಪದ್ದತಿ; ಅದರ ವಿವಿಧ ಹೆಸರುಗಳು ಮತ್ತು ಅದರ ನಿಮಿತ್ತ ಮಾಡಬೇಕಾದ ಸಂಕಲ್ಪ

ಹೋಳಿಯನ್ನು ಫಾಲ್ಗುಣ ಹುಣ್ಣಿಮೆಯಂದು ಆಚರಿಸುತ್ತಾರೆ. ಪ್ರಾಂತಗಳಿಗನುಸಾರ ಕೆಲವು ಕಡೆಗಳಲ್ಲಿ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯ ವರೆಗೆ ೫ ದಿನ ‘ಹೋಳಿಕೋತ್ಸವ’ವನ್ನು ಆಚರಿಸುತ್ತಾರೆ, ಕೆಲವು ಕಡೆಗಳಲ್ಲಿ ೨ ದಿನ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಈ ಉತ್ಸವವನ್ನು ‘ಹೋರೀ’, ‘ಡೋಲ್‌ ಯಾತ್ರಾ’ ಈ ಹೆಸರಿನಲ್ಲಿ, ಗೋವಾದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ‘ಶಿಮಗಾ’, ‘ಹೋಳಿ’, ‘ಹುತಾಶನೀ ಮಹೋತ್ಸವ’ ಅಥವಾ ‘ಹೋಲಿಕಾ ದಹನ’ ಈ ಹೆಸರಿನಲ್ಲಿ, ಬಂಗಾಲದಲ್ಲಿ ‘ಡೋಲ್‌ ಯಾತ್ರೆ’ಯ ಹೆಸರಿನಲ್ಲಿ ಮತ್ತು ದಕ್ಷಿಣದಲ್ಲಿ ‘ಕಾಮದಹನ’ ಈ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಉತ್ತರ ಭಾರತದಲ್ಲಿ ಹೋಳಿಯ ೩ ದಿನ ಮೊದಲು ಶ್ರೀಕೃಷ್ಣನನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ ಹಾಗೂ ಅದರ ಉತ್ಸವವನ್ನು ಆಚರಿಸುತ್ತಾರೆ. ಫಾಲ್ಗುಣ ಹುಣ್ಣಿಮೆಯಂದು ಪೂತನಾ ರಾಕ್ಷಸಿಯ ಪ್ರತಿಕೃತಿ ಮಾಡಿ ಅದನ್ನು ರಾತ್ರಿ ಸುಡುತ್ತಾರೆ. ದಕ್ಷಿಣದಲ್ಲಿ ಜನರು ಕಾಮದೇವನ ದಹನದ ಉದ್ದೇಶದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ದಿನ ಮದನನ ಪ್ರತಿಕೃತಿಯನ್ನು ಮಾಡಿ ಅದನ್ನು ದಹನ ಮಾಡುತ್ತಾರೆ. ಮದನನನ್ನು ಗೆಲ್ಲುವ ಕ್ಷಮತೆ ಹೋಳಿಯಲ್ಲಿದೆ, ಅದಕ್ಕಾಗಿ ಹೋಳಿಯ ಉತ್ಸವ ಇರುತ್ತದೆ.

‘ಹೋಳಿ ದುಷ್ಟ ಪ್ರವೃತ್ತಿ ಮತ್ತು ಅಮಂಗಲ ವಿಚಾರಗಳನ್ನು ನಾಶ ಮಾಡಿ ಸತ್ಪ್ರವೃತ್ತಿಯ ಮಾರ್ಗವನ್ನು ತೋರಿಸುವ ಉತ್ಸವವಾಗಿದೆ. ವಿಕಾರಗಳನ್ನು ಭಸ್ಮ ಮಾಡಿ ಹೊಸ ಉತ್ಸಾಹದಿಂದ ಸತ್ತ್ವಗುಣದ ಕಡೆಗೆ ಪಾದಾರ್ಪಣೆ ಮಾಡಲು ಸಿದ್ಧವಾಗಬೇಕು’, ಎನ್ನುವ ಸಂದೇಶವನ್ನು ನೀಡುವ ಹಬ್ಬ ಇದಾಗಿದೆ. ‘ವೃಕ್ಷರೂಪಿ ಸಮಿಧೆ ಯನ್ನು ಅಗ್ನಿಯಲ್ಲಿ ಅರ್ಪಿಸಿ ಅದರ ಮೂಲಕ ವಾತಾವರಣವನ್ನು ಶುದ್ಧೀಕರಿಸುವುದು’, ಎಂಬ ಉದಾರ ಮನೋಭಾವದಿಂದ ಹೋಳಯನ್ನು ಆಚರಿಸಲಾಗುತ್ತದೆ.

೨. ತ್ರೇತಾಯುಗದಲ್ಲಿ ಮೊದಲ ಯಜ್ಞದ ಸ್ಮರಣೆಗಾಗಿ ಹೋಳಿಯನ್ನು ಆಚರಿಸಲಾಯಿತು !

ಹೋಳಿ ಅಗ್ನಿದೇವತೆಯ ಉಪಾಸನೆಯ ಒಂದು ಅಂಗವಾಗಿದೆ. ಈ ದಿನ ಅಗ್ನಿದೇವತೆಯ ಪೂಜೆಯನ್ನು ಮಾಡುವುದರಿಂದ ವ್ಯಕ್ತಿಗೆ ತೇಜತತ್ತ್ವದ ಲಾಭವಾಗುತ್ತದೆ. ಪೃಥ್ವಿ, ಆಪ, ತೇಜ ವಾಯು ಮತ್ತು ಆಕಾಶ ಈ ೫ ತತ್ತ್ವಗಳ ಸಹಾಯದಿಂದ ದೇವತೆಯ ತತ್ತ್ವ ವನ್ನು ಪೃಥ್ವಿಯಲ್ಲಿ ಪ್ರಕಟ ಮಾಡಲು ಯಜ್ಞ ಒಂದು ಮಾಧ್ಯಮವಾಗಿದೆ  ಮೊಟ್ಟಮೊದಲು ತ್ರೇತಾಯುಗದಲ್ಲಿ ಪರಮೇಶ್ವರನ ಮೂಲಕ ಒಂದೇ ಬಾರಿ ೭ ಋಷಿಮುನಿಗಳಿಗೆ ಸ್ವಪ್ನದೃಷ್ಟಾಂತದ ಮೂಲಕ ಯಜ್ಞದ ಜ್ಞಾನವಾಯಿತು. ಅವರು ಯಜ್ಞದ ಸಿದ್ಧತೆಯನ್ನು ಆರಂಭಿಸಿದರು. ನಾರದಮುನಿಗಳ ಮಾರ್ಗದರ್ಶನ ಕ್ಕನುಸಾರ ಯಜ್ಞ ಆರಂಭವಾಯಿತು. ಮಂತ್ರಘೋಷದೊಂದಿಗೆ ಎಲ್ಲರೂ ವಿಷ್ಣುತತ್ತ್ವವನ್ನು ಆವಾಹನೆ ಮಾಡಿದರು. ಯಜ್ಞದ ಜ್ವಾಲೆಸಹಿತ ವಿಷ್ಣುತತ್ತ್ವ ಪ್ರಕಟವಾಗಲು ಆರಂಭವಾಯಿತು. ಇದರಿಂದ ಪೃಥ್ವಿಯ ಮೇಲಿರುವ ಅನಿಷ್ಟ ಶಕ್ತಿಗಳಿಗೆ ತೊಂದರೆಯಾಗಲು ಆರಂಭವಾಗಿ ಅವುಗಳಲ್ಲಿ ಗೊಂದಲವುಂಟಾಯಿತು. ಅವುಗಳಿಗೆ ಆಗುವ ತೊಂದರೆಗಳ ಕಾರಣ ಅವುಗಳಿಗೆ ತಿಳಿಯುತ್ತಿರಲಿಲ್ಲ. ಕ್ರಮೇಣ ಶ್ರೀವಿಷ್ಣು ಪೂರ್ಣ ರೂಪ ದಲ್ಲಿ ಪ್ರಕಟವಾದರು ಹಾಗೂ ಋಷಿಮುನಿಗಳ ಜೊತೆಗೆ ಅಲ್ಲಿ ಉಪಸ್ಥಿತರಿದ್ದ ಎಲ್ಲ ಭಕ್ತರಿಗೆ ವಿಷ್ಣುವಿನ ದರ್ಶನವಾಯಿತು. ಆ ದಿನ ಫಾಲ್ಗುಣ ಹುಣ್ಣಿಮೆ ಇತ್ತು. ಈ ರೀತಿ ತ್ರೇತಾಯುಗದ ಮೊದಲ ಯಜ್ಞದ ಸ್ಮರಣಾರ್ಥವೂ ಹೋಳಿಯನ್ನು ಆಚರಿಸಲಾಗುತ್ತದೆ.

ಶ್ರೀ. ರಮೇಶ ಶಿಂದೆ

೩. ಹೋಳಿಯಲ್ಲಿ ಉಪಯೋಗಿಸುವ ವಿಶಿಷ್ಟ ವೃಕ್ಷಗಳ ಕಟ್ಟಿಗೆಯ ಮಹತ್ವ

ಕೆಲವು ಕಡೆಗಳಲ್ಲಿ ಹೋಳಿಯ ಉತ್ಸವವನ್ನು ಆಚರಿಸುವ ಸಿದ್ಧತೆಯನ್ನು ಒಂದು ತಿಂಗಳ ಮೊದಲೆ ಆರಂಭಿಸಲಾಗುತ್ತದೆ. ಇದರಲ್ಲಿ ಮಕ್ಕಳು ಮನೆ ಮನೆಗೆ ಹೋಗಿ ಕಟ್ಟಿಗೆಗಳನ್ನು ಸಂಗ್ರಹಿಸು ತ್ತಾರೆ. ಹುಣ್ಣಿಮೆಯಂದು ಹೋಳಿಯ ಪೂಜೆಯ ಮೊದಲು ಆ ಕಟ್ಟಿಗೆಗಳನ್ನು ವಿಶಿಷ್ಟ ಪದ್ಧತಿಯಲ್ಲಿ ರಚಿಸಲಾಗುತ್ತದೆ. ಅನಂತರ ಅದರ ಪೂಜೆಯನ್ನು ಮಾಡಲಾಗುತ್ತದೆ. ಪೂಜೆ ಮಾಡಿದ ನಂತರ ಅದರಲ್ಲಿ ಅಗ್ನಿಯನ್ನು ಪ್ರಜ್ವಲಿಸಲಾಗುತ್ತದೆ. ಹೋಳಿಯಲ್ಲಿ  ಉದ್ದ ಕಬ್ಬನ್ನು ಇಡಲಾಗುತ್ತದೆ. ಅದು ತೇಜತತ್ತ್ವವನ್ನು ಪ್ರವಹಿಸಿ ವಾಯುಮಂಡಲವನ್ನು ಶುದ್ಧಗೊಳಿಸುತ್ತದೆ. ಇದರ ಹೊರತು ಔಡಲ ವೃಕ್ಷದ ಒಂದು ಕಟ್ಟಿಗೆ ಇರುತ್ತದೆ, ಅದರಿಂದ ಹೊರಡುವ ಹೊಗೆಯಿಂದ ಅನಿಷ್ಟ ಶಕ್ತಿಗಳ ಮೂಲಕ ವಾತಾವರಣದಲ್ಲಿ ಪ್ರಕ್ಷೇಪಣೆಯಾಗುವ ದುರ್ಗಂಧಯುಕ್ತ ವಾಯು ನಷ್ಟವಾಗುತ್ತದೆ. ಅಡಿಕೆ ಮರದ ಕಟ್ಟಿಗೆಯ ಸಹಾಯದಿಂದ ತೇಜತತ್ತ್ವದ ಕಾರ್ಯ ಮಾಡುವ ಕ್ಷಮತೆ ವೃದ್ಧಿಯಾಗುತ್ತದೆ. ಆದ್ದರಿಂದ ಈ ವೃಕ್ಷಗಳ ಕಟ್ಟಿಗೆಗಳನ್ನು ಸಂಗ್ರಹಿಸುತ್ತಾರೆ.

೪. ಹೋಳಿಯ ರಚನೆಯ ಮತ್ತು ವಿಧಿಯ ಯೋಗ್ಯ ಪದ್ಧತಿ

ಸಾಮಾನ್ಯವಾಗಿ ಗ್ರಾಮದೇವತೆಯ ದೇವಾಲಯದ ಮುಂದೆ ಹೋಳಿಯನ್ನು ಆಚರಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಬೇರೆ ಕಡೆಗೆ ಯೋಗ್ಯ ಸ್ಥಾನವನ್ನು ಹುಡುಕಬೇಕು, ಯಾವ ಸ್ಥಳದಲ್ಲಿ ಹೋಳಿಯನ್ನು ಸುಡುವುದಿದೆಯೋ ಆ ಸ್ಥಳವನ್ನು ಸೂರ್ಯಾಸ್ತಕ್ಕಿಂತ ಮೊದಲು ಗುಡಿಸಿ ಸ್ವಚ್ಛಗೊಳಿಸಬೇಕು. ನಂತರ ಅಲ್ಲಿ ಸೆಗಣಿಯ ನೀರನ್ನು ಸಿಂಪಡಿಸಬೇಕು. ಸಾಯಂಕಾಲ ಮತ್ತು ರಾತ್ರಿ ಹೋಳಿಯನ್ನು ಉರಿಸುವಾಗ ಶ್ರೀ ಹೋಲಿಕಾಪೂಜೆಯ ಸ್ಥಾನವನ್ನು ಸೆಗಣಿಯನ್ನು ಸಾರಿಸಿ ಅದರ ಮೇಲೆ ರಂಗೋಲಿ ಹಾಕಬೇಕು. ಆ ಸ್ಥಾನವನ್ನು ಸುಶೋಭಿತಗೊಳಿಸಬೇಕು. ಮಧ್ಯಭಾಗದಲ್ಲಿ ಔಡಲದ ಕಟ್ಟಿಗೆ ಅಥವಾ ಅಡಿಕೆಯ  ಮರದ ಕಟ್ಟಿಗೆಯನ್ನು ಅಥವಾ ಕಬ್ಬನ್ನು ನಿಲ್ಲಿಸಿ ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಇಡಬೇಕು. ಪೂಜೆ ಮಾಡುವವರು ಶುಚಿರ್ಭೂತರಾಗಿ ದೇಶಕಾಲದ ಸಂಕಲ್ಪ ಮಾಡಿ ಪೂಜೆಯನ್ನು ಮಾಡಬೇಕು. ನಂತರ ನೈವೇದ್ಯ ಅರ್ಪಣೆ ಮಾಡಬೇಕು. ಅನಂತರ ‘ಹೋಲಿಕಾಯೈ ನಮಃ |’, ಎಂದು ಹೇಳಿ ಹೋಳಿಯನ್ನು ಪ್ರಜ್ವಲಿಸಬೇಕು. ಹೋಳಿಯನ್ನು ಪ್ರಜ್ವಲಿಸಿದ ನಂತರ ಅದಕ್ಕೆ ಪ್ರದಕ್ಷಿಣೆಗಳನ್ನು ಹಾಕಬೇಕು ಮತ್ತು ಬಾಯಿಯ ಮೇಲೆ ಉಲ್ಟಾ ಕೈಯಿಟ್ಟು ಬೊಬ್ಬೆ ಹೊಡೆಯಬೇಕು. ಶ್ರೀ ಹೋಲಿಕಾದೇವಿಗೆ ಹೋಳಿಗೆಯ ನೈವೇದ್ಯ ಮತ್ತು ಶ್ರೀಫಲ ಅರ್ಪಿಸಬೇಕು. ಅಲ್ಲಿ ನೆರೆದಿರುವ ಜನರಿಗೆ ಅದರ ಪ್ರಸಾದ ಹಾಗೂ ಹಣ್ಣುಗಳನ್ನು ಹಂಚಬೇಕು. ಹೋಳಿ ಸಂಪೂರ್ಣ ಸುಟ್ಟುಹೋದ ನಂತರ ಅದರ ಮೇಲೆ ಹಾಲು ಮತ್ತು ತುಪ್ಪವನ್ನು ಸಿಂಪಡಿಸಿ ಅದನ್ನು ಶಾಂತಗೊಳಿಸಬೇಕು. ಇದು ಹೋಳಿಯ ವಿಧಿಯಾಗಿದೆ.

ಹೋಳಿಯಲ್ಲಿ ಹಸುವಿನ ಸೆಗಣಿಯಿಂದ ತಯಾರಿಸಿದ ಬೆರಣಿಗಳನ್ನು ಉಪಯೋಗಿಸಬೇಕು. ಹಸುವಿನಲ್ಲಿ ೩೩ ಕೋಟಿ ದೇವತೆಗಳ ವಾಸವಿರುತ್ತದೆ. ಬ್ರಹ್ಮಾಂಡದಲ್ಲಿರುವ ಎಲ್ಲ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಅತೀ ಹೆಚ್ಚು ಕ್ಷಮತೆ ಹಸುವಿನಲ್ಲಿದೆ. ಹಸುವಿನ ಸೆಗಣಿಯಿಂದ ತಯಾರಿಸಿದ ಬೆರಣಿಗಳಿಂದ ಶೇ. ೫ ರಷ್ಟು ಸಾತ್ತ್ವಿಕತೆ ಪ್ರಕ್ಷೇಪಿಸುತ್ತದೆ.

೫. ಹೋಳಿಯ ರಚನೆಯ ಆಕಾರ ಶಂಖದಂತೆ ಇರುವುದರ ಹಿಂದಿನ ಕಾರ್ಯಕಾರಣಭಾವ 

ಶಂಖದ ಆಕಾರದಲ್ಲಿ ಬರುವ ಅಗ್ನಿಯ ತೇಜತತ್ತ್ವವು ಭೂಮಂಡಲಕ್ಕೆ ಬರುತ್ತದೆ. ಅದರಿಂದ ಪಾತಾಳದಿಂದ ಭೂಗರ್ಭದ ದಿಕ್ಕಿಗೆ ಪ್ರಕ್ಷೇಪಣೆಯಾಗುವ ತೊಂದರೆದಾಯಕ ಸ್ಪಂದನಗಳಿಂದ ಭೂಮಿಯ ರಕ್ಷಣೆಯಾಗುತ್ತದೆ. ಈ ರಚನೆಯಿಂದ ಬಂದಿರುವ ತೇಜದಿಂದ ಅಲ್ಲಿನ ಸ್ಥಾನದೇವತೆ, ವಾಸ್ತುದೇವತೆ ಮತ್ತು ಗ್ರಾಮದೇವತೆ ಇಂತಹ ದೇವತೆಗಳ ತತ್ತ್ವ ಜಾಗೃತವಾಗುತ್ತವೆ. ಅದರಿಂದ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳ ಉಚ್ಚಾಟನೆ ಮಾಡಲು ಸಹಜವಾಗಿ ಸಾಧ್ಯವಾಗುತ್ತದೆ. ಈ ತೇಜದ ಸಂಪರ್ಕಕ್ಕೆ ಬರುವ ವ್ಯಕ್ತಿಯ ಮನಃಶಕ್ತಿ ಜಾಗೃತವಾಗಲು ಸಹಾಯವಾಗುತ್ತದೆ. ಅದರಿಂದ ಅವನ ಕನಿಷ್ಠ ಸ್ವರೂಪದ ಮನೋಕಾಮನೆಗಳು ಪೂರ್ಣವಾಗಿ ಅವನ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.