ಪ್ರಾಚೀನ ದೇವಾಲಯಗಳ ಸಂಶೋಧನೆ, ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ಒಡಿಶಾದ ಶ್ರೀ. ಅನಿಲ ಧೀರ್ ಅವರ ಅಪಾರ ಕೊಡುಗೆ !

ಭಗ್ನಾವಸ್ಥೆಯಲ್ಲಿರುವ ಮೂರ್ತಿ ಅಳತೆ ತೆಗೆಯುತ್ತಿರುವ ಶ್ರೀ. ಅನಿಲ ಧೀರ್ (ಎಡಕ್ಕೆ) ಮತ್ತು ಓರ್ವ ಸಹಾಯಕ

ಒಡಿಶಾದ ಶ್ರೀ. ಅನಿಲ ಧೀರ್ ಅವರು ಪ್ರಸಿದ್ಧ ಯಶಸ್ವೀ ಸಂಶೋಧಕರು ಮತ್ತು ಲೇಖಕರಾಗಿದ್ದು, ಐತಿಹಾಸಿಕ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಭಾರತದಲ್ಲಿ ಬಾಂಗ್ಲಾದೇಶದ ನುಸುಳುವಿಕೆಯ ವಿರುದ್ಧ ಜಾಗೃತಿ ಮೂಡಿಸುವ ‘ಭಾರತ್ ರಕ್ಷಾ ಮಂಚ್’ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಅವರು ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವ ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’  (ಇಂಟಾಕ್) ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್‌ನ ಪ್ರಮುಖ ಸದಸ್ಯರಾಗಿದ್ದಾರೆ. ಇದರ ಜೊತೆಗೆ, ಅವರು ಪ್ರಾಚೀನ ದೇವಾಲಯಗಳು, ಸಂಸ್ಕೃತಿ, ನಾಗರಿಕತೆ ಮತ್ತು ಪರಂಪರೆಗೆ ಸಂಬಂಧಿಸಿದ ಸಂಸ್ಥೆಗಳಿಗಾಗಿ ಕಾರ್ಯ ಮಾಡುತ್ತಾರೆ ಹಾಗೂ ಈ ಸಂದರ್ಭಗಳಲ್ಲಿ ಸಂಶೋಧನೆಯನ್ನೂ ಮಾಡುತ್ತಾರೆ.

ಶ್ರೀ. ಅನಿಲ ಧೀರ್

 ೧. ಪ್ರಾಚೀನ ದೇವಾಲಯಗಳು ಮತ್ತು ಪರಂಪರೆಯ ಸ್ಥಳಗಳ ರಕ್ಷಣೆ ಮತ್ತು ಸಂವರ್ಧನೆ

‘ಕಾರ್ಪೊರೇಟ್’ ಕ್ಷೇತ್ರದಲ್ಲಿ ಒಂದು ಉನ್ನತ ಹುದ್ದೆಯಲ್ಲಿದ್ದಾಗ ವರ್ಷ ೨೦೧೪ ರಲ್ಲಿ ಅವರು ತಮ್ಮನ್ನು ಪಾರಂಪರಿಕ ತಾಣಗಳ ಸಂರಕ್ಷಣೆಗಾಗಿ ಮುಡಿಪಾಗಿಡುವ ನಿರ್ಧಾರ ಕೈಗೊಂಡರು. ಅಂದಿನಿಂದ ಅವರು ಪ್ರಾಚೀನ ದೇವಾಲಯಗಳ ಸಂಶೋಧನೆ, ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ನೂರಾರು ಎಕರೆಗಳಲ್ಲಿ ನಿರ್ಮಿಸಲಾದ ಭವ್ಯ ದೇವಾಲಯಗಳಿಂದ ಹಿಡಿದು ಕಾಡಿನಲ್ಲಿರುವ ಬುಡಕಟ್ಟು ಜನರ ಸಣ್ಣ ದೇವಾಲಯಗಳೂ ಸೇರಿವೆ. ಅವರು ಕೋಲಕಾತಾದಿಂದ ಜಗನ್ನಾಥ ಪುರಿ ವರೆಗಿನ ಪ್ರಾಚೀನ ‘ಜಗನ್ನಾಥ ಸಡಕ್’ (ಹಿಂದೆ ಅನೇಕ ಸಾಧು-ಸಂತರು ಈ ಮಾರ್ಗದಲ್ಲಿ ಭಗವಾನ್ ಜಗನ್ನಾಥನ ತೀರ್ಥಯಾತ್ರೆ ಕೈಗೊಂಡಿದ್ದರು) ಅನ್ನು ಪತ್ತೆಹಚ್ಚಿದ್ದಾರೆ.

೧ ಅ. ‘ಇಂಟಾಕ್’ ಸಂಸ್ಥೆಯ ಮೂಲಕ ೬ ಸಾವಿರದ ೫೦೦ ದೇವಾಲಯಗಳ ಶೋಧ :  ಭಾರತೀಯ ಪಾರಂಪರಿಕ ತಾಣಗಳ ರಾಷ್ಟ್ರೀಯ ಮಟ್ಟದ ಸಂವರ್ಧನೆ ಮತ್ತು ಜೀರ್ಣೋದ್ಧಾರಕ್ಕಾಗಿ ವರ್ಷ ೧೯೮೪ ರಲ್ಲಿ ‘ಇಂಟಾಕ್’  ಸಂಸ್ಥೆಯ ಸ್ಥಾಪನೆ ಆಯಿತು. ಈ ಸಂಸ್ಥೆಯು ಪ್ರಾಚೀನ ದೇವಾಲಯಗಳು, ಅರಮನೆಗಳು ಮತ್ತು ಮಹಲುಗಳ ಸಂರಕ್ಷಣೆಯ ಕೆಲಸ ಮಾಡುತ್ತದೆ. ಈ ಸಂಸ್ಥೆಯ ಮೂಲಕ ಶ್ರೀ. ಧೀರ್ ಅವರು ಒಡಿಶಾದ ೧೭ ಜಿಲ್ಲೆಗಳಲ್ಲಿ ೩೦೦ ವರ್ಷಗಳ ಹಿಂದಿನ ೬ ಸಾವಿರದ ೫೦೦ ದೇವಾಲಯಗಳನ್ನು ಪತ್ತೆಹಚ್ಚಿದ್ದು ಇನ್ನೂ ಇತರ ಅನೇಕ ದೇವಸ್ಥಾನಗಳು ಬಾಕಿ ಇವೆ.

೧ ಆ. ಪ್ರಾಚೀನ ವಿಗ್ರಹಗಳ ನೋಂದಣಿ : ಇಂದು ಕಳ್ಳತನವಾಗಿ ಹೋಗಿರುವ ಅನೇಕ ಪ್ರಾಚೀನ ವಿಗ್ರಹಗಳು ಮರಳಿ ಸಿಕ್ಕಿವೆ; ಆದರೆ ಅವು ಎಲ್ಲಿಯವು, ಇದರ ದಾಖಲೆ ಇಲ್ಲದಿರುವುದರಿಂದ ಅವು ಆಡಳಿತದ ಬಳಿಯೇ ಬಿದ್ದಿವೆ. ಇದನ್ನು ಗಮನಿಸಿ, ಶ್ರೀ. ಧೀರ್ ಅವರು ಪ್ರತಿಯೊಂದು ದೇವಾಲಯದಲ್ಲಿನ ವಿಗ್ರಹದ ಪೂರ್ಣ ಮಾಹಿತಿಯನ್ನು ನೊಂದಾಯಿಸಿಡುವ ಕಾರ್ಯ ಪ್ರಾರಂಭಿಸಿದ್ದಾರೆ.

೧ ಇ. ೭೦೦ ವರ್ಷಗಳಷ್ಟು ಪ್ರಾಚೀನವಾದ ೬೩ ದೇವಾಲಯಗಳ ಶೋಧ : ಶ್ರೀ. ಧೀರ್ ಅವರು ಛತ್ತೀಸಗಢದಿಂದ ಒಡಿಶಾಕ್ಕೆ ಹರಿಯುವ ಮಹಾನದಿಯ ಎರಡೂ ದಡದಲ್ಲಿ ೪೦೦ ಕಿಲೋಮೀಟರ್ ಪ್ರದೇಶದಲ್ಲಿ ೭೦೦ ವರ್ಷಗಳಿಗಿಂತಲೂ ಹೆಚ್ಚು ಪುರಾತನವಾದ ೬೩ ದೇವಾಲಯಗಳನ್ನು ಪತ್ತೆಹಚ್ಚಿದ್ದಾರೆ.

೧ ಈ. ‘ಪ್ರಾಚಿ ಖಾರಿಯಾ’ದ ಪ್ರದೇಶದಲ್ಲಿನ ಪಾರಂಪರಿಕ ತಾಣಗಳ ನೋಂದಣಿ : ‘ಪ್ರಾಚಿ’ ನದಿಯು ಭುವನೇಶ್ವರದಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿ ಹುಟ್ಟುತ್ತದೆ. ಈ ನದಿಯ ದಡದಲ್ಲಿ ಅಭಿವೃದ್ಧಿ ಹೊಂದಿದ ಹರಪ್ಪಾ ಮತ್ತು ಮೊಹೆಂಜೊದಾರೋಗಳಿಗಿಂತಲೂ ಪುರಾತನವಾದ ಸಂಸ್ಕೃತಿಯು ಇತ್ತು ಎಂದು ತಿಳಿದು ಬಂದಿದೆ. ‘ಇಂಟಾಕ್’ ಸಂಸ್ಥೆಯು ಪ್ರಾಚಿ ಕಣಿವೆಯಲ್ಲಿನ ಸ್ಮಾರಕಗಳ ನೋಂದಣಿ ಮಾಡುವ ಯೋಜನೆ ಆರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಪ್ರಾಚಿ ನದಿಯ ೬೦ ಕಿ.ಮೀ. ಉದ್ದದ ಪ್ರದೇಶದಲ್ಲಿ ೭ ರಿಂದ ೧೫ ನೇ ಶತಮಾನಗಳ ನಡುವೆ ನಿರ್ಮಿಸಲಾದ ದೇವಾಲಯಗಳು, ಮಠಗಳು, ಘಾಟ್‌ಗಳು, ವಾಸ್ತುಶಿಲ್ಪಗಳು ಮತ್ತು ಸ್ಥಳಗಳು ಸೇರಿದಂತೆ ೩೫೦ ರಿಂದ ೪೦೦ ಪರಂಪರೆಯ ತಾಣಗಳನ್ನು ನೋಂದಾಯಿಸುವ ಕೆಲಸವನ್ನು ಶ್ರೀ. ಧೀರ್ ಮಾಡುತ್ತಿದ್ದಾರೆ.