15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ

ಮೊಹರಂ ಮೆರವಣಿಗೆಯಲ್ಲಿನ ಪ್ರಕರಣ

ಮುಂಬಯಿ – ಫಯ್ಯಾಜ್ ಹೆಸರಿನ 39 ವರ್ಷದ ವ್ಯಕ್ತಿಯೊಬ್ಬ ಮುಂಬಯಿನಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ ನೋವು ನಿವಾರಕ ಮಾತ್ರೆಗಳ ಹೆಸರಿನಲ್ಲಿ ‘ಜಿಂಕ್ ಫಾಸ್ಫೈಡ್’ (Zinc Phosphide) ತುಂಬಿದ ಕ್ಯಾಪ್ಸುಲ್‌ಗಳನ್ನು ಹಂಚಲು ಯೋಜಿಸಿದ್ದನು. ಮುಂಬಯಿ ಪೊಲೀಸರು ಜೂನ್ 27 ರಂದು ಆತನನ್ನು ಭಾಯಖಳಾದಲ್ಲಿ ಬಂಧಿಸಿದಾಗ, 15 ಸಾವಿರ ಜನರನ್ನು ಕೊಲ್ಲುವ ಸಂಚು ಇದಾಗಿತ್ತು ಎಂದು ಆತ ಒಪ್ಪಿಕೊಂಡಿದ್ದಾನೆ. ಫಯ್ಯಾಜ್‌ನಿಂದ 14 ಸಾವಿರದ 900 ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಜಿಂಕ್ ಫಾಸ್ಫೈಡ್’ ಅತ್ಯಂತ ವಿಷಕಾರಿ ರಾಸಾಯನಿಕವಾಗಿದೆ. ಇದರಿಂದಾಗಿ ವಿಷಪೂರಿತವಾಗುವುದು, ಅಂಗಾಂಗ ವೈಫಲ್ಯ ಮತ್ತು ಸಾವು ಕೂಡ ಸಂಭವಿಸಬಹುದು. ಇಲ್ಲಿನ ಮೆರವಣಿಗೆಯಲ್ಲಿ ಭದ್ರತೆಯಲ್ಲಿದ್ದ ಪೊಲೀಸರೊಬ್ಬರು ಆತ ಕ್ಯಾಪ್ಸುಲ್ ಹಂಚುತ್ತಿರುವುದನ್ನು ನೋಡಿ, ಸಂಶಯಗೊಂಡು ಆತನನ್ನು ವಶಕ್ಕೆ ಪಡೆದರು. ತದನಂತರ ಈ ವಿಷಯ ಬೆಳಕಿಗೆ ಬಂದಿದೆ. ಮೆರವಣಿಗೆಯಲ್ಲಿದ್ದ ಒಬ್ಬ ವ್ಯಕ್ತಿ ಈ ಕ್ಯಾಪ್ಸುಲ್ ಸೇವಿಸಿದ ನಂತರ ಆತನಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

ಫಯ್ಯಾಜ್ ಪುಣೆಯ ವಿಮಾನನಗರದಲ್ಲಿ ವಾಸಿಸುವವನಾಗಿದ್ದಾನೆ. ಈ ಪ್ರಕರಣದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ, ಇದರ ಹಿಂದಿನ ವ್ಯವಸ್ಥೆ, ಡಿಜಿಟಲ್ ನೆಟ್‌ವರ್ಕ್, ರಾಸಾಯನಿಕ ವಸ್ತುಗಳು ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.