ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಬಾಂಗ್ಲಾದೇಶದಿಂದ ಭಾರಿ ವಿರೋಧ

ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ, ಶಸ್ತ್ರಾಸ್ತ್ರ ಪ್ರದರ್ಶಿಸಿದ ಬಾಂಗ್ಲಾದೇಶಿ ನಾಗರಿಕರು

ಶ್ರೀಭೂಮಿ (ಆಸಾಮ) – ಇಲ್ಲಿನ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ಪುನಃ ಬಾಂಗ್ಲಾದೇಶಕ್ಕೆ ಕಳುಹಿಸುವಾಗ ಜೂನ್ 26 ರ ರಾತ್ರಿ ಭಾರಿ ಗದ್ದಲ ಉಂಟಾಗಿದೆ. ಈ ಸಮಯದಲ್ಲಿ ಭಾರತದ ಗಡಿ ಭದ್ರತಾ ಪಡೆ ಮತ್ತು ಬಾಂಗ್ಲಾದೇಶದ ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ (ಬಿಜಿಬಿ) ಮುಖಾಮುಖಿಯಾದವು. ಈ ವೇಳೆ ‘ಬಿಜಿಬಿ’ ಭಾರತದ ಕಡೆಗೆ ಬಂದೂಕುಗಳನ್ನು ಗುರಿ ಇಟ್ಟಿತಲ್ಲದೆ, ಅನೇಕ ಬಾಂಗ್ಲಾದೇಶಿ ನಾಗರಿಕರು ಕೈಯಲ್ಲಿ ಶಸ್ತ್ರಾಸ್ತ್ರ ಹಾಗೂ ಲಾಠಿ ಇತ್ಯಾದಿಗಳನ್ನು ಹಿಡಿದುಕೊಂಡು ಗಡಿಯಲ್ಲಿ ಜಮಾಯಿಸಿದರು. ಈ ಸಂದರ್ಭದಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಬೆದರಿಕೆಗಳನ್ನು ಹಾಕಲಾಯಿತು. ಈ ಸಂಪೂರ್ಣ ಘಟನೆಯು ಬಿಲಬಾರಿ ಗಡಿ ಪ್ರದೇಶದಲ್ಲಿ ನಡೆದಿದ್ದು, ಈ ಪ್ರದೇಶದಲ್ಲಿ ಈಗಲೂ ಉದ್ವಿಗ್ನತೆ ಮುಂದುವರಿದಿದೆ.

ಬಿಲಬಾರಿಯಲ್ಲಿ ಬಾಂಗ್ಲಾದೇಶಿ ನಾಗರಿಕರ ಒಂದು ಗುಂಪನ್ನು ಗಡಿಯ ಆಚೆಗಿನ ಬಾಂಗ್ಲಾದೇಶದ ಭಾಗವಾದ ನ್ಯೂ ಪಲ್ಲಾಥಲನ ಕಡೆಗೆ ಕಳುಹಿಸುತ್ತಿರುವಾಗ ಈ ವಿವಾದ ಉಂಟಾಯಿತು. ‘ಬಿಜಿಬಿ’ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಈ ಗುಂಪನ್ನು ಬಾಂಗ್ಲಾದೇಶದ ಗಡಿಯೊಳಗೆ ಸೇರಿಸಿಕೊಳ್ಳಲು ನಿರಾಕರಿಸಿತು. ಅಲ್ಲದೆ, ಗಡಿ ಗ್ರಾಮಗಳ ಬಾಂಗ್ಲಾದೇಶಿ ನಾಗರಿಕರು ಚಾಕು, ಲಾಠಿ ಮತ್ತು ದಂಡುಗಳನ್ನು ಹಿಡಿದುಕೊಂಡು ‘ಬಿಜಿಬಿ’ ಪರವಾಗಿ ಜಮಾಯಿಸಿದರು. ಅವರು ಭಾರತೀಯ ಗಡಿಯ ಕಡೆಗೆ ಶಸ್ತ್ರಾಸ್ತ್ರಗಳನ್ನೂ ಪ್ರದರ್ಶಿಸಿದರು. ‘ಬಿಜಿಬಿ’ ಸೈನಿಕರು ಧ್ವನಿವರ್ಧಕಗಳ  ಮೂಲಕ ಗಡಿ ಭದ್ರತಾ ಪಡೆಗೆ ಪದೇ ಪದೇ ಹಿಂದೆ ಸರಿಯುವಂತೆ ಸೂಚಿಸಿದರು. ‘ಪರಿಸ್ಥಿತಿ ಹದಗೆಟ್ಟರೆ ಗುಂಡಿನ ದಾಳಿ ನಡೆಸಬೇಕಾದೀತು’, ಎಂಬ ಬೆದರಿಕೆಯನ್ನೂ ಹಾಕಿದರು. ಕೆಲವು ಗಂಟೆಗಳ ಕಾಲ ನಡೆದ ಈ ವಿವಾದದ ನಂತರ ಎರಡೂ ಕಡೆಯ ಸೈನಿಕರು ನಿಯೋಜನೆಗೊಂಡಿದ್ದರು; ಆದರೆ ಯಾವುದೇ ಪ್ರಾಣಹಾನಿ ಅಥವಾ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಗಡಿ ಭದ್ರತಾ ಪಡೆಯ ಸೈನಿಕರು ಈ ಸಮಯದಲ್ಲಿ ಸಂಯಮ ಕಾಯ್ದುಕೊಂಡು ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟರು.

ಇದರ ಬೆನ್ನಲ್ಲೇ ಎರಡೂ ಕಡೆಯಿಂದ ಹೆಚ್ಚುವರಿ ಸೈನ್ಯವನ್ನು ಕಳುಹಿಸಲಾಗಿದ್ದು, ಆಸಾಮ ಪೊಲೀಸ್ ಮತ್ತು ಸ್ಥಳೀಯ ಆಡಳಿತವನ್ನು ಹೈ ಅಲರ್ಟ್‌ನಲ್ಲಿ ಇಡಲಾಗಿದೆ. ಈ ಘಟನೆಯ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.

ಸಂಪಾದಕೀಯ ನಿಲುವು

ಬಾಂಗ್ಲಾದೇಶಿ ನುಸುಳುಕೋರರನ್ನು ಪುನಃ ಅವರ ದೇಶಕ್ಕೆ ಕಳುಹಿಸಲು ಸತತವಾಗಿ ವ್ಯಕ್ತವಾಗುತ್ತಿರುವ ವಿರೋಧವನ್ನು ನೋಡಿ ಭಾರತವು ಈಗ ಕಠೋರ ನಿಲುವನ್ನು ತಳೆಯುವುದು ಅತ್ಯಗತ್ಯವಾಗಿದೆ !