ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!

ಚೆನ್ನೈ (ತಮಿಳುನಾಡು) – ಕೇವಲ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಕಾರಣಕ್ಕೆ ಯಾವುದೇ ವ್ಯಕ್ತಿ ತಾನು ‘ಹಿಂದುಳಿದ ವರ್ಗದ ಮುಸ್ಲಿಂ’ ಎಂಬ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ. ಮತಾಂತರದ ಮೂಲಕ ಒಬ್ಬ ವ್ಯಕ್ತಿ ಮುಸ್ಲಿಂ ಆಗಬಹುದಾದರೂ, ಕೇವಲ ಮೀಸಲಾತಿಯ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ನಿರ್ದಿಷ್ಟ ಮುಸ್ಲಿಂ ಸಮುದಾಯದ ಸದಸ್ಯತ್ವವನ್ನು ಹೊಂದಿರುವುದಾಗಿ ವಾದಿಸುವುದು ಕಾನೂನುಬದ್ಧವಾಗಿ ಮಾನ್ಯವಲ್ಲ ಎಂದು ಮದ್ರಾಸ್ ಹೈಕೋರ್ಟ್ ಒಂದು ಪ್ರಕರಣದಲ್ಲಿ ಮಹತ್ವದ ಅವಲೋಕನ ಮಾಡಿದೆ.

ತಮಿಳುನಾಡು ಸರಕಾರದ ಆದೇಶ ಅಸಂವಿಧಾನಿಕ!

ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ಪಿ.ಬಿ. ಬಾಲಾಜಿ ಅವರನ್ನೊಳಗೊಂಡ ಪೀಠವು, ತಮಿಳುನಾಡು ಸರಕಾರವು ಮಾರ್ಚ್ 9, 2024 ರಂದು ಹೊರಡಿಸಿದ್ದ ಸರಕಾರಿ ಆದೇಶವನ್ನು ಅಸಂವಿಧಾನಿಕ ಎಂದು ಘೋಷಿಸಿದೆ. ಆ ಆದೇಶದಲ್ಲಿ, ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ವರ್ಗ, ವಿಮುಕ್ತ ಜನಾಂಗ ಅಥವಾ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಯಾವುದೇ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಅವರನ್ನು ‘ಹಿಂದುಳಿದ ವರ್ಗದ ಮುಸ್ಲಿಂ’ ಪ್ರವರ್ಗದಲ್ಲಿ ವರ್ಗೀಕರಿಸಬಹುದೆಂಬ ಪ್ರಾವಿಧಾನವಿತ್ತು. ಸಮೀರ್ ಅಹಮದ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಕೋರ್ಟ್ ಈ ತೀರ್ಪು ನೀಡಿದೆ.

ಏನಿದು ಪ್ರಕರಣ?

1. ತೂತುಕುಡಿ (ತುಟಿಕೋರಿನ್) ಜಿಲ್ಲೆಯ ನಿವಾಸಿಯಾದ ಸಮೀರ್ ಅಹಮದ್ ಜನ್ಮತಃ ಹಿಂದೂ ಆಗಿದ್ದು, 2015 ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ನಂತರ ಅವರು ತಮಗೆ ‘ಮುಸ್ಲಿಂ ಲೆಬ್ಬೈ’ ಸಮುದಾಯದ ಸದಸ್ಯತ್ವದ ಪ್ರಮಾಣಪತ್ರವನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

2. ರಾಜ್ಯದಲ್ಲಿ ‘ಲೆಬ್ಬೈ’ ಸಮುದಾಯವನ್ನು ಹಿಂದುಳಿದ ವರ್ಗದ ಮುಸ್ಲಿಂ ಶ್ರೇಣಿಯಲ್ಲಿ ಸೇರಿಸಲಾಗಿದೆ.

3. ಆದರೆ ಸ್ಥಳೀಯ ತಹಶೀಲ್ದಾರರು ಸಮೀರ್ ಅಹಮದ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದರು. ಹಾಗಾಗಿ ಅಹಮದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

4. ಅಹಮದ್ ಅವರ ವಾದ: 2024 ರ ಸರಕಾರಿ ಆದೇಶವನ್ನು ಉಲ್ಲೇಖಿಸಿದ ಅರ್ಜಿದಾರರು, ಮೀಸಲಾತಿ ವರ್ಗಕ್ಕೆ ಸೇರಿದ ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದಾಗ, ಅವರು ಹಿಂದುಳಿದ ವರ್ಗದ ಮುಸ್ಲಿಂ ಸಮುದಾಯದ ಸದಸ್ಯತ್ವ ಪ್ರಮಾಣಪತ್ರವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ವಾದಿಸಿದ್ದರು.

5. ತಮಿಳುನಾಡು ಸರಕಾರದ ವಾದ: ಈ ಆದೇಶವು ತಮಿಳುನಾಡು ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಹೊರಡಿಸಲಾಗಿದೆ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಮತಾಂತರದ ಮುಂಚೆ ಯಾವ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯಗಳು ಸಿಗುತ್ತಿದ್ದವೋ, ಅವರಿಗೆ ಇಸ್ಲಾಂ ಸ್ವೀಕರಿಸಿದ ನಂತರವೂ ಆ ಸೌಲಭ್ಯಗಳು ಮುಂದುವರೆಯಬೇಕೆಂಬುದು ಇದರ ಹಿಂದಿನ ಉದ್ದೇಶವಾಗಿತ್ತು.

ಹೈಕೋರ್ಟ್ ನಿರೀಕ್ಷಣೆಯ ಪ್ರಮುಖ ಅಂಶಗಳು!

1. ರಾಜ್ಯ ಸರಕಾರದ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಸರಕಾರಿ ಆದೇಶವು ಈ ಹಿಂದಿನ ನ್ಯಾಯಾಲಯದ ತೀರ್ಪುಗಳಿಗಿಂತ ಮಿಗಿಲಾಗಿರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. 1951 ರ ‘ಜಿ. ಮೈಕಲ್ ವಿರುದ್ಧ ಎಸ್. ವೆಂಕಟೇಶ್ವರನ್’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯ, ಇಸ್ಲಾಂ ಸ್ವೀಕರಿಸಿದ ನಂತರ ವ್ಯಕ್ತಿಯ ಗುರುತು ಕೇವಲ ‘ಮುಸ್ಲಿಂ’ ಎಂದಷ್ಟೇ ಇರುತ್ತದೆ; ಮುಸ್ಲಿಂ ಸಮಾಜದಲ್ಲಿ ಅವರ ಸ್ಥಾನಮಾನವನ್ನು ಅವರು ಯಾವ (ಹಿಂದೂ) ಜಾತಿ ಅಥವಾ ಸಮುದಾಯದಲ್ಲಿ ಜನಿಸಿದರೋ ಅದರ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

2. ಮುಸ್ಲಿಂ ಸಮುದಾಯದಲ್ಲಿ ‘ರೌಥರ್’, ‘ಮರಕ್ಕಾಯರ್’, ‘ಲೆಬ್ಬೈ’, ‘ದಖ್ಖನಿ’ ಯಂತಹ ವಿವಿಧ ಸಮುದಾಯಗಳಿದ್ದರೂ, ಈ ಸಮುದಾಯಗಳ ಸದಸ್ಯತ್ವವು ಜನ್ಮದಿಂದ ಬರುವುದೇ ಹೊರತು ಮತಾಂತರದಿಂದಲ್ಲ. ಪರಿಣಾಮವಾಗಿ, ಕೇವಲ ಮೀಸಲಾತಿಯ ಲಾಭ ಪಡೆಯಲು ಯಾವುದೇ ವ್ಯಕ್ತಿ ತಾನು ನಿರ್ದಿಷ್ಟ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ.

3. ವಿವಿಧ ಹಿನ್ನೆಲೆಯುಳ್ಳ ಮತಾಂತರಿತರನ್ನು ಒಟ್ಟುಗೂಡಿಸಿ ಅವರನ್ನು ‘ಹಿಂದುಳಿದ ವರ್ಗದ ಮುಸ್ಲಿಂ’ ಶ್ರೇಣಿಗೆ ಸೇರಿಸುವುದು ಕೇವಲ ಅನಿಸಿಕೆಯಾಗಿದೆ (ಮನಬಂದಂತೆ ಮಾಡಿದ್ದಾಗಿದೆ). ಇದಕ್ಕೆ ಯಾವುದೇ ಸಾಂವಿಧಾನಿಕ ಅಥವಾ ಕಾನೂನುಬದ್ಧ ಆಧಾರವಿಲ್ಲ. ಇಂತಹ ವರ್ಗೀಕರಣದಿಂದ ಕಾನೂನಿನ ಆಡಳಿತ ಮತ್ತು ನ್ಯಾಯಾಂಗದ ಅಧಿಕಾರಗಳು ದುರ್ಬಲಗೊಳ್ಳುತ್ತವೆ.

4. ಸಾಮಾಜಿಕ ಸಮಾನತೆ ಸ್ಥಾಪಿಸುವುದೇ ಇಸ್ಲಾಂ ಧರ್ಮದ ಮೂಲ ತತ್ವವಾಗಿದೆ. ಇಸ್ಲಾಂ ಜನ್ಮ ಆಧಾರಿತ ತಾರತಮ್ಯ ಅಥವಾ ಸಾಮಾಜಿಕ ಶ್ರೇಣೀಕರಣವನ್ನು ಬೆಂಬಲಿಸುವುದಿಲ್ಲ. ಆದ್ದರಿಂದ, ಈ ಸರಕಾರಿ ಆದೇಶವು ಕೇವಲ ಅಸಂವಿಧಾನಿಕ ಮಾತ್ರವಲ್ಲದೆ, ಇಸ್ಲಾಂನ ಮೂಲ ತತ್ವಗಳಿಗೂ ವಿರುದ್ಧವಾಗಿದೆ.
5.ತಹಶೀಲ್ದಾರರ ನಿರ್ಧಾರವನ್ನು ಎತ್ತಿಹಿಡಿದ ನ್ಯಾಯಾಲಯ, ಅರ್ಜಿದಾರರ ‘ಮುಸ್ಲಿಂ ಲೆಬ್ಬೈ’ ಸಮುದಾಯದ ಪ್ರಮಾಣಪತ್ರದ ಅರ್ಜಿಯನ್ನು ವಜಾಗೊಳಿಸಿತು.

ಸಂಪಾದಕೀಯ ನಿಲುವು

ಜನ್ಮತಃ ಹಿಂದುಳಿದ ವರ್ಗದ ಹಿಂದೂ ಕುಟುಂಬಕ್ಕೆ ಸೇರಿದ ವ್ಯಕ್ತಿ ಮತಾಂತರವಾದ ನಂತರ ಹಿಂದುಳಿದ ವರ್ಗದ ಮುಸ್ಲಿಂ ಆಗಿ ಮೀಸಲಾತಿ ಸೌಲಭ್ಯಗಳನ್ನು ಪಡೆಯುವ ಹಕ್ಕಿಲ್ಲ!