ಮೂಲತಃ ಸಾತ್ತ್ವಿಕವಾಗಿದ್ದು ಆತ್ಮರಂಜನೆಯಿಂದ ವಿಕೃತಿಯತ್ತ ಸಾಗುತ್ತಿರುವ ಭಾರತೀಯ ಕಲೆಗಳು !

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

‘ಇಂದಿನ ಯುಗವು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಯುಗವಾಗಿದೆ. ಇಂದು ಡಿಜಿಟಲ್ ಕ್ರಾಂತಿಯಿಂದಾಗಿ ಮನೋರಂಜನೆಯ ಸಾಧನಗಳು ಮನೆಮನೆಗಳಿಗೆ ತಲುಪಿವೆ. ಜನರ ಬದಲಾದ ಮಾನಸಿಕತೆಯಿಂದಾಗಿ ಕಲೆಗಳ ಪ್ರಸ್ತುತಿಯು ಮೂಲ ಶುದ್ಧ ಪದ್ಧತಿಯಲ್ಲಿ ನಡೆಯದೆ ‘ರಜ-ತಮ’ಯುಕ್ತವಾಗುತ್ತಿದೆ. ಇಂದು ಸೋಶಿಯಲ್ ಮೀಡಿಯಾ (ಸಾಮಾಜಿಕ ಜಾಲತಾಣ), ಹಾಗೆಯೇ ‘ಟ್ಯಾಲೆಂಟ್ ಶೋ’ ಮತ್ತು ‘ರಿಯಾಲಿಟಿ ಶೋ’ಗಳಿಂದಾಗಿ ಕಲೆಯ ಪ್ರದರ್ಶನವು ಕಲಾವಿದರು ಮತ್ತು ಪ್ರೇಕ್ಷಕರನ್ನು ಅಂತರ್ಮುಖತೆಯ ಬದಲು ತೀವ್ರ ಬಹಿರ್ಮುಖ ಸ್ಥಿತಿಯತ್ತ ಕೊಂಡೊಯ್ಯುತ್ತಿದೆ.

ಹಿಂದಿನ ಲೇಖನದಲ್ಲಿ ನಾವು ‘ಮೂಲ ದೈವೀ ಪರಂಪರೆಯಾಗಿರುವ ಭಾರತೀಯ ಕಲೆಗಳ ಲೋಕಾಭಿಮುಖ ಪ್ರವಾಸ, ಹಾಗೆಯೇ ಈ ಸ್ಥಿತಿಗೆ ಕಾರಣವಾದ ವಿವಿಧ ಘಟಕಗಳ’ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಲೇಖನದಲ್ಲಿ ನಾವು ‘ಕಲೆಯು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿ ಉಳಿಯದೆ ಅದರ ಪ್ರಯಾಣವು ವಿಕೃತಿಯ ಕಡೆಗೆ ಹೇಗೆ ಸಾಗುತ್ತಿದೆ ?’, ಎಂಬುದನ್ನು ತಿಳಿದುಕೊಳ್ಳಲಿದ್ದೇವೆ. (ಭಾಗ ೨)

ಈ ಹಿಂದಿನ ಲೇಖನ ಸಂಖ್ಯೆ ೧೪ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/177269.html

ಲೇಖನದಲ್ಲಿನ ಕೆಲವು ಶಬ್ದಗಳ ಅರ್ಥ

೧. ಟ್ಯಾಲೆಂಟ್ ಶೋ : ಕಲೆಯ ಗುಣ / ಕೌಶಲ್ಯ ಪ್ರದರ್ಶನದ ಕಾರ್ಯಕ್ರಮ.

೨. ರಿಯಾಲಿಟಿ ಶೋ : ವಾಸ್ತವಿಕ ಅಥವಾ ಸತ್ಯ ಘಟನೆಗಳ ಮೇಲೆ ಆಧಾರಿತ ಕಾರ್ಯಕ್ರಮ.

೩. ಟಿಆರ್‌ಪಿ – (ಟೆಲಿವಿಜನ ರೇಟಿಂಗ್ ಪಾಯಿಂಟ್)  : ಇದು ಒಂದು ನಿರ್ದಿಷ್ಟ ಟಿವಿ ಚಾನೆಲ್ ಅಥವಾ ಕಾರ್ಯಕ್ರಮವನ್ನು ಎಷ್ಟು ಜನ, ಯಾವಾಗ ಮತ್ತು ಎಷ್ಟು ಸಮಯ ನೋಡುತ್ತಾರೆ ಎಂಬುದನ್ನು ಅಳೆಯುವ ಸಾಧನವಾಗಿದೆ.

೪. ಟ್ರೋಲ್ ಮಾಡುವುದು : ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್‌ನಲ್ಲಿ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಡುವುದು ಅಥವಾ ಅಣಕಿಸುವುದು.

೫. ಓಟಿಟಿ (ಓವರ್-ದ-ಟಾಪ) ಪ್ಲಾಟ್‌ಫಾರ್ಮ್ : ಗ್ರಾಹಕರ ವಿನಂತಿಗನುಸಾರ ಮತ್ತು ವೈಯಕ್ತಿಕ ಅವಶ್ಯಕತೆಗನುಸಾರ ಜಾಲತಾಣಗಳ ಮೂಲಕ ಚಲನಚಿತ್ರ ಮತ್ತು ಸರಣಿಗಳನ್ನು ಒದಗಿಸುವ ಒಂದು ಸಾಧನ.

೬. ಸೆನ್ಸಾರ್ ಬೋರ್ಡ್ : ಕೇಂದ್ರದ ಚಲನಚಿತ್ರ ಪ್ರಮಾಣೀಕರಣ ಮಂಡಳ

೭. ಫ್ಯೂಜನ್ : ಭಾರತೀಯ ಮತ್ತು ಪಾಶ್ಚಿಮಾತ್ಯ ಕಲೆಗಳನ್ನು ಬೆರೆಸಿ ಹೊಸ ಶೈಲಿ ಸೃಷ್ಟಿಸುವ ಪ್ರಕ್ರಿಯೆ.

೧. ದೂರದರ್ಶನ ವಾಹಿನಿಗಳಲ್ಲಿನ ‘ಟ್ಯಾಲೆಂಟ್ ಶೋ’ ಮತ್ತು ‘ರಿಯಾಲಿಟಿ ಶೋ’ಗಳಿಂದ ಉಂಟಾಗುತ್ತಿರುವ ವಿಕೃತ ಪರಿಣಾಮಗಳು !

ಸೌ. ರೇಣುಕಾ ಕ್ರಾಕ್

ಪ್ರಸ್ತುತ ಯುಗದಲ್ಲಿ ‘ಕಲಾ ಪ್ರದರ್ಶನ ಎಂದರೆ ರಿಯಾಲಿಟಿ ಶೋಗಳು, ಟ್ಯಾಲೆಂಟ್ ಶೋಗಳು’ ಎಂಬಂತಾಗಿದೆ. ಇಂತಹ ಕಾರ್ಯಕ್ರಮಗಳನ್ನು ದೂರದರ್ಶನ ವಾಹಿನಿಗಳು ಆಯೋಜಿಸುತ್ತವೆ. ಅದರಲ್ಲಿ ಅನೇಕ ಯುವಕ-ಯುವತಿಯರು ಭಾಗವಹಿಸುತ್ತಾರೆ. ಅವರು ತಮ್ಮ ಕಲೆ, ಅಂದರೆ ಗಾಯನ, ವಾದನ, ನೃತ್ಯ, ನಾಟಕ ಇತ್ಯಾದಿಗಳನ್ನು ಪ್ರಸ್ತುತ ಪಡಿಸುತ್ತಾರೆ. ಈ ಕಾರ್ಯಕ್ರಮಗಳ ತೀರ್ಪುಗಾರರು ಸ್ಪರ್ಧೆಯ ಫಲಿತಾಂಶವನ್ನು ನೀಡುತ್ತಾರೆ.

೧ ಅ. ಉದಯೋನ್ಮುಖ ಬಾಲ ಕಲಾವಿದರ ಅಹಂಕಾರವನ್ನು ಹೆಚ್ಚಿಸುವ ‘ರಿಯಾಲಿಟಿ ಶೋಗಳು’ ! : ಈ ಕಾರ್ಯಕ್ರಮಗಳಲ್ಲಿ ಯುವ ಗುಂಪಿನ ಕಲಾವಿದರ ಜೊತೆಗೆ ೩-೪ ವರ್ಷದ ಬಾಲ ಕಲಾವಿದರು ಕೂಡ ಭಾಗವಹಿಸುತ್ತಾರೆ. ಈ ಬಾಲ ಕಲಾವಿದರ ಕಲೆಯು ಇನ್ನೂ ಪರಿಪಕ್ವವಾಗಿರುವುದಿಲ್ಲ. ಆದರೂ ಇಂತಹ ಕಾರ್ಯಕ್ರಮಗಳಲ್ಲಿ ಕಲೆಯನ್ನು ಪ್ರದರ್ಶಿಸಿದಾಗ ಸಿಗುವ ಅತಿಯಾದ ಹೊಗಳಿಕೆಯಿಂದ ಈ ಬಾಲ ಕಲಾವಿದರ ಅಹಂಕಾರ ಹೆಚ್ಚಾಗಬಹುದು. ಈ ಕಲೆಗಳನ್ನು ಪ್ರಸ್ತುತಪಡಿಸುವಾಗ ಬಾಲ ಕಲಾವಿದರು ತಮ್ಮ ವಯಸ್ಸಿಗೆ ಶೋಭಿಸದಂತಹ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮಕ್ಕಳು ಕ್ಯಾಬರೆ, ಲಾವಣಿ, ದ್ವಂದ್ವಾರ್ಥದ ಹಾಡುಗಳನ್ನು ಹಾಡುತ್ತಾರೆ ಅಥವಾ ಅಂತಹ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಈ ಹಾಡುಗಳನ್ನು ಪ್ರಸ್ತುತಪಡಿಸುವಾಗ ಅದಕ್ಕೆ ಪೂರಕವಾಗಿ ಅಸಭ್ಯ ಉಡುಪು ಧರಿಸುವುದು, ಚಿತ್ರ-ವಿಚಿತ್ರ ಹಾವಭಾವಗಳನ್ನು ಮಾಡುವುದು’ ಈ ಬಾಲ ಕಲಾವಿದರನ್ನು ವಿಕೃತಿಯತ್ತ ಕೊಂಡೊಯ್ಯುತ್ತದೆ. ಯಾರಾದರೊಬ್ಬ ಸ್ಪರ್ಧಿಯು ಸಾತ್ತ್ವಿಕ ಉಡುಪನ್ನು ಧರಿಸಿ ಬಂದಿದ್ದರೆ, ಕೆಲವು ಬಾರಿ ತೀರ್ಪುಗಾರರು ಅವರಿಗೆ ಪಾಶ್ಚಾತ್ಯ ಉಡುಪುಗಳನ್ನು ಧರಿಸಲು ಪ್ರೋತ್ಸಾಹಿಸುತ್ತಾರೆ. ಇದರಿಂದಾಗಿ ಆ ಎಳೆ ಮನಸ್ಸಿನ ಮೇಲೆ ವಿಕೃತ ಸಂಸ್ಕಾರಗಳು ಉಂಟಾಗತೊಡಗುತ್ತವೆ.

ಈ ಕಾರ್ಯಕ್ರಮಗಳ ‘ಟಿಆರ್‌ಪಿ’ಗಾಗಿ ಸ್ಪರ್ಧಿಗಳ ತಂದೆ-ತಾಯಂದಿರು ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಸ್ಪರ್ಧಿಯು ಮುಂದಿನ ಹಂತಕ್ಕೆ ಆಯ್ಕೆಯಾಗದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ‘ಟ್ರೋಲ್’ (ಪರಿಹಾಸ್ಯ) ಮಾಡಲಾಗುತ್ತದೆ. ಇದರಿಂದಾಗಿ ಸ್ಪರ್ಧಿಗಳು ಸಮಾಜದ ಟೀಕೆ ಮತ್ತು ಮಾನಸಿಕ ಸಂಘರ್ಷಕ್ಕೆ ಒಳಗಾಗಿ ನಿರಾಶಗೊಳ್ಳುತ್ತಾರೆ.

೧ ಆ. ‘ರಿಯಾಲಿಟಿ ಶೋ’ಗಳ ತೀರ್ಪುಗಾರರ ವಿಕೃತ ಮಾನಸಿಕತೆ ! : ಈ ರೀತಿಯ ಕಾರ್ಯಕ್ರಮಗಳಲ್ಲಿ  ಸ್ಪರ್ಧಕರ ಕಲೆಗಿಂತಲೂ, ‘ಸ್ಪರ್ಧೆ ಗೆಲ್ಲಲು ಆ ಕಲಾವಿದ ಎಷ್ಟು ಹಣ ನೀಡಬಲ್ಲ ?’ ಎನ್ನುವುದರ ಮೇಲೆ ತೀರ್ಪುಗಾರರ ತೀರ್ಪು ಅವಲಂಬಿತವಾಗಿರುತ್ತದೆ ಎಂಬುದನ್ನು ನಾನು ಕೇಳಿದ್ದೇನೆ. ಈ ಕಾರ್ಯಕ್ರಮಗಳ ತೀರ್ಪುಗಾರರು ಯಾವಾಗಲೂ ಕಲಾ ಕ್ಷೇತ್ರದ ದಿಗ್ಗಜರಾಗಿರುತ್ತಾರೆ ಎಂದೇನಿಲ್ಲ. ಅನೇಕ ತೀರ್ಪುಗಾರರು ಪರಸ್ಪರ ಕಾಲೆಳೆಯುವುದು, ಅಶ್ಲೀಲ ಚುಚ್ಚುಮಾತುಗಳನ್ನು ಆಡುವುದು, ಪ್ರದರ್ಶನ ಇಷ್ಟವಾದರೆ ಜೋರಾಗಿ ಕಿರುಚುವುದು ಮತ್ತು ಅಪಶಬ್ದಗಳನ್ನು ಬಳಸುವಂತಹ ಅಯೋಗ್ಯ ವರ್ತನೆಗಳನ್ನು ಮಾಡುತ್ತಾರೆ. ಮಾರ್ಗದರ್ಶನ ನೀಡಬೇಕಾದ ತೀರ್ಪುಗಾರರ ನಡತೆಯೇ ಹೀಗಿದ್ದರೆ, ಅದು ಸ್ಪರ್ಧಾಳುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ‘ರಿಯಾಲಿಟಿ ಶೋ’ಗಳ ಮೂಲಕ ಕಲೆ ಕಲಿಯುವ ಉತ್ಸಾಹ ಮತ್ತು ಸರಿಯಾದ ಮಾರ್ಗದರ್ಶನ ಸಿಗದ ಕಾರಣ, ಇಂದಿನ ಪೀಳಿಗೆಯು ಕಲಾ ಪ್ರದರ್ಶನ ತಪ್ಪು ದಿಕ್ಕಿನಲ್ಲಿ ಸಾಗತೊಡಗಿದೆ.

೨. ಬಾಲಿವುಡ್‌ನ ಅಶ್ಲೀಲ ಮತ್ತು ಅತಿರಂಜಿತ ಚಲನಚಿತ್ರಗಳಿಂದ ಯುವ ಪೀಳಿಗೆ ದಾರಿ ತಪ್ಪುತ್ತಿರುವುದು

ಕಲೆಯು ಸಮಾಜವನ್ನು ರೂಪಿಸುತ್ತದೆ ಮತ್ತು ಸರಿಯಾದ ದಿಕ್ಕನ್ನು ತೋರಿಸುತ್ತದೆ. ಕಲೆಗಾಗಿ ವರ್ತಮಾನಕಾಲದಲ್ಲಿನ ಚಲನಚಿತ್ರ ಮತ್ತು ನಾಟಕಗಳು ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿವೆ; ಆದರೆ ಇಂದಿನ ಬಹುತೇಕ ಚಲನಚಿತ್ರಗಳನ್ನು ಕುಟುಂಬದವರೆಲ್ಲರೂ ಒಟ್ಟಾಗಿ ಕುಳಿತು ನೋಡುವಂತಿಲ್ಲ. ಬಾಲಿವುಡ್ ಚಲನಚಿತ್ರಗಳಲ್ಲಿಯೂ ಅಶ್ಲೀಲತೆ, ಅನೈತಿಕ ಸಂಬಂಧಗಳು, ಆಕ್ರಮಣಕಾರಿ ಪ್ರವೃತ್ತಿ, ಅತಿಯಾದ ನಾಟಕೀಯತೆ, ಅಮಲು ಪದಾರ್ಥಗಳ ಸೇವನೆಗೆ ಪ್ರೇರೇಪಿಸುವುದು ಮತ್ತು ವಿಕೃತ ಮನೋಸ್ಥಿತಿಯನ್ನು ವೈಭವೀಕರಿಸುವುದು ಹೆಚ್ಚಾಗುತ್ತಿದೆ. ಇದರಿಂದ ಸಮಾಜದಲ್ಲಿ ವಿಕೃತಿಗಳು ಹೆಚ್ಚಾಗುತ್ತಿವೆ ಮತ್ತು ಮುಂದಿನ ಪೀಳಿಗೆಯು ದಾರಿ ತಪ್ಪುತ್ತಿದೆ. ಕಲೆಯ ಹೆಸರಿನಲ್ಲಿ ಏನೋ ಹೊಸತು ಮಾಡಲು ಹೋಗಿ ಸಮಾಜವು ಅಧಃಪತನದತ್ತ ಸಾಗುತ್ತಿದೆ.

೨ ಅ. ಭಯಾನಕ ಚಲನಚಿತ್ರಗಳಿಂದ ( (Horror Films ನಿಂದ) ಕಲೆಯ ಅವನತಿಯಾಗುವುದು : ಅನೇಕ ಜನರಿಗೆ ಭಯಾನಕ ಚಲನಚಿತ್ರಗಳನ್ನು ನೋಡುವುದು ಇಷ್ಟವಾಗುತ್ತದೆ. ಆದರೆ ಇವುಗಳಿಂದ ಮನಸ್ಸಿನಲ್ಲಿ ‘ಭಯ’ ಎಂಬ ದೋಷ ಉತ್ಪನ್ನವಾಗುತ್ತದೆ. ಸತತವಾಗಿ ಇಂತಹ ಚಿತ್ರಗಳನ್ನು ನೋಡುವುದರಿಂದ ಅಂತರ್ಮನಸ್ಸಿನಲ್ಲಿ ಭಯದ ಕೆಟ್ಟ ಸಂಸ್ಕಾರಗಳು ಮೂಡುತ್ತವೆ. ಕಲೆಯ ನಿಜವಾದ ಉದ್ದೇಶವೆಂದರೆ ‘ದೇವರ ಶ್ರೇಷ್ಠತೆಯನ್ನು ಸ್ಥಾಪಿಸುವುದು ಮತ್ತು ಸಮಾಜದಲ್ಲಿ ಭಕ್ತಿಭಾವವನ್ನು ಬೆಳೆಸುವುದಾಗಿದೆ’. ಆದರೆ ಇಂತಹ ಭಯಂಕರ ಚಿತ್ರಗಳು ಕೆಟ್ಟ ಶಕ್ತಿಗಳಿಗೆ (ದೆವ್ವ-ಭೂತಗಳಿಗೆ) ಪ್ರಾಮುಖ್ಯತೆ ನೀಡುತ್ತವೆ, ಇದರಿಂದ ಕಲೆಯ ಅವನತಿಯಾಗುತ್ತಿದೆ.

೩. ಹಿಂಸೆ ಮತ್ತು ಅನೈತಿಕತೆಗೆ ನೀರು-ಗೊಬ್ಬರ ಹಾಕುವ ‘ಓಟಿಟಿ ಪ್ಲಾಟಫಾರ್ಮ’ಗಳ ಮೇಲಿನ ಚಲನಚಿತ್ರಗಳು, ಧಾರಾವಾಹಿ ಮತ್ತು ಹಾಡುಗಳು !

‘ಓಟಿಟಿ’ ಪ್ಲಾಟ್‌ಫಾರ್ಮ್‌ಗಳಿಗೆ ‘ಸೆನ್ಸಾರ್ ಬೋರ್ಡ್’ ಇಲ್ಲದ ಕಾರಣ, ಇದರಲ್ಲಿನ ಚಲನಚಿತ್ರಗಳು, ಧಾರಾವಾಹಿಗಳು, ಹಾಡುಗಳಲ್ಲಿ ‘ಹಿಂಸೆ, ಅನೈತಿಕತೆ, ಅತ್ಯಾಚಾರ ಮತ್ತು ಮಾದಕ ದ್ರವ್ಯ’ ಇತ್ಯಾದಿಗಳ ವ್ಯಸನದ ದೃಶ್ಯಗಳನ್ನು ಮುಕ್ತವಾಗಿ ತೋರಿಸಲಾಗುತ್ತದೆ. ಇದರಿಂದ ಸಾಂಸ್ಕೃತಿಕ ಅಧಃಪತನ ಆಗುತ್ತಿದೆ. ಇಂದು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಇದನ್ನು ನೋಡುತ್ತಿರುವುದರಿಂದ, ಮುಂದಿನ ಪೀಳಿಗೆಯ ಮೇಲೆಯೂ ಇದು ಕೆಟ್ಟ ಪರಿಣಾಮ ಬೀರುತ್ತಿದೆ.

ಭರತಮುನಿಗಳು ತಾವು ಬರೆದ ‘ನಾಟ್ಯಶಾಸ್ತ್ರ’ ಈ ಗ್ರಂಥದಲ್ಲಿ ರಂಗಮಂಟಪದ ಮೇಲೆ ಯಾವಾಗಲೂ ಒಳ್ಳೆಯದನ್ನೇ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ. ‘ಯಾವುದು ಉತ್ತಮವೋ ಅದನ್ನೇ ಪ್ರೇಕ್ಷಕರಿಗೆ ತೋರಿಸಬೇಕು. ರಂಗಮಂಟಪದ ಮೇಲೆ ಸಾವು, ಬಡತನ ಮತ್ತು ಅಶ್ಲೀಲತೆಯನ್ನು ತೋರಿಸಬಾರದು’, ಎಂದು ಅವರು ಪದೇ ಪದೇ ಹೇಳಿದ್ದಾರೆ. ‘ದ್ರಷ್ಟಾ ದೃಶ್ಯವಶಾತ್ ಬದ್ಧಃ |’, ಅಂದರೆ ನೋಡುವವನು ತಾನು ನೋಡುವುದರಲ್ಲೇ ಬಂಧಿಯಾಗಿ ಹೋಗುತ್ತಾನೆ. ಅಂದರೆ, ನಕಾರಾತ್ಮಕ ಅಂಶಗಳನ್ನು ನೋಡಿದಾಗ ಪ್ರೇಕ್ಷಕರ ಮನಸ್ಸಿನ ಮೇಲೆ ಅಷ್ಟೇ ಕೆಟ್ಟ ಪರಿಣಾಮವಾಗುತ್ತದೆ. ಮೇಲಿನ ವಿವಿಧ ಮಾಧ್ಯಮಗಳಿಂದಾಗುವ ಕಲಾಪ್ರಸ್ತುತಗಳಿಂದ ಇಂದು ಇದನ್ನೇ ನೋಡಲು ಸಿಗುತ್ತದೆ.

೪. ವೇದಿಕೆಯ ಮೇಲಿನ ಬಾಹ್ಯ ಅಬ್ಬರದಿಂದ ಕಲೆಯ ಮೂಲಕ ಅಂತರ್ಮುಖತೆ ಸಾಧಿಸಲು ಕಠಿಣವಾಗುವುದು

‘ಶಾಸ್ತ್ರೀಯ ಗಾಯನ’ವು ಭಾರತೀಯ ಪದ್ಧತಿಯಂತೆ ಕುಳಿತು ಪ್ರದರ್ಶಿಸುವ ಕಲೆಯಾಗಿದೆ. ಆದರೆ ಇಂದು ಅದನ್ನು ನಿಂತುಕೊಂಡು ಹಾಡುವ ಹೊಸ ಪದ್ಧತಿ (ಟ್ರೆಂಡ್) ಬಂದಿದೆ. ಹಿಂದೆ ಆರ್ಕೆಸ್ಟ್ರಾ ತಂಡಗಳು ಮಾಡುತ್ತಿದ್ದಂತೆ, ಈಗ ಶಾಸ್ತ್ರೀಯ ಗಾಯನದ ವೇಳೆಯೂ ವೇದಿಕೆಯ ಹಿಂದಿನ ಪರದೆಯ ಮೇಲೆ (‘ಬ್ಯಾಕ್‌ಡ್ರಾಪ್’ ಮೇಲೆ) ವಿವಿಧ ಚಿತ್ರಗಳನ್ನು ತೋರಿಸುತ್ತಾರೆ. ಇದರಿಂದ ಕೇಳುಗರ ಗಮನ ವಿಚಲಿತವಾಗುತ್ತದೆ. ನೃತ್ಯ ಮತ್ತು ವಾದ್ಯ ಪ್ರದರ್ಶನಗಳಲ್ಲೂ ಇದೇ ಆಗುತ್ತಿದೆ. ‘ಭಾರತೀಯ ಕಲೆಯು ಅಂತರ್ಮುಖಿಯಾಗಿ (ಮನಸ್ಸಿನ ಆಳದಿಂದ) ಅನುಭವಿಸಬೇಕಾದ ಕಲೆಯಾಗಿದೆ’ ಎಂಬ ದೃಷ್ಟಿಕೋನವೇ ಇಂದು ಮಾಯವಾಗಿ ಕೇವಲ ಬಾಹ್ಯ ಡಂಭಾಚಾರದ ಮೆರುಗು ಮತ್ತು ಪ್ರದರ್ಶನಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿದೆ.

೫. ದೇವತೆಗಳ ಮೇಲಾಧಾರಿತ ಧಾರಾವಾಹಿ ಮತ್ತು ನಾಟಕಗಳಲ್ಲಿ ಅಯೋಗ್ಯ ಚಿತ್ರಣ ಮತ್ತು ದೇವರ ವಿಡಂಬನೆ !

ಸದ್ಯದ ಕಲೆಗಳ ಪ್ರಸ್ತುತಿಯಲ್ಲಿ ವಸ್ತುಸ್ಥಿತಿಯನ್ನು ತೋರಿಸದೇ ಅದನ್ನು ವಿಪರ್ಯಾಸಗೊಳಿಸಿ ತೋರಿಸಲಾಗುತ್ತದೆ. ಉದಾ : ಗಾಯನ, ನೃತ್ಯ ಮತ್ತು ನಾಟಕಗಳ ಮೂಲಕ ರಾಧೆ ಮತ್ತು ಶ್ರೀಕೃಷ್ಣರ ದೈವೀ ಭಕ್ತಿಯುಕ್ತ ಪ್ರೇಮವನ್ನು ಕೇವಲ ಮಾನವೀಯ ಪ್ರೇಮ ಅಥವಾ ಪ್ರಣಯದ ರೂಪದಲ್ಲಿ ತೋರಿಸಲಾಗುತ್ತಿದೆ.

ದೇವತೆಗಳ ಮೇಲಾಧಾರಿತ ಧಾರಾವಾಹಿಗಳು ಮತ್ತು ನಾಟಕಗಳ ಉದ್ದೇಶವು ‘ಸಮಾಜದಲ್ಲಿ ದೇವರ ಬಗ್ಗೆ ಶ್ರದ್ಧೆ ಮೂಡಿಸುವುದು’ ಎಂದಾಗಿದ್ದರೂ, ಕೆಲವೊಮ್ಮೆ ಅವುಗಳನ್ನು ಅಯೋಗ್ಯ ಪದ್ಧತಿಯಿಂದ ಪ್ರಸ್ತುತಿ ಮಾಡಲಾಗುತ್ತದೆ. ಈ ಧಾರಾವಾಹಿಗಳಲ್ಲಿ ‘ದೇವತೆಗಳನ್ನು ಅಲ್ಪವಸ್ತ್ರಗಳಲ್ಲಿ ತೋರಿಸುವುದು, ಕಥೆಯನ್ನು ತಮಗೆ ಬೇಕಾದಂತೆ ತಿರುಚಿ ಪ್ರಸ್ತುತಪಡಿಸುವುದು, ದೇವತೆಗಳ ಅತಿಮಾನವೀಕರಣ ಮಾಡುವುದು’ ಇತ್ಯಾದಿ ಕಂಡುಬರುತ್ತದೆ. ಕೆಲವೊಮ್ಮೆ ನಾರದ ಮುನಿಗಳನ್ನು ಹಾಸ್ಯದ ವ್ಯಕ್ತಿಯನ್ನಾಗಿ ಮಾಡಲಾಗುತ್ತದೆ, ಕೆಲವೊಮ್ಮೆ ರಾಷ್ಟ್ರಪುರುಷರನ್ನು ಹಾಡುಗಳ ತಾಳಕ್ಕೆ ಕುಣಿಯುವಂತೆ ತೋರಿಸಲಾಗುತ್ತದೆ. ಇದರಿಂದ ಕಲೆಯ ಅಧಃಪತನವಾಗುತ್ತಿದೆ.

೬. ಪಾಶ್ಚಿಮಾತ್ಯ ಕಲೆಗಳ ‘ಫ್ಯೂಜನ್’ ಇದರ ಪ್ರಭಾವ 

ಭಾರತೀಯ ಕಲೆಗಳು ಮೂಲತಃ ಈಶ್ವರ ನಿರ್ಮಿತವಾಗಿದ್ದರಿಂದ ಸಾತ್ತ್ವಿಕವಾಗಿವೆ. ಅವುಗಳನ್ನು ಪಾಶ್ಚಿಮಾತ್ಯ ಕಲೆಗಳ ಪ್ರಕಾರಗಳೊಂದಿಗೆ ಅಶಾಸ್ತ್ರೀಯವಾಗಿ ‘ಫ್ಯೂಜನ್’ ಮಾಡುವುದರಿಂದ ಮೂಲ ಕಲೆಯ ಸಾತ್ತ್ವಿಕತೆ ಕುಸಿಯುತ್ತದೆ. ‘ಫ್ಯೂಜನ್’ ಸಂಗೀತದಿಂದ ಮನಸ್ಸಿಗೆ ತಾತ್ಕಾಲಿಕ ಸುಖ ಸಿಗಬಹುದು ಅಥವಾ ಅದನ್ನು ಕೇಳಬೇಕೆನಿಸಬಹುದು; ಆದರೆ ನಮಗೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಯಾವುದೇ ಲಾಭವಾಗುವುದಿಲ್ಲ.

ಮೇಲಿನ ವಿವೇಚನೆಯಿಂದ ಗಮನಕ್ಕೆ ಬರುವ ಅಂಶವೆಂದರೆ, ಕಲೆಯು ಕೇವಲ ಮನೋರಂಜನೆಯ ಸಾಧನವಲ್ಲ; ಅದು ಸಮಾಜದ ಮತ್ತು ವ್ಯಕ್ತಿಯ ಅಂತರ್ಮನಸ್ಸನ್ನು ರೂಪಿಸುವ ಪ್ರಭಾವಿ ಮಾಧ್ಯಮವಾಗಿದೆ. ಕಲೆಯು ಈಶ್ವರ ಸ್ಮರಣೆ, ಆತ್ಮಶುದ್ಧಿ ಮತ್ತು ಸಾತ್ತ್ವಿಕ ಭಾವನೆಗಳಿಂದ ಸಾಕಾರಗೊಂಡಾಗ ಅದು ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ; ಆದರೆ ಪ್ರಸಿದ್ಧಿ, ಸ್ಪರ್ಧೆ, ವಿಕೃತಿ ಮತ್ತು ಭೌತಿಕ ಆಕರ್ಷಣೆಗಳ ದಾಸನಾದಾಗ ಅದೇ ಕಲೆ ಅಧಃಪತನಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಕಲೆಯ ಮೂಲ ಸಾತ್ತ್ವಿಕ ಸ್ವರೂಪವನ್ನು ರಕ್ಷಿಸುವುದು ಕಲಾವಿದರು, ರಸಿಕರು, ಪಾಲಕರು ಮತ್ತು ಮಾಧ್ಯಮಗಳ ಜವಾಬ್ದಾರಿಯಾಗಿದೆ. ಇಲ್ಲದಿದ್ದರೆ, ಕ್ಷಣಿಕ ಜನಪ್ರಿಯತೆಗಾಗಿ ವಿಕೃತಿಯತ್ತ ಸಾಗಿರುವ ಕಲೆಯ ಈ ಪ್ರವಾಸದಿಂದಾಗಿ ಭಾವಿ ಪೀಳಿಗೆಯು ಆಧ್ಯಾತ್ಮಿಕ ಮೌಲ್ಯಗಳಿಂದ ವಂಚಿತವಾಗಲಿದೆ. (ಮುಂದುವರಿಯುವುದು)

ಸಂಗ್ರಹಕಾರರು : ಸೌ. ರೇಣುಕಾ ಕ್ರಾಕ್, ನಾಟ್ಯ-ಸಂಗೀತ ಅಧ್ಯಯನಕಾರರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೨.೨.೨೦೨೬)