ಮೂಲತಃ ಸಾತ್ತ್ವಿಕವಾಗಿದ್ದು ಆತ್ಮರಂಜನೆಯಿಂದ ವಿಕೃತಿಯತ್ತ ಸಾಗುತ್ತಿರುವ ಶ್ರೇಷ್ಠ ಭಾರತೀಯ ಕಲೆಗಳು !

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !

ಈ ವರೆಗೆ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ. ಇಂದು ನಾವು ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿಯೋಣ.                             (ಲೇಖನ ೧೪)

ಈ ಹಿಂದಿನ ಲೇಖನ- ೧೩ ಓದಲು ಇಲ್ಲಿ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ :  https://sanatanprabhat.org/kannada/176451.html

‘ಮೊದಲು ಭಗವದ್ಭಕ್ತಿಯ ಮಾಧ್ಯಮವಾಗಿದ್ದ ಮತ್ತು ದೇವಸ್ಥಾನದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ‘ಗಾಯನ, ವಾದನ, ನೃತ್ಯ ಮತ್ತು ನಾಟ್ಯ’ದಂತಹ ಕಲೆಗಳ ಪ್ರದರ್ಶನದ ಉದ್ದೇಶವು ಇಂದು ಕಾಲಚಕ್ರದ ಪ್ರಭಾವದಿಂದಾಗಿ ಬದಲಾಗುತ್ತಿದೆ. ‘ಕಲೆಗಾಗಿ ಕಲೆ’, ‘ಹಣಗಳಿಕೆ ಮತ್ತು ಮನೋರಂಜನೆಗಾಗಿ ಕಲೆ’ ಎಂಬ ದಾರಿಯಲ್ಲಿ ಸಾಗಿದ ಈ ಪ್ರಯಾಣವು, ಈಗ ಕಲೆಗಳಲ್ಲಿ ವಿಕೃತಿ ನಿರ್ಮಾಣವಾಗುವ ದಿಕ್ಕಿನತ್ತ ಸಾಗುತ್ತಿದೆ. ಈ ಲೇಖನಮಾಲೆಯ ಮುಂದಿನ ಕೆಲವು ಭಾಗಗಳಲ್ಲಿ ನಾವು ಕಲೆಗಳು ವಿಕೃತಿಯತ್ತ ಸಾಗುತ್ತಿರುವ ಪ್ರಯಾಣವನ್ನು ಅರ್ಥಮಾಡಿಕೊಳ್ಳಲಿದ್ದೇವೆ. ಈ ವಾರದ ಲೇಖನದಲ್ಲಿ ನಾವು ‘ಮೂಲದಲ್ಲಿ ದೈವಿ ಪರಂಪರೆಯನ್ನು ಹೊಂದಿದ್ದ ಭಾರತೀಯ ಕಲೆಗಳು ಲೋಕಾಭಿಮುಖವಾಗುತ್ತಾ ಆಗಿ ಹೋದ ಪ್ರವಾಸ ಹಾಗೂ ಈ ಸ್ಥಿತಿಗೆ ಕಾರಣವಾದ ವಿವಿಧ ಘಟಕಗಳನ್ನು’ ತಿಳಿದುಕೊಳ್ಳುವವರಿದ್ದೇವೆ.

  (ಭಾಗ ೧)

೧. ‘ಭಗವಂತನನ್ನು ಪ್ರಸನ್ನಗೊಳಿಸಲು ಹಾಡುಗಳು’ ಮತ್ತು ‘ವ್ಯಕ್ತಿಯನ್ನು ಪ್ರಸನ್ನಗೊಳಿಸಲು ಹಾಡುಗಳು’, ಇವುಗಳಲ್ಲಿನ ಭೇದವನ್ನು ಸ್ಪಷ್ಟಪಡಿಸುವ ಒಂದು ಸತ್ಯ ಕಥೆ

ಒಮ್ಮೆ ಬಾದಶಾಹ ಅಕಬರರನಿಗೆ ಗಾನಸಮ್ರಾಟ ತಾನಸೇನನ ಗುರುಗಳ, ಅಂದರೆ ಸ್ವಾಮಿ ಹರಿದಾಸರ ಗಾಯನವನ್ನು ಕೇಳುವ ತೀವ್ರ ಇಚ್ಛೆಯಾಯಿತು. ತಾನಸೇನನು, “ನನ್ನ ಗುರುಗಳು ದರಬಾರಿನಲ್ಲಿ ಬಂದು ಹಾಡುಗಳನ್ನು ಹಾಡುವುದಿಲ್ಲ. ಅವರು ಕೇವಲ ಭಗವಂತನ ಆಜ್ಞೆಯಂತೆ ಭಗವಂತನಿಗಾಗಿ ಹಾಡುತ್ತಾರೆ,” ಎಂದು ಹೇಳಿದನು. ಸ್ವಾಮಿ ಹರಿದಾಸರ ಗಾಯನವನ್ನು ಕೇಳುವ ತೀವ್ರ ಇಚ್ಛೆಯಾಗಿರುವುದರಿಂದ ಅಕಬರ ಮತ್ತು ತಾನಸೇನ ವೇಷವನ್ನು ಬದಲಾಯಿಸಿ ಸ್ವಾಮಿ ಹರಿದಾಸರ ಕುಟೀರದ ಹತ್ತಿರ ನಿಂತುಕೊಂಡರು ಮತ್ತು ಅವರ ಗಾಯನಕ್ಕಾಗಿ ಕಾಯುತ್ತಿದ್ದರು. ಬ್ರಹ್ಮಮುಹೂರ್ತದಲ್ಲಿ ಸ್ವಾಮಿ ಹರಿದಾಸರು ಈಶ್ವರನ ಆಜ್ಞೆಯಂತೆ ದೈವೀ ಮತ್ತು ಭಾವಪೂರ್ಣ ಗಾಯನವನ್ನು ಆರಂಭಿಸಿದರು. ಸ್ವಾಮಿ ಹರಿದಾಸರ ಗಾಯನವನ್ನು ಕೇಳಿ ಅಕಬರನು ಒಂದು ಬೇರೆಯೇ ಭಾವಸಮಾಧಿಯಲ್ಲಿ ಹೋದನು. ಹಿಂದಿರುಗುವಾಗ ಅಕಬರನು ತಾನಸೇನನಿಗೆ, “ನಿನ್ನ ಮತ್ತು ಸ್ವಾಮಿ ಹರಿದಾಸರ ಗಾಯನದಲ್ಲಿ ಇಷ್ಟೊಂದು ವ್ಯತ್ಯಾಸವೇಕೆ ?” ಎಂದು ಕೇಳಿದನು. ಆಗ ತಾನಸೇನನು, “ನಾನು ನಿಮ್ಮನ್ನು (ವ್ಯಕ್ತಿಯನ್ನು) ಪ್ರಸನ್ನಗೊಳಿಸಲು ಹಾಡುತ್ತೇನೆ, ನನ್ನ ಗುರುಗಳು ಕೇವಲ ಆ ಜಗದೋದ್ಧಾರಕ ಪರಮೇಶ್ವರನನ್ನು ಪ್ರಸನ್ನಗೊಳಿಸಲು ಹಾಡುತ್ತಾರೆ. ಆದ್ದರಿಂದ ಈ ವ್ಯತ್ಯಾಸವಿದೆ” ಎಂದು ಹೇಳಿದನು.

ತಾನಸೇನನು ನೀಡಿದ ಮೇಲಿನ ಉತ್ತರದಿಂದ ‘ಕಲೆಯು ಈಶ್ವರಾಭಿಮುಖವಾಗಿ ಉಳಿಯದೆ, ಹೇಗೆ ಹಂತಹಂತವಾಗಿ ಲೋಕಾಭಿಮುಖವಾಯಿತು’ ಮತ್ತು ’ಈ ಎರಡೂ ಪ್ರಕಾರಗಳ ನಡುವಿರುವ ಪರಮಾವಧಿಯ ವ್ಯತ್ಯಾಸ’ ಸ್ಪಷ್ಟವಾಗುತ್ತದೆ.

೨. ಭಾರತದಲ್ಲಿನ ಆಧ್ಯಾತ್ಮಿಕ ಪರಂಪರೆಯುಳ್ಳ ಕಲೆಗಳನ್ನು ‘ಮನೋರಂಜನೆ’ ಎಂದು ನೋಡುವ ದೃಷ್ಟಿಕೋನಕ್ಕೆ ಕಾರಣವಾದ ಕೆಲವು ಘಟಕಗಳು !

೨ ಅ. ಭಾರತದ ಮೇಲೆ ಆಗಿರುವ ಮೊಘಲರ ಆಕ್ರಮಣಗಳು : ಭಾರತದ ಮೇಲಾದ ಮೊಘಲರ ಆಕ್ರಮಣಗಳಿಂದ ದೊಡ್ಡ ಪ್ರಮಾಣದಲ್ಲಿ ಭಾರತೀಯ ಕಲೆಗಳ ಅವನತಿಯಾಯಿತು. ಮೊಘಲರು ಕಲೆ ಮತ್ತು ವಿದ್ಯೆಯ ಜ್ಞಾನದ ಮುಖ್ಯಸ್ರೋತಗಳಾಗಿದ್ದ ತಕ್ಷಶಿಲೆ, ನಾಲಂದಾ ಮತ್ತು ಭೋಜಶಾಲೆಯಂತಹ ವಿಶ್ವ ವಿದ್ಯಾಲಯಗಳನ್ನು ನಾಶ ಮಾಡಿದರು. ಅಷ್ಟೇ ಅಲ್ಲ, ಮೊಘಲ್ ಆಕ್ರಮಣಕಾರರು ಭಾರತೀಯ ಸಂಸ್ಕೃತಿಯನ್ನು ಪೋಷಿಸುತ್ತಿದ್ದ ದೇವಸ್ಥಾನಗಳನ್ನೂ ಧ್ವಂಸಗೊಳಿಸಿದರು. ಇದರಿಂದಾಗಿ ದೇವಾಲಯ ಕೇಂದ್ರಿತವಾಗಿದ್ದ ಹಾಗೂ ಈಶ್ವರನ ಆರಾಧನೆಯ ಮಾಧ್ಯಮವಾಗಿದ್ದ ಭಾರತೀಯ ಕಲೆಗಳು ಹೆಚ್ಚಾಗಿ ಮೊಘಲ್ ರಾಜರ ಆಸ್ಥಾನಗಳಲ್ಲಿ ಪ್ರದರ್ಶಿಸಲ್ಪಡಲಾರಂಭಿಸಿದವು. ಆ ಕಲೆಗಳಿಗೆ ‘ದರ್ಬಾರಿ ರೂಪ’ ಪ್ರಾಪ್ತವಾಯಿತು. ಇದರ ಪರಿಣಾಮ ದಿಂದ ಕಲಾವಿದರು ಕಲೆಯ ಮೂಲ ಉದ್ದೇಶದಿಂದ ದೂರ ಸರಿದರು ಮತ್ತು ‘ರಾಜನನ್ನು ಸಂತೋಷಗೊಳಿಸಿ ಬಹುಮಾನ ಪಡೆಯುವುದು, ರಾಜನ ಮೆಚ್ಚುಗೆ ಗಳಿಸುವುದು ಮತ್ತು ಸ್ವ-ಪ್ರಶಂಸೆ’ಯಲ್ಲಿ ಸಿಲುಕಿಕೊಂಡರು. ರಾಜಾಶ್ರಯ ಪಡೆದ ಕಲೆಗಳನ್ನು ಕೇವಲ ‘ಮನೋರಂಜನೆ’ ಎಂದು ನೋಡುವಂತಾಯಿತು.

ಆ ಕಾಲಖಂಡದಿಂದ ಭಾರತೀಯ ಶಾಸ್ತ್ರೀಯ ಕಲೆಗಳ ಮೇಲೆ ಉರ್ದು ಸಂಸ್ಕೃತಿಯ ಪ್ರಭಾವ ಕಾಣಿಸಿಕೊಳ್ಳಲಾರಂಭಿಸಿತು. ಅದರ ಪರಿಣಾಮದಿಂದ ಹಿಂದುಸ್ಥಾನಿ ಸಂಗೀತದಲ್ಲಿ ‘ಧ್ರುಪದ್’ ಶೈಲಿಯ ಬಳಕೆ ಕಡಿಮೆಯಾಗಿ ‘ಖ್ಯಾಲ್’ ಗಾಯನ ಆರಂಭವಾಯಿತು. ಅದರಲ್ಲಿನ ಬಂದಿಶ್‌ಗಳಲ್ಲಿ (ಟಿಪ್ಪಣಿ ೧ ನೋಡಿ) ಶೃಂಗಾರಪ್ರಧಾನ ಮತ್ತು ಅನೇಕ ಉರ್ದು ಮಿಶ್ರಿತ ಶಬ್ದಗಳ ಬಳಕೆ ಹೆಚ್ಚಾಯಿತು. ‘ಕಥಕ್’ ಶಾಸ್ತ್ರೀಯ ನೃತ್ಯ ಶೈಲಿಯ ಮೇಲೆಯೂ ಇದೇ ಪರಿಣಾಮವಾಯಿತು. ದೇವಸ್ಥಾನಗಳಲ್ಲಿದ್ದ ನೃತ್ಯವು ದರ್ಬಾರುಗಳಿಗೆ ಸ್ಥಳಾಂತರಗೊಂಡಿದ್ದರಿಂದ ನೃತ್ಯದ ಪೋಷಾಕು ಮತ್ತು ನೃತ್ಯದ ಗೀತೆಗಳ ಪ್ರಕಾರಗಳಲ್ಲಿ ಶೃಂಗಾರಿಕತೆ ಕಾಣಿಸಿಕೊಳ್ಳಲಾರಂಭಿಸಿತು.

ಟಿಪ್ಪಣಿ ೧ – ಬಂದಿಶ್ : ಶಾಸ್ತ್ರೀಯ ಗಾಯನದಲ್ಲಿನ ರಾಗದ ಸ್ವರೂಪವನ್ನು ಸ್ಪಷ್ಟಪಡಿಸುವ ಬೋಲಗೀತ. ಇದನ್ನು ‘ಛೋಟಾ ಖ್ಯಾಲ್’, ‘ಬಂದಿಶ್’ ಅಥವಾ ‘ಚೀಜ್’ ಎಂದೂ ಕರೆಯುತ್ತಾರೆ. ಇದು ಮಧ್ಯ ಅಥವಾ ದ್ರುತ ಲಯದಲ್ಲಿರುತ್ತದೆ.

ಉತ್ತರ ಭಾರತದಲ್ಲಿ ದೀರ್ಘಕಾಲ ಮೊಘಲರ ಆಳ್ವಿಕೆಯು ಇದ್ದ ಕಾರಣ ಆ ಭಾಗದ ಕಲೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಅದಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಮೊಘಲರ ಆಕ್ರಮಣಗಳು ಕಡಿಮೆ ಇದ್ದವು. ಹಾಗಾಗಿ, ಅಲ್ಲಿನ ಕಲೆಗಳ ಮೇಲೆ ಅದರ ಪ್ರಭಾವ ಅಷ್ಟೊಂದು ಆಗಲಿಲ್ಲ. ಇದರ ಪರಿಣಾಮದಿಂದ ದಕ್ಷಿಣದಲ್ಲಿ ನಮ್ಮ ಕಲಾಸಂಸ್ಕೃತಿ ಸಾಕಷ್ಟು ಸುಭದ್ರವಾಗಿ ಉಳಿದು ಕೊಂಡಿದೆ.

ಕು. ಅಪಾಲಾ ಔಂಧಕರ

೨ ಆ. ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಭಾರತದ ‘ಗುರು-ಶಿಷ್ಯ ಪರಂಪರೆ’ಯನ್ನು ನಾಶ ಮಾಡಿದರು : ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗ, ಅವರು ಭಾರತೀಯ ಸಂಸ್ಕೃತಿಯ ಮೂಲವಾಗಿದ್ದ ‘ಗುರು-ಶಿಷ್ಯ ಪರಂಪರೆ’ಯನ್ನೇ ನಾಶ ಮಾಡಿದರು. ಇದರಿಂದಾಗಿ ಭಾರತೀಯ ಪರಂಪರೆಯ ‘ಕಲೆ ಕಲಿಯುವುದು’ ಸಹಜವಾಗಿಯೇ ಕಡಿಮೆಯಾಯಿತು. ಇದರ ಪರಿಣಾಮದಿಂದ ಮಧ್ಯಂತರ ಕಾಲಘಟ್ಟದಲ್ಲಿ ನೃತ್ಯ ಮತ್ತು ಗಾಯನ ಕಲೆಗಳನ್ನು ಬೇರೆಯೇ ದೃಷ್ಟಿಯಿಂದ, ಅಂದರೆ ‘ದರ್ಬಾರಿನ ಕಲೆಗಳು’ ಅಥವಾ ‘ಜನರ ಮನೋರಂಜನೆಗಾಗಿ ಇರುವ ಕಲೆಗಳು’ ಎಂಬಂತೆ ನೋಡಲಾರಂಭಿಸಿದರು. ಈ ಕಾರಣದಿಂದಾಗಿ ಗೌರವಾನ್ವಿತ ಕುಟುಂಬದ ಸ್ತ್ರೀಯರು ಈ ಕಲೆಗಳನ್ನು ಕಲಿಯುವುದಕ್ಕೆ ನಿರ್ಬಂಧ ಬಂದಿತು. ನಂತರದ ಕಾಲದಲ್ಲಿ ಈ ಕಲೆಗಳನ್ನು ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಲಾಯಿತು. ಇದರಲ್ಲಿ ಅನೇಕ ನೃತ್ಯಗುರುಗಳು, ಕಲಾ-ಅಭ್ಯಾಸಿಗಳು ಮತ್ತು ದಕ್ಷಿಣ ಭಾರತದ ಕೆಲವು ರಾಜರ ಕೊಡುಗೆ ಅಪಾರವಾಗಿದೆ. ಅವರಿಂದಾಗಿ ಕಲೆ ಕಲಿಯುವುದು ಎಲ್ಲರಿಗೂ ಸುಲಭವಾಯಿತು; ಆದರೆ ‘ಕಲೆಯ ಮೂಲಕ ಸಾಧನೆ ಮತ್ತು ಆತ್ಮರಂಜನೆ’ ಎಂಬ ದೃಷ್ಟಿಕೋನವು ಈಗ ಬಹುತೇಕ ಅಂತ್ಯಗೊಂಡು, ‘ಕಲೆಯ ಮೂಲಕ ಲೋಕರಂಜನೆ ಮತ್ತು ಮನೋರಂಜನೆ’ ಎಂಬ ದೃಷ್ಟಿಕೋನವು ಸಮಾಜದಲ್ಲಿ ದೃಢವಾಯಿತು.

೩. ವಿದ್ಯಾರ್ಥಿಗಳನ್ನು ಕಲೆಯ ಮೂಲ ಉದ್ದೇಶದಿಂದ ದೂರ ಒಯ್ಯುವ ಈಗಿನ ಕಲಾಶಿಕ್ಷಕರ ಮಾನಸಿಕತೆ !

ಅ. ಕೆಲವು ಹಿರಿಯ ಅನುಭವಿಗಳನ್ನು ಹೊರತುಪಡಿಸಿದರೆ, ಈಗ ಕಲೆ ಕಲಿಸುವವರು ಮತ್ತು ಕಲಿಯುವವರ ಒಲವು ಕಲೆಯ ‘ಪ್ರದರ್ಶನ’ದ ಕಡೆಗೆ ಹೆಚ್ಚಾಗಿದೆ. ಇದರಿಂದಾಗಿ ‘ಹಣ ಗಳಿಸುವುದು’ (ಅರ್ಥಾರ್ಜನೆ) ಎಂಬುದು ಸಹಜವಾಗಿಯೇ ಬೆಳೆದಿದೆ. ಕಲಾವಿದನ ಸ್ವಭಾವದೋಷಗಳು ಮತ್ತು ಅಹಂಕಾರದ ಅಂಶಗಳು ಅವನ ಕಲೆಯಲ್ಲಿ ವ್ಯಕ್ತವಾಗುತ್ತಿರುವುದು ಕಂಡು ಬರುತ್ತಿದೆ. ಕಲಾವಿದರಲ್ಲಿ ‘ಜನಪ್ರಿಯತೆಯ ಹವ್ಯಾಸ’ ಹೆಚ್ಚಾಗಿದೆ. ಇದರಿಂದಾಗಿ ಸಮಾಜವು ಕಲೆಯ ಮೂಲ ಉದ್ದೇಶದಿಂದ ದೂರವಾಗಿ, ಕಲೆಯಲ್ಲಿನ ಕ್ಷಣಿಕ ಸುಖಕ್ಕೆ ಆಕರ್ಷಿತವಾಗುತ್ತಿದೆ.

ಆ. ಇತ್ತೀಚಿನ ದಿನಗಳಲ್ಲಿ ಕಲೆಯಲ್ಲಿನ ಬಹುಪಾಲು ಗುರುಗಳೂ ಹಣ ಗಳಿಕೆಗಾಗಿ ಕಲೆಯನ್ನು ಕಲಿಸುತ್ತಿರುವುದರಿಂದ, ಅವರ ‘ಕಲೆ ಕಲಿಸುವಿಕೆ’ ಎಂಬುದು ಒಂದು ಉದ್ಯೋಗದಂತೆ ಆಗಿಹೋಗಿದೆ. ಅವರು ಸ್ವತಃ ಕಲೆಯನ್ನೊಂದು ‘ಸಾಧನೆ’ ಎಂದು ನೋಡದಿರುವಾಗ, ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೇಗೆ ತಾನೇ ಹೇಳಿಕೊಡಲು ಸಾಧ್ಯ ? ಆದ್ದರಿಂದ ಈ ಪೀಳಿಗೆಯ ಮನಸ್ಸಿನಲ್ಲೂ ‘ಸಂಗೀತ ಮತ್ತು ನೃತ್ಯ ಕಲೆಗಳು ಕೇವಲ ಮನೋರಂಜನೆ ಅಥವಾ ಪ್ರದರ್ಶನಕ್ಕಾಗಿ ಮಾತ್ರ ಇವೆ’ ಎಂಬುದು ಅಚ್ಚೊತ್ತಿದೆ. ‘ಕಲೆಗಳನ್ನು ಕಲಿಯುವುದು’ ಕೇವಲ ತಾಂತ್ರಿಕ (ಟೆಕ್ನಿಕಲ್) ಪದ್ಧತಿಯಿಂದ ನಡೆಯುತ್ತಿದೆ. ಈ ದೃಷ್ಟಿಕೋನದಿಂದಾಗಿ ಈ ಪೀಳಿಗೆಯು ಭಾರತೀಯ ದೈವಿ ಕಲೆಗಳಲ್ಲಿನ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುವುದರಿಂದ ವಂಚಿತವಾಗುತ್ತಿದೆ.

ಇ. ಹಿಂದಿನ ಕಾಲದ ಕಲಾವಿದರು ಮತ್ತು ಗುರುಗಳು ತಮ್ಮ ಸಂಪೂರ್ಣ ಜೀವನವನ್ನೇ ಕಲೆಗೆ ಸಮರ್ಪಿಸಿಕೊಳ್ಳುತ್ತಿದ್ದರು. ಇಂದಿನ ಒತ್ತಡದ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಸಮಯ ಸಿಗುತ್ತಿಲ್ಲ. ಅದರಲ್ಲೂ ಇಂದಿನ ಪೀಳಿಗೆಯು ಪಾಶ್ಚಾತ್ಯ ಸಂಗೀತದ ಮೋಡಿಗೆ ಒಳಗಾಗಿದೆ. ಇದರಿಂದಾಗಿ ಕಲೆಯ ಮೂಲ ಸತ್ವವನ್ನು ಅರ್ಥ ಮಾಡಿಕೊಂಡು ಅದರಲ್ಲಿನ ನಿಜವಾದ ಆನಂದವನ್ನು ಪಡೆಯುವುದರಿಂದ ಈ ಪೀಳಿಗೆಯು ವಂಚಿತವಾಗುತ್ತಿದೆ.ಕಲಾವಿದರಿಗೆ ಸಂಗೀತಕ್ಕೆ ಬಳಸುವ ವಸ್ತುಗಳ ಮೇಲಿರುವ ಭಾವ ಕಡಿಮೆಯಾಗಿ ಅವರಿಂದ ವಸ್ತುಗಳ ಅನಾದರವಾಗುತ್ತಿದೆ

ಹಿಂದಿನ ಕಾಲದ ಕಲಾವಿದರು ಕಲೆಯನ್ನು ಒಂದು ‘ಆರಾಧನೆ’ ಎಂದು ಮಾಡುತ್ತಿದ್ದುದರಿಂದ, ಸಂಗೀತಕ್ಕೆ ಬಳಸುವ ವಸ್ತುಗಳಾದ ಗೆಜ್ಜೆ, ವಾದ್ಯಗಳು ಇತ್ಯಾದಿಗಳ ಬಗ್ಗೆ ಕಲಾ ಉಪಾಸಕರಲ್ಲಿ ಭಕ್ತಿ ಭಾವವಿತ್ತು. ‘ಈ ವಸ್ತುಗಳು ಮತ್ತು ವಾದ್ಯಗಳು ಸಂಗೀತ ಆರಾಧನೆಗೆ ನಮಗೆ ಸಹಾಯ ಮಾಡುತ್ತವೆ’ ಎಂಬ ಭಾವದಿಂದ ಅವುಗಳನ್ನು ನೋಡಲಾಗುತ್ತಿತ್ತು. ಆದರೆ ಇಂದಿನ ಪೀಳಿಗೆಗೆ ಈ ದಿಶೆಯ ಅರಿವಿಲ್ಲದ ಕಾರಣ, ಗೆಜ್ಜೆ ಅಥವಾ ವಾದ್ಯಗಳಿಗೆ ನಮಸ್ಕರಿಸದೆಯೇ ನರ್ತನ ಅಥವಾ ವಾದನವನ್ನು ಆರಂಭಿಸಲಾಗುತ್ತದೆ. ಕೆಲವು ವಾದಕರು ತಮ್ಮ ವಾದ್ಯಗಳ ಮೇಲೆ ‘ಸ್ಟಂಟ್’ ಪ್ರದರ್ಶಿಸಲು ಜೋರಾಗಿ ಆಘಾತ ಮಾಡುತ್ತಾರೆ. ಇನ್ನು ಕೆಲವು ನೃತ್ಯ ಕಲಾವಿದರು ‘ಕಾಲುಗಳಲ್ಲಿ ಚಪ್ಪಲಿ ಹಾಕಿಕೊಂಡೇ, ಗೆಜ್ಜೆಗಳನ್ನು ಕಟ್ಟಿಕೊಳ್ಳುತ್ತಾರೆ ಮತ್ತು ನೇರವಾಗಿ ಅವುಗಳನ್ನು ನೆಲದ ಮೇಲೆ ಇಡುತ್ತಾರೆ,’ ಇಂತಹ ಅಯೋಗ್ಯ ಕೃತಿಗಳನ್ನು ಮಾಡುತ್ತಾರೆ. ಇದರಿಂದ ಅರಿಯದೆಯೇ ಆ ವಸ್ತುಗಳಿಗೆ ಅಪಮಾನವಾಗುತ್ತದೆ. ಹಿಂದಿನ ಕಾಲದಲ್ಲಿ ಕಲಾವಿದರಲ್ಲಿ ‘ಸ್ಟಂಟ್’ (ಜನರ ಗಮನ ಸೆಳೆಯಲು ಮಾಡುವ ವಿಭಿನ್ನ ಚಮತ್ಕಾರ) ಬದಲಿಗೆ ‘ಭಾವ’ ಇರುತ್ತಿತ್ತು. ಆದ್ದರಿಂದ ಅವರಿಂದ ಇಂತಹ ತಪ್ಪುಗಳು ನಡೆಯುತ್ತಿರಲಿಲ್ಲ. ಈಗ ಕಲೆಗಳು ವಿಕಸಿತಗೊಂಡಿವೆ ನಿಜ; ಆದರೆ ‘ಆಧ್ಯಾತ್ಮಿಕ ದೃಷ್ಟಿಕೋನದಿಂದ ಕಲೆಗಳು ನಿಜವಾದ ಅರ್ಥದಲ್ಲಿ ವಿಕಸನಗೊಳ್ಳಬೇಕಿದೆ’ ಎಂಬುದು ಈ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ.

೫. ಕಲಾವಿದರು ‘ಕಲೆಯು ಈಶ್ವರನ ಆರಾಧನೆ ಆಗಿದೆ’ ಎಂಬ ಭಾವವನ್ನು ಇಟ್ಟುಕೊಂಡರೆ, ಕಲೆಯಲ್ಲಿನ ಸಾತ್ತ್ವಿಕತೆಯು ತಾನಾಗಿಯೇ ಹೆಚ್ಚಾಗುವುದು !

ಇಂದಿನ ಈ ಪರಿಸ್ಥಿತಿಯನ್ನು ಗಮನಿಸಿದರೆ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನ ಮಾಡುವ ಅವಶ್ಯಕತೆಯಿದೆ. ಈ ಯೋಗ್ಯ ದಿಶೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮೂಲಕ ನೀಡಲಾಗುತ್ತಿದೆ. ‘ನಮ್ಮ ಕಲೆ ಕೇವಲ ಪ್ರದರ್ಶನವಲ್ಲ, ಅದು ಈಶ್ವರನ ಆರಾಧನೆ’ ಎಂಬ ಭಾವವನ್ನು  ಇಟ್ಟುಕೊಂಡರೆ ಕಲೆಯ ಸಾತ್ತ್ವಿಕತೆಯು ತಾನಾಗಿಯೇ ವೃದ್ಧಿಯಾಗುತ್ತದೆ. ‘ಕಲೆಯ ಶಾಸ್ತ್ರಶುದ್ಧ ಸ್ವರೂಪವನ್ನು ಕಾಪಾಡುವುದು ಮತ್ತು ಭಗವಂತನಿಗೆ ಸಮರ್ಪಣೆಯ ಭಾವದಿಂದ ಕಲೆಯನ್ನು ಅರ್ಪಿಸುವುದು’ ಈ ಧ್ಯೇಯವನ್ನು ಇಟ್ಟುಕೊಂಡರೆ, ಕಲಾವಿದರು ಮತ್ತೊಮ್ಮೆ ದೈವಿ ಸಂಗೀತ ಮತ್ತು ದೈವಿ ನೃತ್ಯವನ್ನು ಅನುಭವಿಸಲು ಸಾಧ್ಯವಾಗುವುದರಲ್ಲಿ ಸಂಶಯವೇ ಇಲ್ಲ !’

ಸಂಗ್ರಹಕಾರರು : ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೮ ವರ್ಷ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೧೮.೧.೨೦೨೬)