ಅಮೆರಿಕ-ಇರಾನ್ ಸಂಘರ್ಷ; ಚರ್ಚೆ ವಿಫಲ : ಮತ್ತೆ ಯುದ್ಧದ ಸಾಧ್ಯತೆ!

ನವ ದೆಹಲಿ – ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ೨೧ ಗಂಟೆಗಳ ಕಾಲ ನಡೆದ ಚರ್ಚೆಯು ವಿಫಲವಾಗಿದೆ. ಈ ಚರ್ಚೆಯಿಂದ ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಒಪ್ಪಂದ ಏರ್ಪಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಎರಡೂ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಉಭಯ ದೇಶಗಳ ನಾಯಕರು ಈಗ ಈ ಚರ್ಚೆ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾ ಪರಸ್ಪರ ಆರೋಪ ಮಾಡುತ್ತಿದ್ದಾರೆ.

ಅಮೆರಿಕ ಅತಿರೇಕದ ಬೇಡಿಕೆಗಳನ್ನು ಮಂಡಿಸಿದೆ! – ಇರಾನ್

ಘಾನಾ ದೇಶದಲ್ಲಿರುವ ಇರಾನ್ ರಾಯಭಾರ ಕಚೇರಿಯು ‘ಎಕ್ಸ್’ನಲ್ಲಿ ಈ ಚರ್ಚೆ ಬಗ್ಗೆ ಮಾಹಿತಿ ನೀಡುತ್ತಾ, ಇರಾನ್ ಅಮೆರಿಕದ ಬೇಡಿಕೆಗಳಿಗೆ ‘ದೊಡ್ಡ ನಿರಾಕರಣೆ’ ನೀಡಿದೆ ಎಂದು ತಿಳಿಸಿದೆ. ಅಮೆರಿಕವು ಕೇವಲ ಚರ್ಚೆಯಿಂದ ಹೊರಬರಲು ನೆಪವನ್ನು ಹುಡುಕುತ್ತಿತ್ತು ಮತ್ತು ಯಾವ ಸವಲತ್ತುಗಳನ್ನು ಯುದ್ಧದ ಮೂಲಕ ಪಡೆಯಲು ಸಾಧ್ಯವಾಗಲಿಲ್ಲವೋ, ಅವುಗಳನ್ನು ಬೇಡಿಕೆಗಳ ಮೂಲಕ ಪಡೆಯಲು ಪ್ರಯತ್ನಿಸುತ್ತಿತ್ತು. ಅಮೆರಿಕದ ನಿಯೋಗವು ಬರಿಗೈಲಿ ಮರಳಿದ್ದು, ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದೆ. ಅಮೆರಿಕದ ಅತಿರೇಕದ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಇರಾನ್ ನಿರಾಕರಿಸಿದ್ದು, ಇರಾನ್ ತನ್ನ ಹಿತಾಸಕ್ತಿಗಳಿಗಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಹೇಳಿದೆ.

ಅಮೆರಿಕದ ಶರತ್ತುಗಳನ್ನು ಇರಾನ್ ಒಪ್ಪದ ಕಾರಣ ಒಪ್ಪಂದ ಸಾಧ್ಯವಾಗಲಿಲ್ಲ! – ಅಮೆರಿಕ

ಅಮೆರಿಕದ ಉಪರಾಷ್ಟ್ರಪತಿ ಜೆಡಿ ವ್ಯಾನ್ಸ್ ಅವರು ಚರ್ಚೆಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅಮೆರಿಕದ ಶರತ್ತುಗಳನ್ನು ಇರಾನ್ ಒಪ್ಪಿಕೊಳ್ಳದ ಕಾರಣ ಯಾವುದೇ ಒಪ್ಪಂದವಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ನಾವು ಯಾವುದೇ ಒಪ್ಪಂದಕ್ಕೆ ತಲುಪಿಲ್ಲ. ಇರಾನ್ ನಮ್ಮ ಶರತ್ತುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ನಮ್ಮ ಮಿತಿಗಳೇನು, ಯಾವ ವಿಷಯಗಳ ಬಗ್ಗೆ ನಾವು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದೇವೆ ಮತ್ತು ಯಾವ ವಿಷಯಗಳ ಬಗ್ಗೆ ಹೊಂದಾಣಿಕೆ ಸಾಧ್ಯವಿಲ್ಲ ಎಂಬುದನ್ನು ನಾವು ಸಾಧ್ಯವಾದಷ್ಟು ಸ್ಪಷ್ಟಪಡಿಸಿದ್ದೇವೆ. ಬಹುಶಃ ಅವರು ನಮ್ಮ ಶರತ್ತುಗಳನ್ನು ಸ್ವೀಕರಿಸದಿರಲು ನಿರ್ಧರಿಸಿರಬಹುದು. ಸುದೀರ್ಘ ಚರ್ಚೆಯ ನಂತರ ಅಮೆರಿಕವು ಅಂತಿಮ ಮತ್ತು ಅತ್ಯುತ್ತಮ ಪ್ರಸ್ತಾವನೆಯನ್ನು ನೀಡಿತ್ತು ಮತ್ತು ಸಂಪೂರ್ಣ ಮಾತುಕತೆಯಲ್ಲಿ ಅಮೆರಿಕದ ನಿಯೋಗವು ಸಾಕಷ್ಟು ನಮ್ಯತೆಯನ್ನು ತೋರಿಸಿತ್ತು. ಇರಾನ್ ಅಣ್ವಸ್ತ್ರ ಪಡೆಯಲು ಪ್ರಯತ್ನಿಸುವುದಿಲ್ಲ ಮತ್ತು ಅಣ್ವಸ್ತ್ರಗಳನ್ನು ಶೀಘ್ರವಾಗಿ ಪಡೆಯಲು ಅಗತ್ಯವಿರುವ ಸಾಧನಗಳನ್ನು ಸಹ ಪಡೆಯುವುದಿಲ್ಲ ಎಂಬ ಸಕಾರಾತ್ಮಕ ಬದ್ಧತೆ ನಮಗೆ ಅಪೇಕ್ಷಿತವಿತ್ತು. ಇದೇ ಅಮೆರಿಕದ ಅಧ್ಯಕ್ಷರ ಮುಖ್ಯ ಗುರಿಯಾಗಿದೆ ಮತ್ತು ಈ ಮಾತುಕತೆಗಳ ಮೂಲಕ ನಾವು ಅದನ್ನೇ ಸಾಧಿಸಲು ಪ್ರಯತ್ನಿಸಿದ್ದೆವು ಎಂದು ತಿಳಿಸಿದರು.

ಒಪ್ಪಂದದ ಬಗ್ಗೆ ಯಾರಿಗೂ ನಿರೀಕ್ಷೆಯಿರಲಿಲ್ಲ! – ಇರಾನ್

ಇರಾನ್‌ ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಮಾತನಾಡಿ, ಒಂದೇ ಸಭೆಯಲ್ಲಿ ಒಪ್ಪಂದವಾಗುವುದಿಲ್ಲ ಎಂದು ಮೊದಲೇ ಊಹಿಸಬೇಕಾಗಿತ್ತು. ಇದರ ಬಗ್ಗೆ ಯಾರಿಗೂ ನಿರೀಕ್ಷೆಯಿರಲಿಲ್ಲ. ಪಾಕಿಸ್ತಾನ ಮತ್ತು ಈ ಪ್ರದೇಶದ ಇತರ ಮಿತ್ರರಾಷ್ಟ್ರಗಳೊಂದಿಗಿನ ನಮ್ಮ ಸಂಪರ್ಕ ಮತ್ತು ಸಂವಾದಗಳು ಮುಂದುವರಿಯಲಿವೆ ಎಂಬ ವಿಶ್ವಾಸ ಇರಾನ್‌ ಗೆ ಇದೆ ಎಂದು ಹೇಳಿದರು.

ಇರಾನ್ ವಿರುದ್ಧದ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ! – ನೆತನ್ಯಾಹು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡಿ, ಇರಾನ್ ವಿರುದ್ಧದ ಸೈನಿಕ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಇರಾನ್ ಅಣುಬಾಂಬ್ ತಯಾರಿಕೆಗೆ ಹತ್ತಿರವಾಗಿರುವುದರಿಂದ ದಾಳಿ ನಡೆಸಬೇಕಾಯಿತು. ಈ ದಾಳಿಗಳಿಂದ ಇರಾನ್‌ ನ ಅಣು ಕಾರ್ಯಕ್ರಮಕ್ಕೆ ದೊಡ್ಡ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ಮೇಲೆ ಟ್ರಂಪ್ ನೌಕಾ ದಿಗ್ಬಂಧನ ಹೇರಬಹುದು

ಚರ್ಚೆಯು ಯಾವುದೇ ನಿರ್ದಿಷ್ಟ ತೀರ್ಮಾನವಿಲ್ಲದೆ ಮುಕ್ತಾಯಗೊಂಡ ನಂತರ ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಲೇಖನವೊಂದನ್ನು ಬರೆದಿದ್ದಾರೆ; ಈ ಲೇಖನದಲ್ಲಿ ಇರಾನ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಹೇಳಲಾಗಿದೆ.

ಈ ಲೇಖನದ ಪ್ರಕಾರ, ಒಂದು ವೇಳೆ ಇರಾನ್ ಅಮೆರಿಕದ ಶರತ್ತುಗಳನ್ನು ಒಪ್ಪಿಕೊಳ್ಳದಿದ್ದರೆ, ಅಮೆರಿಕ ನೌಕಾ ದಿಗ್ಬಂಧನ ಹೇರಬಹುದು. ಇಂತಹ ದಿಗ್ಬಂಧನದಿಂದಾಗಿ ಇರಾನ್ ಆರ್ಥಿಕತೆಯ ಮೇಲೆ ಭಾರಿ ಒತ್ತಡ ಉಂಟಾಗಲಿದೆ ಮತ್ತು ಚೀನಾ ಹಾಗೂ ಭಾರತದಂತಹ, ಇರಾನ್ ತೈಲದ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳ ಮೇಲೆಯೂ ಇದರ ಪರಿಣಾಮ ಬೀಳಲಿದೆ. ಟ್ರಂಪ್ ಈ ಹಿಂದೆ ವೆನೆಜುವೆಲಾ ವಿರುದ್ಧವೂ ಇಂತಹದ್ದೇ ಕಾರ್ಯತಂತ್ರವನ್ನು ಬಳಸಿದ್ದರು, ಇದರಿಂದಾಗಿ ವೆನೆಜುವೆಲಾ ಆರ್ಥಿಕತೆಯು ಸಂಪೂರ್ಣವಾಗಿ ಕುಸಿದಿತ್ತು.

‘ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಈ ವೈಫಲ್ಯದ ನಂತರ ಟ್ರಂಪ್ ಆಡಳಿತದ ಮುಂದೆ ಎರಡು ಕಠಿಣ ಆಯ್ಕೆಗಳಿವೆ. ಮೊದಲನೆಯದು, ಇರಾನ್‌ ನೊಂದಿಗೆ ದೀರ್ಘ ಮತ್ತು ಕಠಿಣ ಮಾತುಕತೆಗಳನ್ನು ಮುಂದುವರಿಸುವುದು ಮತ್ತು ಎರಡನೆಯದು, ಮತ್ತೆ ಯುದ್ಧದತ್ತ ಮುಖ ಮಾಡುವುದು.

ಚರ್ಚೆ ವಿಫಲವಾದ್ದರಿಂದ ಇರಾನ್ ನಾಗರಿಕರಲ್ಲಿ ಆತಂಕ

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಅಮೆರಿಕ-ಇರಾನ್ ಚರ್ಚೆ ವಿಫಲವಾದ ನಂತರ ಅನೇಕ ಇರಾನ್ ನಾಗರಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಜನರು ಈ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು; ಏಕೆಂದರೆ ರಾಜತಾಂತ್ರಿಕ ಪರಿಹಾರ ಸಿಗಬಹುದು ಮತ್ತು ನಿರ್ಬಂಧಗಳು ದೂರವಾಗಿ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂಬ ಭರವಸೆ ಸ್ಥಳೀಯ ಜನರಿಗಿತ್ತು. ಟೆಹ್ರಾನ್ ನಿವಾಸಿ ಅಮೀರ್ ಹುಸೇನ್ ಎಂಬುವವರು ಒಂದು ಸಂದೇಶದಲ್ಲಿ ಹೀಗೆ ಬರೆದಿದ್ದಾರೆ, ‘ದೇವರೇ ನಮ್ಮನ್ನು ರಕ್ಷಿಸು. ನಾವು ಮತ್ತೆ ಯುದ್ಧದತ್ತ ಸಾಗುತ್ತಿರುವಂತೆ ಕಾಣುತ್ತಿದೆ.’

ಸ್ಫೋಟಕಗಳನ್ನು ತೆರವುಗೊಳಿಸುವ ಅಭಿಯಾನ ಆರಂಭಿಸಿದ ಅಮೆರಿಕ

ಅಮೆರಿಕದ ‘ಸೆಂಟಕಾಮ್’ ತಿಳಿಸಿರುವಂತೆ, ಅಮೆರಿಕದ ಯುದ್ಧನೌಕೆಗಳು ಸಮುದ್ರ ಮಾರ್ಗವನ್ನು ಸುರಕ್ಷಿತಗೊಳಿಸುವ ಸಿದ್ಧತೆಯಲ್ಲಿವೆ. ಇರಾನ್ ಈ ಪ್ರಮುಖ ಸಮುದ್ರ ಮಾರ್ಗದಲ್ಲಿ ಸ್ಫೋಟಕ ವಸ್ತುಗಳನ್ನು ಹರಡಿದೆ ಎಂಬ ಆರೋಪವಿದೆ.

ಇರಾನ್‌ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದರೆ ಚೀನಾ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ! – ಟ್ರಂಪ್ ನೇರ ಎಚ್ಚರಿಕೆ

ಒಂದು ವೇಳೆ ಚೀನಾ ಇರಾನ್‌ ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದರೆ, ಅದು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್‌ ಗೆ ಮುಂಬರುವ ಕೆಲವು ವಾರಗಳಲ್ಲಿ ಚೀನಾದಿಂದ ಹೊಸ ವಾಯು ರಕ್ಷಣಾ ವ್ಯವಸ್ಥೆ ಸಿಗಬಹುದೆಂಬ ವರದಿಗಳು ಪ್ರಸಾರವಾದ ನಂತರ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಚೀನಾ ಈ ವರದಿಯನ್ನು ತಿರಸ್ಕರಿಸಿದೆ. ವಾಷಿಂಗ್ಟನ್‌ ನಲ್ಲಿರುವ ಚೀನೀ ರಾಯಭಾರ ಕಚೇರಿಯು ಒಂದು ಹೇಳಿಕೆಯಲ್ಲಿ, ‘ನಾವು ಸಂಘರ್ಷದಲ್ಲಿರುವ ಯಾವುದೇ ಪಕ್ಷಕ್ಕೆ ಎಂದಿಗೂ ಶಸ್ತ್ರಾಸ್ತ್ರಗಳನ್ನು ಪೂರೈಸಿಲ್ಲ. ಅಮೆರಿಕ ಆಧಾರರಹಿತ ಆರೋಪಗಳನ್ನು ಮತ್ತು ಸಂವೇದನೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ಕರೆ ನೀಡಿದೆ.

ಶಕ್ತಿಶಾಲಿ ಎಂಬ ಭ್ರಮೆಯು ಯುದ್ಧಕ್ಕೆ ಪ್ರಚೋದನೆ ನೀಡುತ್ತಿದೆ! – ಪೋಪ್ ಲಿಯೋ ೧೪

ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಲಿಯೋ ೧೪, ಅವರು ಉಭಯ ದೇಶಗಳ ಈ ವಿವಾದದ ಬಗ್ಗೆ ಮಾತನಾಡಿ, ಅತ್ಯಂತ ಶಕ್ತಿಶಾಲಿ ಎಂಬ ಭ್ರಮೆಯು ಇರಾನ್‌ ನಲ್ಲಿ ಅಮೆರಿಕ-ಇಸ್ರೇಲ್ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದೆ.

ರಾಜಕೀಯ ನಾಯಕರು ಯುದ್ಧವನ್ನು ನಿಲ್ಲಿಸಿ ಶಾಂತಿಗಾಗಿ ಸಂವಾದ ನಡೆಸಬೇಕೆಂದು ಅವರು ಆಗ್ರಹಿಸಿದರು. ‘ಸ್ವಯಂ ಮತ್ತು ಹಣದ ಆರಾಧನೆ ಸಾಕು, ಶಕ್ತಿಯ ಪ್ರದರ್ಶನ ಸಾಕು, ಯುದ್ಧ ಸಾಕು. ಯಾವುದೇ ರೀತಿಯಲ್ಲಿ ಈ ಯುದ್ಧ ನಿಲ್ಲಬೇಕು, ಈ ಭ್ರಮೆಯು ವಿನಾಶದತ್ತ ಕೊಂಡೊಯ್ಯುತ್ತದೆ’ ಎಂದು ಅವರು ಹೇಳಿದರು.