ಸಮಾಜಮಾಧ್ಯಮಗಳ ವೇದಿಕೆ !

‘ಮಕ್ಕಳು ದೇವರ ಚರಣಗಳಲ್ಲಿನ ಹೂವುಗಳು’ ಎಂಬ ನಂಬಿಕೆ ಇದ್ದರೂ, ಮಕ್ಕಳನ್ನೇ ಗುರಿಯಾಗಿಸಿಕೊಂಡು ತಮ್ಮ ಸ್ವಾರ್ಥ ಸಾಧಿಸಲು ಕೆಲವು ದೊಡ್ಡ ಕಂಪನಿಗಳು ಸಂಚು ರೂಪಿಸುತ್ತಿವೆಯೇ ? ಎಂಬ ಪ್ರಶ್ನೆ ಇಂದು ವಿಶ್ವದಾದ್ಯಂತ ಪೋಷಕರ ಮನಸ್ಸಿನಲ್ಲಿದೆ. ಇದೇ ರೀತಿಯ ಪ್ರಶ್ನೆಯನ್ನು ಅಮೆರಿಕದ ನ್ಯಾಯಾಲಯವು ‘ಇನ್‌ಸ್ಟಾಗ್ರಾಮ್‌-ಫೇಸ್‌ಬುಕ್‌ ಪ್ಲಾಟ್‌ಫಾರ್ಮ್‌’ಗಳ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಕೇಳಿದೆ. ‘ಸಾಮಾಜಿಕ ಮಾಧ್ಯಮಗಳು ಆಕ್ಷೇಪಾರ್ಹ ವಿಷಯಗಳನ್ನು ತೋರಿಸುವ ಮೂಲಕ ಮಕ್ಕಳನ್ನು ಉದ್ದೇಶಪೂರ್ವಕವಾಗಿ ವ್ಯಸನಿ ಆಗಿಸುತ್ತಿವೆಯೇ ?’, ಎಂದು ಪ್ರಶ್ನಿಸಿ ಲಾಸ್‌ ಏಂಜಲೀಸ್‌ ನ್ಯಾಯಾಲಯವು ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಶ್ನೆಯು ಕಂಪನಿಗಳು ತಮ್ಮ ಲಾಭಕ್ಕಾಗಿ ಪೋಷಿಸುತ್ತಿರುವ ಅನೈತಿಕತೆಯನ್ನು ಬಹಿರಂಗಪಡಿಸುತ್ತದೆ. ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಮೊಕದ್ದಮೆಯಲ್ಲಿ ‘ಮೆಟಾ’ ಮತ್ತು ‘ಗೂಗಲ್’ ಕಂಪನಿಗಳ ಮೇಲೆ ಗಂಭೀರ ಆರೋಪ ಹೊರಿಸಲಾಗಿದೆ. ೨೦ ವರ್ಷದ ಯುವತಿಯೊಬ್ಬಳು ಈ ಮೊಕದ್ದಮೆಯನ್ನು ದಾಖಲಿಸಿದ್ದಾಳೆ. ಆಕೆಯ ಪ್ರಕಾರ, ಬಾಲ್ಯದಿಂದಲೇ (೬ ರಿಂದ ೯ ವರ್ಷ ವಯಸ್ಸಿನಿಂದ) ಇನ್‌ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ ಬಳಸಿದ್ದರಿಂದ ಅವಳು ಖಿನ್ನತೆ, ಆತಂಕ ಮತ್ತು ಆತ್ಮಹತ್ಯೆಯ ಆಲೋಚನೆಗಳಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇಂದು ವಿಶ್ವದಾದ್ಯಂತ ಮಕ್ಕಳ ಸ್ಥಿತಿ ಹೀಗೆಯೇ ಇದೆ.

ಭಾರತದಲ್ಲೂ ಪರಿಸ್ಥಿತಿ ಹೆಚ್ಚು ಕಡಿಮೆ ಹೀಗೆಯೇ ಇದೆ. ಬೇರೆ ವಿಷಯಗಳಿಗೆ ಹಣವಿಲ್ಲದಿದ್ದರೂ, ಪ್ರತಿಯೊಬ್ಬರ ಕೈಯಲ್ಲೂ ಇಂದು ದುಬಾರಿ ಸಂಚಾರವಾಣಿ ಇರುತ್ತದೆ. ಈ ಪರಿಸ್ಥಿತಿಗೆ ಸಾಮಾಜಿಕ ಮಾಧ್ಯಮಗಳು ಎಷ್ಟು ಕಾರಣವೋ, ಅಷ್ಟೇ ನಾವು ಕೂಡ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಮಗು ಅಳುತ್ತಿದೆ ಎಂಬ ಕಾರಣಕ್ಕೆ ಪೋಷಕರೇ ಮಕ್ಕಳ ಕೈಗೆ ಸಂಚಾರವಾಣಿ ನೀಡುತ್ತಾರೆ; ಏಕೆಂದರೆ ಅದರಿಂದ ಮಗು ಅಳು ನಿಲ್ಲಿಸುತ್ತದೆ. ಮಕ್ಕಳಿಗೆ ಊಟ ಮಾಡಿಸುವಾಗಲೂ ಸಂಚಾರವಾಣಿ ನೀಡಲಾಗುತ್ತದೆ, ಇದರಿಂದ ಮಗುವಿನ ಗಮನ ಸಂಚಾರವಾಣಿಯಲ್ಲಿ ಇರುತ್ತದೆ ಮತ್ತು ಪೋಷಕರಿಗೆ ಮಗುವನ್ನು ಒಲಿಸುವ ಶ್ರಮ ಉಳಿಯುತ್ತದೆ; ಆದರೆ ಇದು ಮಕ್ಕಳ ಭವಿಷ್ಯದ ಸಮಸ್ಯೆಗಳ ಆರಂಭ ಎಂಬುದನ್ನು ಪೋಷಕರು ಗಮನಿಸುತ್ತಿಲ್ಲ. ನಿರಂತರವಾಗಿ ಸಂಚಾರವಾಣಿಯಲ್ಲಿ ಮನರಂಜನೆಯನ್ನು ನೋಡುವುದರಿಂದ ಮಕ್ಕಳ ಕೋಮಲ ಮನಸ್ಸಿನ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಅಭ್ಯಾಸದಿಂದಾಗಿ ಈಗಾಗಲೇ ಅನೇಕ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ (ಮಾನಸಿಕವಾಗಿ ಅಥವಾ ದೈಹಿಕವಾಗಿ ದೂರವಾಗಿದ್ದಾರೆ).
ಇದಕ್ಕೆ ಪರಿಹಾರವೆಂದರೆ, ಸಾಮಾಜಿಕ ಮಾಧ್ಯಮಗಳನ್ನು ನೋಡುವುದರ ಮೇಲೆ ಮತ್ತು ಸಣ್ಣ ಮಕ್ಕಳು ಸಂಚಾರವಾಣಿ ಬಳಸುವುದರ ಮೇಲೆ ನಿಯಂತ್ರಣ ಹೇರುವುದು. ಪೋಷಕರು ಮಕ್ಕಳಿಗೆ ಸಂಚಾರವಾಣಿ ಹೊರತುಪಡಿಸಿ ಇತರ ವಿಷಯಗಳನ್ನು ಒದಗಿಸಿಕೊಟ್ಟರೆ, ಅದರ ಬಳಕೆಯನ್ನು ಕಡಿಮೆ ಮಾಡಬಹುದು. ಬೆಳೆಯುವ ವಯಸ್ಸಿನ ಮಕ್ಕಳಿಗೆ ವಿವಿಧ ಪುಸ್ತಕಗಳು, ಚದುರಂಗ ಮತ್ತು ಮೈದಾನದಲ್ಲಿ ಆಡುವ ಆಟಗಳ ಅಭ್ಯಾಸವನ್ನು ಮಾಡಿಸಬೇಕು. ಇದರಿಂದ ಅವರು ಸಂಚಾರವಾಣಿ ನೋಡುವ ಸಮಯವನ್ನು ಕಡಿಮೆ ಮಾಡಬಹುದು. ಇಂದಿನ ಧಾವಂತದ ಜೀವನದಲ್ಲಿ ಪೋಷಕರಿಗೆ ಮಕ್ಕಳಿಗಾಗಿ ಪ್ರತ್ಯೇಕ ಸಮಯ ಮೀಸಲಿಡುವುದು ಕಷ್ಟವಾಗುತ್ತಿದೆ ಮತ್ತು ವಿಭಕ್ತ ಕುಟುಂಬ ಪದ್ಧತಿಯನ್ನು ಅಳವಡಿಸಿಕೊಂಡಿರುವುದರಿಂದ, ಮಕ್ಕಳಿಗೆ ಅಜ್ಜ-ಅಜ್ಜಿಯರ ಸಹವಾಸ ಮತ್ತು ಅವರಿಂದ ಸಿಗುವ ಸಂಸ್ಕಾರಗಳು ಕಡಿಮೆಯಾಗುತ್ತಿವೆ. ಸಮರ್ಥ ಮತ್ತು ಸಂಸ್ಕಾರವಂತ ಮುಂದಿನ ಪೀಳಿಗೆಯನ್ನು ರೂಪಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ಮರೆಯಬಾರದು.

– ಶ್ರೀ. ಆಲ್ಹಾದ ಮಾಳಗಾವಕರ, ಪನವೇಲ