ಛತ್ತೀಸ್‌ಗಢ: ವಂಚನೆಯಿಂದ ಮತಾಂತರ ಮಾಡಿದರೆ ಜೀವಾವಧಿ ಶಿಕ್ಷೆ!

  • ವಿಧಾನಸಭೆಯಲ್ಲಿ ಧರ್ಮ ಸ್ವಾತಂತ್ರ್ಯ ವಿಧೇಯಕ ಅಂಗೀಕಾರ

  • ೨೫ ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ

  • ಇಂತಹ ಕಠಿಣ ನಿಯಮಗಳನ್ನು ತಂದ ಭಾರತದ ೧೦ನೇ ರಾಜ್ಯ!

ರಾಯ್‌ಪುರ (ಛತ್ತೀಸ್‌ಗಢ) – ಛತ್ತೀಸ್‌ಗಢ ವಿಧಾನಸಭೆಯಲ್ಲಿ ‘ಧರ್ಮ ಸ್ವಾತಂತ್ರ್ಯ ವಿಧೇಯಕ, ೨೦೨೬’ ಅಂಗೀಕಾರವಾಗಿದೆ. ಇದರೊಂದಿಗೆ ಕಠಿಣ ನಿಬಂಧನೆಗಳಿರುವ ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದ ಭಾರತದ ೧೦ನೇ ರಾಜ್ಯವಾಗಿ ಛತ್ತೀಸ್‌ಗಢ ಹೊರಹೊಮ್ಮಿದೆ. ಕಾನೂನುಬಾಹಿರವಾಗಿ ಮತಾಂತರ ಮಾಡುವುದು ಸಾಬೀತಾದಲ್ಲಿ ೭ ರಿಂದ ೧೦ ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ೫ ಲಕ್ಷ ರೂಪಾಯಿ ದಂಡದ ಅವಕಾಶವನ್ನು ಇದರಲ್ಲಿ ಮಾಡಲಾಗಿದೆ. ಗೃಹ ಸಚಿವ ವಿಜಯ್ ಶರ್ಮಾ ಅವರು ಮಂಡಿಸಿದ ಈ ಹೊಸ ವಿಧೇಯಕವು ೧೯೬೮ರ ಹಳೆಯ ಕಾಯ್ದೆಯ ಸ್ಥಾನವನ್ನು ಪಡೆಯಲಿದೆ. ಪ್ರಸ್ತುತ ತಾಂತ್ರಿಕ ಮತ್ತು ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಹಳೆಯ ಕಾಯ್ದೆಯು ಮಿತಿಗಳನ್ನು ಹೊಂದಿತ್ತು ಎಂದು ಸರಕಾರ ಅಭಿಪ್ರಾಯಪಟ್ಟಿದೆ.

ಕಠಿಣ ನಿಬಂಧನೆಗಳು ಹೀಗಿವೆ!

೧. ಸಂತ್ರಸ್ತ ವ್ಯಕ್ತಿಯು ಅಪ್ರಾಪ್ತ ವಯಸ್ಕ, ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ, ಶಿಕ್ಷೆಯನ್ನು ೧೦ ರಿಂದ ೨೦ ವರ್ಷಗಳವರೆಗೆ ಹೆಚ್ಚಿಸಲಾಗುವುದು. ಅಲ್ಲದೆ ಕನಿಷ್ಠ ೧೦ ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

೨. ಸಾಮೂಹಿಕ ಮತಾಂತರದ ಪ್ರಕರಣಗಳಲ್ಲಿ ೧೦ ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಅವಕಾಶವಿದ್ದು, ಕನಿಷ್ಠ ೨೫ ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.

ವಿಧೇಯಕದ ಮುಖ್ಯ ಉದ್ದೇಶ!

ಬಲವಂತವಾಗಿ, ಆಮಿಷ ಒಡ್ಡಿ ಅಥವಾ ವಂಚನೆಯಿಂದ ಮಾಡುವ ಮತಾಂತರವನ್ನು ತಡೆಯುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ. ಕಳೆದ ವಾರವಷ್ಟೇ ರಾಜ್ಯ ಸಚಿವ ಸಂಪುಟವು ಈ ವಿಧೇಯಕಕ್ಕೆ ಅನುಮೋದನೆ ನೀಡಿತ್ತು. ಸರಕಾರದ ಪ್ರಕಾರ, ೧೯೬೮ರ ಕಾಯ್ದೆಯನ್ನು ಈಗ ಹೆಚ್ಚು ಬಲಪಡಿಸಲಾಗಿದೆ. ಡಿಜಿಟಲ್ ಮಾಧ್ಯಮಗಳು ಮತ್ತು ಆರ್ಥಿಕ ಆಮಿಷಗಳಂತಹ ಹೊಸ ವಿಧಾನಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ‘ಛತ್ತೀಸ್‌ಗಢ ಧರ್ಮ ಸ್ವಾತಂತ್ರ್ಯ ಅಧಿನಿಯಮ, ೧೯೬೮’ ಜಾರಿಯಲ್ಲಿದ್ದು, ಇದನ್ನು ನವೆಂಬರ್ ೨೦೦೦ರಲ್ಲಿ ರಾಜ್ಯ ರಚನೆಯ ನಂತರ ಮಧ್ಯಪ್ರದೇಶದಿಂದ ಸ್ವೀಕರಿಸಲಾಗಿತ್ತು.

ವಿರೋಧ ಪಕ್ಷಗಳ ಆಕ್ಷೇಪ ಮತ್ತು ಸರಕಾರದ ಸ್ಪಷ್ಟನೆ

ಆಕ್ಷೇಪ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಹಾಗೂ ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯವನ್ನು ಪಡೆಯಬೇಕಿತ್ತು.

ಸ್ಪಷ್ಟನೆ: ಸಂಪೂರ್ಣ ಸಿದ್ಧತೆಯ ನಂತರವೇ ವಿಧೇಯಕವನ್ನು ತರಲಾಗಿದೆ! – ಉಪಮುಖ್ಯಮಂತ್ರಿ ವಿಜಯ್ ಶರ್ಮಾ.

ಆಕ್ಷೇಪ: ಇಂತಹ ಕಾನೂನುಗಳು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ ಮತ್ತು ಈ ಕುರಿತಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಸ್ಪಷ್ಟನೆ: ಇಂತಹ ಕಾನೂನುಗಳನ್ನು ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ತಡೆ ನೀಡಿಲ್ಲ. ಸಂವಿಧಾನದ ಪ್ರಕಾರ ಕಾನೂನು ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ! – ಉಪಮುಖ್ಯಮಂತ್ರಿ.

ಮತಾಂತರ ವಿರೋಧಿ ಕಠಿಣ ಕಾಯ್ದೆಗಳಿರುವ ರಾಜ್ಯಗಳು!

ರಾಜ್ಯ

ವರ್ಷ

ಜಾರ್ಖಂಡ್

2017

ಉತ್ತರಾಖಂಡ

2018

ಹಿಮಾಚಲ ಪ್ರದೇಶ

೨೦೧೯

ಉತ್ತರ ಪ್ರದೇಶ 

೨೦೨೦

ಮಧ್ಯಪ್ರದೇಶ

೨೦೨೧

ಗುಜರಾತ್

೨೦೨೧

ಕರ್ನಾಟಕ

೨೦೨೨

ಹರಿಯಾಣ

೨೦೨೨

ರಾಜಸ್ಥಾನ

೨೦೨೫

ಛತ್ತೀಸ್‌ಗಢ

೨೦೨೬

ಮಹಾರಾಷ್ಟ್ರ

೨೦೨೬ (ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಕಾನೂನು ಜಾರಿಯಾಗುವ ಹಂತದಲ್ಲಿದೆ)

(ಮೇಲಿನ ಎಲ್ಲಾ ರಾಜ್ಯಗಳಲ್ಲಿ ಭಾಜಪ ಅಧಿಕಾರದಲ್ಲಿದ್ದಾಗಲೇ ಈ ಕಾಯ್ದೆಗಳು ಅಂಗೀಕಾರವಾಗಿವೆ.)

(ಒಡಿಶಾ (೧೯೬೭) ಮತ್ತು ಅರುಣಾಚಲ ಪ್ರದೇಶ (೧೯೭೮) ರಾಜ್ಯಗಳಲ್ಲಿಯೂ ಈ ಕಾಯ್ದೆ ಅಸ್ತಿತ್ವದಲ್ಲಿದೆ, ಆದರೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.)

ಸಂಪಾದಕೀಯ ನಿಲುವು

  • ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ‘ಲವ್ ಜಿಹಾದ್’ ತಡೆಯಲು ಪ್ರಯತ್ನಿಸುತ್ತಿರುವ ಛತ್ತೀಸ್‌ಗಢದ ಭಾಜಪ ಸರಕಾರಕ್ಕೆ ಅಭಿನಂದನೆಗಳು! ಇಂತಹ ಕಾಯ್ದೆಗಳ ಬಗ್ಗೆ ಮೊದಲು ಹಿಂದೂಗಳಲ್ಲಿ ಜಾಗೃತಿ ಮೂಡಬೇಕು. ಹಾಗೆಯೇ, ವಂಚನೆಯಿಂದ ಅಥವಾ ಬಲವಂತವಾಗಿ ಮುಗ್ಧ ಹಿಂದೂಗಳನ್ನು ಮತಾಂತರ ಮಾಡಲು ಪ್ರಯತ್ನಿಸುವವರಲ್ಲಿ ಭಯ ಹುಟ್ಟಿಸಲು ಸರಕಾರವು ಕಟ್ಟುನಿಟ್ಟಿನ ಪ್ರಯತ್ನ ಮಾಡುವುದು ಅತ್ಯಗತ್ಯ!
  • ಭಾಜಪ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಿಂದೂಗಳ ಬಗ್ಗೆಯೂ ಸಂವೇದನಾಶೀಲತೆಯನ್ನು ಹೊಂದಿ, ಕೇಂದ್ರ ಸರಕಾರವೇ ರಾಷ್ಟ್ರವ್ಯಾಪಿ ಅತ್ಯಂತ ಕಠಿಣ ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತರುವುದು ಈಗಿನ ಕಾಲದ ಬೇಡಿಕೆಯಾಗಿದೆ!