ಯುಗಾದಿಯ ಮಹತ್ವ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ನಂಬಿಕೆಗಳು

ಭಾರತೀಯ ಮತ್ತು ಸೌರರಾಷ್ಟ್ರೀಯ ಪಂಚಾಂಗದ ಪ್ರಕಾರ ವರ್ಷದ ಮೊದಲ ತಿಂಗಳು ಚೈತ್ರ. ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದಾಗ ಭಾರತೀಯ ಸೌರ ಚೈತ್ರ ಮಾಸವು ಪ್ರಾರಂಭವಾಗುತ್ತದೆ. ಚೈತ್ರ ಮಾಸದಲ್ಲಿ ವಸಂತ ಋತುವಿನ ಆರಂಭವಾಗುತ್ತದೆ. ಹೊಸ ಶಕಸಂವತ್ಸರವು ಚೈತ್ರ ಶುಕ್ಲ ಪ್ರತಿಪದೆಯ ಯುಗಾದಿಯ ದಿನದಂದು ಆರಂಭವಾಗುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಾಲ್ಕು ನವರಾತ್ರಿಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಮೊದಲ ನವರಾತ್ರಿಯು ಚೈತ್ರ ಮಾಸದಲ್ಲಿ ಬರುತ್ತದೆ. ಚೈತ್ರ ಪ್ರತಿಪದೆಯಿಂದ ರಾಮನವಮಿಯವರೆಗೆ ಈ ನವರಾತ್ರಿಯನ್ನು ಆಚರಿಸಲಾಗುತ್ತದೆ. ಚೈತ್ರ ಮಾಸದಿಂದ ವಸಂತ ಋತುವು ಪ್ರಾರಂಭವಾಗುವುದರಿಂದ ಈ ನವರಾತ್ರಿಯನ್ನು ‘ವಾಸಂತಿ ನವರಾತ್ರಿ’ ಎಂದೂ ಕರೆಯುತ್ತಾರೆ. ಚೈತ್ರ ಮಾಸವು ಹಿಂದೂ ಹೊಸ ವರ್ಷದ ಮೊದಲ ತಿಂಗಳು. ಚೈತ್ರದಿಂದ ಶಕ ಸಂವತ್ಸರವು ಬದಲಾಗುತ್ತದೆ.

ಹಾಗಾದರೆ ಬನ್ನಿ, ಚೈತ್ರ ಮಾಸದ ಮಹತ್ವ ಮತ್ತು ಚೈತ್ರಕ್ಕೆ ಸಂಬಂಧಿಸಿದ ವಿವಿಧ ನಂಬಿಕೆಗಳ ಬಗ್ಗೆ ಈ  ಲೇಖನದಲ್ಲಿ ತಿಳಿದುಕೊಳ್ಳೋಣ.

ಸೃಷ್ಟಿಯ ನಿರ್ಮಿತಿ

ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದ ದಿನದಿಂದ ಜೀವನಮಾನವು ಪ್ರಾರಂಭವಾಯಿತು. ಆದ್ದರಿಂದ ಚೈತ್ರದಿಂದ ಹೊಸ ವರ್ಷವನ್ನು ಪರಿಗಣಿಸಲಾಗುತ್ತದೆ. ಚೈತ್ರ ಪಾಡ್ಯದಂದು ದುರ್ಗಾದೇವಿಯು ಪ್ರಕಟಗೊಂಡಳು ಮತ್ತು ದುರ್ಗಾದೇವಿಯ ಸೂಚನೆಯ ಮೇರೆಗೆ ಬ್ರಹ್ಮದೇವನು ಈ ದಿನದಂದು ಸೃಷ್ಟಿಯ ರಚನೆಯನ್ನು ಮಾಡಿದನು. ಆದ್ದರಿಂದ ಚೈತ್ರ ಪ್ರತಿಪದೆಯಿಂದ ಹಿಂದೂ ಹೊಸ ವರ್ಷವನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆಯಿದೆ. ಮಹಾನ್ ಗಣಿತಜ್ಞ ಭಾಸ್ಕರಾಚಾರ್ಯರು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಒಂದು ದಿನ, ತಿಂಗಳು ಮತ್ತು ವರ್ಷ ಎಂದು ಕಾಲಗಣನೆ ಮಾಡಿ ಪಂಚಾಂಗವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಯುಗಾದಿಗೆ ಹೆಚ್ಚಿನ ಮಹತ್ವವಿದೆ.

ಶ್ರೀರಾಮ ಮತ್ತು ಯುಗಾದಿ

ಭಗವಾನ ವಿಷ್ಣುವು ಏಳನೇ ರಾಮಾವತಾರವನ್ನು ಚೈತ್ರ ಶುಕ್ಲ ನವಮಿಯಂದು ತಾಳಿದನು. ಇದೇ ದಿನ ರಾಮನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವನವಾಸದಲ್ಲಿದ್ದಾಗ ಸುಗ್ರೀವನ ಭೇಟಿಯಾಗುತ್ತದೆ.  ವಾನರರಾಜ ವಾಲಿಯ ದೌರ್ಜನ್ಯಗಳ ಬಗ್ಗೆ ಸುಗ್ರೀವನು ಶ್ರೀರಾಮನ ಮುಂದೆ ವಿವರಿಸುತ್ತಾನೆ. ಅಂತಿಮವಾಗಿ ವಾಲಿಯನ್ನು ವಧಿಸಲು ಶ್ರೀರಾಮನು ನಿರ್ಧರಿಸುತ್ತಾನೆ. ವಾಲಿಯನ್ನು ವಧಿಸಿ ಶ್ರೀರಾಮನು ದಕ್ಷಿಣದ ಪ್ರಜೆಗಳನ್ನು ದೌರ್ಜನ್ಯಗಳಿಂದ ಮುಕ್ತಗೊಳಿಸಿದನು. ಪ್ರಜೆಗಳು ವಿಜಯ ಧ್ವಜವನ್ನು ಏರಿಸಿ ಈ ದಿನವನ್ನು ಆಚರಿಸಿದರು. ಅಂದಿನಿಂದ ಯುಗಾದಿಯನ್ನು ಆಚರಿಸುವ ಪದ್ಧತಿಯು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಆರೋಗ್ಯದಾಯಕ ಯುಗಾದಿ

ಯುಗಾದಿ ಮತ್ತು ಚೈತ್ರ ಮಾಸವನ್ನು ಹಿಂದೂ ಧರ್ಮ, ಸಂಸ್ಕೃತಿ ಮತ್ತು ಹೊಸ ವರ್ಷವಾಗಿ ಆಚರಿಸಲಾಗುತ್ತಿದ್ದರೂ, ಆರೋಗ್ಯದ ದೃಷ್ಟಿಯಿಂದಲೂ ಇದಕ್ಕೆ ಅಷ್ಟೇ ಮಹತ್ವವಿದೆ. ಯುಗಾದಿಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಆಂಧ್ರಪ್ರದೇಶದಲ್ಲಿ ಈ ದಿನ ವಿಶೇಷ ರೀತಿಯ ಪ್ರಸಾದವನ್ನು ಹಂಚಲಾಗುತ್ತದೆ. ಈ ಪ್ರಸಾದದ ಸೇವನೆಯಿಂದ ಮಾನವ ಶರೀರವು ನಿರೋಗಿಯಾಗಿರಲು ಸಹಾಯವಾಗುತ್ತದೆ. ಚರ್ಮ ರೋಗವನ್ನು ನಿವಾರಿಸುವ ಸಾಮರ್ಥ್ಯ ಇದಕ್ಕಿದೆಯೆಂದು ಹೇಳಲಾಗುತ್ತದೆ. ಮಾವಿನಹಣ್ಣಿನ ಸೇವನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರೆಯುತ್ತದೆ. ಹಾಗೆಯೇ ಬೇವಿನ ಚಟ್ನಿಯು ಶರೀರಕ್ಕೆ ಪಾಚಕವೆಂದು ಪರಿಗಣಿಸಲ್ಪಟ್ಟಿದೆ. ಬೇಸಿಗೆಯ ಶಾಖವನ್ನು ಶರೀರವು ಸಹಿಸಿಕೊಳ್ಳಲು ಅನೇಕ ರೀತಿಯ ವಿಶೇಷ ಆಹಾರವನ್ನು ಸೇವಿಸಲಾಗುತ್ತದೆ.

ವಾಸಂತಿ ನವರಾತ್ರೋತ್ಸವ

ಚೈತ್ರ ಮಾಸದಲ್ಲಿ ವಾಸಂತಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ನವರಾತ್ರಿ ಯನ್ನು ಆಚರಿಸಲಾಗುತ್ತದೆ. (ಸೌಜನ್ಯ : ಜ್ಯೋತಿಷ್ಯಂ ವಾಸ್ತು ಜ್ಯೋತಿಷ್ಯ ಕೇಂದ್ರ, ಹಾತಕಣಂಗಲೆ, ಜಿಲ್ಲೆ: ಕೊಲ್ಹಾಪುರ)