ಹಿಂದೂಗಳ ಔದಾರ್ಯ, ಮೌನ ಮತ್ತು ಉದಾಸೀನತೆಯಿಂದ ಹಿಂದೂ ಧರ್ಮಕ್ಕಾಗುತ್ತಿರುವ ಹಾನಿ !

ಹಾಸ್ಯದ ತೆರೆಮರೆಯಲ್ಲಿ ಹಿಂದೂ ದೇವತೆಗಳ ಅಪಹಾಸ್ಯ !

‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಎಂಬ ಕನ್ನಡ ಹಾಸ್ಯ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಕುರಿತು ಮಾಡಿದ ಅವಮಾನಕರ ಟಿಪ್ಪಣಿಯ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉಚ್ಚ ನ್ಯಾಯಾಲಯವು ಹೀಗೆ ಅಭಿಪ್ರಾಯಪಟ್ಟಿದೆ, ‘ಹಾಸ್ಯ ಅಥವಾ ಅಭಿವ್ಯಕ್ತಿಸ್ವಾತಂತ್ರ್ಯವು ಲಕ್ಷಾಂತರ ಜನರ ನಂಬಿಕೆಗೆ ಪದೇ ಪದೇ ನೋವುಂಟು ಮಾಡಿದಾಗ, ಅದನ್ನು ಅಸಂವೇದನಾಶೀಲ ಎಂದು ಪರಿಗಣಿಸಿ ಕ್ಷಮಿಸಲು ಸಾಧ್ಯವಿಲ್ಲ.’ ವಿಶೇಷವಾಗಿ ಈ ಅವಲೋಕನವು ಒಂದು ಆತಂಕಕಾರಿ ವಾಸ್ತವವನ್ನು ಎತ್ತಿ ತೋರಿಸುತ್ತದೆ, ಅದೆಂದರೆ ಮನೋರಂಜನೆಯ ಹೆಸರಿನಲ್ಲಿ ಸಾಮಾನ್ಯ ಜನರಲ್ಲಿರುವ ಹಿಂದೂಗಳ ನಂಬಿಕೆ ಅಥವಾ ಶ್ರದ್ಧೆಯನ್ನು ಅಪಹಾಸ್ಯ ಮಾಡಲಾಗುತ್ತಿದೆ.

೧. ಹಿಂದೂ ಧರ್ಮವನ್ನು ಹೀಯಾಳಿಸುವ ಘಟನೆಗಳ ಮರುಕಳಿಸುವಿಕೆಯ ಹಿಂದಿನ ಕಾರಣ

‘ನ್ಯಾಯಾಲಯಗಳು ಹೆಚ್ಚು ಔದಾರ್ಯವಾದಿ ಆಗಿರು ವುದರಿಂದ ಇಂತಹ ಘಟನೆಗಳು ಮುಂದುವರಿಯುತ್ತಿವೆ’ ಎಂಬ ಉಚ್ಚ ನ್ಯಾಯಾಲಯದ ಸ್ಪಷ್ಟ ಟಿಪ್ಪಣಿಯು ಇಲ್ಲಿ ಬಹಳ ಪ್ರಮುಖವಾಗಿದೆ. ಇದು ಕೇವಲ ಕಾನೂನಾತ್ಮಕ ಟಿಪ್ಪಣಿಯಲ್ಲ, ಬದಲಿಗೆ ಆತ್ಮಾವಲೋಕನದ ಕ್ಷಣವಾಗಿದೆ. ಅಪರಾಧ ಮಾಡುವವರಿಗೆ ಯಾವುದೇ ಪರಿಣಾಮದ ಭಯವಿಲ್ಲದಿದ್ದಾಗ ಅಥವಾ ಅಲ್ಪ ಶಿಕ್ಷೆಯಾದಾಗ, ಅದು ಅಂತಹ ಕೃತ್ಯಗಳನ್ನು ಪದೇ ಪದೇ ಮಾಡಲು ಪ್ರೋತ್ಸಾಹಿಸುತ್ತದೆ. ಕಾಲಾಂತರದಲ್ಲಿ, ಯಾವುದೇ ಜವಾಬ್ದಾರಿ ಇಲ್ಲದೆ ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಬಹುದು ಎಂಬ ತಪ್ಪು ತಿಳುವಳಿಕೆ ಸಮಾಜದಲ್ಲಿ ನಿರ್ಮಾಣವಾಗುತ್ತದೆ.

೨. ಹಿಂದೂಗಳ ನಂಬಿಕೆಯನ್ನು ದುರ್ಬಲಗೊಳಿಸುವ ಕಾನೂನಿನ ಅಸಮಾನ ನೀತಿ

ಕಾನೂನು ಕ್ರಮಗಳಲ್ಲಿಯೂ ಇಂತಹದ್ದೇ ಅಸಮತೋಲನ ಕಂಡುಬರುತ್ತಿದೆ. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾದಾಗ ಅಥವಾ ಅವಮಾನವಾದಾಗ ಅದೆಷ್ಟೋ ಬಾರಿ ಸ್ವಯಂಪ್ರೇರಿತ ವಾಗಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ, ಹಿಂದೂಗಳು ತಮ್ಮ ದೇವತೆಗಳ ಅವಮಾನವಾದಾಗ ಪೊಲೀಸ್ ಅಥವಾ ಆಡಳಿತಾಧಿಕಾರಿಗಳ ಬಳಿಗೆ ಹೋದರೆ, ಅವರಿಗೆ ಸಿಗುವ ಸ್ಪಂದನವು ಪದೇ ಪದೇ ವಿಳಂಬ ಅಥವಾ ಉದಾಸೀನತೆಯಿಂದ ಕೂಡಿರುತ್ತದೆ. ಕಾನೂನಿನ ಈ ಅಸಮಾನ ಬಳಕೆಯಿಂದ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಭರವಸೆಯ ಮೇಲೆ ಜನಸಾಮಾನ್ಯರ ನಂಬಿಕೆ ದುರ್ಬಲಗೊಳ್ಳುತ್ತಿದೆ.

೩. ಧರ್ಮಶಿಕ್ಷಣದ ಅಭಾವದಿಂದ ದೇವತೆಗಳ ಅಪಹಾಸ್ಯದ ಬಗ್ಗೆ ಹಿಂದೂಗಳ ಉದಾಸೀನತೆ

ಹಿಂದೂ ಸಮಾಜದಲ್ಲಿ ಇಂದು ನಡೆಯುತ್ತಿರುವುದು ಅಷ್ಟೇ ಆತಂಕಕಾರಿಯಾಗಿದೆ. ಇಂದು ಅನೇಕ ಹಿಂದೂಗಳು ತಮ್ಮ ದೇವತೆಗಳನ್ನು ಅಪಹಾಸ್ಯ ಮಾಡಿದಾಗ, ಅದನ್ನು ಗುರುತಿಸುವಲ್ಲಿ, ಅದರ ವಿರುದ್ಧ ಪ್ರಶ್ನೆ ಕೇಳುವಲ್ಲಿ ಅಥವಾ ಪ್ರತಿಕ್ರಿಯಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ಹೆಚ್ಚುತ್ತಿರುವ ಉದಾಸೀನತೆಗೆ ಆಳವಾದ ಕಾರಣವೆಂದರೆ, ದೀರ್ಘಕಾಲದಿಂದ ಧರ್ಮಶಿಕ್ಷಣದ ಕೊರತೆ ಇರುವುದು. ಜನರು ತಮ್ಮ ಆಧ್ಯಾತ್ಮಿಕ ಬೇರುಗಳಿಂದ ದೂರವಾದಾಗ, ಸಹಜವಾಗಿಯೇ ಧರ್ಮದ ಬಗೆಗಿನ ಅವರ ಸಂವೇದನಾಶೀಲತೆ ಕಡಿಮೆಯಾಗುತ್ತದೆ.

೪. ಸ್ವಾತಂತ್ರ್ಯೋತ್ತರ ಶಿಕ್ಷಣ ಪದ್ಧತಿಯಿಂದಾಗಿ ಧರ್ಮ ಮತ್ತು ಸಂಸ್ಕೃತಿಯಿಂದ ದೂರವಾದ ಹಿಂದೂಗಳು !

ಶತಮಾನಗಳ ಕಾಲ ಗುರುಕುಲ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದ್ದ ಧಾರ್ಮಿಕ ಶಿಕ್ಷಣವು ಹಿಂದೂ ಸಮಾಜವನ್ನು ಸುಭದ್ರವಾಗಿ ಹಿಡಿದಿಟ್ಟುಕೊಳ್ಳುವ ಕಾರ್ಯ ಮಾಡುತ್ತಿತ್ತು. ತಲೆಮಾರುಗಳಿಂದ ಜನರನ್ನು ಅವರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಿಂದ ದೂರ ಕೊಂಡೊಯ್ಯುತ್ತಿರುವ ಸ್ವಾತಂತ್ರ್ಯೋತ್ತರ ಶಿಕ್ಷಣವು ಆ ವ್ಯವಸ್ಥೆಯನ್ನು ನಾಶಪಡಿಸಿದ್ದರಿಂದ ಒಂದು ಶೂನ್ಯತೆ ನಿರ್ಮಾಣವಾಗಿದೆ. ವಿವಿಧ ರಾಜ್ಯ ಸರಕಾರಗಳು ಹಿಂದೂ ದೇವಾಲಯಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆದಿರುವುದರಿಂದ, ಒಂದು ಕಾಲದಲ್ಲಿ ಸಾಮೂಹಿಕ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿದ್ದ ಸಂಸ್ಥೆಗಳು ಮತ್ತಷ್ಟು ಕ್ಷೀಣಿಸಿವೆ.

ಧರ್ಮಕ್ಕಾಗಿ ನಿಲ್ಲುವವರನ್ನು ಧರ್ಮವು ರಕ್ಷಿಸುತ್ತದೆ


‘ಧರ್ಮೋ ರಕ್ಷತಿ ರಕ್ಷಿತಃ |’, ಈ ತತ್ತ್ವ್ವವು ಕೇವಲ ಘೋಷಣೆಯಲ್ಲ, ಅದೊಂದು ಜೀವಂತ ಸತ್ಯವಾಗಿದೆ. ಧರ್ಮವನ್ನು ರಕ್ಷಿಸುವವರನ್ನು ಧರ್ಮವು, ಅಂದರೆ ಈಶ್ವರನು ರಕ್ಷಿಸುತ್ತಾನೆ. ನಾವು ಧರ್ಮಕ್ಕಾಗಿ ಎದ್ದು ನಿಲ್ಲಲು ಸಂಕೋಚಪಟ್ಟರೆ, ಧರ್ಮವು ನಮಗಾಗಿ ನಿಲ್ಲುತ್ತದೆ ಎಂದು ನಾವು ನಿಜವಾಗಿಯೂ ನಿರೀಕ್ಷಿಸಲು ಸಾಧ್ಯವೇ ?

೫. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಂಬಿಕೆಯ ಮೇಲೆ ದಾಳಿ

ಅಭಿವ್ಯಕ್ತಿ ಸ್ವಾತಂತ್ರ್ಯವು ಜವಾಬ್ದಾರಿಯನ್ನು ಒಳಗೊಂಡಿರುತ್ತದೆ. ಹಾಸ್ಯವು ಸಾಮರಸ್ಯವನ್ನು ಬೆಳೆಸಬೇಕೇ ಹೊರತು ಯಾರಿಗೂ ಗಾಯ ಮಾಡಿ ನೋವುಂಟು ಮಾಡಬಾರದು. ಯಾವುದೇ ಮಹತ್ವ ನೀಡದೆ ಜನರ ನಂಬಿಕೆ ಅಥವಾ ಶ್ರದ್ಧೆಯನ್ನು ಪದೇ ಪದೇ ಹೀಯಾಳಿಸಿದಾಗ, ಅಲ್ಲಿ ನಂಬಿಕೆ ಮತ್ತು ಸೌಹಾರ್ದತೆ ನಾಶವಾಗುತ್ತದೆ.

೬. ಧರ್ಮದ ಮೇಲಿನ ಟೀಕೆಗಳ ಬಗ್ಗೆ ವಿವೇಚನೆಯಿಂದ ಕಾರ್ಯನಿರ್ವಹಿಸುವುದು ಅಗತ್ಯ !

ಹಿಂದೂಗಳು ಕೇವಲ ಆಕ್ರೋಶ ವ್ಯಕ್ತಪಡಿಸುವುದರಿಂದ ಪ್ರಯೋಜನವಿಲ್ಲ, ಬದಲಿಗೆ ವಿವೇಚನೆಯಿಂದ ಸುಧಾರಣೆಗಳನ್ನು ಮಾಡುವುದು ಅಗತ್ಯವಾಗಿದೆ. ಧರ್ಮಶಿಕ್ಷಣವನ್ನು ಪುನಃ ಸ್ಥಾಪಿಸುವುದು, ಕಾನೂನಿನ ಸಮಾನ ಅನುಷ್ಠಾನವನ್ನು ಖಚಿತ ಪಡಿಸಿಕೊಳ್ಳುವುದು ಮತ್ತು ಹಿಂದೂ ಸಮಾಜದಲ್ಲಿ ನಂಬಿಕೆ ಯನ್ನು ಪುನರ್ನಿರ್ಮಿಸುವುದು ಇಂದಿನ ಅನಿವಾರ್ಯ ಹೆಜ್ಜೆಗಳಾಗಿವೆ. ಈ ನಿಟ್ಟಿನಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆಯು ಕೇವಲ ಪ್ರಾಬಲ್ಯದ ಬಗ್ಗೆಯಲ್ಲ, ಅದು ಧರ್ಮ, ನ್ಯಾಯ ಮತ್ತು ಘನತೆಯನ್ನು ರಕ್ಷಿಸುವ ಬಗ್ಗೆಯಾಗಿದೆ. ಇದರಿಂದ ಭಾರತವು ಮತ್ತೊಮ್ಮೆ ವಿಶ್ವಗುರುವಿನಂತೆ ಸಮತೋಲನ, ಬುದ್ಧಿವಂತಿಕೆ ಮತ್ತು ಜವಾಬ್ದಾರಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.

– ಶ್ರೀ. ಅರವಿಂದ ಬಾಳಿಗಾ, ಬೆಂಗಳೂರು (೧೩.೨.೨೦೨೬)