ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಮರ್ಥ ರಾಮದಾಸ ಸ್ವಾಮಿ ಅಪೇಕ್ಷಿಸಿದ್ದ ರಾಜಕಾರಣ

ಹಿಂದೂ ಧರ್ಮದಲ್ಲಿ ೪ ಪುರುಷಾರ್ಥಗಳನ್ನು ಹೇಳಲಾಗಿದೆ. ೧. ಧರ್ಮ ೨. ಅರ್ಥ ೩. ಕಾಮ ಮತ್ತು ೪. ಮೋಕ್ಷ. ಇಷ್ಟು ಸುಂದರವಾದ ವ್ಯವಸ್ಥಾಪನೆಯು ಬೇರೆ ಯಾವುದೇ ಸಂಸ್ಕೃತಿಯಲ್ಲಿ ಇಲ್ಲ. ಧರ್ಮ ಮತ್ತು ಮೋಕ್ಷ ಈ ಪುರುಷಾರ್ಥಗಳು ವೈಯಕ್ತಿಕವಾಗಿದ್ದು ಅದರ ಜೋಪಾಸನೆಯನ್ನು ಸಾಧು-ಸಂತರು ಮಾಡುತ್ತಿರುತ್ತಾರೆ. ಅರ್ಥ ಮತ್ತು ಕಾಮ ಎಂಬ ಈ ೨ ಪುರುಷಾರ್ಥಗಳು ಸಾಮಾಜಿಕ ಅಥವಾ ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ್ದು ಅದನ್ನು ರಾಜ್ಯಾಡಳಿತವು ನಿಯಂತ್ತಿಸುತ್ತಿರುತ್ತದೆ. ಇದೊಂದು ರೀತಿಯ ಶ್ರಮವಿಭಜನೆಯಾಗಿದೆ. ಅರ್ಥ ಮತ್ತು ಕಾಮಕ್ಕೆ ಸಂಬಂಧಿಸಿದಂತೆ ಮನುಷ್ಯನು ಪ್ರಮಾದ (ತಪ್ಪು) ಮಾಡಬಹುದು. ಅವನು ಲೋಭಕ್ಕಾಗಿ ಕಾನೂನುಬಾಹಿರ ಮಾರ್ಗದಿಂದ ಇತರರ ಸಂಪತ್ತಿನ ಲೂಟಿ ಮಾಡಬಹುದು ಅಥವಾ ವಾಸನೆಗಾಗಿ ಅನ್ಯ ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಬಹುದು. ಇಂತಹ ಸಮಯದಲ್ಲಿ ಆಡಳಿತಗಾರರು ಪ್ರಮಾದ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು, ಹಾಗೆಯೇ ಎಲ್ಲ ನಾಗರಿಕರಿಗೆ ಧನಾರ್ಜನೆ ಮಾಡಲು ಸಾಧ್ಯವಾಗುವಂತೆ, ಸುರಕ್ಷಿತವಾಗಿ ಬದುಕಲು ಸಾಧ್ಯವಾಗುವಂತೆ ಆಡಳಿತಗಾರರು ನೋಡಿಕೊಳ್ಳಬೇಕಿದೆ. ಸಂತರು ಮನುಷ್ಯರನ್ನು ಧರ್ಮಾಚರಣಿ ಮತ್ತು ಸದಾಚಾರಿಗಳನ್ನಾಗಿಸಿ ರಾಜ್ಯ ಸರಕಾರಕ್ಕೆ ಪೂರಕವಾದ ಕೆಲಸವನ್ನು ಮಾಡುತ್ತಿರುತ್ತಾರೆ. ಇದರ ಅರ್ಥ ಧರ್ಮಕಾರಣ ಮತ್ತು ರಾಜಕಾರಣ ಇವು ಪರಸ್ಪರ ಪೂರಕವಾಗಿದ್ದು ಅವುಗಳ ಸಂಬಂಧವು ದೃಢವಾಗಿದೆ.

೧. ಸಮಾಜಮನಸ್ಸನ್ನು ಸಿದ್ಧಗೊಳಿಸಲು ಸಮರ್ಥರು ಹೇಳಿದ ಅಂಶಗಳು
ಸಮರ್ಥರ ಕಾಲದಲ್ಲಿ ರಾಜಪ್ರಭುತ್ವವಿತ್ತು. ‘ಯಥಾ ರಾಜಾ ತಥಾ ಪ್ರಜಾ |’, ಅಂದರೆ ‘ರಾಜ ಹೇಗೋ, ಪ್ರಜೆಗಳೂ ಹಾಗೆ’, ಈ ಗಾದೆಯಂತೆ ಸಮಾಜದ ಭವಿಷ್ಯವು ರಾಜನ ಮೇಲೆ ಅವಲಂಬಿಸಿತ್ತು. ಸಮರ್ಥರ ಕಾಲದ (ಛತ್ರಪತಿ ಶಿವಾಜಿ ಮಹಾರಾಜರಿಗಿಂತ ಮೊದಲಿಗರು) ರಾಜ್ಯಕರ್ತರು ಚಾರಿತ್ರ್ಯಹೀನ ಮತ್ತು ಹಿಂದೂಧರ್ಮ ದ್ವೇಷಿಗಳಾಗಿದ್ದರು. ಅವರು ಅರ್ಥ ಮತ್ತು ಕಾಮ ಎಂಬ ಎರಡೂ ಪುರುಷಾರ್ಥಗಳನ್ನು ತಮ್ಮ ಅಧೀನವಾಗಿಸಿಕೊಂಡಿದ್ದರು. ‘ಆಡಳಿತಗಾರರು ಒಂದು ವೇಳೆ ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ, ಸಂತರು ಅವರ ಮೇಲೆ ಅಂಕುಶವಿಡಬೇಕು’, ಎನ್ನುವುದು ಹಿಂದೂ ಪರಂಪರೆಯಾಗಿದೆ; ಆದ್ದರಿಂದಲೇ ಸಮರ್ಥರು ತಮ್ಮ ಸಂಪ್ರದಾಯದಲ್ಲಿ ರಾಜಕಾರಣವನ್ನು ಸಮಾವೇಶಗೊಳಿಸಿದರು. ರಾಜನು ಒಂದು ವೇಳೆ ಸುಧಾರಿಸದಿದ್ದರೆ, ಹೊಸ ರಾಜನನ್ನು ತಯಾರಿಸುವುದು ಅನಿವಾರ್ಯವಾಗುತ್ತದೆ. ಅದಕ್ಕಾಗಿ ಸಮಾಜ ಮನಸ್ಸನ್ನು ಸಿದ್ಧಗೊಳಿಸಬೇಕಾಗುತ್ತದೆ. ಸಮರ್ಥರು ಕೀರ್ತನೆಯ ಮಾಧ್ಯಮದಿಂದ ಸಮಾಜದ ಮನಸ್ಸನ್ನು ರೂಪಿಸಿದರು; ಆದ್ದರಿಂದಲೇ ಅವರು ಹೇಳುತ್ತಾರೆ,
ಮುಖ್ಯ ಹರಿಕಥಾ ನಿರೂಪಣ | ದುಸರೇಂ ತೇ ರಾಜಕರಣ |
ತಿಸರೇಂ ತೇಂ ಸಾವಧಪಣ | ಸರ್ವವಿಷಯಿಂ ||
– ದಾಸಬೋಧ, ದಶಕ ೧೧, ಸಮಾಸ ೫, ದ್ವಿಪದಿ ೪ (ಮರಾಠಿ)
ಅರ್ಥ : ಜನಸಂಗ್ರಹ ಮಾಡುವವರಲ್ಲಿ ಯಾವ ಲಕ್ಷಣಗಳಿರಬೇಕು ಎಂಬುದನ್ನು ಅವರು ಇಲ್ಲಿ ಹೇಳುತ್ತಿದ್ದಾರೆ. ಅವರಿಗೆ ಉತ್ತಮ ರೀತಿಯಲ್ಲಿ ಹರಿಕಥೆ ಮತ್ತು ಅಧ್ಯಾತ್ಮದ ನಿರೂಪಣೆ ಮಾಡಲು ಬರಬೇಕು. ಎರಡನೆಯದಾಗಿ ಅವರಲ್ಲಿ ರಾಜತಾಂತ್ರಿಕತೆ ಇರಬೇಕು ಮತ್ತು ಮೂರನೆಯದಾಗಿ ಎಲ್ಲ ವಿಷಯಗಳಲ್ಲೂ ಜಾಗರೂತಕತೆ ಇರಬೇಕು.
ಚೌಥಾ ಅತ್ಯಂತ ಸಾಕ್ಷಪ | ಫೇಡಾವೇ ನಾನಾ ಆಕ್ಷಪ |
ಅನ್ಯಾಯೇ ಥೋರ ಅಥವಾ ಅಲ್ಪ | ಕ್ಷ್ಮಾ ಕರೀತ ಜಾವೇ ||
– ದಾಸಬೋಧ, ದಶಕ ೧೧, ಸಮಾಸ ೫, ದ್ವಿಪದಿ ೫ (ಮರಾಠಿ)
ಅರ್ಥ : ನಾಲ್ಕನೆಯದಾಗಿ ಉತ್ತಮ ಅಧ್ಯಯನವಿರಬೇಕು ಮತ್ತು ಇತರರ ಆಕ್ಷೇಪಗಳನ್ನು ನಿವಾರಿಸಲು ಅವರಿಗೆ ಸಾಧ್ಯವಾಗಬೇಕು, ಹಾಗೆಯೇ ಇತರರ ಸಣ್ಣ-ದೊಡ್ಡ ಅನ್ಯಾಯಗಳನ್ನು ಕ್ಷಮಿಸುವ ವೃತ್ತಿಯು ಅವರಲ್ಲಿರುವುದು ಅವಶ್ಯಕವಾಗಿದೆ.
೨. ಸಮರ್ಥರ ರಾಜಕಾರಣ
ರಾಜಕಾರಣವು ವ್ಯವಸ್ಥಾಪನೆಯಲ್ಲಿ ಅನಿವಾರ್ಯವಾದ ವಿಷಯವಾಗಿದೆ. ಯಾವುದಾದರೂ ಸಂಘಟನೆಯನ್ನು ನಡೆಸ ಬೇಕೆಂದರೆ ರಾಜಕಾರಣ ಬಂದೇ ಬರುತ್ತದೆ. ಸುದೈವದಿಂದ ಆ ಕಾಲದಲ್ಲಿ ಚಾರಿತ್ರ್ಯಸಂಪನ್ನರೂ ಮತ್ತು ರಾಷ್ಟ್ರದ ಮೇಲೆ ಅತೀವ ಪ್ರೇಮವುಳ್ಳವರೂ ಆದ ಛತ್ರಪತಿ ಶಿವಾಜಿ ಮಹಾರಾಜರಂತಹ ತೇಜಸ್ವಿ ರಾಜರು ನಮಗೆ ಲಭಿಸಿದ್ದರು. ಅನೇಕ ಬಾರಿ ಪರ್ಯಾಯ ಸರಕಾರವಾಗಲಿ ಅಥವಾ ಪರ್ಯಾಯ ರಾಷ್ಟ್ರೀಯ ನೇತೃತ್ವವಾಗಲಿ ಇಲ್ಲದಿದ್ದಾಗ, ಅಸ್ತಿತ್ವದಲ್ಲಿರುವ ದಬ್ಬಾಳಿಕೆಯ ಆಡಳಿತವನ್ನೇ ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯ ಕಹಿ ಅನುಭವವನ್ನು ನಾವು ಕಳೆದ ಅನೇಕ ವರ್ಷಗಳಿಂದ ಪಡೆದಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರಿಂದಾಗಿ ಸಮರ್ಥರ ಕೆಲಸ ಸುಲಭವಾಯಿತು. ಸಮರ್ಥರಿಗೆ ರಾಜಕೀಯ ಅಪಥ್ಯವಾಗಿರಲಿಲ್ಲ. ಭೌತಿಕ ಜೀವನವನ್ನು ಸಮೃದ್ಧಗೊಳಿಸಬೇಕಾದರೆ ಸಾಮಾನ್ಯ ಜನತೆಯು ರಾಜಕೀಯ ದೃಷ್ಟಿಯಿಂದ ಜಾಗೃತವಾಗಿರಬೇಕು, ಹಾಗೆಯೇ ಆಧ್ಯಾತ್ಮಿಕ ಜೀವನವನ್ನು ಸಂಪನ್ನಗೊಳಿಸಲು ಭಗವಂತನಿಗೆ ಶರಣಾಗಬೇಕು. ಇದರ ಅರ್ಥ ರಾಜಕಾರಣದ ಕುರಿತಾದ ಸಂಕಲ್ಪನೆಯು ಸಮರ್ಥರ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು.
೩. ಮೂಢರಾಜ ಮತ್ತು ಸತರ್ಕ ರಾಜನ ಬಗ್ಗೆ ಸಮರ್ಥರು ಹೇಳಿದ ಅಂಶಗಳು ಮೂಢರಾಜ ಮತ್ತು ಸತರ್ಕ ರಾಜನಿಗೆ ಸಂಬಂಧಿಸಿದಂತೆ ಸಮರ್ಥರು ಹೇಳುತ್ತಾರೆ,
ಅ. ರಾಜನು ಒಂದು ವೇಳೆ ಜಾಣನಾಗಿಲ್ಲದಿದ್ದರೆ, ಅದು ಜನರ ತಪ್ಪಾಗಿದೆ.
ಆ. ಜನರು ಸಂಘಟಿತರಾಗಿ ಒಬ್ಬ ಉತ್ತಮ ರಾಜನನ್ನು ಸಿದ್ಧಗೊಳಿಸಬೇಕು.
ಇ. ಆಡಳಿತಗಾರರು ಚಾಡಿಮಾತುಗಳಿಗೆ ಕಿವಿಕೊಡುವವರಾಗಿರ ಬಾರದು. ಒಂದು ವೇಳೆ ಹಾಗಾದಲ್ಲಿ ಭ್ರಷ್ಟರು ರಾಜನ ದಾರಿ ತಪ್ಪಿಸಿ ಇಡೀ ವ್ಯವಸ್ಥೆಯನ್ನೇ ಹಾಳುಗೆಡವುತ್ತಾರೆ.
ಈ. ಯಾವ ರೀತಿ ಒಬ್ಬ ದನ ಮೇಯಿಸುವವನು ತನ್ನ ದನ ಕರುಗಳ ಕಾಳಜಿ ವಹಿಸುತ್ತಾನೆಯೋ, ಅದೇ ರೀತಿ ರಾಜನು ಎಲ್ಲ ಪ್ರಜೆಗಳ ಕಾಳಜಿ ವಹಿಸಬೇಕು.
ಉ. ರಾಜನು ಜನರಿಗೆ ಕೇವಲ ಭೌತಿಕ ಸಮೃದ್ಧಿ ನೀಡಿ ನಿಲ್ಲಬಾರದು, ಬದಲಾಗಿ ಪ್ರಜೆಗಳು ಭಕ್ತಿಮಾರ್ಗವನ್ನು ಹಿಡಿದು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುತ್ತಿದ್ದಾರೆಯೇ ಎಂಬುದನ್ನು ನೋಡಬೇಕು. ಅದಕ್ಕಾಗಿ ಅವರು ಹೇಳುತ್ತಾರೆ,
‘ಐಸಾ ಪಾಹಿಜೇ ಕಿಂ ರಾಜಾ | ಕೈಪಕ್ಷೀ ಪರಮಾರ್ಥೀ ||’
(ದಾಸಬೋಧ, ದಶಕ ೧೯, ಸಮಾಸ ೯, ದ್ವಿಪದಿ ೨೫), ಅಂದರೆ ‘ರಾಜನು ಪರಮಾರ್ಥದ ಬೆಂಬಲಿಗನಾಗಿರಬೇಕು.’
‘ರಾಜನು ಧಾರ್ಮಿಕನಾಗಿದ್ದರೆ ಅವನು ನೀತಿವಂತನಾಗಿರುತ್ತಾನೆ. ಇಂತಹ ರಾಜನು ರಾಷ್ಟ್ರೀಯ ಸಂಪತ್ತನ್ನು ವ್ಯವಸ್ಥಿತವಾಗಿ ರಕ್ಷಿಸಬಲ್ಲನು. ಧಾರ್ಮಿಕನಾಗಿದ್ದರೂ ಯಾರು ಅನೈತಿಕನಾಗಿರುತ್ತಾನೋ, ಅವನ ಧಾರ್ಮಿಕತೆಯು ನಕಲಿಯಾಗಿದೆ, ಇಂತಹ ಭ್ರಷ್ಟ ಜನರಿಗೆ ಪ್ರಸಂಗ ಬಂದಲ್ಲಿ ದೇಹದಂಡನೆ ವಿಧಿಸಬೇಕು’, ಎಂದು ಸಮರ್ಥರು ನಿರ್ಭಯವಾಗಿ ಹೇಳುತ್ತಾರೆ.
೪. ರಾಜಧರ್ಮ ನಿರೂಪಣೆ
ಭಾರತೀಯ ಪರಂಪರೆಯಲ್ಲಿ ‘ಧರ್ಮ’ ಎಂಬ ಶಬ್ದವನ್ನು ‘ಕರ್ತವ್ಯ’ ಅಥವಾ ‘ವಿಹಿತ ಕರ್ಮ’ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಸ್ವಧರ್ಮ ಎಂದರೆ ನನ್ನ ಕರ್ತವ್ಯ ಅಥವಾ ನನಗೆ ವಹಿಸಿಕೊಟ್ಟ ಕೆಲಸ. ಭಾರತೀಯ ಸಂಸ್ಕೃತಿಯು ಹಕ್ಕುಪ್ರಧಾನವಾಗಿರದೆ ಕರ್ತವ್ಯಪ್ರಧಾನವಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ನಿಭಾಯಿಸಿದರೆ ಅನ್ಯರಿಗೆ (ಇತರರಿಗೆ) ಅವರ ಹಕ್ಕುಗಳು ಲಭಿಸುತ್ತವೆ. ರಾಜಧರ್ಮ ಎಂದರೆ ರಾಜನ ಕರ್ತವ್ಯ. ಈ ಪ್ರಕರಣದಲ್ಲಿ ಸಮರ್ಥರು ರಾಜ್ಯದ ವ್ಯವಸ್ಥಾಪನೆಯನ್ನೇ ಹೇಳುತ್ತಿದ್ದಾರೆ ಎಂಬಂತಿದೆ. ರಾಜನ ಕರ್ತವ್ಯಕ್ಕೆ ಸಂಬಂಧಿಸಿದಂತೆ ಅವರ ಮುಂದಿನ ಅಂಶಗಳನ್ನು ಗಮನಿಸಿ –
ಅ. ರಾಜನು ಶಸ್ತ್ರ ಮತ್ತು ಸೈನ್ಯದ ಸಾಕಷ್ಟು ಸಂಗ್ರಹ ಮಾಡಬೇಕು. ಪಾಕಿಸ್ತಾನದಂತಹ ಸಣ್ಣ ರಾಷ್ಟ್ರವು ಕಳೆದ ೭೮ ವರ್ಷಗಳಿಂದ ಸತತವಾಗಿ ಭಾರತದ ಮೇಲೆ ಆಕ್ರಮಣ ಮಾಡುತ್ತಿದೆ. ಇದಕ್ಕೆ ಕಾರಣ ನಾವು ಪೂರಕ ಪ್ರಮಾಣದಲ್ಲಿ ಸೈನ್ಯದ ಭರ್ತಿ ಮಾಡಿಲ್ಲ ಮತ್ತು ನಮ್ಮ ಬಳಿ ಅಧುನಿಕ ಶಸ್ತ್ರಗಳಿಲ್ಲ. (ಈಗ ಪರಿಸ್ಥಿತಿ ಬದಲಾಗಿದೆ. – ಸಂಪಾದಕರು) ‘ಜನಸಂಖ್ಯೆಯ ಶೇ. ೨ ರಷ್ಟು ಸೈನ್ಯ ಇರಬೇಕು,’ ಎಂಬ ಸ್ವಾತಂತ್ರ್ಯವೀರ ಸಾವರಕರ ಅವರ ಸೂಚನೆಯನ್ನು ಇಂದಿನವರೆಗೂ ನಾವು ಕಾರ್ಯರೂಪಕ್ಕೆ ತಂದಿಲ್ಲ.
ಆ. ರಾಜನು ವಿಶ್ವಾಸಘಾತಕ ವ್ಯಕ್ತಿಗಳನ್ನು ಮತ್ತು ಭಯೋತ್ಪಾದಕರನ್ನು ತಕ್ಷಣವೇ ಕೊಲ್ಲಬೇಕು. ಹಾವಿಗೆ ಹಾಲು ಕುಡಿಸುವುದರಲ್ಲಿ ಏನೂ ಅರ್ಥವಿಲ್ಲ.
ಇ. ರಾಜನು ಪ್ರತಿಯೊಂದು ಬಾರಿ ಸ್ವತಃ ಯುದ್ಧಕ್ಕೆ ಹೋಗಬಾರದು. ರಾಜನೇ ಮರಣ ಹೊಂದಿದರೆ ಇಡೀ ವ್ಯವಸ್ಥೆಯು ಅಸ್ತವ್ಯಸ್ತವಾಗುತ್ತದೆ; ಆದ್ದರಿಂದ ಛತ್ರಪತಿಯವರು ಬಹಳ ಕಡಿಮೆ ಯುದ್ಧಗಳನ್ನು ಸ್ವತಃ ಹೋರಾಡಿದರು. ಅನೇಕ ಕಡೆ ಅವರು ಶ್ರೇಷ್ಠ ಯೋಧರನ್ನು ಕಳುಹಿಸಿದರು.
ಈ. ರಾಜನು ಹೊಸ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಆಲಸ್ಯ ಮಾಡಬಾರದು. ಅವನು ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇರಬೇಕು.
ಉ. ಪರಾಕ್ರಮಿ ಜನರ ಸುಂದರ ಸಂಘಟನೆಯನ್ನು ಅವನು ಸಿದ್ಧಪಡಿಸಬೇಕು.
ಊ. ಸಂಘಟನೆಯಲ್ಲಿರುವ ಜನರಿಗೆ ಶಿಸ್ತನ್ನು ಕಲಿಸಬೇಕು; ಆದರೆ ಅವರನ್ನು ಒತ್ತಡಕ್ಕೆ ಸಿಲುಕಿಸಬಾರದು. ಜನರು ದೂರವಾಗದಂತೆ ಅಥವಾ ಸಂಘಟನೆಯು ಒಡೆಯದಂತೆ ಅವನು ಕಾಳಜಿ ವಹಿಸಬೇಕು.
ಸಮರ್ಥರ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಈ ಎಲ್ಲ ಗುಣಗಳಿಂದ ಕೂಡಿದ್ದರು. ಸಮರ್ಥರು ಬೋಧಿಸಿದ ರಾಜಧರ್ಮವು ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯೇ ಆಗಿದೆ. ಇಂದಿನ ಆಡಳಿತಗಾರರೂ ಈ ಸೂಚನೆಗಳನ್ನು ನೆನಪಿನಲ್ಲಿಡಬೇಕು
– ಸಮರ್ಥಭಕ್ತ ಪೂ. ಸುನೀಲ ಚಿಂಚೋಲಕರ, ಪುಣೆ (ಆಧಾರ :ಗ್ರಂಥ ‘ಸಮರ್ಥ ರಾಮದಾಸರ ವ್ಯವಸ್ಥಾಪನ’, ಸೆಪ್ಟೆಂಬರ್ ೨೦೦೭)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’