ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !

೨೭/೬ ರಿಂದ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿನ ಮುಂದಿನ ಕೆಲವು ಭಾಗದಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ, ಈ ಲೇಖನದಲ್ಲಿ ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ (ಲೇಖನ ೬)

ಗಾಯನ ಕಲೆಯ ಆಧ್ಯಾತ್ಮಿಕ ಇತಿಹಾಸ !

‘ಗಾಯನ’ ಎಂದ ತಕ್ಷಣ ನಮ್ಮ ಕಣ್ಮುಂದೆ ಸಾಮಾನ್ಯವಾಗಿ ‘ಶಾಸ್ತ್ರೀಯ ಗಾಯನ, ಭಜನೆ ಅಥವಾ ವಿವಿಧ ಪ್ರಕಾರದ ಗೀತೆಗಳು’ ಇವೇ ಬರುತ್ತವೆ; ಆದರೆ ಭಾರತೀಯ ಸಂಗೀತ ಶಾಸ್ತ್ರದಲ್ಲಿ ಸಂಗೀತವನ್ನು ಬಹಳ ವ್ಯಾಪಕ ಸ್ತರದಲ್ಲಿ ನೋಡಲಾಗುತ್ತದೆ. ‘ನಾದ’ವು ಸಂಗೀತದ ಅಡಿಪಾಯವಾಗಿದೆ. ಆದ್ದರಿಂದ, ಸಂಗೀತದ ಮಾಧ್ಯಮದಿಂದ ಮಾಡಲಾಗುವ ಉಪಾಸನೆಯನ್ನು ‘ನಾದೋಪಾಸನೆ’ ಎಂದೂ ಕರೆಯುತ್ತಾರೆ.

ಲೇಖನದಲ್ಲಿನ ಕೆಲವು ಸಂಜ್ಞೆಗಳ ಅರ್ಥ

೧. ಮಾತ್ರಾ : ತಾಳದ ಪ್ರತಿಯೊಂದು ಭಾಗಕ್ಕೆ ‘ಮಾತ್ರಾ’, ಎಂದು ಕರೆಯುತ್ತಾರೆ.

೨. ತಾಳ : ನಿಯಮಬದ್ಧ ಮಾತ್ರಾಗಳ ಸಮೂಹ.

೩. ಲಯ : ಲಯ ಎಂದರೆ ಗತಿ. ಎರಡು ಮಾತ್ರಾಗಳ ನಡುವಿನ ಸಮಾನ ಅಂತರಕ್ಕೆ ಲಯ ಎನ್ನುತ್ತಾರೆ.

೪. ಹವಿರ್ಭಾಗ : ಯಜ್ಞ ಮಾಡುವಾಗ ದೇವತೆಗಳಿಗೆ ಅರ್ಪಿಸುವ ದ್ರವ್ಯ (ಆಹುತಿ).

೧. ಸಂಗೀತ ಮತ್ತು ಸಾಮವೇದ

ಅ. ಸಾಮವೇದದ ಹಿರಿಮೆಯನ್ನು ಕೊಂಡಾಡುತ್ತಾ ಭಗವಾನ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ, ‘ವೇದಾನಾಂ ಸಾಮವೇದೋಸ್ಮಿ |’ (ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೨೨), ಅಂದರೆ ‘ಎಲ್ಲ ವೇದಗಳಲ್ಲಿ ಸಾಮವೇದದಲ್ಲಿ ನಾನೇ (ಶ್ರೀಕೃಷ್ಣ) ಇದ್ದೇನೆ.’

ಆ. ‘ಸಾಮವೇದ’ವು ಭಾರತೀಯ ಸಂಗೀತದ ಅಡಿಪಾಯವಾಗಿದೆ. ಸಾಮವೇದವು ಮುಖ್ಯವಾಗಿ ‘ಋಗ್ವೇದದ ಸೂತ್ರಗಳಲ್ಲಿನ ಮಂತ್ರಗಳನ್ನು ಹೇಗೆ ಪಠಿಸಬೇಕು ?’ ಎನ್ನುವುದನ್ನು ವಿವರಿಸುವ ವೇದವಾಗಿದೆ. ಋಗ್ವೇದದ ಮಂತ್ರಗಳನ್ನು ಗಾಯನ ರೂಪದಲ್ಲಿ ಹೇಳುವುದಕ್ಕೆ ‘ಸಾಮಗಾನ’ ಎಂದು ಹೇಳುತ್ತಾರೆ. ಸಾಮವೇದದಲ್ಲಿ ಸ್ವರ, ತಾಳ ಮತ್ತು ಲಯಗಳ ಬೀಜಗಳು ಅಡಗಿವೆ. ಆದ್ದರಿಂದಲೇ ಸಾಮವೇದವನ್ನು ‘ಸಂಗೀತದ ಜನಕ’ ಎಂದೂ ಕರೆಯುತ್ತಾರೆ. ಸಾಮವೇದದ ಗೇಯ (ಹಾಡಲು ಬರುವ) ಪದಗಳನ್ನು ೩ ಸ್ವರಗಳಲ್ಲಿ ಹಾಡಲಾಗುತ್ತಿತ್ತು.

ಇ. ಪ್ರಾಚೀನ ಕಾಲದಿಂದಲೂ ಯಜ್ಞಗಳ ಸಮಯದಲ್ಲಿ ಸಾಮವೇದದ ಮಂತ್ರಗಳನ್ನು ಅತ್ಯಂತ ಮಧುರ ಸ್ವರದಲ್ಲಿ ತಲ್ಲೀನರಾಗಿ ಹಾಡಲಾಗುತ್ತಿತ್ತು. ಯಜ್ಞಗಳಲ್ಲಿ ಪುರೋಹಿತರು ಸಾಮವೇದದ ಮಂತ್ರಗಾಯನದ ಮೂಲಕ ದೇವತೆಗಳನ್ನು ಆವಾಹನೆ ಮಾಡಿ ಅವರಿಗೆ ‘ಹವಿರ್ಭಾಗ’ವನ್ನು ಅರ್ಪಿಸುತ್ತಿದ್ದರು. ದೇವತೆಗಳು ಗಾಯನಪ್ರಿಯರಾಗಿರುತ್ತಾರೆ. ಆದ್ದರಿಂದ, ಸಾಮವೇದದ ಗಾಯನಗಳನ್ನು ಕೇಳಲು ಪ್ರತ್ಯಕ್ಷ ದೇವತೆಗಳು ಬರುತ್ತಾರೆ. ಸಾಮವೇದದ ಗಾಯನಗಳಿಂದ ದೇವತೆಗಳು ಯೋಗನಿದ್ರೆಯಿಂದ ಬೇಗನೆ ಎಚ್ಚೆತ್ತು ಭಕ್ತರ ಪ್ರಾರ್ಥನೆಯನ್ನು ಕೇಳುತ್ತಾರೆ. ‘ಗಾಂಧರ್ವವೇದ’ವು ಸಾಮವೇದದ ಒಂದು ಉಪವೇದವಾಗಿದೆ. ಅದು ಸಂಪೂರ್ಣವಾಗಿ ಸಂಗೀತಕ್ಕೆ ಸಂಬಂಧಿಸಿದೆ.

ಕು. ತೇಜಲ್ ಪಾತ್ರಿಕರ್

೨. ಭಾರತೀಯ ಸಂಗೀತದ ಮೂಲ ವಿಭಜಿತ ಪ್ರಕಾರಗಳು

೨ ಅ. ಮಾರ್ಗಿ ಸಂಗೀತ(ಗಾಯನ): ‘ಮಾರ್ಗಿ’ಎಂದರೆ ಮೋಕ್ಷಮಾರ್ಗ ವನ್ನು ತೋರಿಸುವ ! ‘ಮೋಕ್ಷ ಮಾರ್ಗದತ್ತ ಕೊಂಡೊಯ್ಯುವುದು’ ಮಾರ್ಗಿ ಸಂಗೀತದ ಉದ್ದೇಶವಾಗಿತ್ತು. ಮಾರ್ಗಿ ಸಂಗೀತದ ಉಗಮವು ಸಾಮವೇದದಿಂದ ಆಯಿತು. ಆ ಕಾಲದಲ್ಲಿ ಈ ಸಂಗೀತವನ್ನು ಪೂಜಾವಿಧಿ ಮತ್ತು ವೇದ ಪಠಣದ ಸಮಯದಲ್ಲಿ ಹಾಡಲಾಗುತ್ತಿತ್ತು. ‘ಈ ಸಂಗೀತವನ್ನು ಬ್ರಹ್ಮದೇವನು ನಿರ್ಮಿಸಿದನು ಮತ್ತು ಗಂಧರ್ವರು ಅದನ್ನು ಮುನ್ನಡೆಸಿದರು’ ಎಂದು ಹೇಳಲಾಗುತ್ತದೆ. ಪ್ರಸ್ತುತ ಕಾಲದಲ್ಲಿ ಮಾರ್ಗಿ ಅಥವಾ ಗಾಂಧರ್ವ ಸಂಗೀತವು ಅಸ್ತಿತ್ವದಲ್ಲಿಲ್ಲ, ಅದು ಲುಪ್ತವಾಗಿದೆ.

೨ ಆ. ದೇಶಿ ಸಂಗೀತ (ಗಾಯನ) : ದೇಶಿ ಸಂಗೀತವೆಂದರೆ ಜನರು ಜನರ ಮನೋರಂಜನೆಗಾಗಿ ನಿರ್ಮಿಸಿದ ಸಂಗೀತ. ಈ ಸಂಗೀತವು ‘ಜನಜೀವನ, ಜನರ ಭಾವನೆಗಳು ಮತ್ತು ರಂಜನೆ’ಯ ಮೇಲೆ ಆಧಾರಿತವಾಗಿದೆ. ಆರಂಭದಲ್ಲಿ ಸಂಗೀತವು ‘ಮಾರ್ಗಿ’ ಅಂದರೆ ವೇದಗಳ ಮೇಲೆ ಆಧಾರಿತವಾಗಿತ್ತು; ಆದರೆ ಕಾಲವು ಕಳೆದಂತೆ ಸಂಗೀತವು ಜನರ ಜೀವನದ ಅವಿಭಾಜ್ಯ ಅಂಗವಾಯಿತು. ಸಂಗೀತವು ಜನಸಾಮಾನ್ಯರ ಮೇಲೆ ಆಧಾರಿತವಾಗಿದ್ದರಿಂದ ಅದು ‘ಜನರ ಭಾವನೆ, ಪ್ರಾಂತೀಯ ಭಾಷೆ ಮತ್ತು ಜಾನಪದ ಕಥೆ’ಗಳೊಂದಿಗೆ ಬೆಸೆದುಕೊಂಡಿತು. ಉದಾಹರಣೆಗೆ, ಅಭಂಗ, ಕೀರ್ತನೆ, ಕಥೆಗಳು, ಜಾನಪದ ಗೀತೆ ಇತ್ಯಾದಿ. ಪ್ರಸ್ತುತ ಕಾಲದಲ್ಲಿಯೂ ಹಾಡಲಾಗುವ ವಿವಿಧ ಪ್ರಕಾರಗಳು, ಉದಾಹರಣೆಗೆ, ಶಾಸ್ತ್ರೀಯ ರಾಗ ಗಾಯನ (ಹಿಂದೂಸ್ಥಾನಿ ಮತ್ತು ಕರ್ನಾಟಕ), ಉಪ-ಶಾಸ್ತ್ರೀಯ ಗಾಯನ, ಸುಗಮ ಸಂಗೀತ ಇತ್ಯಾದಿಗಳೆಲ್ಲವೂ ‘ದೇಶಿ ಸಂಗೀತ’ದ ಪ್ರಕಾರಗಳೇ ಆಗಿವೆ.

೩. ನಾಲ್ಕು ಯುಗಗಳಲ್ಲಿನ ಗಾಯನ ಕಲೆ ಮತ್ತು ಯುಗಗಳಿಗನುಸಾರ ಗಾಯನದ ಬದಲಾಗುತ್ತಾ ಹೋಗಿರುವ ಸ್ವರೂಪ

೪. ಪುರಾಣಗಳಲ್ಲಿನ ಗಾಯನಕಲೆಯ ದಾಖಲೆಗಳು 

ಅ. ತ್ರೇತಾಯುಗದಲ್ಲಿ ಲಂಕಾಪತಿ ರಾವಣನು ಸಂಗೀತಶಾಸ್ತ್ರದ ಪ್ರಸಿದ್ಧ ಪಂಡಿತನಾಗಿದ್ದನು. ರಾವಣನು ಸ್ತುತಿಗಾಯನ ಮತ್ತು ವಾದನಗಳ ಮೂಲಕ ಭಗವಾನ ಶಂಕರನನ್ನು ಪ್ರಸನ್ನಗೊಳಿಸಿ, ಅವನ ‘ಪ್ರಾಣಲಿಂಗ’ವನ್ನು ಪಡೆದುಕೊಂಡನು.

ಆ. ರಾಮಾಯಣದ ಕಾಲದಲ್ಲಿ ವಾಲ್ಮೀಕಿ ಋಷಿಗಳ ಮಾರ್ಗದರ್ಶನದಲ್ಲಿ ಲವ ಮತ್ತು ಕುಶ ಇವರು ಅಯೋಧ್ಯೆಯ ರಾಜಸಭೆಯಲ್ಲಿ ಶ್ರೀರಾಮ ಮತ್ತು ಸಭೆಯಲ್ಲಿದ್ದ ಇತರ ಜನರ ಮುಂದೆ ಗಾಯನದ ಮಾಧ್ಯಮದಿಂದ ಸಂಪೂರ್ಣ ರಾಮಾಯಣವನ್ನು ಪ್ರಸ್ತುತಪಡಿಸಿದರು.

ಇ. ಮಹಾಭಾರತ ಕಾಲದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ, ವಿರಾಟ ರಾಜನ ಪುತ್ರಿ ಉತ್ತರೆಗೆ ಸಂಗೀತ ಮತ್ತು ನೃತ್ಯವನ್ನು ಕಲಿಸುತ್ತಿದ್ದ ಬೃಹನ್ನಳೆಗೆ (ಅರ್ಜುನನಿಗೆ), ಇಂದ್ರನ ಆಜ್ಞೆಯಂತೆ ಗಂಧರ್ವ ಚಿತ್ರಸೇನನು ಗಾಯನದ ಶಿಕ್ಷಣವನ್ನು ನೀಡಿದ್ದನು.

೫. ಕಲಿಯುಗದಲ್ಲಿ ಸಂತರು ಗಾಯನವನ್ನು ಸಾಧನೆಯ ಮಾಧ್ಯಮವನ್ನಾಗಿ ಮಾಡುವುದು

ಕಲಿಯುಗದಲ್ಲಿಯೂ ಕೆಲವು ಶತಮಾನಗಳ ಹಿಂದೆ ಅನೇಕ ಸಂತರು ಈಶ್ವರನ ಉಪಾಸನೆಗಾಗಿ ಗಾಯನವನ್ನು ಬಳಸಿಕೊಂಡಿದ್ದಾರೆ. ಉದಾ. ಶ್ರೀಕೃಷ್ಣಭಕ್ತ ಸ್ವಾಮಿ ಹರಿದಾಸರು, ಸಂತ ಸೂರದಾಸರು, ಸಂತ ತುಕಾರಾಮ ಮಹಾರಾಜರು ಮತ್ತು ಸಂತ ಪುರಂದರದಾಸರು. ಈ ಸಂತರು ಈಶ್ವರನಿಗೆ ಅತ್ಯಂತ ಆರ್ತ ಸ್ವರದಿಂದ ಮೊರೆಯಿಟ್ಟರು. ಆದುದರಿಂದಲೇ ಈ ಸಂತರ ಗಾಯನವನ್ನು ಕೇಳಲು ಸಾಕ್ಷಾತ್ ಭಗವಂತನೇ ಪ್ರಕಟನಾಗುತ್ತಿದ್ದನು. ಈ ರೀತಿಯಾಗಿ, ಈ ಸಂತರು ಗಾಯನವನ್ನೇ ತಮ್ಮ ಸಾಧನೆಯ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದರು.

೬. ಸಾರಾಂಶ

ಶಾಸ್ತ್ರೀಯ ಗಾಯನದ ಇತಿಹಾಸವನ್ನು ನೋಡಿದಾಗ ನಮಗೆ ತಿಳಿದು ಬರುವುದೇನೆಂದರೆ, ‘ಆಧ್ಯಾತ್ಮಿಕ ಅಡಿಪಾಯ ಮತ್ತು ದೈವೀ ಪರಂಪರೆ ಲಭಿಸಿದ ಈ ಗಾಯನ ಕಲೆಯು ಸಾಕ್ಷಾತ್ ನಾದಬ್ರಹ್ಮನ, ಅಂದರೆ ಸತ್-ಚಿತ್-ಆನಂದದ ಅನುಭೂತಿಯನ್ನು ಪಡೆಯಲೆಂದೇ ನಿರ್ಮಾಣವಾಗಿದೆ’. ಆದರೆ ಕಾಲಕ್ರಮೇಣ ಸಮಾಜವು ಇದನ್ನು ಮರೆತಿದೆ. ಆದ್ದರಿಂದಲೇ ಪ್ರಸ್ತುತ ಕಾಲದಲ್ಲಿ ಸಂಗೀತದ ಮೂಲ ಉದ್ದೇಶದ ಕಡೆಗೆ ಅಂದರೆ ‘ಸಂಗೀತದಿಂದ ಈಶ್ವರಪ್ರಾಪ್ತಿ’ಯ ಕಡೆಗೆ ಸಮಾಜವನ್ನು ಕೊಂಡೊಯ್ಯುವ ದಿಶೆಯನ್ನು ಸಮಾಜಕ್ಕೆ ನೀಡುವುದು ಆವಶ್ಯಕವಾಗಿದೆ. ಈ ಮಹಾನ ಕಾರ್ಯವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಮಾಡುತ್ತಿದ್ದಾರೆ.’

– ಕು. ತೇಜಲ ಪಾತ್ರೀಕರ, ಸಂಗೀತ ಸಮನ್ವಯಕರು (ಸಂಗೀತ ವಿಶಾರದ, ಆಧ್ಯಾತ್ಮಿಕ ಮಟ್ಟ ಶೇ. ೬೦), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೮.೧೦.೨೦೨೫)

ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿ

ಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕದಲ್ಲಿ ಸಂಪರ್ಕಿಸಿ.

– ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಸಂಪರ್ಕಕ್ಕಾಗಿ ವಿಳಾಸ

ಶ್ರೀ. ಅಭಿಜಿತ ಸಾವಂತ, ಸಂಪರ್ಕ ಸಂಖ್ಯೆ : ೮೭೯೩೬೭೮೧೭೮

ವಿ-ಅಂಚೆ : [email protected]