ಮನುಷ್ಯನು ಆರೋಗ್ಯ ಉತ್ತಮವಾಗಿರಲು ಕಾಳಜಿ ವಹಿಸುವುದು ಆವಶ್ಯಕ !

ಧರ್ಮದ ಬಗ್ಗೆ ಪ.ಪೂ. ಸ್ವಾಮೀ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶನ !

ಪ.ಪೂ. ಸ್ವಾಮಿ ವರದಾನಂದ ಭಾರತಿ

 

ಪ್ರಶ್ನೆ : ಲಾಭಾನಾಂ ಉತ್ತಮಂ ಕಿಂ ಸ್ಯಾತ್‌ ?

ಅರ್ಥ : ಎಲ್ಲಕ್ಕಿಂತ ಉತ್ತಮ ಲಾಭ ಯಾವುದು ?

ಉತ್ತರ : ಆರೋಗ್ಯಮ್‌ |

ಅರ್ಥ : ಆರೋಗ್ಯ ಉತ್ತಮವಾಗಿರುವುದೇ ಎಲ್ಲಕ್ಕಿಂತ ಉತ್ತಮ ಲಾಭ.

೧. ಧರ್ಮದ ಬಗ್ಗೆ ಆಕ್ಷೇಪವೆತ್ತುವ ಆಧುನಿಕತಾವಾದಿಗಳು ಹೆಚ್ಚು ಹಳಬರು !

ಮನು, ಮಹರ್ಷಿ ವ್ಯಾಸ, ಶ್ರೀಮದ್‌ ಶಂಕರಾಚಾರ್ಯ ಮತ್ತು ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರನ್ನು ನಾನು ಪ್ರಮಾಣವೆಂದು ನಂಬುತ್ತೇನೆ; ಆದುದರಿಂದ ನಾನು ಸಂಪ್ರದಾಯವಾದಿ ಮತ್ತು ಹಳಬನಾಗಿದ್ದೇನೆ ! ೫-೬ ಸಾವಿರ ವರ್ಷಗಳ ಹಿಂದೆ ಆಗಿ ಹೋದ ಚಾರ್ವಾಕನನ್ನು ಮಾನದಂಡವಾಗಿ ಸ್ವೀಕರಿಸುತ್ತಾರೆ, ಅವರು ಮಾತ್ರ ಸುಧಾರಕರು, ಕ್ರಾಂತಿಕಾರಿಗಳು ಮತ್ತು ಹೊಸ ವಿಚಾರಗಳನ್ನು ಸ್ವಾಗತಿಸುವವರಾಗಿರುತ್ತಾರೆ. ಈ ಆಧುನಿಕರು ಧರ್ಮ ಅಥವಾ ಸಂಸ್ಕೃತಿಯ ವಿರುದ್ಧ ತೆಗೆದುಕೊಂಡ ಒಂದು ಆಕ್ಷೇಪಣೆಯೂ ಹೊಸದಲ್ಲ. ಇವರು ತೆಗೆದುಕೊಂಡಿರುವ ಎಲ್ಲ ಆಕ್ಷೇಪಗಳು ಮೂಲತಃ ಚಾರ್ವಾಕರು ಧರ್ಮದ ವಿರುದ್ಧ ತೆಗೆದುಕೊಂಡಿದ್ದಾರೆ, ಏಕೆಂದರೆ ಅವರು ವೇದಗಳ ಪ್ರಾಮಾಣ್ಯವನ್ನು ಒಪ್ಪುವುದಿಲ್ಲ. ಅವರು ಆತ್ಮದ ಅಸ್ತಿತ್ವವನ್ನು ಸ್ವೀಕರಿಸುವುದಿಲ್ಲ, ಈಶ್ವರನನ್ನು ನಿರಾಕರಿಸುತ್ತಾರೆ, ಪುನರ್ಜನ್ಮದ ಮೇಲೆ ನಂಬಿಕೆಯನ್ನು ಇಡುವುದಿಲ್ಲ. ‘ತಿನ್ನಬೇಕು, ಕುಡಿಯಬೇಕು ಮತ್ತು ಸುಖವನ್ನು ಅನುಭವಿಸಬೇಕು’ (‘ಯಾವತ್‌ ಜೀವೆತ್‌ ಸುಖಂ ಜೀವೇತ್‌ |’, ಅಂದರೆ ಎಲ್ಲಿಯವರೆಗೆ ಜೀವನವಿದೆಯೋ, ಅಲ್ಲಿಯವರೆಗೆ ಸುಖದಿಂದ ಬದುಕಬೇಕು.’), ಇದೇ ಜೀವನದ ಆದರ್ಶವಾಗಿದೆ’, ಎಂದು ಹೇಳುತ್ತಾರೆ. ಹಾಗಾಗಿ ಹೊಸ ಆಕ್ಷೇಪಕರೂ ಸಂಪ್ರದಾಯವಾದಿಗಳೇ ಆಗಿದ್ದಾರೆ. ಮಹರ್ಷಿ ವ್ಯಾಸ ಮತ್ತು ಸಂತ ಜ್ಞಾನದೇವರ ಸಂಪ್ರದಾಯಗಳನ್ನು ನಾನು ಗೌರವಿಸುತ್ತೇನೆ, ಆದರೆ ಇವರು ಚಾರ್ವಾಕರ ಸಂಪ್ರದಾಯವನ್ನು ಎತ್ತಿ ಹಿಡಿಯುತ್ತಾರೆ, ಹಾಗಾಗಿ ‘ಸಂಪ್ರದಾಯವನ್ನು ಗೌರವಿಸುವ ನನ್ನಂತಹ ಮನುಷ್ಯನು ಹಳಬನಾದರೆ, ಇವರು ಅದಕ್ಕಿಂತಲೂ ಹೆಚ್ಚು ಹಳಬರಾಗಿದ್ದಾರೆ’, ಎಂದು ನಾನ್ಯಾಕೆ ಹೇಳಬಾರದು ?

೨. ಈಶ್ವರನು ನಿರ್ಮಿಸಿದ ಶರೀರದ ಆರೋಗ್ಯದ ಕಾಳಜಿ ವಹಿಸುವುದು ಮಹತ್ವದ್ದಾಗಿದೆ !

ಆರೋಗ್ಯ ಇಂದ್ರಿಯಾತೀತವಾಗಿರುವುದರಿಂದಲೇ ನಮ್ಮ ಆರೋಗ್ಯದ ರಕ್ಷಣೆಯ ಕಡೆಗೆ ದುರ್ಲಕ್ಷ್ಯವಾಗುತ್ತದೆ. ರೋಗಗಳಿಂದ ಪೀಡಿತರಾಗದೇ ‘ಆರೋಗ್ಯದ ರಕ್ಷಣೆಗಾಗಿ ಯಾರಾದರೂ ಪ್ರಯತ್ನಿಸುತ್ತಾರೆ’, ಎಂಬುದು ಕಂಡು ಬರುವುದಿಲ್ಲ. ‘ಇರುವ ಆರೋಗ್ಯವನ್ನು ಉಳಿಸಿಕೊಳ್ಳಬೇಕು. ನಾವು ಎಂದಿಗೂ ಅನಾರೋಗ್ಯಪೀಡಿತರಾಗಬಾರದು ಎಂಬ ಕಾಳಜಿ ವಹಿಸುವವರು ಸಾಮಾನ್ಯವಾಗಿ ಯಾರೂ ಕಂಡು ಬರುವುದಿಲ್ಲ. ರೋಗವಾದ ನಂತರ, ಧಾವಿಸುವುದರಲ್ಲಿ ಏನು ವಿಶೇಷ ಇದೆ ? ‘ರೋಗ ಬರಬಾರದೆಂದು’, ಕಾಳಜಿ ವಹಿಸಬೇಕು. ಆ ದೃಷ್ಟಿಯಿಂದ ‘ಆಹಾರ-ವಿಹಾರವನ್ನು ನಿಯಂತ್ರಿಸಬೇಕು’, ಎಂಬ ಅರಿವು ಎಷ್ಟರ ಮಟ್ಟಿಗೆ ಇರುತ್ತದೆ ? ಆರೋಗ್ಯವೇ ಉತ್ತಮ ಲಾಭವಾಗಿದೆ, ಎಂದು ತಿಳಿಯುತ್ತದೆ; ಏಕೆಂದರೆ ಅದನ್ನು ಅಲ್ಲಗಳೆಯುವಂತಿಲ್ಲ. ಇದೆಲ್ಲ ತಿಳಿದಿದ್ದರೂ ಆಚರಣೆಗೆ ತರುವುದಿಲ್ಲ.

ಈಶ್ವರನು ಈ ದೇಹವನ್ನು ನಿರ್ಮಿಸಿದ್ದಾನೆ. ‘ಅದರ ರಚನೆ ಮತ್ತು ಅದರಲ್ಲಿ ನಡೆಯುವ ಕ್ರಿಯೆಗಳು ಹೇಗಿರಬೇಕು ಎಂಬುದನ್ನು ಈಶ್ವರನು (ಬೇಕೆಂದರೆ ನಿಸರ್ಗವೆಂದು ಹೇಳ ಬಹುದು) ಆಯೋಜನಾಬದ್ಧವಾಗಿ ನಿರ್ಧರಿಸಿದ್ದಾನೆ ಮತ್ತು ‘ಎಲ್ಲ ಪರಿಸ್ಥಿತಿಗಳಲ್ಲಿ ಅದರ ಕಾರ್ಯಕ್ಷಮತೆ ದೀರ್ಘಕಾಲದ ವರೆಗೆ ಉಳಿಯುವಂತೆ ವ್ಯವಸ್ಥೆ ಮಾಡಿದ್ದಾನೆ.

೩. ಮನುಷ್ಯನು ತನ್ನ ಸುಖಕ್ಕಾಗಿ ಆರೋಗ್ಯದ ಬಹಳಷ್ಟು ನಿಯಮಗಳನ್ನು ಮುರಿದು ತನ್ನ ದೇಹವನ್ನು ಪರೀಕ್ಷೆಗೆ ಒಳಪಡಿಸುತ್ತಾನೆ !

ಮನುಷ್ಯ ನಿರ್ಮಿತ ಯಂತ್ರದಲ್ಲಿ ಯಾವುದಾದರೊಂದು ಮೊಳೆ ಬಿದ್ದುಹೋದರೆ ಅಥವಾ ಯಾವುದಾದರೊಂದು ಮೊಳೆಸುತ್ತು (ಸ್ಕ್ರೂ) ಸಡಿಲವಾದರೆ ಯಂತ್ರದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೇ ಯಂತ್ರವು ನಿಂತು ಹೋಗುತ್ತದೆ. ಭೂಮಿಯ ಸಮತೋಲನ ಸ್ವಲ್ಪ ಕೆಟ್ಟರೂ ಪ್ರಕೃತಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ; ಆದರೆ ಮಾನವ ದೇಹ ಎಷ್ಟು ಬಲಶಾಲಿ ಯಂತ್ರವಾಗಿದೆ ಎಂದರೆ, ಅನೇಕ ರೀತಿಯ ಅಪಥ್ಯಗಳನ್ನು ಅದು ದೀರ್ಘಕಾಲದ ವರೆಗೆ ಜೀರ್ಣಿಸಿ ಕೊಳ್ಳುತ್ತದೆ ಮತ್ತು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚೆಚ್ಚು ಉಳಿಸಿಡುತ್ತದೆ. ಈಶ್ವರನು ಉದಾರ, ಕ್ಷಮಾಶೀಲ ಮತ್ತು ಕುಶಲನಾಗಿರುವುದರಿಂದ ಅವನು ಈ ಸದೃಢ ಯಂತ್ರವನ್ನು ನಮಗೆ ಒಪ್ಪಿಸಿದ್ದಾನೆ. ಅದರ ಲಾಭ ಪಡೆದು ನಾವು ಆರೋಗ್ಯದ ಬಹಳಷ್ಟು ನಿಯಮಗಳನ್ನು ಸುಖಕ್ಕಾಗಿ ಮುರಿಯುತ್ತೇವೆ ಮತ್ತು ಉದ್ಧಟತನದಿಂದ, ‘ಇಷ್ಟರಿಂದ ಏನಾಗುತ್ತದೆ ? ನಾವು ಎಷ್ಟೋ ದಿನಗಳಿಂದ ಇದೇ ರೀತಿ ನಡೆದುಕೊಳ್ಳುತ್ತಿದ್ದೇವೆ, ನಮಗೇನು ಕೆಟ್ಟದಾಗಿದೆ ?’, ಎಂದು ಕೇಳುತ್ತೇವೆ. ಈಶ್ವರನು ದಯಾಳು ಮತ್ತು ಕ್ಷಮಾಶೀಲನಾಗಿರುವುದರಿಂದ ಅವನು ಹೆಚ್ಚೆಚ್ಚು ಅಪರಾಧಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇಹದಲ್ಲಿ ಇಟ್ಟಿದ್ದಾನೆ. ಆದ ಹಾನಿಯನ್ನು ಸರಿಪಡಿಸಿ ಪುನಃ ಕಾರ್ಯಕ್ಷಮವಾಗುವ ಸಾಮರ್ಥ್ಯವನ್ನು ದೇಹಕ್ಕೆ ನೀಡಿದ್ದಾನೆ. ದೇಹದ ಈ ವೈಶಿಷ್ಟ್ಯದ ಲಾಭವನ್ನು ಪಡೆಯದೇ ಮನುಷ್ಯನು ಅದರ ಸಾಮರ್ಥ್ಯವನ್ನು ಪರೀಕ್ಷಿಸುತ್ತಿರುವಂತೆ ನೋಡುತ್ತಿರುತ್ತಾನೆ ಎಂಬಂತಿದೆ. ”ನೀನು ಹೇಗೆ ಕೆಡುವುದಿಲ್ಲ, ಎಂಬುದನ್ನು ನಾನು ನೋಡುತ್ತೇನೆ’, ಎಂಬ ಪ್ರತಿಜ್ಞೆ ಮಾಡಿ ಮನುಷ್ಯನು ವರ್ತಿಸುತ್ತಾನೆ. ಕಾರಣ ತಿಳಿದರೆ ‘ಯೋಗ್ಯ ರೀತಿಯಲ್ಲಿಯೇ ವರ್ತಿಸುತ್ತಾರೆ’, ಹೀಗೆ ನಿಜವಾಗಿ ಸಂಭವಿಸುತ್ತದೆಯೇ ? ‘ಧೂಮಪಾನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ, ಇದು ಈಗ ಯಾರಿಗೆ ಗೊತ್ತಿಲ್ಲ’ ? ಈ ನಿಯಮವನ್ನು ಆ ಪೆಟ್ಟಿಗೆಯ ಮೇಲೆಯೇ ಬರೆದಿರುತ್ತಾರೆ. ನಾವು ಧೂಮಪಾನದ ಕಲ್ಪನೆಯನ್ನೂ ಮಾಡಲಾಗದ ವಯಸ್ಸಿನಲ್ಲಿ ಆಧುನಿಕತೆಯನ್ನು ಪ್ರತಿಬಿಂಬಿಸಲು ಯುವಜನರಲ್ಲಿ ಧೂಮಪಾನ ಹೆಚ್ಚಾಗಲು ಪ್ರಾರಂಭಿಸಿದೆ.

೪. ಜೀವನವಿಡಿ ಕೇವಲ ಸದಾಚಾರದಿಂದ ವರ್ತಿಸುವ ಮನುಷ್ಯನು ಆರೋಗ್ಯವಂತನಾಗಿರುತ್ತಾನೆ !

ಉತ್ತಮ ಆರೋಗ್ಯವನ್ನು ನೀಡುವ ಈ ‘ರಸಾಯನಚಿಕಿತ್ಸೆ’ ಪ್ರಕರಣದ ಉಪಸಂಹಾರವನ್ನು (ಸಿಂಹಾವಲೋಕನ) ಮಾಡುವಾಗ ಆಯುರ್ವೇದವು ಏನು ಹೇಳುತ್ತದೆ ಎಂದರೆ,

ಸತ್ಯವದಿನಮಕ್ರೋಧಮಧ್ಯಾತ್ಮಪ್ರವಣೇಂದ್ರಿಯಮ್‌ |

ಶಾಂತಂ ಸದವೃತ್ತನಿರತಂ ವಿದ್ಯಾನ್ನಿತ್ಯರಸಾಯನಮ್‌ ||

– ಅಷ್ಟಾಙ್ಗಹೃದಯ, ಉತ್ತರಸ್ಥಾನ, ಅಧ್ಯಾಯ ೩೯, ಶ್ಲೋಕ ೧೭೯

ಅರ್ಥ : ಸತ್ಯವಂತ, ಕೋಪವಿಲ್ಲದ, ಅಧ್ಯಾತ್ಮನಿಷ್ಠ, ಇಂದ್ರಿಯಗಳನ್ನು ವಶಪಡಿಸಿಕೊಳ್ಳುವ, ಶಾಂತ, ಸದಾಚಾರಿ ಮತ್ತು ವಿದ್ವತ್ತಿನಿಂದ ಆತ್ಮವನ್ನು ನಿಯಂತ್ರಿಸುವ ಮನುಷ್ಯನು ಅಮೃತಸ್ವರೂಪಿ (ರಸಾಯನ) ಆಗಿರುತ್ತಾನೆ.

ಯಾವನು ಯಾವಾಗಲೂ ಸತ್ಯವನ್ನು ಮಾತನಾಡುತ್ತಾನೋ, ಎಂದಿಗೂ ಸಿಟ್ಟಿಗೇಳುವುದಿಲ್ಲವೋ, ವಿಷಯಗಳನ್ನು ಭೋಗಿಸುವಾಗ ಯಾರ ಇಂದ್ರಿಯಗಳು ಆತ್ಮಲಾಭದ ದೃಷ್ಟಿಯಿಂದ ಸಂಯಮದಿಂದ ಇರುತ್ತವೆಯೋ, ಯಾವನು ಯಾವುದೇ ಪರಿಸ್ಥಿತಿಯಲ್ಲಿ ಪ್ರಕ್ಷುಬ್ಧನಾಗದೇ, ಶಾಂತ, ಪ್ರಸನ್ನನಾಗಿರುತ್ತಾನೋ ಮತ್ತು ಜೀವನದುದ್ದಕ್ಕೂ ಕೇವಲ ಸದಾಚಾರದಿಂದ ನಡೆದುಕೊಳ್ಳುತ್ತಾನೋ, ಆ ಮನುಷ್ಯನು ‘ನಿತ್ಯ ರಸಾಯನಚಿಕಿತ್ಸೆಯನ್ನು ತೆಗೆದುಕೊಳ್ಳುವವನು’, ಆಗಿದ್ದಾನೆ ಎಂದು ತಿಳಿಯಬೇಕು. ಅಂದರೆ ‘ಸತ್ಯವಾದಿತ್ವ ಮುಂತಾದ ಗುಣಗಳಿಂದ ಕೂಡಿದ’, ಜೀವನವನ್ನು ನಡೆಸುವ ಮನುಷ್ಯನು ರಸಾಯನಚಿಕಿತ್ಸೆಯನ್ನು ಪಡೆದ ಮನುಷ್ಯನಂತೆ ನೇರವಾಗಿ ಅದರಲ್ಲಿ ಹೇಳಿರುವ ಉಪಚಾರಗಳಿಲ್ಲದೆಯೂ ಅದೇ ರೀತಿ ಆರೋಗ್ಯವಂತನಾಗಿ, ಸ್ವಸ್ಥನಾಗಿ ಮತ್ತು ಕಾರ್ಯಕ್ಷಮನಾಗಿರುತ್ತಾನೆ.

– ಪ.ಪೂ. ಸ್ವಾಮಿ ವರದಾನಂದ ಭಾರತಿ (ಪೂರ್ವಾಶ್ರಮದ ಅನಂತರಾವ ಆಠವಲೆ) (ಆಧಾರ : ಗ್ರಂಥ ‘ಯಕ್ಷಪ್ರಶ್ನ’)