ವ್ಯಾಯಾಮವನ್ನು ಮಾಡಲು ಬೇಸರವಾಗುತ್ತದೆ…!

ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೩೧

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಪರಿಹಾರ ವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಗಳು ಇಂದಿಗೂ ಅಷ್ಟೇ ಉಪಯುಕ್ತ ವಾಗಿದ್ದು, ನಾವು ಅವುಗಳಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯಲ್ಲಿ ನಾವು ವ್ಯಾಯಾಮದ ಮಹತ್ವ, ವ್ಯಾಯಾಮದ ಬಗ್ಗೆ ಇರುವ ಸಂದೇಹ ನಿವಾರಣೆ, ‘ಎರ್ಗೊನಾಮಿಕ್ಸ್‌’ ತತ್ವ ಮತ್ತು ಕಾಯಿಲೆಗಳಿಗೆ ಅನುಗುಣವಾದ ಸರಿಯಾದ ವ್ಯಾಯಾಮದ ಮಾಹಿತಿಯನ್ನು ನೀಡುತ್ತೇವೆ. ನಾವು ವ್ಯಾಯಾಮದ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಈ ಪಯಣ ಪ್ರೇರಕವಾಗಿರಲಿದೆ. ‘ವ್ಯಾಯಾಮ ಮಾಡಲು ಬೇಸರವಾಗುತ್ತದೆ’ ಈ ಮಾತನ್ನು ಅನೇಕರ ಬಾಯಿಂದ ನಾವು ಕೇಳಿದ್ದೇವೆ. ಇದರಿಂದ ‘ವಿವಿಧ ರೀತಿಯ ವ್ಯಾಯಾಮ ಮಾಡುವುದು ನಿಜವಾಗಿಯೂ ಬೇಸರ ತರಿಸುತ್ತದೆಯೇ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಾವು ಸ್ವಲ್ಪ ಆಳವಾಗಿ ಯೋಚಿಸಿದರೆ, ‘ಈ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ’ ಎಂದು ತಿಳಿಯುತ್ತದೆ.

೧. ಮನಸ್ಸಿನ ಚಂಚಲತೆಯಿಂದಾಗಿ ಆರಂಭದಲ್ಲಿ ವ್ಯಾಯಾಮ ಮಾಡಲು ಬೇಸರವಾದರೂ, ಅದಕ್ಕೆ ಒಗ್ಗಿಕೊಂಡರೆ ಉತ್ಸಾಹ ಹೆಚ್ಚಾಗುತ್ತದೆ 

ಮನುಷ್ಯನ ಮನಸ್ಸು ಎಷ್ಟು ಚಂಚಲವಾಗಿದೆ ಎಂದರೆ, ಅದು ಯಾವುದೇ ಒಂದು ಕೆಲಸವನ್ನು ದೀರ್ಘಕಾಲದ ವರೆಗೆ ಮಾಡಲು ಇಷ್ಟಪಡುವುದಿಲ್ಲ. ಅನೇಕರಿಗೆ ಹೇಗೆ ವ್ಯಾಯಾಮ ಮಾಡಲು ಬೇಸರ ಬರುತ್ತದೆಯೋ, ಹಾಗೆಯೇ ‘ಅಧ್ಯಯನ, ಭಜನೆ, ಉದ್ಯೋಗ ಅಥವಾ ವ್ಯವಹಾರದ ಕೆಲಸ ಮಾಡಲು ಬೇಸರ ಬರುತ್ತದೆ. ಇದರರ್ಥ ಈ ಎಲ್ಲಾ ವಿಷಯಗಳು ಬೇಸರ ತರುವಂತಹದ್ದು ಎಂದಲ್ಲ. ದೇವರು ಮನುಷ್ಯನಿಗೆ ಬುದ್ಧಿಯನ್ನು ನೀಡಿದ್ದಾನೆ. ಅದರ ಉಪಯೋಗದಿಂದ ಅವನು ‘ಯಾವ ವಿಷಯಗಳು ತನಗೆ ಹಿತಕರ ಮತ್ತು ಪಥ್ಯಕರವಾಗಿವೆ ?’ ಎಂಬುದನ್ನು ನಿರ್ಧರಿಸಿ, ಪ್ರತಿದಿನ ಆ ವಿಷಯಗಳನ್ನು ಸತತವಾಗಿ ಮಾಡಲು ಪ್ರಯತ್ನಿಸಬೇಕು. ಆರಂಭದಲ್ಲಿ ಬೇಸರ ತರುವ ಕೆಲಸಗಳನ್ನೇ ನಿತ್ಯ ಮಾಡಿದಾಗ, ಅದರಲ್ಲಿ ಆನಂದ ಸಿಗುತ್ತದೆ. ಅದನ್ನು ಮಾಡಲು ದೇಹಕ್ಕೆ ಒಂದು ರೀತಿಯ ಅಭ್ಯಾಸವಾಗುತ್ತದೆ ಮತ್ತು ಅಭ್ಯಾಸದಿಂದ ಆ ಕೆಲಸಗಳನ್ನು ಮಾಡಲು ಉತ್ಸಾಹ ಹೆಚ್ಚಾಗುತ್ತದೆ. ಮನುಷ್ಯನು ಮನಸ್ಸಿನ ಆರಂಭಿಕ ವಿರೋಧಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ, ದೈನಂದಿನ ಜೀವನದಲ್ಲಿ ಮಾಡಬೇಕಾದ ನೂರಾರು ಕೆಲಸಗಳು ಹಾಗೆಯೇ ಉಳಿದುಬಿಡಬಹುದು.

೨. ವ್ಯಾಯಾಮವು ಬೇಸರ ತರುವ ಕ್ರಿಯೆಯಲ್ಲ, ವ್ಯಾಯಾಮದಿಂದ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ 

ವ್ಯಾಯಾಮದ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ವ್ಯಾಯಾಮಮಾಡುವುದು ಬೇಸರದ ಕ್ರಿಯೆಯಲ್ಲ; ಅದನ್ನು ಮಾಡುವಾಗ ಮತ್ತು ನಂತರ ಸಾವಿರಾರು ಜನರಿಗೆ ಒಂದು ರೀತಿಯ ಅನಂತಾನಂದ ಸಿಗುತ್ತದೆ. ಇದರ ಬಗ್ಗೆ ಯಾರಿಗಾದರೂ ಸಂದೇಹವಿದ್ದರೆ, ಅವರು ೨-೩ ತಿಂಗಳ ಕಾಲ ನಿಯಮಿತವಾಗಿ ಯಾವುದಾದರೂ ವ್ಯಾಯಾಮವನ್ನು ಮಾಡಿ ನೋಡಬಹುದು. ವ್ಯಾಯಾಮವು ದೇಹದ ಒಂದು ಸಹಜ ಕ್ರಿಯೆಯಾಗಿದೆ. ಎಲ್ಲಾ ಪ್ರಾಣಿಗಳು ವಿವಿಧ ರೀತಿಯ ಚಲನವಲನಗಳನ್ನು ಬಹಳ ಆನಂದದಿಂದ ಮಾಡುತ್ತವೆ. ಚಲನವಲನವೇ ಜೀವಂತವಾಗಿರುವುದರ ಪ್ರಮುಖ ಲಕ್ಷಣವಾಗಿದೆ. ದೈಹಿಕ ಚಲನವಲನ ಇಷ್ಟವಿಲ್ಲದಿರುವುದು ಅನಾರೋಗ್ಯದ ಲಕ್ಷಣವಾಗಿದೆ. ವ್ಯಾಯಾಮದಿಂದ ದೇಹದ ರಕ್ತ ಸಂಚಲನ ಸುಧಾರಿಸಿ, ದೇಹದಲ್ಲಿ ಸಂಗ್ರಹವಾಗಿರುವ ಅನೇಕ ರೀತಿಯ ವಿಷಕಾರಿ ಕಲ್ಮಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ದೇಹದ ಎಲ್ಲಾ ಅಂಗಾಂಗಗಳಿಗೆ ಚಲನೆ ಸಿಕ್ಕಿ, ಇಡೀ ದೇಹದಲ್ಲಿ ಒಂದು ರೀತಿಯ ಹೊಸ ಚೈತನ್ಯ ಮೂಡುತ್ತದೆ. ದೇಹದ ಶುದ್ಧೀಕರಣದಿಂದ ಮೆದುಳಿನ ಕಾರ್ಯಚಟುವಟಿಕೆ ಉತ್ತಮಗೊಳ್ಳುತ್ತದೆ ಮತ್ತು ಇದರಿಂದ ಮನಸ್ಸಿಗೆ ಒಂದು ರೀತಿಯ ಪ್ರಸನ್ನತೆ ದೊರೆಯುತ್ತದೆ. ಮನುಷ್ಯನಿಗೆ ಇಡೀ ಜಗತ್ತು ಆನಂದಮಯವಾಗಿ ಕಾಣಲಾರಂಭಿಸುತ್ತದೆ.

ಮೇಲಿನ ಎಲ್ಲಾ ವಿಷಯಗಳು ಅನುಭವ ಸಿದ್ಧವಾಗಿವೆ. ವಾಚಕರು ಅವುಗಳನ್ನು ಅನುಭವಿಸಿ ನೋಡಬೇಕು ಮತ್ತು ಸ್ವಂತ ಅನುಭವದಿಂದ ಖಚಿತವಾದ ನಂತರ, ತಮ್ಮ ಎಲ್ಲಾ ಸ್ನೇಹಿತರಿಗೆ ಅದರ ಬಗ್ಗೆ ಮಾಹಿತಿ ನೀಡಿ ವ್ಯಾಯಾಮ ಮಾಡಲು ಪ್ರೇರೇಪಿಸಬೇಕು. ಅಂಗೈಹುಣ್ಣಿಗೆ ಕನ್ನಡಿ ಅಗತ್ಯವಿಲ್ಲ; ಆದ್ದರಿಂದ ‘ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಿ ಅದರ ಆನಂದವನ್ನು ಅವಶ್ಯವಾಗಿ ಅನುಭವಿಸಬೇಕು’ ಎಂಬುದು ಎಲ್ಲಾ ವಾಚಕರಿಗೆ ನಮ್ಮ ಸಲಹೆಯಾಗಿದೆ.

(ಆಧಾರ : ಮಾಸಿಕ ‘ವ್ಯಾಯಾಮ’, ಶಂ. ಧೋ. ವಿದ್ವಾಂಸ, ಸಂಪಾದಕ, (೧೫.೨.೧೯೫೭)