೫೦೦ ವರ್ಷಗಳ ಹಿಂದಿನ ಯಜ್ಞದ ಪೂರ್ಣಾಹುತಿ! – ಪ್ರಧಾನಮಂತ್ರಿ ಮೋದಿ

ಅಯೋಧ್ಯೆ: ಶ್ರೀರಾಮಮಂದಿರದ ಮೇಲೆ ಧ್ವಜಾರೋಹಣ!

ಅಯೋಧ್ಯೆ (ಉತ್ತರ ಪ್ರದೇಶ) – ಇಂದು ಅಯೋಧ್ಯೆ ನಗರವು ಭಾರತೀಯ ಸಾಂಸ್ಕೃತಿಕ ಕ್ಷೇತ್ರದ ಒಂದು ಉನ್ನತ ಉತ್ಥಾನಕ್ಕೆ ಸಾಕ್ಷಿಯಾಗಿದೆ. ಇಡೀ ಭಾರತ ಮತ್ತು ಇಡೀ ವಿಶ್ವವೇ ರಾಮಮಯವಾಗಿದೆ. ಅದ್ವಿತೀಯ ತೃಪ್ತಿ, ಅಪಾರ ಕೃತಜ್ಞತೆ ಮತ್ತು ಅನಂತ ಅಲೌಕಿಕ ಆನಂದವಿದೆ.

ಶತಮಾನಗಳ ಗಾಯಗಳು ಗುಣವಾಗುತ್ತಿವೆ. ಶತಮಾನಗಳ ನೋವು ಇಂದು ಶಮನವಾಗಿದೆ. ಶತಮಾನಗಳಿಂದ ಮಾಡಿದ ಸಂಕಲ್ಪಗಳು ಇಂದು ಸಿದ್ಧಿಸುತ್ತಿವೆ. ೫೦೦ ವರ್ಷಗಳ ಹಿಂದಿನ ಯಜ್ಞ ಇಂದು ಪೂರ್ಣಾಹುತಿಯಾಗುತ್ತಿದೆ.

ಇಂದು ಭಗವಾನ್ ಶ್ರೀರಾಮನ ಗರ್ಭಗುಡಿಯಲ್ಲಿ ಅನಂತ ಶಕ್ತಿ, ದಿವ್ಯ-ಭವ್ಯ ಮಂದಿರದಲ್ಲಿ ರಾಮ ದರ್ಬಾರ್ ಪ್ರತಿಷ್ಠಾಪನೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು. ಅವರು ಶ್ರೀರಾಮ ಮಂದಿರದ ಮೇಲೆ ಧರ್ಮ ಧ್ವಜಾರೋಹಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ನೃತ್ಯಗೋಪಾಲದಾಸ್ ಮಹಾರಾಜ್, ಖಜಾಂಚಿ ಸ್ವಾಮಿ ಗೋವಿಂದದೇವ ಗಿರಿ, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಮೋದಿ ಅವರು ಈ ಸಂದರ್ಭದಲ್ಲಿ ಮಾತನಾಡಿ

೧೦೦೦ ವರ್ಷಗಳಿಗಾಗಿ ಭಾರತದ ಅಡಿಪಾಯವನ್ನು ಭದ್ರಪಡಿಸಬೇಕು!

ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆ ಮಾಡಿದಾಗ, ನಾನು ‘ಶ್ರೀರಾಮ ಮಂದಿರದಿಂದ ರಾಮರಾಜ್ಯ’ ಎಂಬ ವಿಷಯದ ಬಗ್ಗೆ ಚರ್ಚೆ ಮಾಡಿದೆ. ನಾವು ಮುಂಬರುವ ೧೦೦೦ ವರ್ಷಗಳಿಗಾಗಿ ಭಾರತದ ಅಡಿಪಾಯವನ್ನು ಭದ್ರಪಡಿಸಬೇಕು. ವರ್ತಮಾನದ ಜೊತೆಗೆ ಭವಿಷ್ಯದ ಪೀಳಿಗೆಯ ಬಗ್ಗೆಯೂ ಯೋಚಿಸಬೇಕು. ನಾವು ಇಲ್ಲದಿದ್ದಾಗಲೂ ಈ ದೇಶವಿತ್ತು, ಮುಂದೆಯೂ ಇರುತ್ತದೆ. ನಾವು ಒಂದು ಜೀವಂತ ಸಮಾಜ. ಹಾಗಾಗಿ ನಾವು ದೂರದೃಷ್ಟಿಯಿಂದ ಕೆಲಸ ಮಾಡಬೇಕು. ನಾವು ಪ್ರಭು ಶ್ರೀರಾಮನಿಂದ ಕಲಿಯಬೇಕು. ಅವರ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕು.

ಧರ್ಮಧ್ವಜವು ಯುಗಯುಗಾಂತರಗಳವರೆಗೆ ಪ್ರಭು ಶ್ರೀರಾಮನ ಬೋಧನೆಯನ್ನು ಮಾನವಕುಲಕ್ಕೆ ತಲುಪಿಸುತ್ತದೆ!

ಈ ಧರ್ಮಧ್ವಜ ಕೇವಲ ಒಂದು ಧ್ವಜವಲ್ಲ, ಇದು ಭಾರತೀಯ ನಾಗರಿಕತೆಯ ಪುನಃಸ್ಥಾಪನೆಯ ಸಂಕೇತವಾಗಿದೆ. ಈ ಧ್ವಜವು ವರ್ಷಗಳ ಕಾಲ ಕಂಡ ಕನಸುಗಳ ಸಾಕಾರ ರೂಪವಾಗಿದೆ. ಮುಂಬರುವ ಅನೇಕ ಶತಮಾನಗಳವರೆಗೆ ಈ ಧರ್ಮಧ್ವಜವು ಪ್ರಭು ಶ್ರೀರಾಮನ ಆದರ್ಶಗಳನ್ನು ಘೋಷಿಸುತ್ತದೆ. ‘ಸತ್ಯಮೇವ ಜಯತೆ’ ಎಂಬ ಘೋಷಣೆಯನ್ನು ಈ ಧರ್ಮಧ್ವಜ ಮಾಡುತ್ತದೆ. ‘ಪ್ರಾಣ ಜಾಯೆ ಪರ, ವಚನ ನ ಜಾಯೆ’ ಎಂಬುದಕ್ಕೆ ಈ ಧ್ವಜವು ಪ್ರೇರಣೆ ನೀಡುತ್ತದೆ. ವಿಶ್ವಾಸ, ಕರ್ಮ ಮತ್ತು ಕರ್ತವ್ಯಕ್ಕೆ ಪ್ರಾಮುಖ್ಯತೆ ನೀಡಲು ಕಲಿಸುತ್ತದೆ. ಭೇದ-ಭಾವದಿಂದ ಮುಕ್ತಿ ಮತ್ತು ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುತ್ತದೆ. ನಾವು ಬಡತನವಿಲ್ಲದ, ಪರದಾಟವಿಲ್ಲದ ಸಮಾಜವನ್ನು ನಿರ್ಮಿಸೋಣ. ಈ ಧರ್ಮಧ್ವಜವು ಯುಗಯುಗಾಂತರಗಳವರೆಗೆ ಪ್ರಭು ಶ್ರೀರಾಮನ ಬೋಧನೆಯನ್ನು ಮಾನವಕುಲಕ್ಕೆ ತಲುಪಿಸುತ್ತದೆ ಎಂಬ ನಿರೀಕ್ಷೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದರು.

ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಕೊಡುಗೆ ನೀಡಿದ ಭಕ್ತರು, ಕುಶಲಕರ್ಮಿಗಳು, ಯೋಜನೆಕಾರರು, ವಾಸ್ತುಶಿಲ್ಪಿಗಳು ಎಲ್ಲರಿಗೂ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ನಾವು ಸಂಪ್ರದಾಯಗಳಿಂದ ದೂರವಾದಾಗ, ವೈಭವವು ಇತಿಹಾಸದ ಪುಟಗಳಲ್ಲಿ ಅಡಗಿಹೋಗುತ್ತದೆ!

ಸನಾತನ ಧರ್ಮದ ಸಂಪ್ರದಾಯಗಳನ್ನು ಸಂರಕ್ಷಿಸುವಂತೆ ಕರೆ ನೀಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು , “ನಾವು ನಮ್ಮ ಮೂಲದಿಂದ, ಸಂಪ್ರದಾಯಗಳಿಂದ ದೂರವಾದಾಗ, ನಮ್ಮ ವೈಭವವು ಇತಿಹಾಸದ ಪುಟಗಳಲ್ಲಿ ಅಡಗಿಹೋಗುತ್ತದೆ. ರಾಮಾಯಣ ಕಾಲದಲ್ಲಿ ಭರತನು ತನ್ನ ಸೇನೆಯೊಂದಿಗೆ ಚಿತ್ರಕೂಟಕ್ಕೆ ತಲುಪಿದಾಗ, ಲಕ್ಷ್ಮಣನು ದೂರದಿಂದಲೇ ಅಯೋಧ್ಯೆಯ ಸೇನೆಯನ್ನು ಗುರುತಿಸಿದನು. ಇದರ ವರ್ಣನೆಯನ್ನು ವಾಲ್ಮೀಕಿ ಮಾಡಿದ್ದಾರೆ. ಆ ಸೇನೆಯ ಧ್ವಜದ ಮೇಲೆ ಕಾಂಚನ ವೃಕ್ಷದ ಚಿಹ್ನೆ ಇತ್ತು. ಅದೇ ಕಾಂಚನ ವೃಕ್ಷದ ಶುಭ ಚಿಹ್ನೆಯು ಮತ್ತೆ ಶ್ರೀರಾಮಮಂದಿರದ ಧ್ವಜದ ಮೇಲಿದೆ. ಇದು ಕೇವಲ ಚಿಹ್ನೆಯ ಪುನರಾಗಮನವಲ್ಲ, ಇದು ನಮ್ಮ ಸಂಪ್ರದಾಯಗಳ ಪುನರುಜ್ಜೀವನವಾಗಿದೆ. ದೇಶವನ್ನು ಮುನ್ನಡೆಸಬೇಕಾದರೆ, ನಮ್ಮ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡಬೇಕು. ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗಬೇಕು” ಎಂದು ಅವರು ಕರೆ ನೀಡಿದರು.

ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗುವುದು!

೧೮೩೫ ರಲ್ಲಿ ಮೆಕಾಲೆ ಎಂಬ ಆಂಗ್ಲನು ಭಾರತವನ್ನು ತನ್ನ ಮೂಲ ಸಂಪ್ರದಾಯಗಳಿಂದ ವಿಮುಕ್ತಗೊಳಿಸುವ ಅಡಿಪಾಯ ಹಾಕಿದನು. ೨೦೩೫ ರಲ್ಲಿ ಈ ಅಪವಿತ್ರ ಘಟನೆಗೆ ೨೦೦ ವರ್ಷಗಳು ಪೂರ್ಣಗೊಳ್ಳುತ್ತವೆ. ದುರದೃಷ್ಟವಶಾತ್, ಮೆಕಾಲೆಯ ಉದ್ದೇಶವು ವ್ಯಾಪಕವಾಗಿ ಯಶಸ್ವಿಯಾಯಿತು. ‘ನಮ್ಮ ಸಂಪ್ರದಾಯದಲ್ಲಿ ದೋಷವಿದೆ, ವಿದೇಶದಲ್ಲಿ ಎಲ್ಲವೂ ಉತ್ತಮವಾಗಿದೆ’ ಎಂಬ ಮನಸ್ಥಿತಿ ಬೇರೂರಿತು. ಕಳೆದ ವಾರ ನಾನು ಒಂದು ಕಾರ್ಯಕ್ರಮದಲ್ಲಿ ‘ಭಾರತವನ್ನು ಮುಂಬರುವ ೧೦ ವರ್ಷಗಳಲ್ಲಿ ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸಲಾಗುವುದು’ ಎಂದು ಹೇಳಿದ್ದೆ. ‘ಮುಂಬರುವ ೧೦ ವರ್ಷಗಳಲ್ಲಿ ನಮ್ಮ ದೇಶವನ್ನು ಗುಲಾಮಗಿರಿಯ ಮನಸ್ಥಿತಿಗೆ ತಳ್ಳುವ ಮೆಕಾಲೆ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ಧ್ವಂಸಗೊಳಿಸಬೇಕು. ೨೦೩೫ ರಲ್ಲಿ ಗುಲಾಮಗಿರಿಯ ಮನಸ್ಥಿತಿಯನ್ನು ಕೈಬಿಟ್ಟರೆ, ೨೦೪೭ ರಲ್ಲಿ ವಿಕಸಿತ ಭಾರತ ನಿರ್ಮಾಣವಾಗುತ್ತದೆ. ಮೆಕಾಲೆಯ ಯೋಜನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ ನಂತರವೇ ವಿಕಸಿತ ಭಾರತದ ಕನಸು ನನಸಾಗುತ್ತದೆ’ ಎಂಬ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದರು.

ಭಾರತ ಪ್ರಜಾಪ್ರಭುತ್ವದ ಜನನಿ!

“ನಾವು ವಿದೇಶದಿಂದ ಪ್ರಜಾಪ್ರಭುತ್ವವನ್ನು ಸ್ವೀಕರಿಸಿದ್ದೇವೆ” ಎಂದು ನಮಗೆ ಹೇಳಲಾಯಿತು. ವಾಸ್ತವದಲ್ಲಿ ಭಾರತವು ಪ್ರಜಾಪ್ರಭುತ್ವದ ಜನನಿ. ಪ್ರಜಾಪ್ರಭುತ್ವವು ನಮ್ಮ ‘ಡಿಎನ್‌ಎ’ (ಡಿಆಕ್ಸಿರೈಬೋ ನ್ಯೂಕ್ಲಿಯಿಕ್ ಆಸಿಡ್ ಅಂದರೆ ವ್ಯಕ್ತಿಯ ಮೂಲ ಗುರುತನ್ನು ಪತ್ತೆಹಚ್ಚುವ ದೇಹದ ಅಂಶ) ನಲ್ಲಿದೆ. ತಮಿಳುನಾಡಿನಲ್ಲಿ ಸಾವಿರಾರು ವರ್ಷಗಳ ಹಿಂದಿನ ಶಾಸನವಿದೆ. ಆ ಶಾಸನದ ಮೇಲೆ ‘ಜನರು ಹೇಗೆ ಸರಕಾರವನ್ನು ಆಯ್ಕೆ ಮಾಡುತ್ತಾರೆ?’ ಎಂಬ ಬಗ್ಗೆ ಉಲ್ಲೇಖವಿದೆ. ಭಗವಾನ್ ಬಸವಣ್ಣನವರ ಅನುಭವ ಮಂಟಪದ ಮಾಹಿತಿಯನ್ನು ಮರೆಮಾಡಲಾಗಿದೆ. ಅದರಲ್ಲಿ ‘ಸಾರ್ವಜನಿಕ ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು’ ಎಂಬ ಮಾಹಿತಿ ಇದೆ. ನಾವು ನಮ್ಮ ಮೂಲಗಳ ಕಡೆಗೆ, ಅಂದರೆ ಪ್ರಾಚೀನ ಸಂಪ್ರದಾಯಗಳ ಕಡೆಗೆ ಹೋಗಬೇಕು.

ಭಾರತ ತನ್ನ ಶಕ್ತಿಯನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ!

ನಮ್ಮ ವ್ಯವಸ್ಥೆಯ ಪ್ರತಿಯೊಂದು ಮೂಲೆಯಲ್ಲೂ ಗುಲಾಮಗಿರಿಯ ಮನಸ್ಥಿತಿ ಮನೆ ಮಾಡಿದೆ. ನಾವು ನೌಕಾಪಡೆಯ ಧ್ವಜದಿಂದ ಗುಲಾಮಗಿರಿಯ ಸಂಕೇತವನ್ನು ತೆಗೆದುಹಾಕಿದ್ದೇವೆ. ಇದು ಕೇವಲ ವಿನ್ಯಾಸದಲ್ಲಿನ ಬದಲಾವಣೆಯಲ್ಲ, ಇದು ಮನಸ್ಥಿತಿಯನ್ನು ಬದಲಾಯಿಸುವ ಪ್ರಾರಂಭವಾಗಿದೆ. ಭಾರತವು ತನ್ನ ಶಕ್ತಿಯನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಗುಲಾಮಗಿರಿಯ ಮನಸ್ಥಿತಿಯು ಹಲವು ವರ್ಷಗಳಿಂದ ಶ್ರೀರಾಮತ್ವವನ್ನು ನಿರಾಕರಿಸಿದೆ. ಗುಲಾಮಗಿರಿಯ ಮನಸ್ಥಿತಿ ಎಷ್ಟು ಪ್ರಬಲವಾಯಿತು ಎಂದರೆ, ಪ್ರಭು ಶ್ರೀರಾಮನನ್ನೂ ಸಹ ಕಾಲ್ಪನಿಕವೆಂದು ಹೇಳಲಾಯಿತು, ಇದು ಈಗ ಬದಲಾಗಬೇಕು. ಮೆಕಾಲೆ ಶಿಕ್ಷಣ ವ್ಯವಸ್ಥೆಯಿಂದಾಗಿ ದೇಶದಲ್ಲಿ ನಿರ್ಮಾಣವಾದ ಗುಲಾಮಗಿರಿಯ ಮನಸ್ಥಿತಿಯನ್ನು ತೊರೆಯಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ಅನೇಕರ ಆತ್ಮಗಳು ತೃಪ್ತವಾಗಿರಬೇಕು! – ಪ.ಪೂ. ಸರಸಂಘಚಾಲಕರು

ಈ ದಿನವು ಎಲ್ಲರಿಗೂ ಅರ್ಥಪೂರ್ಣವಾಗಿದೆ. ಅನೇಕರು ಪ್ರಯತ್ನಿಸಿದರು, ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇಂದು ಅವರ ಆತ್ಮಗಳು ತೃಪ್ತವಾಗಿರಬೇಕು. ಅಶೋಕ್ ಸಿಂಘಲ್ (ವಿಶ್ವ ಹಿಂದೂ ಪರಿಷತ್ತಿನ ದಿವಂಗತ ಅಧ್ಯಕ್ಷರು) ಅವರಿಗೂ ಇಂದು ಶಾಂತಿ ದೊರಕಿರಬಹುದು. ಮಹಂತ್ ರಾಮಚಂದ್ರ ದಾಸ್ ಮಹಾರಾಜ್, ದಾಲ್ಮಿಯಾ ಮತ್ತು ಅನೇಕರು ಪರಿಶ್ರಮ ಪಟ್ಟರು, ಪ್ರಾಣಾರ್ಪಣೆಯನ್ನೂ ಸಹ ಮಾಡಿದರು, ಎಂದು ಪ. ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರು ತಮ್ಮ ಮಾರ್ಗದರ್ಶನದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಮಂದಿರ ನಿರ್ಮಾಣದ ಶಾಸ್ತ್ರೀಯ ಪ್ರಕ್ರಿಯೆ ಪೂರ್ಣ

ಭಾಗವತ್ ಅವರು ಮುಂದೆ ಮಾತನಾಡಿ,

ಧ್ವಜಾರೋಹಣದ ನಂತರ ಮಂದಿರ ನಿರ್ಮಾಣದ ಶಾಸ್ತ್ರೀಯ ಸಂಪ್ರದಾಯವು ವಿಧಿವತ್ತಾಗಿ ಪೂರ್ಣಗೊಂಡಿದೆ. ಯಾವ ರಾಮರಾಜ್ಯದ ಧ್ವಜವು ಒಮ್ಮೆ ಅಯೋಧ್ಯೆಯಲ್ಲಿ ಹಾರಾಡುತ್ತಾ ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡುತ್ತಿತ್ತೋ, ಅದೇ ಧ್ವಜವು ಇಂದು ಮತ್ತೆ ಶಿಖರದ ಮೇಲೆ ಪ್ರತಿಷ್ಠಾಪನೆಗೊಂಡಿರುವುದನ್ನು ನಾವು ನೋಡಿದ್ದೇವೆ.
ರಾಮ ಮಂದಿರದ ಪ್ರಕ್ರಿಯೆಯು ಇಂದು ಪೂರ್ಣಗೊಂಡಿದೆ. ಈ ಸಂಪ್ರದಾಯ, ಈ ಜ್ಞಾನ ಮತ್ತು ಈ ಸಂರಕ್ಷಣಾತ್ಮಕ ಛಾಯೆಯನ್ನು ಜಗತ್ತಿಗೆ ತಲುಪಿಸುವ ಕಾರ್ಯವನ್ನು ಭಾರತವು ಇಂದು ಹೊಸದಾಗಿ ಪ್ರಾರಂಭಿಸಿದೆ. ಇಂದು ನಮ್ಮ ಸಂಕಲ್ಪವನ್ನು ಪುನರುಚ್ಚರಿಸುವ ದಿನ. ನಾವು ಕಂಡ ಕನಸು ಮತ್ತು ನಮ್ಮ ಪೂರ್ವಜರ ಆಕಾಂಕ್ಷೆಯು ಇದಕ್ಕಿಂತಲೂ ಹೆಚ್ಚು ಭವ್ಯ ರೂಪದಲ್ಲಿ ಸಾಕಾರಗೊಂಡಿದೆ.

ಕೇಸರಿ ಧ್ವಜ ಧರ್ಮದ ಸಂಕೇತ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಶ್ರೀರಾಮ ಮಂದಿರದ ಮೇಲೆ ಧರ್ಮ ಧ್ವಜಾರೋಹಣ ಸಮಾರಂಭವು ಒಂದು ದೊಡ್ಡ ಯಜ್ಞದ ಪೂರ್ಣಾಹುತಿಯಾಗಿದೆ. ವಿವಾಹ ಪಂಚಮಿಯ ಶುಭ ಮುಹೂರ್ತವು ಈ ಸಮಾರಂಭವನ್ನು ಪವಿತ್ರಗೊಳಿಸುತ್ತಿದೆ. ಅನೇಕ ಪೀಳಿಗೆಯ ನಿರೀಕ್ಷೆಯು ಈ ಭವ್ಯ ಶ್ರೀರಾಮ ಮಂದಿರದ ರೂಪದಲ್ಲಿ ಸಾಕಾರಗೊಂಡಿದೆ. ಶ್ರೀರಾಮ ಮಂದಿರದ ಮೇಲಿನ ಭಗವಾ ಧ್ವಜವು ಧರ್ಮದ ಸಂಕೇತವಾಗಿದೆ. ಇದು ವಿಕಸಿತ ಭಾರತದ ಸಂಕಲ್ಪದ ಸಂಕೇತವೂ ಆಗಿದೆ. ಸಂಕಲ್ಪಕ್ಕೆ ಯಾವುದೇ ವಿಕಲ್ಪವಿಲ್ಲ. ಕಳೆದ ೧೧ ವರ್ಷಗಳಲ್ಲಿ ಬದಲಾಗುತ್ತಿರುವ ಭಾರತವನ್ನು ಎಲ್ಲರೂ ನೋಡಿದ್ದಾರೆ. ಅಭಿವೃದ್ಧಿ ಮತ್ತು ಪರಂಪರೆಯ ಸಮುಚ್ಚಯವನ್ನು ಎಲ್ಲರೂ ನೋಡಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಸಂದರ್ಭದಲ್ಲಿ ಭಾವನೆಯನ್ನು ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸಿ, “ಕಳೆದ ೫೦೦ ವರ್ಷಗಳಲ್ಲಿ ಸಾಮ್ರಾಜ್ಯಗಳು, ಪೀಳಿಗೆಗಳು ಬದಲಾದವು; ಆದರೆ ಶ್ರದ್ಧೆ ಅಚಲವಾಗಿ ಉಳಿಯಿತು. ರಾ.ಸ್ವ. ಸಂಘದಂತಹ ಸಂಘಟನೆಯ ಕೈಗೆ ಕಮಾನ್ ಬಂತು ಮತ್ತು ‘ರಾಮಲಲ್ಲಾ ಹಮ್ ಆಯೇಂಗೆ, ಲಾಠಿ ಗೋಲಿ ಖಾಯೇಂಗೆ, ಮಂದಿರ್ ವಹೀ ಬನಾಯೇಂಗೆ’ ಎಂಬ ಘೋಷಣೆಗಳು ಮೊಳಗಿದವು. ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ರಾಮ ರಾಜ್ಯದ ಪುನಃಸ್ಥಾಪನೆಯ ದಿವ್ಯ ಅನುಭವವನ್ನು ಇಂದು ನಾವು ಪಡೆಯುತ್ತಿದ್ದೇವೆ. ಶ್ರದ್ಧೆಯ ಹೊಸ ಯುಗಕ್ಕೆ ನಾವು ಪ್ರವೇಶಿಸುತ್ತಿದ್ದೇವೆ. ಪ್ರತಿಯೊಬ್ಬ ಧರ್ಮಾಭಿಮಾನಿಗೆ ಇದು ಆತ್ಮಗೌರವದ ದಿನವಾಗಿದೆ. ಧರ್ಮಪಥ, ರಾಮಪಥ, ಭಕ್ತಿಪಥ, ೮೪ ಮೈಲಿ ಪ್ರದಕ್ಷಿಣೆ ಭಕ್ತರ ಶ್ರದ್ಧೆಗೆ ಹೊಸ ಗೌರವವನ್ನು ನೀಡುತ್ತಿದೆ. ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವು ಭಕ್ತರಿಗೆ ಅಂತರರಾಷ್ಟ್ರೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಸ್ಮಾರ್ಟ್ ಸಿಟಿ ರೂಪದಲ್ಲಿ ಅಯೋಧ್ಯೆ ಹೊರಹೊಮ್ಮುತ್ತಿದೆ.”

ಧರ್ಮಧ್ವಜ ಮತ್ತು ಅದರ ಮೇಲಿನ ಚಿಹ್ನೆಗಳು!

ಕೇಸರಿ ಬಣ್ಣದ ಈ ಧರ್ಮ ಧ್ವಜದ ಮೇಲೆ ಕೋವಿದಾರ ವೃಕ್ಷ, ಸೂರ್ಯ ಮತ್ತು ಓಂ ಚಿತ್ರಿಸಲಾಗಿದೆ. ಕೆಲವರು ಕೋವಿದಾರ ವೃಕ್ಷವನ್ನು ಕಾಂಚನ, ರಕ್ತ ಕಾಂಚನ, ದೇವಕಾಂಚನ, ವನರಾಜ, ರಕ್ತಪುಷ್ಪ ಎಂದೂ ಕರೆಯುತ್ತಾರೆ. ಇದು ಭಗವಾನ್ ಶ್ರೀರಾಮನ ವಂಶದ ಸಂಕೇತವಾಗಿದೆ. ಈ ವೃಕ್ಷವು ನೇರಳೆ ಬಣ್ಣದ ಹೂಗಳನ್ನು ಬಿಡುತ್ತದೆ. ಶ್ರೀರಾಮ ಸೂರ್ಯವಂಶದವರಾಗಿದ್ದರಿಂದ, ಸೂರ್ಯನಾರಾಯಣನ ಚಿಹ್ನೆಯನ್ನು ಈ ಧ್ವಜದ ಮೇಲೆ ಚಿತ್ರಿಸಲಾಗಿದೆ.
ಈ ಧರ್ಮಧ್ವಜವು ಅನೇಕ ಕಿಲೋಮೀಟರ್ ದೂರದಿಂದಲೂ ಕಾಣಿಸುತ್ತದೆ. ಈ ಧ್ವಜವು 22 ಅಡಿ ಉದ್ದ ಮತ್ತು 11 ಅಡಿ ಅಗಲವಿದ್ದು 2 ರಿಂದ 3 ಕಿಲೋಗ್ರಾಂ ತೂಕ ಹೊಂದಿದೆ. 161 ಅಡಿ ಎತ್ತರದ ದೇವಸ್ಥಾನದ ಶಿಖರ ಮತ್ತು ಶಿಖರದ ಮೇಲಿನ 42 ಅಡಿ ಎತ್ತರದ ಧ್ವಜದಂಡಕ್ಕೆ ಅನುಗುಣವಾಗಿ ಈ ಧ್ವಜವನ್ನು ಸಿದ್ಧಪಡಿಸಲಾಗಿದೆ. ಈ ಧ್ವಜಕ್ಕಾಗಿ 360 ಕೋನದಲ್ಲಿ ತಿರುಗುವ ಬಾಲ್-ಬೇರಿಂಗ್ ಅನ್ನು ಬಳಸಲಾಗುತ್ತದೆ.

ಈ ಧ್ವಜವನ್ನು ಕೈಯಿಂದ ಹೊಲಿಯಲು 25 ದಿನಗಳು ಬೇಕಾಯಿತು. ಈ ಧ್ವಜವನ್ನು ‘ಏವಿಯೇಷನ್ ಗ್ರೇಡ್ ಪ್ಯಾರಾಚೂಟ್ ನೈಲಾನ್’ ಮತ್ತು ರೇಷ್ಮೆಯಿಂದ ಸಿದ್ಧಪಡಿಸಲಾಗಿದೆ. ಪ್ಯಾರಾಚೂಟ್ ಗ್ರೇಡ್ ನೈಲಾನ್‌ನಲ್ಲಿ ಸಿಲ್ಕ್ ಸ್ಯಾಟಿನ್ ದಾರವನ್ನು ಬಳಸಲಾಗಿದೆ. ಇದರಿಂದಾಗಿ ವೇಗವಾದ ಗಾಳಿ, ಭಾರೀ ಮಳೆ ಮತ್ತು ಹವಾಮಾನದ ಬದಲಾವಣೆಗಳು ಇದರ ಮೇಲೆ ತಕ್ಷಣ ಪರಿಣಾಮ ಬೀರುವುದಿಲ್ಲ.

ಕೋವಿದಾರ ವೃಕ್ಷದ ಮಹತ್ವ!

ಕೋವಿದಾರ ವೃಕ್ಷ ಮಂದಾರ ಮತ್ತು ಪಾರಿಜಾತ ವೃಕ್ಷಗಳ ಸಂಕರದಿಂದ ಹುಟ್ಟಿದೆ ಎಂದು ನಂಬಲಾಗಿದೆ. ಈ ವೃಕ್ಷವನ್ನು ಋಷಿ ಕಶ್ಯಪ ಅವರು ಸೃಷ್ಟಿಸಿದ್ದಾರೆ ಎಂಬ ವಿವರಣೆಯೂ ಕಂಡುಬರುತ್ತದೆ. ಇದರ ಗುಣಲಕ್ಷಣಗಳನ್ನು ಗಮನಿಸಿದರೆ, ಇದು ಆಯುರ್ವೇದದಲ್ಲಿ ಅತ್ಯಂತ ಉಪಯುಕ್ತವೆಂದು ಪರಿಗಣಿಸಲಾಗಿದೆ. ಈ ವೃಕ್ಷದ ಹೂವುಗಳು, ಎಲೆಗಳು ಮತ್ತು ತೊಗಟೆಯನ್ನು ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಈ ವೃಕ್ಷವು ದೇವತೆಗಳಿಗೆ ಪ್ರಿಯವಾಗಿದೆ ಮತ್ತು ಇದರ ಸುತ್ತಮುತ್ತ ನಿರಂತರವಾಗಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಂದೂ ನಂಬಲಾಗಿದೆ. ಇದಕ್ಕೆ ಕಾಂಚನಾರ, ಕಚನಾರ ಅಥವಾ ಕಚನಾಲ್ ಎಂಬ ಇತರ ಹೆಸರುಗಳೂ ಇವೆ. ಉತ್ತರ ಭಾರತದಲ್ಲಿ, ವಿಶೇಷವಾಗಿ ಹಿಮಾಲಯದ ದಕ್ಷಿಣ ಭಾಗದಲ್ಲಿ ಈ ವೃಕ್ಷವು ಹೇರಳವಾಗಿ ಕಂಡುಬರುತ್ತದೆ. ಕಾಳಿದಾಸನ ‘ರಘುವಂಶ’ ಮತ್ತು ‘ಮೇಘದೂತ’ ಕಾವ್ಯಗಳಲ್ಲಿಯೂ ಇದರ ಉಲ್ಲೇಖವಿದೆ. ಪ್ರಾಚೀನ ಭಾರತೀಯ ವೈದ್ಯಕೀಯ ಗ್ರಂಥಗಳಲ್ಲಿಯೂ ಕೋವಿದಾರ ವೃಕ್ಷದ ವಿವರವಾದ ವಿವರಣೆ ಕಂಡುಬರುತ್ತದೆ.