
ಭಗವಾನ ಶ್ರೀ ದತ್ತಾತ್ರೇಯರು ಭಾರತದಾದ್ಯಂತ ತಮ್ಮ ಅವತಾರಿ ಕಾರ್ಯವನ್ನು ಮಾಡಿದ ಅನೇಕ ಸ್ಥಳಗಳು ಪ್ರಸಿದ್ಧವಾಗಿವೆ. ಅವುಗಳಲ್ಲಿ ಒಂದು ಮಹತ್ವದ ಸ್ಥಾನವೆಂದರೆ ಗಿರನಾರ ಪರ್ವತ! ಶ್ರೀ ದತ್ತ ಗುರುಗಳ ಕೆಲವು ಸ್ಥಳಗಳು ಊರುಗಳಲ್ಲಿ ಮತ್ತು ಇನ್ನು ಕೆಲವು ದಟ್ಟ ಅರಣ್ಯಗಳಲ್ಲಿವೆ, ಗುಜರಾತನ ಈ ಸ್ಥಳವು ತುಂಬಾ ಎತ್ತರದಲ್ಲಿದೆ. ಭಗವಾನ ಶ್ರೀ ದತ್ತಾತ್ರೇಯರು ೧೨ ಸಾವಿರ ವರ್ಷಗಳ ಕಾಲ ತಪಶ್ಚರ್ಯ ಮಾಡಿ ಪಾವನಗೊಳಿಸಿದ ತೀರ್ಥಕ್ಷೇತ್ರವೆಂದರೆ ಗಿರನಾರ! ಅದರ ಮಹಾತ್ಮೆಯನ್ನು ತಿಳಿದುಕೊಳ್ಳೋಣ.

೧. ಗಿರನಾರನ ಪ್ರಾಚೀನತೆ
ಗಿರನಾರನ ಮೂಲ ಹೆಸರು ಗಿರಿ ನಾರಾಯಣ ಎಂದಾಗಿದೆ. ಇಲ್ಲಿಯ ಗೀರ್ ಹಸುಗಳು ಪ್ರಸಿದ್ಧವಾಗಿವೆ. ಶಿವಪುರಾಣದಲ್ಲಿ ಇದರ ಹೆಸರು ರೇವತಾಂಚಲ ಪರ್ವತ ಎಂದಾಗಿದ್ದರೆ, ಇತರ ಪುರಾಣಗಳಲ್ಲಿ ಗಿರನಾರನ ಹೆಸರು ರೇವತ್, ರೇವತಾಂಚಲ ಎಂದಾಗಿದೆ. ಪುರಾಣಗಳಲ್ಲಿ ಶ್ವೇತಾಚಲ, ಶ್ವೇತಗಿರಿ ಎಂದೂ ಉಲ್ಲೇಖಿಸಲಾಗಿದೆ. ಗಿರನಾರ ಪರ್ವತವು ಹಿಮಾಲಯಕ್ಕಿಂತಲೂ ಹೆಚ್ಚು ಪ್ರಾಚೀನವಾಗಿದೆ ಎಂದು ಹೇಳಲಾಗುತ್ತದೆ. ಮೊದಲು ಗಿರನಾರನ ನಿರ್ಮಾಣವಾಯಿತು, ನಂತರ ಹಿಮಾಲಯ. ಆದ್ದರಿಂದ ಹಿಮಾಲಯದಂತೆಯೇ ಗಿರನಾರಕ್ಕೂ ಆಧ್ಯಾತ್ಮಿಕ ಮಹತ್ವವಿದೆ. ಗಿರನಾರನ ರೇವತಾಂಚಲ, ಕುಮುದ, ಉಜ್ಜಯಂತ ಎಂಬ ಹೆಸರುಗಳು ತ್ರಿಮೂರ್ತಿಗಳಿಗೆ (ಬ್ರಹ್ಮ, ವಿಷ್ಣು ಮತ್ತು ಶಂಕರ) ಸಂಬಂಧಿಸಿವೆ. ಗಿರನಾರ ಪರ್ವತದ ಪ್ರದೇಶವು ಅತ್ಯಂತ ರಮಣೀಯ, ಮನೋಹರ, ವನ್ಯಪ್ರಾಣಿಗಳಿಂದ ಸಮೃದ್ಧ ಮತ್ತು ವಿವಿಧ ಔಷಧೀಯ ವನಸ್ಪತಿಗಳಿಂದ ಕೂಡಿದೆ.
೨. ಗಿರನಾರನಲ್ಲಿರುವ ವಿವಿಧ ಸ್ಥಳಗಳು
|
|
|
ಗುಜರಾತ ರಾಜ್ಯದ ಜುನಾಗಢದಿಂದ (ಸೌರಾಷ್ಟ್ರ) ೫ ಕಿ.ಮೀ. ದೂರದಲ್ಲಿರುವ ತಲೇಠಿಗೆ ಅಂದರೆ ಗಿರನಾರ ಪರ್ವತದ ತಪ್ಪಲಿನಲ್ಲಿ ಹೋಗಬೇಕು. ಶ್ರೀ ದತ್ತಗುರುಗಳ ತಪಶ್ಚರ್ಯ ಸ್ಥಾನದವರೆಗೆ ಅಂದರೆ ಗುರುಶಿಖರದವರೆಗೆ ತಲುಪಲು ೧೦ ಸಾವಿರ ಮೆಟ್ಟಿಲುಗಳ ದೂರವನ್ನು ಹತ್ತಬೇಕಾಗುತ್ತದೆ. ೨,೬೦೦ ಮೆಟ್ಟಿಲುಗಳ ಸಮೀಪ ರಾಣಕ್ ದೇವಿಮಾತೆಯ ಶಿಲೆಯಿದೆ. ಆ ಶಿಲೆಯ ಮೇಲೆ ಎರಡು ಹಸ್ತಗಳ ಗುರುತು ಇವೆ. ಸ್ವಲ್ಪ ಮುಂದೆ ಹೋದಾಗ ಸುಮಾರು ೩,೫೦೦ ಮೆಟ್ಟಿಲುಗಳ ಹತ್ತಿರ ಪ್ರಸೂತಿಬಾಯಿ ದೇವಿಯ ಸ್ಥಾನವಿದೆ. ಮಗು ಜನಿಸಿದ ನಂತರ ಇಲ್ಲಿಗೆ ಆ ಸಂತಾನವನ್ನು ಕರೆತಂದು ದರ್ಶನ ಪಡೆಯುವ ಭಕ್ತರ ಸಂಖ್ಯೆ ದೊಡ್ಡದಿದೆ. ಗೌ-ಮುಖಿ ಗಂಗೆಯ ಬಲಭಾಗದಿಂದ ಪರ್ವತವನ್ನು ಏರಲು ಪ್ರಾರಂಭಿಸಿದಾಗ ೪,೮೦೦ ಮೆಟ್ಟಿಲುಗಳ ಮೇಲೆ ಅಂಬಾಜಿ ಟುಂಕ್ ಅಂದರೆ ಅಂಬಾದೇವಿಯ ಮಂದಿರವಿದೆ. ೫೧ ಶಕ್ತಿಪೀಠಗಳಲ್ಲಿ ಇದೂ ಒಂದು ಶಕ್ತಿಪೀಠವಾಗಿದೆ. ದೇವಿ ಪಾರ್ವತಿಯು ಅಂಬಾ ಮಾತೆಯ ರೂಪದಲ್ಲಿ ಗಿರನಾರ ಪರ್ವತದ ಮೇಲೆ ವಾಸ ಮಾಡಿದ್ದಳು. ಮುಂದೆ ೫,೫೦೦ ಮೆಟ್ಟಿಲುಗಳ ಮೇಲೆ ಶ್ರೀ ಗೋರಕ್ಷನಾಥ ಟುಂಕ್ ಎಂಬ ಸ್ಥಳವಿದೆ. ಇದು ಸಮುದ್ರಮಟ್ಟದಿಂದ ೩,೬೬೬ ಅಡಿಗಳ ಎತ್ತರದಲ್ಲಿದೆ. ಸ್ವಲ್ಪ ಮುಂದೆ ಹೋದರೆ ಎರಡು ದೊಡ್ಡ ಕಮಾನುಗಳು ಸಿಗುತ್ತವೆ. ಬಲಬದಿಯ ಕಮಾನಿನಿಂದ ಸುಮಾರು ೩೦೦ ಮೆಟ್ಟಿಲುಗಳನ್ನು ಇಳಿದ ನಂತರ ಶ್ರೀ ಕಮಂಡಲು ಸ್ಥಾನವಿದೆ. ಎಡಬದಿಯ ಕಮಾನಿನಿಂದ ಮುಂದೆ ೧ ಸಾವಿರ ಮೆಟ್ಟಿಲುಗಳನ್ನು ಹತ್ತಿದ ನಂತರ ಗುರುಶಿಖರವು ಒಂದು ಉದ್ದವಾದ ಚೂಪಾದ ಆನೆದಂತದಂತಿದೆ. ಶ್ರೀ ದತ್ತ ಗುರುಗಳ ಚರಣಪಾದುಕೆಗಳು ಈ ಸ್ಥಳದಲ್ಲಿ ಮೂಡಿವೆ. ಇದೇ ಸ್ಥಳದಲ್ಲಿ ಕುಳಿತು ಭಗವಾನ ಶ್ರೀ ದತ್ತಾತ್ರೇಯರು ೧೨ ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದರು ಮತ್ತು ಇದು ಅವರ ಅಕ್ಷಯ ನಿವಾಸಸ್ಥಾನವಾಗಿದೆ ಎಂಬ ನಂಬಿಕೆ ದತ್ತ ಭಕ್ತರಲ್ಲಿ ಇದೆ. ಕ್ರಿ.ಪೂ. ೧ ಸಾವಿರ ವರ್ಷಗಳ ಹಿಂದೆ ರಾಜ ಕುಮಾರಪಾಲರು ಗಿರನಾರದ ಮೇಲೆ ಹತ್ತಲು ಈ ೧೦ ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿದ್ದರು. ಪ್ರತಿ ಹುಣ್ಣಿಮೆಯಂದು ಇಲ್ಲಿ ನೂರಾರು ದತ್ತ ಭಕ್ತರು ಆಗಮಿಸಿ ಗುರುಶಿಖರದವರೆಗೆ ಹೋಗಿ ದರ್ಶನ ಪಡೆಯುತ್ತಾರೆ. ಗುಜರಾತ ಸರಕಾರವು ಪ್ರಸ್ತುತ ಅರ್ಧದಷ್ಟು ಮೆಟ್ಟಿಲುಗಳವರೆಗೆ ಹೋಗಲು ‘ರೋಪ್-ವೇ’ ಸೌಲಭ್ಯವನ್ನು ಕಲ್ಪಿಸಿದೆ. ಇಲ್ಲಿ ವಯೋವೃದ್ಧ ಭಕ್ತರಿಗಾಗಿ ಡೋಲಿ (ಮೇಲಕ್ಕೆ ಹೋಗಲು ಪಲ್ಲಕ್ಕಿಯಂತಹ ವ್ಯವಸ್ಥೆ) ವ್ಯವಸ್ಥೆಯೂ ಇದೆ. ಗಿರನಾರನ ಪಕ್ಕದಲ್ಲಿರುವ ಎರಡು ಬೆಟ್ಟಗಳ ಮೇಲೆ ರೇಣುಕಾಮಾತೆ ಮತ್ತು ಅನಸೂಯಾಮಾತೆಯರು ವಿರಾಜಮಾನರಾಗಿದ್ದಾರೆ. ಗಿರನಾರದ ಪಕ್ಕದಲ್ಲಿ ಭವ್ಯವಾದ ದಾತಾರ್ ಪರ್ವತವು ಕಾಣಿಸುತ್ತದೆ. ಈ ಪರ್ವತವನ್ನು ಹತ್ತುವಾಗ ಸುಮಾರು ೩ ಸಾವಿರ ಮೆಟ್ಟಿಲುಗಳ ಮೇಲೆ ದಾತಾರ್ ಭಗವಾನ ನೆಲೆಸಿದ್ದಾರೆ. ಅದರ ಮುಂದೆ ನವನಾಥರ ಸ್ಥಾನವಿದೆ. ದಾತಾರ್ ಪರ್ವತದ ಎದುರಿಗಿರುವ ಬೆಟ್ಟವು ಜೋಗಿಣಿಯರ ಬೆಟ್ಟ ಎಂದು ಪ್ರಸಿದ್ಧವಾಗಿದೆ. ಈ ಬೆಟ್ಟದಲ್ಲಿ ೬೪ ಯೋಗಿನಿಯರ ಓಡಾಟವಿದೆ.
೩. ಗಿರನಾರನಲ್ಲಿರುವ ಕುಂಡಗಳು ಮತ್ತು ತೀರ್ಥಸ್ಥಾನಗಳು

ಗಿರನಾರನಲ್ಲಿ ಅನೇಕ ಸಂತರಿಗೆ ಶ್ರೀ ದತ್ತಪ್ರಭುಗಳು ಸಾಕ್ಷಾತ್ ದರ್ಶನ ನೀಡಿದ್ದಾರೆ. ಇಲ್ಲಿ ಅನೇಕ ಸಿದ್ಧಯೋಗಿಗಳು ಗಿರನಾರನ ಗುಹೆಗಳಲ್ಲಿ ನೂರಾರು ವರ್ಷಗಳಿಂದ ಸಾಧನೆ ಮಾಡುತ್ತಿದ್ದಾರೆ. ಗಿರನಾರ ಪರ್ವತದ ತಪ್ಪಲಿನಲ್ಲಿ ಅಂದರೆ ತಲೇಠಿಯಲ್ಲಿ ಭವನಾಥ ದೇವಸ್ಥಾನ, ಭಗವಾನ ಮಹಾದೇವ ದೇವಸ್ಥಾನ, ಮೃಗಿ ಕುಂಡ, ಲಂಬೇ ಹನುಮಾನ ದೇವಸ್ಥಾನ ಮುಂತಾದ ಪ್ರಾಚೀನ ಸ್ಥಳಗಳಿವೆ.
೪. ಶ್ರೀ ದತ್ತ ಮಹಾರಾಜರ ಧುನಿ (ಪವಿತ್ರ ಅಗ್ನಿ)

ಗಿರನಾರ ಪರ್ವತದ ಮೇಲೆ ಕಮಂಡಲು ಸ್ಥಾನವಿದೆ. ಇಲ್ಲಿ ಶ್ರೀ ದತ್ತ ಮಹಾರಾಜರ ಅಖಂಡ ಧುನಿ (ನಿರಂತರವಾಗಿ ಉರಿಯುವ ಅಗ್ನಿ) ಇದೆ. ಇಲ್ಲಿರುವ ಅಗ್ನಿಯು ೫ ಸಾವಿರ ವರ್ಷಗಳಿಂದ ಇದೆ ಎಂದು ಹೇಳಲಾಗುತ್ತದೆ. ಈ ಪವಿತ್ರ ಅಗ್ನಿಯು ಒಂದು ದೈವದುರ್ಲಭ ಕೊಡುಗೆಯಾಗಿದೆ. ಇಂದಿಗೂ ಆ ಪವಿತ್ರ ಅಗ್ನಿಯು ಪ್ರತಿ ಸೋಮವಾರ ಬೆಳಗ್ಗೆ ೬ ರಿಂದ ೬.೩೦ ಗಂಟೆಯ ಸುಮಾರಿಗೆ ಒಂದು ಗಂಟೆ ಕಾಲ ಪ್ರಕಟವಾಗುತ್ತದೆ. ಈ ಬಗ್ಗೆ ಒಂದು ಕಥೆಯನ್ನು ಹೇಳಲಾಗುತ್ತದೆ, ಭಗವಾನ ದತ್ತಾತ್ರೇಯರು ಸಾವಿರಾರು ವರ್ಷಗಳ ಕಾಲ ದತ್ತಟುಂಕ್‌ದ (ಶಿಖರದ ಮೇಲೆ) ಮೇಲೆ ಧ್ಯಾನಸ್ಥರಾಗಿ ಕುಳಿತಿದ್ದಾಗ, ಪ್ರಜೆಗಳು ಬರಗಾಲದಿಂದ ಕಂಗೆಟ್ಟಿದ್ದರು. ಪ್ರಜೆಗಳ ಮೇಲೆ ದಯೆಯುಂಟಾಗಿ ದೇವಿ ಅನಸೂಯಾಮಾತೆಯು ಶ್ರೀ ದತ್ತಾತ್ರೇಯರನ್ನು ಧ್ಯಾನಾವಸ್ಥೆಯಿಂದ ಹೊರತರಲು ಅವರನ್ನು ಕರೆದಳು. ಆಗ ಭಗವಾನ ದತ್ತಾತ್ರೇಯರ ಕಮಂಡಲು ಕೆಳಗೆ ಬಿದ್ದಿತು. ಅದರ ಒಂದು ಭಾಗ ಒಂದು ಕಡೆಗೆ, ಮತ್ತು ಇನ್ನೊಂದು ಭಾಗ ಇನ್ನೊಂದು ಕಡೆಗೆ, ಹೀಗೆ ಅದರ ವಿಭಜನೆಯಾಯಿತು. ಒಂದು ಕಡೆ ಅಗ್ನಿ (ಎಲ್ಲಿ ಬೆಂಕಿ ಇದೆಯೋ) ಪ್ರಕಟವಾಯಿತು, ಮತ್ತೊಂದು ಸ್ಥಳದಲ್ಲಿ ಗಂಗೆಯು ಅವತರಿಸಿ ಜಲಕುಂಡವು ನಿರ್ಮಾಣವಾಯಿತು. ಅದೇ ಈ ಕಮಂಡಲು ಸ್ಥಾನವಾಗಿದೆ. ಕಮಂಡಲು ಕುಂಡದ ಸ್ಥಾನದಲ್ಲಿರುವ ಸಾಧುಗಳು ಸುಮಾರು ೫-೬ ಮಣದಷ್ಟು ಕಾಷ್ಠಗಳನ್ನು (ಅರಳೀಮರ/ಅತ್ತಿಮರದ ಕಟ್ಟಿಗೆ) ಸಮರ್ಪಿಸುತ್ತಾರೆ ಮತ್ತು ಒಂದು ನಿರ್ದಿಷ್ಟ ಕ್ಷಣದಲ್ಲಿ ಶ್ರೀ ದತ್ತಾತ್ರೇಯರು ಸೃಷ್ಟಿಸಿದ ಸ್ವಯಂಭೂ ಅಗ್ನಿನಾರಾಯಣನ ೨ ಮನುಷ್ಯರ ಎತ್ತರದ ಜ್ವಾಲೆಯು ಪ್ರಕಟವಾಗುತ್ತದೆ. ಭಕ್ತರಿಗೆ ಈ ಜ್ವಾಲೆಯಲ್ಲಿ ಶ್ರೀ ದತ್ತಗುರುಗಳ ದರ್ಶನವಾಗುತ್ತದೆ.
ಗಿರನಾರನ ಕೆಲವು ಅದ್ಭುತ ವಿಷಯಗಳು!
ಗಿರನಾರನ ಕೆಲವು ವಿಷಯಗಳು ಅದ್ಭುತ, ರಹಸ್ಯಮಯ ಮತ್ತು ಗೂಢವಾಗಿವೆ. ಈ ಬಗ್ಗೆ ಗುಜರಾತನ ಮತ್ತು ಗಿರನಾರ ಯಾತ್ರೆಯನ್ನು ನಿತ್ಯನಿಯಮದಿಂದ ಮಾಡುವ ಸ್ವಾಮಿ ಯೋಗೇಶ್ವರಾನಂದಗಿರಿ ಅಲಿಯಾಸ್ ಸ್ವಾಮಿ ಯೋ ಇವರು ತಮ್ಮ ಮತ್ತು ಇತರ ‘ಯೂ ಟ್ಯೂಬ್’ ವಾಹಿನಿಯಲ್ಲಿ ವಿವರವಾಗಿ ಹೇಳಿದ್ದಾರೆ. ಸ್ವಾಮೀ ಯೊ ಇವರು, ಇಲ್ಲಿ ಗೂಢ ವಿಷಯಗಳು ಬಹಳಷ್ಟಿವೆ, ಎಂದು ಹೇಳಿದರು. ಗಿರನಾರನಲ್ಲಿ ಕೆಲವು ಸ್ಥಳಗಳು ಸಮಯ ಮತ್ತು ಆಕಾಶದ ಮಿತಿಗಳ ಆಚೆಗಿವೆ. ಇಂತಹ ಕೆಲವು ಗುಪ್ತ ಗುಹೆಗಳು ಇಲ್ಲಿವೆ, ಅಲ್ಲಿ ನೂರಾರು ವರ್ಷಗಳಿಂದ ಕೆಲವು ದಿವ್ಯ ಋಷಿಗಳು ಸಾಧನೆ, ತಪಸ್ಸು ಮಾಡುತ್ತಿದ್ದಾರೆ. ಈ ಬಗ್ಗೆ ಒಂದು ವಿಲಕ್ಷಣ ಅನುಭವ ಸ್ವಾಮಿ ಲೀಲಾಶಹಾ (ಪೂಜ್ಯಪಾದ ಸಂತಶ್ರೀ ಆಸಾರಾಮ್ಜಿ ಬಾಪು ಇವರ ಗುರುಗಳು) ಇವರದ್ದಾಗಿದೆ. ಅವರ ಶಿಷ್ಯನಿಗೆ ಈ ಗುಪ್ತ ಋಷಿಗಳ ಬಗ್ಗೆ ಕೇವಲ ಮಾಹಿತಿ ಇತ್ತು, ಒಮ್ಮೆ ಅವನು ಸ್ವಾಮಿ ಲೀಲಾಶಾಹ ಇವರಿಗೆ ಈ ಗುಪ್ತ ಋಷಿಗಳ ದರ್ಶನದ ಬಗ್ಗೆ ಕೇಳಿದನು. ಆಗ ಸ್ವಾಮಿ ಲೀಲಾಶಹಾ ಇವರು ‘ಒಂದು ಬಾರಿ ನಿನಗೆ ದರ್ಶನ ಮಾಡಿಸುತ್ತೇನೆ’ ಎಂದು ಹೇಳಿದರು. ಅವರು ಗಿರನಾರ ಪರ್ವತದ ಬಳಿ ಒಂದು ಸ್ಥಳಕ್ಕೆ ಹೋದರು, ಅಲ್ಲಿ ನಿಜವಾಗಿಯೂ ಬಹಳ ಎತ್ತರವಾದ ಪರ್ವತದ ಗೋಡೆಗಳಿದ್ದವು. ಸ್ವಾಮಿ ಲೀಲಾಶಹಾ ಅವರು ಶಿಷ್ಯನಿಗೆ ‘ನಾನು ಏನು ಮಾಡುತ್ತೇನೋ, ನೀನು ಹಾಗೆಯೇ ಮಾಡು’ ಎಂದು ಹೇಳಿ ಒಂದು ಹೆಜ್ಜೆ ಮುಂದಿಟ್ಟರು ಮತ್ತು ಅವರು ತಮ್ಮ ಶಿಷ್ಯನಿಗೆ ಕಾಣದಾದರು. ಶಿಷ್ಯನಿಗೆ ಏನಾಯಿತು ಎಂದು ತಿಳಿಯಲಿಲ್ಲ ಮತ್ತು ಅವನು ಅಲ್ಲೇ ನಿಂತುಕೊಂಡನು. ಆದುದರಿಂದ ಸ್ವಾಮಿ ಲೀಲಾಶಹಾ ಇವರು ಮತ್ತೆ ಪರ್ವತದಿಂದ ಹೊರಬಂದರು ಮತ್ತು ಅವನಿಗೆ ‘ನಾನು ನಿನಗೆ ಹೇಳಿದ್ದೆನಲ್ಲ, ನಾನು ಮಾಡಿದಂತೆ ಮಾಡು ಎಂದು!’, ಎಂದು ಹೇಳಿದರು. ಆಗ ಶಿಷ್ಯನು ಪ್ರಜ್ಞೆಗೆ ಬಂದು ಅವನು ಸ್ವಾಮಿ ಲೀಲಾಶಹಾ ಇವರಂತೆ ಒಂದು ಹೆಜ್ಜೆ ಮುಂದಿಟ್ಟನು ಮತ್ತು ಅವನು ಒಂದು ಬೇರೆಯೇ ಆದ ಜಗತ್ತನ್ನು ಪ್ರವೇಶಿಸಿದನು, ಎಂದು ಅವನಿಗೆ ಅರಿವಾಯಿತು. ಅವನು ಪ್ರವೇಶಿಸಿದ ಗುಹೆಯಲ್ಲಿ ಅವನಿಗೆ ಜಟೆಯನ್ನು ಹೊಂದಿರುವ ಅನೇಕ ಸಾಧುಗಳು, ಋಷಿಗಳು ತಪಸ್ಸು ಮಾಡುತ್ತಿರುವುದು ಕಂಡು ಬಂದಿತು. ಸ್ವಾಮಿ ಲೀಲಾಶಹಾ ಇವರು ಅವನಿಗೆ ಸಾಧು-ಋಷಿಗಳಿಗೆ ನಮಸ್ಕಾರ ಮಾಡಲು ಹೇಳಿದರು ಮತ್ತು ಅವರು ನಂತರ ಹಿಂದಿರುಗಿದರು. ಆಗ ಈ ಅದ್ಭುತ ದರ್ಶನದಿಂದ ಭಕ್ತನು ಧನ್ಯನಾದನು. ಸ್ವಾಮಿ ಯೋಗೇಶ್ವರಾನಂದಗಿರಿ ಇವರಿಗೆ ಒಬ್ಬ ಸಾಧು ಭೇಟಿಯಾಗಿದ್ದರು, ಆಗ ಅವರು ತಮ್ಮ ವಯಸ್ಸು ‘೯೦೦ ವರ್ಷಗಳು’ ಎಂದು ಹೇಳಿದ್ದರು. ಗಿರನಾರದಲ್ಲಿಯೇ ಒಬ್ಬ ಬಹಳ ವಯಸ್ಸಾದ ಸಾಧುಗಳು ಸ್ಥಳೀಯ ಊರಿಗೆ ಹೋದರು ಮತ್ತು ”ಈಗ ಇಲ್ಲಿನ ರಾಜ ಯಾರು?’’ ಎಂದು ಕೇಳಿದರು. ಆಗ ಅಲ್ಲಿ ಉಪಸ್ಥಿತ ಗ್ರಾಮಸ್ಥರು ಈಗ ಪ್ರಜಾಪ್ರಭುತ್ವವಿದೆ, ರಾಜಪ್ರಭುತ್ವವಿಲ್ಲ ಎಂದು ಹೇಳಿದರು. ಗ್ರಾಮಸ್ಥರು “ನೀವು ಯಾವ ರಾಜನ ಬಗ್ಗೆ ಮಾತನಾಡುತ್ತಿದ್ದೀರಿ?” ಎಂದು ಕೇಳಿದಾಗ, ವೃದ್ಧ ಸಾಧುವು ನಾನು ಹಿಂದಿನ ಬಾರಿ ‘ಅಕ್ಬರ್ ರಾಜನಿದ್ದನು’ ಎಂದು ಕೇಳಿದ್ದೆ ಎಂದು ಹೇಳಿದರು. ಆಗ ಗ್ರಾಮಸ್ಥರಿಗೆ ಆ ಸಾಧುವಿನ ವಯಸ್ಸಿನ ಅಂದಾಜು ಸಿಕ್ಕಿತು. ಗಿರನಾರನಲ್ಲಿ ಅಶ್ವತ್ಥಾಮನ ವಾಸವೂ ಇದೆ. ಇಲ್ಲಿನ ಒಂದು ದುರ್ಗಮ ಪ್ರದೇಶದ ಮಂದಿರದಲ್ಲಿ ಶಿವಲಿಂಗದ ಮೇಲೆ ಅರ್ಪಿಸಲಾದ ಹೂವುಗಳು ಮತ್ತು ಬಿಲ್ವಪತ್ರೆಗಳು ಅರ್ಚಕರಿಗೆ ಕಾಣಸಿಗುತ್ತವೆ. ”ಅವುಗಳನ್ನು ಅರ್ಪಿಸಲು ಸ್ವತಃ ಅಶ್ವತ್ಥಾಮನೇ ಬರುತ್ತಾನೆ’’ ಎಂದು ಸ್ಥಳೀಯ ಅರ್ಚಕರು ಹೇಳುತ್ತಾರೆ. ಗಿರನಾರನ ಪರ್ವತದ ಮೇಲೆ ಕೆಲವು ಕಲ್ಲುಗಳು ತೂಗಾಡುತ್ತಿರುವಂತೆ ಕಾಣಿಸುತ್ತವೆ; ಆದರೆ ಅವು ಬೀಳುವುದಿಲ್ಲ. ಇಲ್ಲಿಯ ಸ್ಥಳೀಯ ರಾಣಿಯೊಬ್ಬಳು ಗಿರನಾರ ಪರ್ವತವನ್ನು ತನ್ನ ಸಹೋದರನೆಂದು ನಂಬಿದ್ದಳು. ಪರಕೀಯರು ಅವಳ ಮೇಲೆ ಆಕ್ರಮಣ ಮಾಡಿದಾಗ, ರಾಣಿಯು ಪರ್ವತಕ್ಕೆ ಪ್ರಾರ್ಥನೆ ಮಾಡಿದಳು. ಆ ಸಮಯದಲ್ಲಿ ಪರ್ವತದಿಂದ ನೂರಾರು ಕಲ್ಲುಗಳ ಸುರಿಮಳೆ ಶತ್ರು ಸೈನ್ಯದ ಮೇಲಾಯಿತು ಮತ್ತು ರಾಣಿಯ ರಾಜ್ಯವು ಅಭೇದ್ಯವಾಗಿ ಉಳಿಯಿತು. ಅದೇ ರೀತಿ ಇನ್ನೂ ಕೆಲವು ಕಲ್ಲುಗಳು ಅಲ್ಲಿಯೇ ಇವೆ. ಗಿರನಾರನಲ್ಲಿ ಅನೇಕ ರೀತಿಯ ಔಷಧೀಯ ವನಸ್ಪತಿಗಳು ಇವೆ, ಆದರೆ ಅವುಗಳ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಪರ್ವತವನ್ನು ಹತ್ತುತ್ತಿದ್ದ ಒಬ್ಬ ಭಕ್ತನು ಹಾಗೆಯೇ ಒಂದು ವನಸ್ಪತಿಯ ಎಲೆಗಳನ್ನು ತಿಂದನು ಮತ್ತು ಮುಂದಿನ ಕೆಲವೇ ನಿಮಿಷಗಳಲ್ಲಿ ಅವನ ಎಲ್ಲ ಹಲ್ಲುಗಳು ಕಳಚಿಬಿದ್ದವು. ಹಿಂದಿನ ಕಾಲದಲ್ಲಿ ತಲೆಯ ಮೇಲಿನ ಒಂದು ವಿಶಿಷ್ಟ ನರವನ್ನು ಒತ್ತಿದಾಗ ಹಲ್ಲುಗಳು ಸಹಜವಾಗಿ ಬೀಳುತ್ತಿದ್ದವು, ಇಂತಹ ವಿದ್ಯೆ ಭಾರತದಲ್ಲಿತ್ತು. ಈ ವಿದ್ಯೆ ಈಗ ಲುಪ್ತವಾಗಿದೆ; ಆದರೆ ಇಲ್ಲಿ ಸಸ್ಯಗಳಿಂದಲೂ ಹಲ್ಲುಗಳು ಉದುರಿದವು. ಒಬ್ಬ ಸಾಧುಗಳೊಂದಿಗೆ ಅವರ ಓರ್ವ ಭಕ್ತನು ಸಹಜವಾಗಿ ಮಾತನಾಡುತ್ತಾ ಕೂದಲು ಉದುರಿ ತಲೆ ಬೋಳಾಗುವ ಸಮಸ್ಯೆಯ ಬಗ್ಗೆ ಸಾಧುಗಳಿಗೆ ಹೇಳಿದನು. ಆಗ ಸಾಧು ಸಹಜವಾಗಿ ಕೈಗೆ ಸಿಕ್ಕ ಒಂದು ವನಸ್ಪತಿಯನ್ನು ತೆಗೆದು ಅದರ ಚೂರ್ಣ ಮಾಡಿ ತಲೆಗೆ ಲೇಪಿಸಿದಾಗ ವ್ಯಕ್ತಿಗೆ ಪುನಃ ಕೂದಲುಗಳು ಬಂದವು. ಇಲ್ಲಿನ ಕೆಲವು ಸಂತರ ಸಮಾಧಿಗಳು ಕಾಲಕ್ರಮೇಣ ಭೂಮಿಯೊಳಗೆ ಹೋಗಿವೆ. ಇಲ್ಲಿ ಯಾವುದಾದರು ಕೆಲಸಕ್ಕಾಗಿ ತಗ್ಗು ತೆಗೆದಾಗ ಈ ಸಮಾಧಿಗಳು ಕಂಡು ಬರುತ್ತವೆ. ಅವುಗಳನ್ನು ಅಗೆದು ಮೇಲೆ ತೆಗೆದಾಗ, ಅವುಗಳಲ್ಲಿ ಉರಿಯುತ್ತಿರುವ ದೀಪಗಳು ಕಂಡು ಬರುತ್ತವೆ. ಈ ದೀಪಗಳನ್ನು ಯಾರು ಉರಿಸುತ್ತಾರೆ? ಎಂಬುದು ಆಶ್ಚರ್ಯವಾಗಿದೆ. ಇಲ್ಲಿನ ಓರ್ವ ಸಾಧುಗಳು ತಮ್ಮ ಸೇವೆಯನ್ನು ಮಾಡುತ್ತಿದ್ದ ಆರ್ಥಿಕ ದೃಷ್ಟಿಯಲ್ಲಿ ದುರ್ಬಲವಿರುವ ಭಕ್ತನಿಗೆ ಒಂದು ಚಿನ್ನದ ವಸ್ತುವನ್ನು ಕೊಟ್ಟರು. ಅದನ್ನು ಮಾರಾಟ ಮಾಡುವಾಗ, ಸ್ಥಳೀಯ ಆಡಳಿತಾಧಿಕಾರಿಗಳನ್ನು ಅಕ್ಕಸಾಲಿಗನು ಸಂಪರ್ಕಿಸಿದನು. ಆಗ ಈ ಚಿನ್ನದ ವಸ್ತುವನ್ನು ಸಿದ್ಧಿಯಿಂದ ಸೃಷ್ಟಿಸಲಾಗಿದೆ ಎಂದು ಆಡಳಿತಾಧಿಕಾರಿಗೆ ಗಮನಕ್ಕೆ ಬಂದಿತು ಮತ್ತು ಅವರು ಆ ಸಾಧುವನ್ನು ಹುಡುಕಲು ಪ್ರಯತ್ನಿಸಿದ್ದರು. ಇಂತಹ ಅನೇಕ ಅದ್ಭುತ ವಿಷಯಗಳು ಮತ್ತು ಈ ಗೂಢ ವಿಷಯಗಳ ಜ್ಞಾನವಿರುವ ಕೆಲವು ಮಹಾತ್ಮರು ಗುಪ್ತ ರೂಪದಲ್ಲಿ ಗಿರನಾರನಲ್ಲಿ ವಾಸಿಸುತ್ತಿದ್ದಾರೆ. ಶ್ರೀ ದತ್ತಪ್ರಭುಗಳ ಯಾವ ಅವತಾರಗಳಾದವೋ, ಅವು ಸಹ ಅನೇಕ ಗೂಢ ವಿದ್ಯೆಗಳು, ಸಿದ್ಧಿಗಳಿಂದ ಸಂಪನ್ನವಾಗಿದ್ದವು ಮತ್ತು ಭಕ್ತರ ದುಃಖಗಳನ್ನು, ತೊಂದರೆಗಳನ್ನು ನಿವಾರಿಸುವಂತಿದ್ದವು.
– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೭.೧೨.೨೦೨೪)


|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಉರೂಸ್ ನಿಮಿತ್ತ ವಿಶಾಲಗಡದಲ್ಲಿ ಪ್ರಾಣಿ ಬಲಿ ನೀಡಲು ನ್ಯಾಯಾಲಯದ ಅನುಮತಿ!