ಹಿಂದೂ ಧರ್ಮ, ಸಮಾನತೆ ಮತ್ತು ಕಾಂಗ್ರೆಸ್ಸಿನ ಹಿಂದೂದ್ವೇಷ !

ಶ್ರೀ. ಚೇತನ ಹರಿಹರ

ಕೆಲವು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ, ಆದ್ದರಿಂದಲೇ ಜನರು ಮತಾಂತರಗೊಳ್ಳುತ್ತಿದ್ದಾರೆ’ ಎಂದು ಹೇಳಿದ್ದರು. ಅವರು ಈ ಹೇಳಿಕೆಯನ್ನು ರಾಜಕೀಯ ಲಾಭಕ್ಕಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ ಮತ್ತು ಮತಗಳಿಗಾಗಿ ನೀಡಿದ್ದಾರೆ ಎಂದು ಖಂಡಿತವಾಗಿ ಅನಿಸುತ್ತದೆ. ಮುಖ್ಯಮಂತ್ರಿಗಳ ಹಿಂದಿನ ಭಾಷಣಗಳನ್ನು ನೋಡಿದರೆ, ಅವರ ಈ ಹೇಳಿಕೆ ಮತ್ತು ಅವರ ದೃಷ್ಟಿಕೋನಗಳ ನಡುವೆ ದೊಡ್ಡ ಸಂಬಂಧವಿರುವುದು ಕಂಡುಬರುತ್ತದೆ. ಅವರ ಹಿಂದಿನ ಭಾಷಣಗಳಲ್ಲಿನ ಕೆಲವು ವಾಕ್ಯಗಳನ್ನು ಇಲ್ಲಿ ನೀಡಲಾಗಿದೆ, ಇದರಿಂದ ಅವರ ಸ್ವಭಾವ ಹೇಗಿದೆ ಎಂದು ತಿಳಿದುಕೊಳ್ಳಬಹುದು.

೧. ಸಿದ್ದರಾಮಯ್ಯ ಅವರ ಹಿಂದೂ ಧರ್ಮದ ಕುರಿತಾದ ಹೇಳಿಕೆಗಳು

ಅ. ೨೭ ಜೂನ್‌ ೨೦೧೯ : ಬಾಗಲಕೋಟೆಯ ಬಾದಾಮಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಒಬ್ಬ ಅರ್ಚಕರು ಸಿದ್ದರಾಮಯ್ಯ ಅವರ ಹಣೆಗೆ ಕುಂಕುಮ ಇಡಲು ಪ್ರಯತ್ನಿಸಿದಾಗ, ಅವರು, ‘ಬೇಡಪ್ಪಾ, ನನಗೆ ಕುಂಕುಮ ಇಡಲು ಭಯವಾಗುತ್ತದೆ’ ಎಂದು ಹೇಳಿ ನಿರಾಕರಿಸಿದರು.

ಆ. ಫೆಬ್ರುವರಿ ೨೦೨೨ : ಹಿಜಾಬ್‌ (ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ) ಮತ್ತು ಕೇಸರಿ ಶಾಲು ವಿವಾದದ ಸಮಯದಲ್ಲಿ ಅವರು, ‘ಕೇಸರಿ ಶಾಲು ಹಾಕುವುದು ಸಂವಿಧಾನವಿರೋಧಿ ಮತ್ತು ಇದು ಹೊಸ ಸಂಪ್ರದಾಯ’ ಎಂದು ಹೇಳಿದ್ದರು.

ಇ. ಮೇ ೨೦೨೨ : ಮುಖ್ಯಮಂತ್ರಿಯಾಗುವ ಮೊದಲು ಅವರು ತುಮಕೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಗೋಮಾಂಸದ ಬಗ್ಗೆ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರು, ‘ನಾನು ಹಿಂದೂ, ಆದರೆ ನನಗೆ ಬೇಕಾದರೆ ನಾನು ಗೋಮಾಂಸ ತಿನ್ನುತ್ತೇನೆ. ನೀವು ಯಾರು ನನ್ನನ್ನು ಪ್ರಶ್ನಿಸುವವರು ?’ ಎಂದು ಹೇಳಿದ್ದರು.

ಈ. ಜನವರಿ ೨೦೨೩ : ಹುಬ್ಬಳ್ಳಿಯಲ್ಲಿ ಅವರು ‘ನಾನು ಹಿಂದೂ, ಆದರೆ ಹಿಂದುತ್ವದ ವಿರೋಧಿ’ ಎಂದು ಹೇಳಿದ್ದರು.

೨. ಸಿದ್ದರಾಮಯ್ಯ ಅವರ ಮುಸಲ್ಮಾನರ ಕುರಿತಾದ ಹೇಳಿಕೆಗಳು ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದ ಕೃತಿಗಳು

ಅ. ಫೆಬ್ರುವರಿ ೨೦೨೨ : ಹಿಜಾಬ್‌ ವಿವಾದದ ಸಮಯದಲ್ಲಿ ಸಿದ್ದರಾಮಯ್ಯ ಅವರು ಮುಸಲ್ಮಾನ ವಿದ್ಯಾರ್ಥಿನಿಯರ ಪರವಾಗಿ ಮಾತನಾಡಿದ್ದರು. ‘ಹಿಜಾಬ್‌ ಧರಿಸುವುದು ಅವರ ಹಕ್ಕು. ಮುಸಲ್ಮಾನ ಮಹಿಳೆಯರು ಶತಮಾನಗಳಿಂದ ಹಿಜಾಬ್‌ ಧರಿಸುತ್ತಿದ್ದಾರೆ, ಆದ್ದರಿಂದ ಅವರಿಗೆ ಹಾಗೆ ಮಾಡಲು ಅನುಮತಿ ನೀಡಬೇಕು’ ಎಂದು ಅವರು ಹೇಳಿದ್ದರು.

ಆ. ಜುಲೈ ೨೦೨೩ ಮತ್ತು ಜೂನ್‌ ೨೦೨೪ : ಸಿದ್ದರಾಮಯ್ಯ ಅವರು ಮುಸಲ್ಮಾನ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುಸಲ್ಮಾನ ಟೋಪಿ ಧರಿಸಿದರು.

ಇ. ಸೆಪ್ಟೆಂಬರ್‌ ೨೦೨೪ : ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷ ಶಫಿ ಸಾದಿ ಅವರನ್ನು ಭೇಟಿಯಾದ ನಂತರ, ವಕ್ಫ್ ಮಂಡಳಿಯ ಆಸ್ತಿಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಮೇಲಿನ ಹೇಳಿಕೆಗಳಿಂದ, ಸಿದ್ದರಾಮಯ್ಯ ಅವರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ತೋರುತ್ತದೆ; ಅದಕ್ಕಾಗಿಯೇ ಅವರಿಗೆ ಅಸಮಾನತೆ ಕಂಡುಬರುತ್ತದೆ. ಒಂದು ವೇಳೆ ನಿಜವಾಗಿಯೂ ಅಸಮಾನತೆ ಇದ್ದರೆ, ಸಮಾನತೆಯನ್ನು ಸೃಷ್ಟಿಸಬೇಕು; ಆದರೆ ಮೇಲಿನ ಹೇಳಿಕೆಗಳಿಂದ, ಎಲ್ಲ ಕಡೆ ಸಮಾನತೆ ಇರಬೇಕಾದ ಕಡೆ ಸಿದ್ದರಾಮಯ್ಯ ಅವರೇ ಅಸಮಾನತೆಯನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಧರ್ಮ ಹಾಗೂ ಪಂಥಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ ಎಂದು ಕಂಡುಬರುತ್ತದೆ. ‘ಜಗತ್ತನ್ನು ಸುಧಾರಿಸುವ ಮೊದಲು ತಮ್ಮಲ್ಲಿ ಸುಧಾರಣೆ ಮಾಡಿಕೊಳ್ಳುವುದು ಅವಶ್ಯಕ, ಆಗ ಮಾತ್ರ ಜಗತ್ತನ್ನು ಸುಧಾರಿಸಲು ಸಾಧ್ಯ’ ಎಂಬುದು ಹಿಂದೂ ಧರ್ಮದ ಬೋಧನೆ. ಈ ರೀತಿ ಸಿದ್ದರಾಮಯ್ಯ ಅವರು ಪ್ರಯತ್ನಿಸಿದರೆ, ಆಗ ಮಾತ್ರ ಅವರಿಗೆ ಹಿಂದೂ ಧರ್ಮದಲ್ಲಿನ ಸಮಾನತೆ ಕಾಣಲು ಸಾಧ್ಯವಾಗುತ್ತದೆ.

೩. ವರ್ಣಗಳ ಮೂಲಕ ಸಮಾನತೆ !

ನಮ್ಮ ಹಿಂದೂ ಧರ್ಮದಲ್ಲಿ ೪ ವರ್ಣಗಳನ್ನು ಹೇಳಲಾಗಿದೆ ಮತ್ತು ಅವುಗಳ ಪಾಲನೆಯು ಪ್ರಾಚೀನ ಕಾಲದಿಂದಲೂ ನಡೆಯುತ್ತಿದೆ ಹಾಗೂ ಭಗವಾನ್‌ ಶ್ರೀಕೃಷ್ಣನೂ ಈ ೪ ವರ್ಣಗಳ ಬಗ್ಗೆ ತಿಳಿಸಿದ್ದಾನೆ. ಈ ೪ ವರ್ಣಗಳ ಮೂಲಕ ಮಾಡಿದ ಕರ್ಮವು ದೇವರ ಕೃಪೆಗೆ ಕಾರಣವಾಗುತ್ತದೆ. ಪ್ರತಿ ವರ್ಣಕ್ಕೂ ತನ್ನದೇ ಆದ ಕಾರ್ಯವಿರುತ್ತದೆ, ಅದರ ಮೂಲಕ ನಾವು ಭಗವಂತನನ್ನು ಪ್ರಾಪ್ತಿ ಮಾಡಿಕೊಳ್ಳಬಹುದು. ಆದ್ದರಿಂದ, ನಾವು ಯಾವುದೇ ಜಾತಿ, ಸಮುದಾಯ ಅಥವಾ ವಂಶದಲ್ಲಿ ಜನಿಸಿದ್ದರೂ, ಆ ಜಾತಿ, ಸಮುದಾಯ ಅಥವಾ ವಂಶದ ಮೂಲಕ ಕರ್ಮ ಮಾಡಿದರೆ, ಆ ವ್ಯಕ್ತಿಗೆ ಭಗವಂತನ ಪ್ರಾಪ್ತಿಯಾಗುತ್ತದೆ.

ಅ. ಬ್ರಾಹ್ಮಣ : ಭಗವಂತನೊಂದಿಗೆ ಒಂದಾಗಲು ಜನರಿಗೆ ಮಾರ್ಗದರ್ಶನ ಮಾಡುವುದು.

ಆ. ಕ್ಷತ್ರಿಯ : ಅನ್ಯಾಯವನ್ನು ದೂರ ಮಾಡಿ ನ್ಯಾಯಯುತ ಸಮಾಜವನ್ನು ನಿರ್ಮಿಸಿ ಭಗವಂತನೊಂದಿಗೆ ಒಂದಾಗಬಹುದು.

ಇ. ವೈಶ್ಯ : ವ್ಯಾಪಾರದಲ್ಲಿ ಪ್ರಾಮಾಣಿಕರಾಗಿ ಭಗವಂತನೊಂದಿಗೆ ಒಂದಾಗಬಹುದು.

ಈ. ಶೂದ್ರ : ದೈಹಿಕ ಕರ್ಮ, ಅಂದರೆ ಈ ಶರೀರದಿಂದ ಸರಿಯಾದ ಕರ್ಮ ಮಾಡಿ ಭಗವಂತನೊಂದಿಗೆ ಒಂದಾಗುವುದು.

ಈ ರೀತಿ ಭಗವಾನ್‌ ಶ್ರೀಕೃಷ್ಣನು ಪ್ರತಿಯೊಂದು ವರ್ಣದಲ್ಲಿಯೂ ಸಮಾನತೆಯನ್ನು ಸೃಷ್ಟಿಸಿ, ಅವುಗಳ ಮೂಲಕ ನಾವು ಭಗವಂತನನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾನೆ. ಹೀಗಿರುವಾಗ ಅಸಮಾನತೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡಬಹುದು.

೪. ವರ್ಣಗಳ ಮಹತ್ವವನ್ನು ಅರ್ಥ ಮಾಡಿಕೊಂಡು, ಅದರಂತೆ ಆಚರಣೆ ಮಾಡುವುದು ಮುಖ್ಯ !

ಒಂದು ಗಾದೆ ಮಾತಿದೆ, ‘ಹಾಸಿಗೆ ಇದ್ದಷ್ಟು ಕಾಲು ಚಾಚಿ.’ ವಾಸ್ತವವಾಗಿ, ಭಗವಂತನು ನನಗೆ ಯಾವ ವರ್ಣದಲ್ಲಿ ಜನ್ಮ ನೀಡಿದ್ದಾನೋ, ಅದರಲ್ಲಿ ನಾನು ಪ್ರಾಮಾಣಿಕವಾಗಿ ಕರ್ಮ ಮಾಡಿ ದೇವರೊಂದಿಗೆ ಒಂದಾಗಬೇಕು; ಆದರೆ ಬ್ರಿಟಿಷರು, ಹೊರಗಿನ ಆಕ್ರಮಣಕಾರರು ಮತ್ತು ಮೊಗಲರು ಭಾರತೀಯರ ಮೇಲೆ ದೌರ್ಜನ್ಯ ಎಸಗುವುದರ ಜೊತೆಗೆ ಅನಾವಶ್ಯಕ ತಪ್ಪು ತಿಳುವಳಿಕೆಗಳನ್ನು ಸೃಷ್ಟಿಸಿ ಭಾರತೀಯರ ಬುದ್ಧಿಭ್ರಮಣೆ ಮಾಡಿದರು. ಇದರಿಂದ ನಾವು ನಮ್ಮ ಸ್ವಂತ ವರ್ಣವನ್ನು ಬಿಟ್ಟು ಬೇರೆ ವರ್ಣದಲ್ಲಿಯೂ ಪ್ರಗತಿ ಮಾಡಿಕೊಳ್ಳಬೇಕು ಎಂಬ ವಿಚಾರಗಳು ಬರಲಾರಂಭಿಸಿದವು. ಇದೇ ವಿಚಾರಗಳಿಂದ ಇಂದು ನಮ್ಮಲ್ಲಿ ಈ ಅಸಮಾನತೆ ಸೃಷ್ಟಿಯಾಗಿದೆ. ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು ಭಗವಂತ ಹೇಳಿದ್ದಾನೆ; ಆದರೆ ನಾವು ಹೆಚ್ಚು ಕಾಲು ಚಾಚಿದರೆ, ಅವು ಹಾಸಿಗೆಯಿಂದ ಹೊರಗೆ ಹೋಗುತ್ತವೆ ಮತ್ತು ಅದರ ಕೆಟ್ಟ ಪರಿಣಾಮಗಳನ್ನು ನಾವು ಅನುಭವಿಸಬೇಕಾಗುತ್ತದೆ. ಆದ್ದರಿಂದ, ಅಸಮಾನತೆಯನ್ನು ದೂರ ಮಾಡಬೇಕಾದರೆ, ನಮ್ಮ ಮನಸ್ಸಿನಲ್ಲಿನ ಅನುಮಾನಗಳನ್ನು ಕಡಿಮೆ ಮಾಡಬೇಕು.

‘ನನಗೆ ದೊರೆತ ಈ ವರ್ಣದ ಮೂಲಕ ನಾನು ಭಗವಂತನಿಗೆ ಇಷ್ಟವಾಗುವ ಕರ್ಮ ಮಾಡಿ ಹೇಗೆ ಪ್ರಗತಿ ಮಾಡಲಿ ?’ ಎಂದು ಯೋಚಿಸಿದರೆ, ನಮ್ಮಲ್ಲಿ ಅಸಮಾನತೆ ಉಳಿಯುವುದಿಲ್ಲ ಮತ್ತು ಇತರ ಪಂಥಗಳಿಗೆ ಮತಾಂತರವೂ ಆಗುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹುಲಿ ಮತ್ತು ಸಿಂಹ. ಈ ಪ್ರಾಣಿಗಳ ಹೊಟ್ಟೆ ತುಂಬಿದ್ದರೆ, ಅವುಗಳ ಮುಂದೆ ಬೇರೆ ಯಾವುದೇ ಪ್ರಾಣಿಗಳು ಬಂದರೂ ಅವುಗಳ ಮೇಲೆ ದಾಳಿ ಮಾಡುವುದಿಲ್ಲ ಅಥವಾ ಅವುಗಳಿಗೆ ಹಾನಿ ಮಾಡುವುದಿಲ್ಲ. ಈ ಪ್ರಾಣಿಗಳಿಗೆ ಹೊಟ್ಟೆ ತುಂಬಿಸುವುದು ಮುಖ್ಯ, ಬೇರೆ ಯಾವುದೇ ಉದ್ದೇಶ ಇರುವುದಿಲ್ಲ. ಅದೇ ರೀತಿ, ‘ನಮಗೆ ಕೇವಲ ಭಗವಂತ ಬೇಕು, ಬೇರೇನೂ ಬೇಡ’ ಎಂದು ಯೋಚಿಸಿ ಭಗವಂತನು ನೀಡಿದ ವರ್ಣದಲ್ಲಿಯೇ ಕರ್ಮ ಮತ್ತು ಸಾಧನೆ ಮಾಡಿದರೆ, ‘ನಾನು ಬೇರೆ ವರ್ಣಗಳ ಹಾಗೆ ಇರಬೇಕು’ ಎಂಬ ವಿಚಾರ ಮನಸ್ಸಿನಲ್ಲಿ ಬರುವುದಿಲ್ಲ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ತಮ್ಮ ವರ್ಣಗಳಿಗೆ ಅನುಗುಣವಾಗಿ ಉತ್ತಮ ಕರ್ಮ ಮಾಡಿದರೆ, ಅವರಿಗೆ ಭಗವಂತನ ಕೃಪೆ ಖಂಡಿತಾ ಸಿಗುತ್ತದೆ !

– ಶ್ರೀ. ಚೇತನ ಹರಿಹರ, ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ. (೧೬.೯.೨೦೨೫)