ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation

ನವದೆಹಲಿ – ಕರಾಚಿ ನಗರದ ಸಿಂಧ್ ರೇಂಜರ್ಸ್ ಎಂಬ ಅರೆಸೇನಾ ಪಡೆಯ ಪ್ರಧಾನ ಕಚೇರಿಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತವು ಸಂಪೂರ್ಣವಾಗಿ ತಳ್ಳಿಹಾಕಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಪಾಕಿಸ್ತಾನದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ, ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ‘ಪಾಕಿಸ್ತಾನವು ಸರಕಾರೀ ನೀತಿಯಾಗಿ ಭಯೋತ್ಪಾದನೆಯನ್ನು ಬಳಸಿಕೊಳ್ಳುವ ಪ್ರವೃತ್ತಿಯನ್ನು ಕೈಬಿಡಬೇಕು’ ಎಂದೂ ಭಾರತವು ಹೇಳಿದೆ. ಈ ದಾಳಿಯಲ್ಲಿ 3 ಭಯೋತ್ಪಾದಕರು ಮತ್ತು 3 ಸೈನಿಕರು ಸಾವನ್ನಪ್ಪಿದ್ದರು. ದಾಳಿ ನಡೆಸಿದ ಭಯೋತ್ಪಾದಕರು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಸಂಘಟನೆಗೆ ಸೇರಿದವರಾಗಿದ್ದರು.

ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ಮೇಲೆ ದಾಳಿ : 35 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ದಾವೆ !

ಕರಾಚಿಯ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವು ಜೂನ್ 28 ರ ಮಧ್ಯರಾತ್ರಿ ಅಫ್ಘಾನಿಸ್ತಾನದ ಕೆಲವು ಭಾಗಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. (ಪಾಕಿಸ್ತಾನವು ತನ್ನ ದೇಶದಲ್ಲಿ ಭಯೋತ್ಪಾದಕ ದಾಳಿಯಾದಾಗ ನೆರೆಯ ಅಫ್ಘಾನಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತದೆ. ಹಾಗೆಯೇ ಪಾಕ್ ಪುರಸೃತ ಭಯೋತ್ಪಾದಕ ದಾಳಿಗಳನ್ನು ಪ್ರತಿಭಟಿಸಿ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ಕಾರ್ಯಾಚರಣೆ ನಡೆಸಿದಾಗ ಪಾಕಿಸ್ತಾನ ಏಕೆ ಆಕ್ರೋಶ ವ್ಯಕ್ತಪಡಿಸುತ್ತದೆ? – ಸಂಪಾದಕರು)

ಪಾಕಿಸ್ತಾನವು ಈ ದಾಳಿಗಳನ್ನು ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ ‘ಟಿಟಿಪಿ’ ಮತ್ತು ‘ಜಮಾತ್-ಉಲ್-ಅಹರಾರ್’ ಭಯೋತ್ಪಾದಕ ಸಂಘಟನೆಗಳ ನೆಲೆಗಳ ಮೇಲೆ ನಡೆಸಿರುವುದಾಗಿ ಹೇಳಿಕೊಂಡಿದ್ದರೂ, ಅಫ್ಘಾನಿಸ್ತಾನವು ಈ ಕಾರ್ಯಾಚರಣೆಯಲ್ಲಿ ಭಾರಿ ಸಂಖ್ಯೆಯಲ್ಲಿ ಮುಗ್ಧ ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದೆ. ಪಕ್ತಿಕಾ ಮತ್ತು ಕುನಾರ್ ಪ್ರಾಂತ್ಯಗಳ ವಸತಿ ಪ್ರದೇಶಗಳ ಮೇಲೆ ನಡೆದ ಈ ದಾಳಿಯಲ್ಲಿ ಕನಿಷ್ಠ 35 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸರಕಾರವು ಈ ಕಾರ್ಯಾಚರಣೆಯಲ್ಲಿ 25 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಪ್ರತಿಪಾದಿಸಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನವು ಏನನ್ನು ಬಿತ್ತಿದೆಯೋ, ಅದನ್ನೇ ಅಲ್ಲಿ ಬೆಳೆಯುತ್ತಿರುವಾಗ ತನ್ನ ಮಾನವನ್ನು ಉಳಿಸಿಕೊಳ್ಳಲು ಮತ್ತು ಜನರ ದಾರಿ ತಪ್ಪಿಸಲು ಅಲ್ಲಿನ ಆಡಳಿತಗಾರರು ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ!