ಗಂಡನಿಗಿಂತ ಹೆಚ್ಚು ಆದಾಯವಿರುವ ಹೆಂಡತಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ! – The Karnataka High Court

ಬೆಂಗಳೂರು – ಗಂಡನಿಗಿಂತ ಹೆಚ್ಚು ಆದಾಯವಿರುವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರು ಮಹತ್ವದ ತೀರ್ಪು ನೀಡಿದ್ದಾರೆ. 2024 ರಲ್ಲಿ ವಿವಾಹವಾಗಿದ್ದ ಈ ದಂಪತಿಗಳು ಕೆಲವೇ ತಿಂಗಳುಗಳಲ್ಲಿ ಪರಸ್ಪರ ಬೇರೆಯಾಗಿದ್ದರು. ಪತ್ನಿಗೆ ಮಕ್ಕಳಾಗಲಿ ಅಥವಾ ಇತರ ಯಾವುದೇ ದೊಡ್ಡ ಜವಾಬ್ದಾರಿಗಳಾಗಲಿ ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಜೀವನಾಂಶದ ಆದೇಶವನ್ನು ರದ್ದುಗೊಳಿಸಿದೆ.

ಪತ್ನಿಯು ಜೀವನಾಂಶವನ್ನು ಪಡೆಯಲು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಸಮಯದಲ್ಲಿ ಗಂಡನ ಸಂಬಳ 60,646 ರೂಪಾಯಿ ಇತ್ತು, ಆದರೆ ಪತ್ನಿಯ ಸಂಬಳ 1 ಲಕ್ಷ ರೂಪಾಯಿ ಇತ್ತು. ಕೆಳ ನ್ಯಾಯಾಲಯವು ಗಂಡನಿಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಗಂಡನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಉಚ್ಚ ನ್ಯಾಯಾಲಯವು ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. 1 ಲಕ್ಷ ರೂಪಾಯಿ ಸಂಬಳದಲ್ಲಿ ಪತ್ನಿಯು ಸ್ವತಃ ತನ್ನ ಜೀವನವನ್ನು ನಡೆಸಲು ಶಕ್ತಳಾಗಿದ್ದಾಳೆ ಎಂದು ನ್ಯಾಯಾಲಯವು ಹೇಳಿದೆ. ಒಂದು ವೇಳೆ ಗಂಡನ ಸಂಬಳವೇ ಪತ್ನಿಗಿಂತ ಕಡಿಮೆ ಇದ್ದರೆ, ಗಂಡನು ಜೀವನಾಂಶ ನೀಡಲು ಬಾಧ್ಯಸ್ಥನಲ್ಲ ಎಂದು ನ್ಯಾಯಾಲಯ ತಿಳಿಸಿದೆ.