ಪಾಕಿಸ್ತಾನವನ್ನು ಮತ್ತೆ ‘ಎಫ್‌ಎಟಿಎಫ್‌’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ

(ಎಫ್‌ಎಟಿಎಫ್‌ ಎಂದರೆ ಹಣಕಾಸು ಕ್ರಿಯಾ ಕಾರ್ಯಪಡೆ. ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ದೇಶಗಳ ವಿರುದ್ಧ ಈ ಜಾಗತಿಕ ಸಂಸ್ಥೆ ಕ್ರಮ ಕೈಗೊಳ್ಳುತ್ತದೆ)

ನವದೆಹಲಿ – ಪಾಕಿಸ್ತಾನವನ್ನು ಮತ್ತೊಮ್ಮೆ ‘ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ (ಎಫ್‌ಎಟಿಎಫ್‌) ಸಂಸ್ಥೆಯ ‘ಗ್ರೇ ಲಿಸ್ಟ್’ ಗೆ ಸೇರಿಸುವಂತೆ ಭಾರತ ಮನವಿ ಮಾಡಬಹುದು. ಅಕ್ಟೋಬರ್‌ನಲ್ಲಿ ಎಫ್‌ಎಟಿಎಫ್‌ನ ಪೂರ್ಣ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ಗೆ ಸೇರಿಸಲು ಭಾರತ ಒತ್ತಡ ಹೇರಬಹುದು. ಇದಕ್ಕಾಗಿ ಭಾರತ ಹಲವು ವಿಡಿಯೋಗಳು ಮತ್ತು ಇತರ ಪುರಾವೆಗಳನ್ನು ಪ್ರಸ್ತುತ ಪಡಿಸಬಹುದು, ಇವುಗಳ ಆಧಾರದ ಮೇಲೆ ‘ಪಾಕಿಸ್ತಾನ ಇಂದಿಗೂ ಕೂಡ ಜಿಹಾದಿ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿಲ್ಲ’ ಎಂಬುದು ಸ್ಪಷ್ಟವಾಗುತ್ತದೆ. ಅಕ್ಟೋಬರ್ 2022 ರಲ್ಲಿ ಪಾಕಿಸ್ತಾನದ ಹೆಸರನ್ನು ಗ್ರೇ ಲಿಸ್ಟ್‌ನಿಂದ ತೆಗೆದುಹಾಕಲಾಗಿತ್ತು.

‘ಗ್ರೇ ಲಿಸ್ಟ್’ನಲ್ಲಿ ಸೇರ್ಪಡೆಯಾಗಿರುವ ದೇಶಗಳು ಎಫ್‌ಎಟಿಎಫ್‌ನ ಕಠಿಣ ನಿಗಾವಹಿಸುವಿಕೆ ಎದುರಿಸಬೇಕಾಗುತ್ತದೆ. ಹಾಗೆಯೇ ಮನಿ ಲಾಂಡರಿಂಗ್ (ಹಣಕಾಸು ಅಕ್ರಮ ವ್ಯವಹಾರ), ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಅಣ್ವಸ್ತ್ರಕ್ಕೆ ಹಣಕಾಸು ನೆರವು ನೀಡುವುದನ್ನು ತಡೆಯುವ ವ್ಯವಸ್ಥೆಯಲ್ಲಿನ ಕಾರ್ಯತಂತ್ರದ ನ್ಯೂನತೆಗಳನ್ನು ಸರಿಪಡಿಸಲು ಕಾಲಕಾಲಕ್ಕೆ ಮರುಪರಿಶೀಲನೆ ನಡೆಸಲಾಗುತ್ತದೆ. ಇಂತಹ ದೇಶಗಳಿಗೆ ಜಾಗತಿಕ ಹಣಕಾಸು ಸಂಸ್ಥೆಗಳಿಂದ ನಿಧಿ (ಸಾಲ) ಪಡೆಯಲು ಕೂಡ ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

‘ಆಪರೇಷನ್ ಸಿಂದೂರ್’ ನಂತರ ಇಂತಹ ಹಲವು ವಿಡಿಯೋಗಳು ಮುನ್ನೆಲೆಗೆ ಬಂದಿದ್ದವು, ಪಾಕಿಸ್ತಾನದ ಹಲವು ಸೇನಾ ಕಮಾಂಡರ್‌ಗಳು ಭಯೋತ್ಪಾದಕರ ಶವಯಾತ್ರೆಯಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಅಲ್ಲದೆ, ಕುಖ್ಯಾತ ಭಯೋತ್ಪಾದಕರು ಬಹಿರಂಗವಾಗಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಜನರಿಂದ ನಿಧಿ ಶೇಖರಿಸುವಂತೆ ಮನವಿ ಮಾಡುತ್ತಿರುವುದು ಕಂಡುಬಂದಿತ್ತು.