ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!

ಮಾಣಿಕ್ಯಧಾರಾ ಜಲಪಾತದ ರಸ್ತೆಯಲ್ಲಿ ಅಕ್ರಮ ಗೋರಿಗಳ ನಿರ್ಮಾಣ: ಹಿಂದೂಗಳಲ್ಲಿ ತೀವ್ರ ಆಕ್ರೋಶ

ಚಿಕ್ಕಮಗಳೂರು – ಹಿಂದೂಗಳ ಧಾರ್ಮಿಕ ಕ್ಷೇತ್ರವಾದ ದತ್ತಪೀಠದ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಮಾಣಿಕ್ಯಧಾರಾ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಹಸಿರು ಚಾದರ ಹೊದಿಸಿ ಹೊಸ ಗೋರಿಗಳನ್ನು ನಿರ್ಮಿಸುವ ಪಿತೂರಿ ನಡೆಯುತ್ತಿದೆ. ದತ್ತಪೀಠದಿಂದ ಸುಮಾರು ೬ ಕಿಲೋಮೀಟರ್ ದೂರದಲ್ಲಿ ಈ ಗೋರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ‘ಇದರ ಮೂಲಕ ಈ ಪ್ರದೇಶದಲ್ಲಿ ಅಕ್ರಮವಾಗಿ ಇಸ್ಲಾಂ ಧರ್ಮದ ಕುರುಹುಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ಹೊಸ ಪದ್ಧತಿಗಳನ್ನು ಜಾರಿಗೆ ತರಲಾಗುತ್ತಿದೆ’ ಎಂದು ಇಲ್ಲಿನ ಬಜರಂಗದಳದ ಹಿಂದುತ್ವನಿಷ್ಠರು ಆರೋಪಿಸಿದ್ದಾರೆ. ದತ್ತಪೀಠದ ಮಾಲೀಕತ್ವದ ಹಕ್ಕಿನ ಕುರಿತು ಈಗಾಗಲೇ ಹಿಂದೂ ಮತ್ತು ಮುಸ್ಲಿಮರ ನಡುವೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಮುಸ್ಲಿಮರು ಈ ಸ್ಥಳವನ್ನು ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ ಎಂದು ಕರೆಯುತ್ತಾರೆ.

ಈ ಅಕ್ರಮ ಗೋರಿಗಳ ವಿಷಯದ ಕುರಿತು ಬಜರಂಗದಳದ ಮುಖಂಡ ರಘು ಸಕಲೇಶಪುರ ಅವರು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿ, ‘ಧಾರ್ಮಿಕ ದತ್ತಿ ಇಲಾಖೆ ಮತ್ತು ಪೊಲೀಸರ ಕಣ್ಣೆದುರೇ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ದತ್ತಪೀಠದ ಆವರಣದಲ್ಲಿ ಯಾವುದೇ ಹೊಸ ಪದ್ಧತಿ ಅಥವಾ ಹೊಸ ನಿರ್ಮಾಣಗಳಿಗೆ ಅವಕಾಶವಿಲ್ಲ. ಆದಾಗ್ಯೂ, ಇಲ್ಲಿ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಲಾಗುತ್ತಿದೆ’ ಎಂದರು.

ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಹಸಿರು ಚಾದರ ಹೊದಿಸಿ ಪೂಜೆ ಮಾಡುವುದನ್ನು ನಿಷೇಧಿಸಬೇಕು ಹಾಗೂ ಅಕ್ರಮ ಗೋರಿಗಳನ್ನು ತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಅಕ್ರಮ ಗೋರಿಗಳ ನಿರ್ಮಾಣದ ಘಟನೆ ಆಧಾರರಹಿತ! – ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ

ಈ ಕುರಿತು ‘ಸನಾತನ ಪ್ರಭಾತ್’ ಪ್ರತಿನಿಧಿಯು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯಾಮಾ ಅವರೊಂದಿಗೆ ಮಾತನಾಡಿದರು. ಈ ವೇಳೆ ಅವರು, ಹಿಂದೂ ಸಂಘಟನೆಗಳಿಗೆ ಸಿಕ್ಕಿರುವ ಮಾಹಿತಿ ತಪ್ಪು ಎಂದು ಹೇಳಿದರು. ಅಕ್ರಮ ಗೋರಿಗಳ ನಿರ್ಮಾಣದ ಘಟನೆ ಆಧಾರರಹಿತವಾಗಿದೆ. ದತ್ತಪೀಠದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಈ ಪ್ರದೇಶದಲ್ಲಿ ಯಾವುದೇ ಹೊಸ ನಿರ್ಮಾಣ ಮಾಡದಂತೆ ಆದೇಶಿಸಲಾಗಿದೆ. ಆ ದೃಷ್ಟಿಯಿಂದ ನಾವು ಜಾಗರೂಕರಾಗಿದ್ದೇವೆ. ಗೋರಿ ನಿರ್ಮಿಸಿರುವ ಚಿತ್ರಗಳು ೬ ವರ್ಷ ಹಳೆಯದಾಗಿದ್ದು, ಆ ವಿಷಯವನ್ನು ಈಗ ಪ್ರಸ್ತಾಪಿಸಲಾಗುತ್ತಿದೆ. ಹಿಂದೂ-ಮುಸ್ಲಿಮರು ಈ ವಿಷಯದಲ್ಲಿ ಶಾಂತಿ ಕಾಪಾಡಬೇಕು. ಈ ವಿಷಯವನ್ನು ನಾನು ಸ್ವತಃ ಬಜರಂಗದಳದ ರಘು ಸಕಲೇಶಪುರ ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿಗಳ ಈ ಹೇಳಿಕೆಯನ್ನು ಖಚಿತಪಡಿಸಿಕೊಳ್ಳಲು ರಘು ಸಕಲೇಶಪುರ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಸಂಪರ್ಕ ಸಾಧ್ಯವಾಗಲಿಲ್ಲ.

ಸಂಪಾದಕೀಯ ನಿಲುವು

ಚಿಕ್ಕಮಗಳೂರು ಮಾತ್ರವಲ್ಲ, ರಾಜ್ಯದಾದ್ಯಂತ ಇರುವ ಹಿಂದೂಗಳು ಈ ಪಿತೂರಿಯನ್ನು ವಿರೋಧಿಸಬೇಕು!, ಈ ಪಿತೂರಿಯನ್ನು ಹತ್ತಿಕ್ಕಲು ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ, ಇಡೀ ರಾಜ್ಯದ ಹಿಂದೂಗಳು ಸಂಘಟಿತರಾಗಿ ಪ್ರತಿಭಟಿಸಬೇಕು!