ತ್ರಾವಣಕೋರ್‌ನ ರಾಜ ಮಾರ್ತಂಡ ವರ್ಮಾ ಮತ್ತು ಡಚ್ಚರ ನಡುವಿನ ಕೊಲಾಚೆಲದ ಐತಿಹಾಸಿಕ ಯುದ್ಧ !

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೧. ದಕ್ಷಿಣದ ಪರಾಕ್ರಮಿ ರಾಜಾ ಮಾರ್ತಂಡ ವರ್ಮನ ತ್ರಾವಣಕೋರ್‌ ಸಾಮ್ರಾಜ್ಯ

‘೧೮ ನೆಯ ಶತಮಾನದಲ್ಲಿ, ಅಂದರೆ ೧೭೨೯ ರಿಂದ ೧೭೫೮ ರ ಕಾಲಾವಧಿಯಲ್ಲಿ, ಅನಿಝಮ್‌ ಥಿರುನಲ್‌ ಮಾರ್ತಂಡ ವರ್ಮಾ ಎಂಬ ಪರಾಕ್ರಮಿ ರಾಜನು ‘ತ್ರಾವಣಕೋರ್’ ಸಾಮ್ರಾಜ್ಯದ ರಾಜ್ಯಾಡಳಿತವನ್ನು ನಡೆಸುತ್ತಿದ್ದನು. ಇತಿಹಾಸ ಸಂಶೋಧಕರ ಪ್ರಕಾರ, ಈ ಪರಾಕ್ರಮಿ ರಾಜನ ಇತಿಹಾಸವು ನಿರ್ಲಕ್ಷಿಸಲ್ಪಟ್ಟಿತು. ಆದ್ದರಿಂದ, ಡಚ್ಚರ ‘ಯೂರೋಪಿಯನ್‌ ಈಸ್ಟ್ ಇಂಡಿಯಾ ಕಂಪನಿ’ ವಿರುದ್ಧ ಅವನು ಪಡೆದ ವಿಜಯ ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ. ಅನಿಝಮ್‌ ಥಿರುನಲ್‌ ಮಾರ್ತಂಡ ವರ್ಮನು ಅತೀವ ಪರಾಕ್ರಮವನ್ನು ಪ್ರದರ್ಶಿಸಿ ದಕ್ಷಿಣದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅವನು ಸಮುದ್ರದ ಮೇಲೆ ನಿಗಾ ಇಡಲು ಒಂದು ವ್ಯವಸ್ಥೆಯನ್ನು ರೂಪಿಸಿದನು. ಸುತ್ತಮುತ್ತಲಿನ ಸಣ್ಣ ರಾಜರನ್ನು ಒಟ್ಟುಗೂಡಿಸಿ, ಅವರನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿ ತನ್ನ ಅಧಿಕಾರವನ್ನು ಬಲಪಡಿಸಿದನು. ಅವನು ಉತ್ತಮ ಶಸ್ತ್ರಾಸ್ತ್ರಗಳು, ಫಿರಂಗಿದಳ ಮತ್ತು ನೌಕಾಪಡೆಗಳನ್ನು ಅಭಿವೃದ್ಧಿಪಡಿಸಿದ್ದನು. ಇದರಿಂದ ದಕ್ಷಿಣ ಭಾರತದಲ್ಲಿ ತ್ರಾವಣಕೋರ್‌ ಸಾಮ್ರಾಜ್ಯವು ಒಂದು ಬಲಿಷ್ಠ ಆಡಳಿತವಾಗಿ ಹೊರಹೊಮ್ಮಿತು. ಇದು ಯೂರೋಪಿಯನ್‌ ಡಚ್ಚರಿಗೆ ಸಹಿಸಲಾಗಲಿಲ್ಲ.

೨. ತ್ರಾವಣಕೋರ್‌ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ಡಚ್ಚರ ಪ್ರಯತ್ನ

ಯೂರೋಪಿನ ಡಚ್ಚರು ‘ಈಸ್ಟ್ ಇಂಡಿಯಾ ಕಂಪನಿ’ಯನ್ನು ಸ್ಥಾಪಿಸಿದರು. ಮೊದಲು ಅವರು ವ್ಯಾಪಾರದ ಉದ್ದೇಶದಿಂದ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬಂದಿರುವಂತೆ ನಟಿಸಿದರು. ಆದರೆ ಅವರ ಗುಪ್ತ ಉದ್ದೇಶ ಅಧಿಕಾರ ಪಡೆಯುವುದಾಗಿತ್ತು. ಆ ಸಮಯದಲ್ಲಿ, ಅವರು ಆಂಗ್ಲರ ‘ಈಸ್ಟ್ ಇಂಡಿಯಾ ಕಂಪನಿ’ಗಿಂತ ಹೆಚ್ಚು ಪ್ರಭಾವಿ ಮತ್ತು ಶಕ್ತಿಶಾಲಿಯಾಗಿದ್ದರು. ಡಚ್ಚರು ಆಧುನಿಕ ಶಸ್ತ್ರಾಸ್ತ್ರಗಳು, ಫಿರಂಗಿದಳ ಮತ್ತು ತರಬೇತಿ ಪಡೆದ ಸೈನಿಕರನ್ನು ಹೊಂದಿದ್ದರು. ತ್ರಾವಣಕೋರ್‌ ಸಾಮ್ರಾಜ್ಯದಲ್ಲಿ ಎಂಟು ನಾಯರ್‌ರು ಬಂಡಾಯಕ್ಕೆ ಯತ್ನಿಸುತ್ತಿದ್ದಾರೆಂದು ಅವರಿಗೆ ತಿಳಿಯಿತು. ಆ ಸಮಯದಲ್ಲಿ, ಭಾರತದಲ್ಲಿ ಸಾಮ್ರಾಜ್ಯಗಳು ಚೆದುರಿಹೋಗಿದ್ದವು. ಅವರು ತಮ್ಮ ರಾಜ್ಯದ ಹೊರಗಿನ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ಕೇವಲ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ವಿದೇಶಿ ಡಚ್ಚರು ಇದರ ಲಾಭ ಪಡೆಯದೇ ಇದ್ದಿದ್ದರೆ ಅದೊಂದು ಆಶ್ಚರ್ಯವೇ ಆಗಿರುತ್ತಿತ್ತು. ಅವರು ವಸಾಹತುವಾದದ ದೃಷ್ಟಿಕೋನದಿಂದ ತ್ರಾವಣಕೋರ್‌ ರಾಜ್ಯದಲ್ಲಿ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದರು. ಇದು ಸಂಘರ್ಷಕ್ಕೆ ಕಾರಣವಾಯಿತು ಮತ್ತು ಕನ್ಯಾಕುಮಾರಿಯ ಭಾಗವಾಗಿರುವ ಕೋಲಾಚೆಲ್‌ನಲ್ಲಿ ಭೀಕರ ಯುದ್ಧ ನಡೆಯಿತು.

೩. ಪರಾಕ್ರಮಿ ರಾಜ ಮಾರ್ತಂಡ ವರ್ಮಾನಿಂದ ಡಚ್ಚರ ಐತಿಹಾಸಿಕ ಸೋಲು

ಕೊಲಾಚೆಲ್‌ನ ಯುದ್ಧವು ೧೦ ಅಗಸ್ಟ್ ೧೭೪೧ ರಂದು ನಡೆಯಿತು. ಈ ಯುದ್ಧದಲ್ಲಿ, ಡಚ್ಚರು ಭಾರಿ ಪ್ರಮಾಣದ ಮದ್ದುಗುಂಡುಗಳು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದರು. ಇದಕ್ಕೆ ಪ್ರತ್ಯುತ್ತರವೆಂದು, ತ್ರಾವಣಕೋರ್‌ನ ಶೂರ ಸೈನಿಕರು ವೀರಾವೇಶದಿಂದ ಹೋರಾಡಿದರು. ಈ ಯುದ್ಧದಲ್ಲಿ ರಾಜ ಮಾರ್ತಂಡ ವರ್ಮನ ನಾಯಕತ್ವದಲ್ಲಿ ತ್ರಾವಣಕೋರ್‌ ಸೇನೆಯು ಡಚ್ಚರನ್ನು ಸೋಲಿಸಿತು. ಅನಂತರ, ಮಾರ್ತಂಡ ರಾಜನು ೪೦೦ ಡಚ್‌ ಸೈನಿಕರನ್ನು ಸೆರೆಹಿಡಿದನು ಮತ್ತು ಅವರ ಫಿರಂಗಿದಳ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡನು. ವಿಶೇಷವೆಂದರೆ, ಅವರ ಮುಖ್ಯ ಸೇನಾಪತಿಯಾದ ಯೂಸ್ತಾಚಿಯಸ್‌ ದಿ ಲೆನಾಯ್‌ ಇವನನ್ನು ತನ್ನ ಮುಖ್ಯ ಸೇನಾಪತಿಯಾಗಿ ನೇಮಿಸಿಕೊಂಡನು. ಅವನು ಕೊನೆಯ ವರೆಗೂ ತ್ರಾವಣಕೋರ್‌ ಸಾಮ್ರಾಜ್ಯಕ್ಕೆ ನಿಷ್ಠಾವಂತನಾಗಿದ್ದನು. ಈ ಯುದ್ಧದ ನಂತರ, ತ್ರಾವಣಕೋರ್‌ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಒಂದು ಬಲಿಷ್ಠ ರಾಜ್ಯವಾಗಿ ಹೊರಹೊಮ್ಮಿತು. ಈ ಯುದ್ಧದಲ್ಲಿ ಡಚ್ಚರು ಅನುಭವಿಸಿದ ಸೋಲನ್ನು ವಿದೇಶಿ ಇತಿಹಾಸಕಾರರು ದಾಖಲಿಸಿದ್ದಾರೆ. ಈ ಯುದ್ಧವು ಯೂರೋಪಿಯನ್‌ ವಸಾಹತುಶಾಹಿಯ ವಿರುದ್ಧದ ಅದ್ಭುತ ವಿಜಯವಾಗಿದ್ದರಿಂದ ಅಪ್ರತಿಮ ಶೌರ್ಯಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಯುದ್ಧದ ನಂತರ, ಯಾವುದೇ ವಿದೇಶಿ ಶಕ್ತಿಗಳು ತ್ರಾವಣಕೋರ್‌ ರಾಜ ಮಾರ್ತಂಡ ವರ್ಮನೊಂದಿಗೆ ವೈರತ್ವ ಮಾಡಿಕೊಳ್ಳಲಿಲ್ಲ.

ಶ್ರೀಕೃಷ್ಣಾರ್ಪಣಮಸ್ತು |

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೦.೮.೨೦೨೫)