ಪ್ರತಿದಿನ ನಡೆಯುವ ಅವಶ್ಯಕತೆ ಮತ್ತು ಅದರಿಂದಾಗುವ ಲಾಭ !

ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೬

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆ ಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಪರಿಹಾರ ವಾಗಿದೆ. ಪ್ರಾಚೀನ ಗ್ರಂಥಗಳ ಲ್ಲಿನ ವ್ಯಾಯಾಮದ ತತ್ವಗಳು ಇಂದಿಗೂ ಅಷ್ಟೇ ಉಪಯುಕ್ತ ವಾಗಿದ್ದು, ನಾವು ಅವುಗಳಿಂದ ಪ್ರೇರಣೆ ಪಡೆಯಬಹುದು. ಈ ಲೇಖನ ಮಾಲೆಯಲ್ಲಿ ನಾವು ವ್ಯಾಯಾಮದ ಮಹತ್ವ, ವ್ಯಾಯಾಮದ ಬಗ್ಗೆ ಇರುವ ಸಂದೇಹ ನಿವಾರಣೆ, ‘ಎರ್ಗೊನಾಮಿಕ್ಸ್’ ತತ್ವ ಮತ್ತು ಕಾಯಿಲೆಗಳಿಗೆ ಅನುಗುಣವಾದ ಸರಿಯಾದ ವ್ಯಾಯಾಮದ ಮಾಹಿತಿಯನ್ನು ನೀಡುತ್ತೇವೆ.

‘ಹಿಂದಿನ ಕಾಲದಲ್ಲಿ ಕೆಲಸಕ್ಕಾಗಿ ದಿನಕ್ಕೆ ೨-೪ ಮೈಲಿ ನಡೆಯುವುದು ಅನಿವಾರ್ಯವಾಗಿತ್ತು, ಆದರೆ ಈಗ ಅದೇ ಕೆಲಸ ವಾಹನಗಳ ಮೂಲಕ ಆಗುವುದರಿಂದ, ನಾವು ಸಹಜ ವ್ಯಾಯಾಮದ ಮೂಲಭೂತ ಅನುಭವದಿಂದ ವಂಚಿತರಾಗುತ್ತಿದ್ದೇವೆ. ಹಿಂದೆ ನಡೆದಾಟವನ್ನು ವ್ಯಾಯಾಮ ಎಂದು ಪರಿಗಣಿಸದೆ, ಅದೊಂದು ಸಹಜ ಕ್ರಿಯೆ ಎಂದು ಭಾವಿಸಲಾಗುತ್ತಿತ್ತು; ಆದರೆ ಈಗ ನಾವು ಅದನ್ನು ಅಷ್ಟೊಂದು ಸಹಜವಾಗಿ ಮಾಡದ ಕಾರಣ, ವ್ಯಾಯಾಮ ಮಾಡಲು ಹೇಳಬೇಕಾಗಿದೆ. ‘ನಡೆಯುವುದರಿಂದ ಆಗುವ ಪ್ರಯೋಜನಗಳು ಯಾವುವು’, ಎಂಬುದನ್ನು ಇಲ್ಲಿ ನೋಡೋಣ.

೧. ಪ್ರತಿದಿನ ನಡೆಯುವುದರಿಂದ ಆಗುವ ಲಾಭ

೧ ಅ. ಉಸಿರಾಟದ ಕ್ರಿಯೆ ಪರಿಣಾಮಕಾರಿಯಾಗುತ್ತದೆ : ನಡೆಯುವಾಗ ಕಾಲಿನ ದೊಡ್ಡ ಸ್ನಾಯುಗಳು ಆಕುಂಚನ ಮತ್ತು ಪ್ರಸರಣವಾಗುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ನಡೆಯುವುದರಿಂದ ಉಸಿರಾಟ ದೀರ್ಘವಾಗಿ ಹೆಚ್ಚು ಪ್ರಾಣವಾಯು (ಆಮ್ಲಜನಕ) ತೆಗೆದುಕೊಳ್ಳಲಾಗುತ್ತದೆ. ಇದರಿಂದ ರಕ್ತ ಶುದ್ಧವಾಗುತ್ತದೆ ಮತ್ತು ದೇಹವು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಕೇವಲ ದೀರ್ಘ ಉಸಿರಾಟದ ಬದಲಾಗಿ, ನಡೆಯುವಾಗ ಸಹಜವಾಗಿ ಘಟಿಸುವ ಈ ಕ್ರಿಯೆಯು ಇಡೀ ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರತಿದಿನ ನಡೆಯುವುದರಿಂದ ನಿಯಮಿತ ಉಸಿರಾಟದ ಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗುತ್ತದೆ.

೧ ಆ. ಮಲಬದ್ಧತೆಯ ಕಾಯಿಲೆ ದೂರವಾಗುವುದು : ನಡೆಯುವಾಗ ಕಾಲುಗಳನ್ನು ಮೇಲಕ್ಕೆ-ಕೆಳಕ್ಕೆ ಎತ್ತಬೇಕಾಗಿರುವುದರಿಂದ, ಕರುಳಿನಲ್ಲಿ ಮಲವನ್ನು ಮುಂದೆ ತಳ್ಳಲು ನಡೆಯುವ ಆಕುಂಚನ ಮತ್ತು ಪ್ರಸರಣ ಕ್ರಿಯೆಗೆ ಸಹಾಯವಾಗುತ್ತದೆ. ಆದ್ದರಿಂದ, ‘ಸುದೃಢ ವ್ಯಕ್ತಿಯು ಪ್ರತಿದಿನ ೪-೫ ಮೈಲಿ (ಸುಮಾರು ೮ ಕಿ.ಮೀ.) ನಡೆದರೆ ಮಲಬದ್ಧತೆಯ ಕಾಯಿಲೆ ಸಂಪೂರ್ಣವಾಗಿ (ನಿರ್ಮೂಲನೆಯಾಗಿ) ಇಲ್ಲವಾಗುತ್ತದೆ,’ ಎಂಬುದು ಹಿಂದಿನಿಂದಲೂ ಇರುವ ಅಭಿಪ್ರಾಯವಾಗಿದೆ.

೧ ಇ. ಆಹಾರ ಜೀರ್ಣವಾಗುವುದು ಮತ್ತು ಹಸಿವು ಹೆಚ್ಚುವುದು : ನಡೆಯುವುದರಿಂದ ಬೆವರು ಬರುತ್ತದೆ ಮತ್ತು ಚರ್ಮದ ಎಲ್ಲ ರಂಧ್ರಗಳು ಕೊಳೆಯನ್ನು ಹೊರಹಾಕುವ ಕ್ರಿಯೆಯನ್ನು ಸರಿಯಾಗಿ ಮಾಡುತ್ತವೆ. ಬೆವರು ಬರುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ ಮತ್ತು ಶೌಚಕ್ಕೆ ಸುಲಭವಾಗುತ್ತದೆ.

ಇದರಿಂದ ಆಹಾರ ಜೀರ್ಣವಾಗುವುದು ಉತ್ತಮಗೊಳ್ಳುತ್ತದೆ ಮತ್ತು ಹಸಿವು ಹೆಚ್ಚುತ್ತದೆ. ‘ನಡೆಯುವುದರಿಂದ ದೇಹದ ಎಲ್ಲ ಭಾಗಗಳ ಮೇಲೆ ಉತ್ತಮ ಪರಿಣಾಮವಾಗುತ್ತದೆ,’ ಎಂಬುದು ಇದರಿಂದ ತಿಳಿಯುತ್ತದೆ. (ಆಧಾರ : ಮಾಸಿಕ ‘ವ್ಯಾಯಾಮ’, ಶಂ.ಧೋ. ವಿದ್ವಾಂಸ, ಸಂಪಾದಕರು, ೧೫.೨.೧೯೫೭)

೨. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮವೆಂದು ‘ನಡೆಯುವುದು’ ಅವಶ್ಯಕ !

೨ ಅ. ದೇಹಕ್ಕೆ ಶ್ರಮವಾದರೆ ಅದನ್ನು ವ್ಯಾಯಾಮ ಎಂದು ಹೇಳಬಹುದು ! : ಮೇಲೆ ತಿಳಿಸಿದ ಎಲ್ಲ ಪ್ರಯೋಜನಗಳು ಸಾಮಾನ್ಯಕ್ಕಿಂತ ವೇಗವಾಗಿ ನಡೆದರೆ ಅನುಭವಕ್ಕೆ ಬರುತ್ತವೆ. ಹಾಗಾದರೆ, ‘ವೈದ್ಯಕೀಯ ಪರಿಭಾಷೆಯಲ್ಲಿ ‘ಸಾಮಾನ್ಯವಾಗಿ ನಡೆಯುವುದನ್ನು’ ವ್ಯಾಯಾಮ ಎನ್ನಬಹುದೇ ಇಲ್ಲವೇ?’ ಎಂಬ ಪ್ರಶ್ನೆ ಉದ್ಭವಿಸಬಹುದು. ‘ನಡೆಯುವುದರಿಂದ ವ್ಯಾಯಾಮ ಆಗುತ್ತದೆಯೇ ಇಲ್ಲವೇ ?’ ಎಂಬುದು ವ್ಯಕ್ತಿಯ ಸ್ಥಿತಿ ಅಥವಾ ಪ್ರಕೃತಿಯ ಮೇಲೆ ಅವಲಂಬಿಸಿದೆ. ನಾವು ದೇಹಕ್ಕೆ ಶ್ರಮ ನೀಡುವುದನ್ನೇ (ಕಷ್ಟ ನೀಡುವುದು) ವ್ಯಾಯಾಮ ಎಂದು ಹೇಳಬಹುದು.

೨ ಆ. ನಡೆಯುವುದರಿಂದ ಯಾರಿಗೆ ಶ್ರಮವಾಗಬಹುದು ? : ರೋಗಿಗಳು, ವೃದ್ಧರು ಅಥವಾ ತುಂಬಾ ದುರ್ಬಲರಿಗೆ ಸಾಮಾನ್ಯ ವೇಗದಲ್ಲಿ ನಡೆಯುವುದೂ ಕಷ್ಟವಾಗಿರುತ್ತದೆ. ‘ಯಾವ ವೇಗದಲ್ಲಿ ಹೆಚ್ಚು ಸಮಯ ನಡೆಯುವುದು ಕಷ್ಟವಾಗುತ್ತದೆಯೋ,’ ಅದನ್ನೇ ವ್ಯಾಯಾಮ ಎಂದು ಹೇಳಬಹುದು.

೨ ಇ. ನಡೆಯುವುದು ಸುಲಭ ಅಥವಾ ಸಹಜವೆಂದು ಅನಿಸತೊಡಗಿದರೆ, ಅದನ್ನು ವ್ಯಾಯಾಮ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಅದು ಒಂದು ಸಹಜ ಕ್ರಿಯೆಯಾಗುತ್ತದೆ. ಆದ್ದರಿಂದ, ಉತ್ತಮ ಆರೋಗ್ಯಕ್ಕಾಗಿ ‘ನಡೆಯುವುದು’ ಒಂದು ವ್ಯಾಯಾಮವಾಗಿರುವುದು ಅವಶ್ಯಕವಾಗಿದೆ. ದೃಢಕಾಯ ವ್ಯಕ್ತಿಗಳು ನಡೆಯುವುದಕ್ಕಿಂತ ಓಡಿದರೆ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು.

– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ. (೪.೧೧.೨೦೨೪)