ಹಿಂದುತ್ವನಿಷ್ಠರ ಆಧಾರಸ್ತಂಭವಾಗಿರುವ, ಪರಾಕ್ರಮಿ ನ್ಯಾಯವಾದಿ ಸಂಜೀವ ಪುನಾಳೇಕರ !

ಸಮಾಜದಲ್ಲಿರುವ ಕೆಲವೊಂದು ವ್ಯಕ್ತಿತ್ವಗಳೊಂದಿಗಿನ ಸಂಭಾಷಣೆ, ಸಹವಾಸದಿಂದ ಉತ್ಸಾಹ ಬರುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ. ಅಂಥವರಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಸಚಿವರು ಮತ್ತು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಸಂಜೀವ ಪುನಾಳೇಕರ ಕೂಡ ಒಬ್ಬರು. ಅವರಿಗೆ ‘ಪರಾಕ್ರಮಿ’ ಎಂಬ ಉಪಮೆಯು ಅತ್ಯಂತ ಸೂಕ್ತವಾಗಿ ಅನ್ವಯಿಸುತ್ತದೆ. ನೇರ ಮತ್ತು ನಿರ್ಭಯವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಅವರ ಸ್ವಭಾವವಾಗಿದೆ. ಮುಂಬಯಿ ಉಚ್ಚ ನ್ಯಾಯಾಲಯದ ಪ್ರಸಿದ್ಧ ನ್ಯಾಯವಾದಿಗಳಾಗಿದ್ದರೂ, ಸಾಮಾನ್ಯ ಜನರೊಂದಿಗೆ ಆತ್ಮೀಯತೆಯಿಂದ ಮಾತನಾಡುವುದು, ಅವರ ಅಡಚಣೆಗಳನ್ನು ತಿಳಿದು ಸಹಾಯ ಮಾಡುವುದು ಅವರಲ್ಲಿನ ಸದ್ಗುಣವಾಗಿದೆ. ಈ ಸಾಮಾಜಿಕ ಕಾರ್ಯದೊಂದಿಗೆ, ‘ಹಿಂದುತ್ವನಿಷ್ಠರ ನ್ಯಾಯವಾದಿ’ ಎಂಬುದು ಸಮಾಜದಲ್ಲಿನ ಅವರ ನಿಜವಾದ ಲೌಕಿಕ ಹೆಸರು ಎನ್ನಬಹುದು. ಪ್ರವಾಹದೊಂದಿಗೆ ಸಾಗುವವರು ಅನೇಕರಿರುತ್ತಾರೆ; ಆದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ‘ಹಿಂದೂ ಭಯೋತ್ಪಾದನೆ’ ಎಂಬ ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಷಡ್ಯಂತ್ರಗಳನ್ನು ರೂಪಿಸಲಾಯಿತು ಮತ್ತು ಅನೇಕ ಹಿಂದುತ್ವನಿಷ್ಠರನ್ನು ಅದರಲ್ಲಿ ಅನಗತ್ಯವಾಗಿ ಸಿಲುಕಿಸಲಾಯಿತು. ಆ ಸಮಯದಲ್ಲಿ ಈ ಷಡ್ಯಂತ್ರದ ವಿರುದ್ಧ ಮೊದಲು ಹೋರಾಡಲು ಮುಂದಾದವರಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರ ಮುಂಚೂಣಿಯಲ್ಲಿದ್ದರು. ಈ ಸಂಕಟದ ಸಮಯದಲ್ಲಿ ಹಿಂದುತ್ವನಿಷ್ಠರ ರಕ್ಷಾಕವಚವಾಗಿ ಅವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದರು. ಹಿಂದು ಭಯೋತ್ಪಾದನೆಯ ಸುಳ್ಳು ನಿರೂಪಣೆಯಲ್ಲಿ ಸಿಲುಕಿಸಿ ನ್ಯಾಯವಾದಿ ಸಂಜೀವ ಪುನಾಳೇಕರರವರನ್ನು ಜೈಲಿಗೆ ಅಟ್ಟಲಾಯಿತು. ಆದರೂ ಅವರು ವಿಚಲಿತರಾಗದೇ ‘ನ್ಯಾಯವಾದಿ’ಗಳಾಗಿ ಧರ್ಮ ಕಾರ್ಯದಲ್ಲಿನ ತಮ್ಮ ಕೊಡುಗೆಯನ್ನು ನಿಲ್ಲಿಸಲಿಲ್ಲ. ಮಾಲೇಗಾಂವ ಬಾಂಬ ಸ್ಫೋಟದ ಪ್ರಕರಣ, ಮಡಗಾಂವ ಬಾಂಬ ಸ್ಫೋಟದ ಪ್ರಕರಣ, ಡಾ. ನರೇಂದ್ರ ದಾಭೋಲಕರ ಹತ್ಯೆಯ ಪ್ರಕರಣ, ಕಾ. ಗೋವಿಂದ ಪಾನಸರೆ ಹತ್ಯೆಯ ಪ್ರಕರಣ, ನಾಲಾಸೋಪಾರಾ ಸ್ಫೋಟಕ ಪ್ರಕರಣ ಹೀಗೆ ಅನೇಕ ಪ್ರಕರಣಗಳಲ್ಲಿ ಸಂಜೀವ ಪುನಾಳೇಕರರವರು ಹಿಂದುತ್ವನಿಷ್ಠರಿಗೆ ಉಚಿತವಾಗಿ ಸಹಾಯ ಮಾಡಿದ್ದಾರೆ. ಹಿಂದುತ್ವನಿಷ್ಠ ಆರೋಪಿಗಳ ಬೆನ್ನಿಗೆ ದೃಢವಾಗಿ ನಿಂತು ಸತ್ಯವನ್ನು ಸಮಾಜದಲ್ಲಿ ದೃಢವಾಗಿ ಮಂಡಿಸಿದರು. ಈ ರೀತಿ ನಿಸ್ವಾರ್ಥ ಭಾವದಿಂದ ಹಿಂದುತ್ವಕ್ಕಾಗಿ ಹೋರಾಡುವ ಈ ‘ಹಿಂದುತ್ವದ ಸರದಾರ’ರು ಸಮಸ್ತ ಧರ್ಮಪ್ರೇಮಿಗಳಿಗೆ ಸ್ಪೂರ್ತಿದಾಯಕರಾಗಿದ್ದಾರೆ.

ನ್ಯಾಯವಾದಿ ಸಂಜೀವ ಪುನಾಳೇಕರ


ವಿಶೇಷ ಮಾಲಿಕೆ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ಇಂತಹ ನ್ಯಾಯವಾದಿಗಳು ಹುಡುಕಿದರೂ ಸಿಗುವರೇ ?

ಮಾಲೇಗಾಂವ ಸ್ಫೋಟ ಪ್ರಕರಣದ ಆರೋಪಿ ಶ್ಯಾಮ ಸಾಹೂರವರ ಹಿರಿಯ ಸಹೋದರರು ನ್ಯಾಯಾಲಯದಲ್ಲಿ ಅವರನ್ನು ಭೇಟಿಯಾಗಲು ಬಂದಾಗ, ವಿಚಾರಣೆಯ ಸಮಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಆಗ ಶ್ಯಾಮ ಸಾಹೂರವರು ತಮ್ಮ ಸಹೋದರನ ಅಂತ್ಯಸಂಸ್ಕಾರಕ್ಕಾಗಿ ತಮ್ಮ ಮೂಲಗ್ರಾಮವಾದ ಇಂದೂರಿಗೆ ಹೋಗಬೇಕಿತ್ತು. ಆರೋಪಿಯಾಗಿರುವುದರಿಂದ ಅವರಿಗೆ ಪೊಲೀಸ್ ರಕ್ಷಣೆಯಲ್ಲಿ ಹೋಗಬೇಕಿತ್ತು ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿತ್ತು. ನ್ಯಾಯವಾದಿ ಸಂಜೀವ ಪುನಾಳೇಕರರವರು ಆ ಸಮಯದಲ್ಲಿ ತಕ್ಷಣ ಪೊಲೀಸ ರಕ್ಷಣೆಗಾಗಿ ಬೇಕಾದ ಹಣವನ್ನು ಭರಿಸಿದರು. ಇದರಿಂದಾಗಿ ಶ್ಯಾಮ ಸಾಹೂರವರು ತಮ್ಮ ಸಹೋದರನ ಅಂತ್ಯಸಂಸ್ಕಾರಕ್ಕಾಗಿ ಇಂದೂರಿಗೆ ಹೋಗಲು ಸಾಧ್ಯವಾಯಿತು.

ಇದೇ ರೀತಿ ಮಾಲೇಗಾಂವ ಸ್ಫೋಟದ ಪ್ರಕರಣದ ಆರೋಪಿ ಸುಧಾಕರ ಚತುರ್ವೇದಿಯವರ ನ್ಯಾಯವಾದಿಗಳಾಗಿ ಸುಮಾರು 17 ವರ್ಷಗಳ ಕಾಲ ಉಚಿತವಾಗಿ ಕೆಲಸ ಮಾಡಿದರು. ಅಷ್ಟೇ ಅಲ್ಲದೆ, ಈ ಅವಧಿಯಲ್ಲಿ ನ್ಯಾಯವಾದಿ ಸುಧಾಕರ ಚತುರ್ವೇದಿಯವರ ಕುಟುಂಬಕ್ಕೂ ಆರ್ಥಿಕ ನೆರವು ನೀಡಿದರು. ಸುಧಾಕರ ಚತುರ್ವೇದಿಯವರಿಗೆ ಜಾಮೀನು ಮಂಜೂರಾದಾಗ, ಹಣಕಾಸಿನ ತೊಂದರೆಯಿಂದ ಅವರು ಜೈಲಿನಲ್ಲಿ ಉಳಿಯಬಾರದು ಎಂದು ನ್ಯಾಯವಾದಿ ಸಂಜೀವ ಪುನಾಳೇಕರರವರು 5 ಲಕ್ಷ ರೂಪಾಯಿ ಜಾಮೀನು ಮೊತ್ತವನ್ನು ಸ್ವತಃ ಭರಿಸಿದರು. ಈ ರೀತಿ ಹಿಂದುತ್ವನಿಷ್ಠ ಆರೋಪಿಗಳಿಗಾಗಿ ಉಚಿತವಾಗಿ ಮೊಕದ್ದಮೆ ನಡೆಸಿದ್ದಲ್ಲದೆ, ಚೌಕಟ್ಟಿನ ಹೊರಗೂ ಹೋಗಿ ಸ್ವಂತ ಕುಟುಂಬದ ಸದಸ್ಯರಂತೆ ಅವರಿಗೆ ಕಾಲಕಾಲಕ್ಕೆ ಆರ್ಥಿಕ ಸಹಾಯವನ್ನೂ ಮಾಡಿದರು. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು. ‘ಗುರುತು ಇಲ್ಲ, ಪರಿಚಯವೂ ಇಲ್ಲ’, ಆದರೂ ಕೇವಲ ಹಿಂದುತ್ವಕ್ಕಾಗಿ ಕೊಡುಗೆ ನೀಡಿದ್ದರಿಂದ ಈ ಆರೋಪಿಗಳ ಮೊಕದ್ದಮೆಗಾಗಿ ಹೋರಾಡುವ ಮತ್ತು ಅವರಿಗೆ ಆತ್ಮೀಯವಾಗಿ ಸಹಾಯ ಮಾಡುವ ಇಂತಹ ನ್ಯಾಯವಾದಿಗಳು ಹುಡುಕಿದರೂ ಸಿಗುವುದಿಲ್ಲ.

2. ತಂದೆಯ ಅಸ್ಥಿಗಳನ್ನು ವಿಸರ್ಜಿಸಿ ಹಿಂದುತ್ವನಿಷ್ಠರ ಪ್ರಕರಣಕ್ಕಾಗಿ ನ್ಯಾಯಾಲಯದಲ್ಲಿ ಹಾಜರಿರುವುದು !

ನಾಲಾಸೋಪಾರಾ ಪ್ರಕರಣದಲ್ಲಿ ಶ್ರೀ. ಶರದ ಕಳಸಕರರವರನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು ಶ್ರೀ. ವೈಭವ ರಾವತರೊಂದಿಗೆ ಬಂಧಿಸಿದಾಗ, ನ್ಯಾಯವಾದಿ ಸಂಜೀವ ಪುನಾಳೇಕರರವರ ತಂದೆಯವರು ಅನಾರೋಗ್ಯದಲ್ಲಿದ್ದರು. ಈ ಸಮಯದಲ್ಲಿಯೇ ಆಸ್ಪತ್ರೆಯಲ್ಲಿ ಅವರ ತಂದೆಯ ನಿಧನವಾಯಿತು. ಮಾರನೇ ದಿನ ನಾಲಾಸೋಪಾರಾ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವವರಿದ್ದರು. ತಂದೆಯ ಅಂತ್ಯಸಂಸ್ಕಾರವನ್ನು ಮುಗಿಸಿ ನ್ಯಾಯವಾದಿ ಸಂಜೀವ ಪುನಾಳೇಕರರವರು ಮರುದಿನ ನ್ಯಾಯಾಲಯಕ್ಕೆ ಹೋಗಲು ಸಿದ್ಧರಾದರು. ಆಗ ಮೊದಲಿಗೆ ಸ್ಮಶಾನಕ್ಕೆ ಹೋಗಿ ತಮ್ಮ ತಂದೆಯ ಅಸ್ಥಿಗಳನ್ನು ತೆಗೆದುಕೊಂಡರು ಮತ್ತು ನ್ಯಾಯಾಲಯಕ್ಕೆ ಹೋಗುವಾಗ ತಂದೆಯ ಅಸ್ಥಿಗಳನ್ನು ಸಮುದ್ರದಲ್ಲಿ ವಿಸರ್ಜಿಸಿ ಹಿಂದೂತ್ವನಿಷ್ಠರ ಮೊಕದ್ದಮೆ ಹೋರಾಡಲು ನ್ಯಾಯಾಲಯದಲ್ಲಿ ಹಾಜರಾದರು. ನ್ಯಾಯವಾದಿ ಸಂಜೀವ ಪುನಾಳೇಕರರವರ ಕರ್ತವ್ಯನಿಷ್ಠೆಯು ಸಮಸ್ತ ಹಿಂದೂತ್ವನಿಷ್ಠರಿಗೆ ಸ್ಪೂರ್ತಿದಾಯಕವಾಗಿದೆ.

3. ‘ಹಿಂದುತ್ವಕ್ಕಾಗಿ ಕಾರ್ಯ ಮಾಡುವವರ ಕೈಯಿಂದ ತಪ್ಪು ಆಗಿದ್ದರೂ, ಮೊಕದ್ದಮೆ ಹೋರಾಡುತ್ತೇನೆ’, ಎಂದು ದೃಢವಾಗಿ ಹೇಳುವ ನಿರ್ಭಯ ನ್ಯಾಯವಾದಿ !

ಪ್ರಸ್ತುತ ವೃತ್ತಿಪರ ಯುಗದಲ್ಲಿ ನ್ಯಾಯವಾದಿಗಳಾಗಿ ಕೆಲಸ ಮಾಡುವಾಗ ಮೊದಲು ಆರ್ಥಿಕ ಲೆಕ್ಕಾಚಾರಗಳನ್ನು ನೋಡಲಾಗುತ್ತದೆ. ಆದುದರಿಂದ ಯಾರೇ ಆದರೂ ಮೊಕದ್ದಮೆಯನ್ನು ಉಚಿತವಾಗಿ ಹೋರಾಡುವುದು ದೂರದ ವಿಷಯ. ಅದರಲ್ಲಿಯೂ ಕಾಂಗ್ರೆಸ್ ಅವಧಿಯಲ್ಲಿ ‘ಹಿಂದೂ ಭಯೋತ್ಪಾದಕ’ ಎಂದು ಬಿಂಬಿಸಲು ಭಯಾನಕ ಷಡ್ಯಂತ್ರಗಳನ್ನು ರೂಪಿಸಿ ಹಿಂದುತ್ವನಿಷ್ಠರನ್ನು ವಿವಿಧ ಪ್ರಕರಣಗಳಲ್ಲಿ ಸಿಲುಕಿಸಲಾಯಿತು. ಈ ಕಷ್ಟಕರ ಸಮಯದಲ್ಲಿ ಹಿಂದುತ್ವನಿಷ್ಠರ ಸಹಾಯಕ್ಕಾಗಿ ಮುಂದೆ ಬರಲು ಕೆಲವು ಹಿಂದುತ್ವನಿಷ್ಠರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಸಹ ಹಿಂಜರಿಯುತ್ತಿದ್ದವು. ಇಂತಹ ಸಮಯದಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರರವರು ಹಿಂದುತ್ವನಿಷ್ಠರ ಮೊಕದ್ದಮೆಗಳನ್ನು ಸ್ವೀಕರಿಸಿ ಅವರಿಗೆ ಸರ್ವತೋಮುಖವಾಗಿ ಸಹಾಯ ಮಾಡಿದರು. ‘ಹಿಂದುತ್ವಕ್ಕಾಗಿ ಕಾರ್ಯ ಮಾಡುವವರ ಕೈಯಿಂದ ತಪ್ಪು ಆಗಿದ್ದರೂ, ಅವರು ಹಿಂದುತ್ವಕ್ಕಾಗಿ ಕೃತ್ಯವನ್ನು ಮಾಡಿದ್ದಾರೆ; ಆದ್ದರಿಂದ ನಾನು ಅವರ ಮೊಕದ್ದಮೆಯನ್ನು ಅವಶ್ಯವಾಗಿ ಹೋರಾಡುತ್ತೇನೆ’, ಎಂದು ದೃಢವಾಗಿ ಹೇಳುವ, ಅಂದರೆ ಹಿಂದುತ್ವದ ಪರವಾಗಿ ದೃಢವಾಗಿ ನಿಲ್ಲುವ ಸಂಜೀವ ಪುನಾಳೇಕರರಂತಹ ಹಿಂದುತ್ವನಿಷ್ಠರು ಹಿಂದುತ್ವದ ನಿಜವಾದ ಶಕ್ತಿಯಾಗಿದ್ದಾರೆ.

ಹಿಂದುತ್ವದ ಧೃಢವಾದ ಧ್ವನಿ!

ಆಂದೋಲನದ ಸಮಯದಲ್ಲಿ ಉಪಸ್ಥಿತರಿಗೆ ಮಾರ್ಗದರ್ಶನ ನೀಡುತ್ತಿರುವ ನ್ಯಾಯವಾದಿ ಸಂಜೀವ ಪುನಾಳೇಕರ

‘ಹಿಂದು ಭಯೋತ್ಪಾದನೆ’ ಎಂಬ ಷಡ್ಯಂತ್ರದ ಭಾಗವಾಗಿ ಕಾಂಗ್ರೆಸ್ಸಿನ ಕೆಲವು ನಾಯಕರು ಡಾ. ನರೇಂದ್ರ ದಾಭೋಲಕರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಲು ಪ್ರಯತ್ನಿಸಿದರು ಮತ್ತು ಇದರಲ್ಲಿ ಕೆಲವು ಹಿಂದುತ್ವನಿಷ್ಠರನ್ನು ಸಿಕ್ಕಿಹಾಕಲು ಪ್ರಯತ್ನಿಸಿದರು. ಈ ಸಮಯದಲ್ಲಿ ಸಮಾಜದಲ್ಲಿ ಗೊಂದಲದ ವಾತಾವರಣವಿತ್ತು. ಕಾಂಗ್ರೆಸ್, ಪುರೋಗಾಮಿಗಳ ಸುಳ್ಳು ಆರೋಪಗಳು ಮತ್ತು ‘ಮೀಡಿಯಾ ಟ್ರಯಲ್’ – ಇವೆಲ್ಲವೂ ಒಟ್ಟಾಗಿ ಸನಾತನ ಸಂಸ್ಥೆಯನ್ನು ಬಲಿಪಶು ಮಾಡಲು ಪ್ರಯತ್ನಿಸಿದವು. ಸಮಾಜದಲ್ಲಿ ಸನಾತನ ಸಂಸ್ಥೆಯ ಅಪಖ್ಯಾತಿಯ ಸರ್ವತೋಮುಖ ಪ್ರಯತ್ನಗಳು ನಡೆಯುತ್ತಿದ್ದವು. ಇಂತಹ ಸಮಯದಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರರವರು ಹಿಂದುತ್ವದ ಧೃಢವಾದ ಧ್ವನಿಯಾಗಿ ಎಲ್ಲಾ ಹಿಂದೂ ದ್ವೇಷಿಗಳನ್ನು ಮೀರಿಸಿದರು. ವಿವಿಧ ಸುದ್ದಿವಾಹಿನಿಗಳಲ್ಲಿ ಹಿಂದುತ್ವನಿಷ್ಠರ ಪಕ್ಷವನ್ನು ಅವರು ಪ್ರತಿಪಾದಿಸಿದರು. ಈ ಸಮಯದಲ್ಲಿ ಹಿಂದುತ್ವನಿಷ್ಠರೂ ಸಹ ಗೊಂದಲಕ್ಕೊಳಗಾಗಿದ್ದರು. ಕಾಲಾಂತರದಲ್ಲಿ ಹಿಂದುತ್ವನಿಷ್ಠರ ವಿರುದ್ಧದ ಈ ಷಡ್ಯಂತ್ರದ ರಹಸ್ಯ ಬಯಲಾಯಿತು. ಆದರೆ ಈ ಸಂಕಟಕಾಲದಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರರಂತಹ ನ್ಯಾಯವಾದಿಗಳ ಕೊಡುಗೆಯು ಅಮೂಲ್ಯವಾಗಿತ್ತು. ಪ್ರಮುಖವಾಗಿ ಈ ಷಡ್ಯಂತ್ರದಲ್ಲಿ ಅನಗತ್ಯವಾಗಿ ಸಿಲುಕಿದ ಹಿಂದೂತ್ವನಿಷ್ಠರ ಕುಟುಂಬಗಳು ಕುಗ್ಗಿಹೋಗಿದ್ದವು. ಅವರಿಗೆ ಶ್ರೀ. ಸಂಜೀವ ಪುನಾಳೇಕರರಂತಹ ನ್ಯಾಯವಾದಿಗಳಿಂದ ಧೈರ್ಯ ಸಿಕ್ಕಿತು. ಈ ಕೊಡುಗೆ ಅಮೂಲ್ಯವಾಗಿತ್ತು.

4. ನ್ಯಾಯವಾದಿ ಪುನಾಳೇಕರರವರ ಪ್ರಯತ್ನಗಳಿಂದ ಧರ್ಮದಾಯ ಆಸ್ಪತ್ರೆಗಳಲ್ಲಿ ಬಡವರಿಗೆ ಯೋಜನೆಗಳ ಪರಿಣಾಮಕಾರಿ ಲಾಭವಾಗುವುದು!

2004 ರಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರರವರ ತಂದೆ ಗಜಾನನ ಪುನಾಳೇಕರರವರನ್ನು ಅನಾರೋಗ್ಯದ ನಿಮಿತ್ತ ಮುಂಬಯಿಯ ಜಸಲೋಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಈ ಅವಧಿಯಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರರವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಈ ಸಮಯದಲ್ಲಿ ಧರ್ಮಾರ್ಥ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ಬಗೆಗಿನ ಮಾಹಿತಿಯನ್ನು ಕೇಳಿದಾಗ ಅವರಿಗೆ ತೃಪ್ತಿದಾಯಕ ಉತ್ತರಗಳು ಸಿಗಲಿಲ್ಲ, ಅಷ್ಟೇ ಅಲ್ಲದೆ ಈ ಬಗ್ಗೆ ಮಾಹಿತಿ ನೀಡಲು ಅಲ್ಲಿ ಯಾವುದೇ ಜವಾಬ್ದಾರಿಯುತ ವ್ಯಕ್ತಿ ಇರಲಿಲ್ಲ. ಈ ಘಟನೆಯ ನಂತರ ನ್ಯಾಯವಾದಿ ಸಂಜೀವ ಪುನಾಳೇಕರರವರು ಜಸಲೋಕ ಆಸ್ಪತ್ರೆ ಸೇರಿದಂತೆ ಇತರೆ 4 ಆಸ್ಪತ್ರೆಗಳಿಗೆ ಪತ್ರ ಬರೆದು ಬಡ ರೋಗಿಗಳಿಗಾಗಿ ಇರುವ ಉಚಿತ ಮತ್ತು ರಿಯಾಯಿತಿ ದರದ ಚಿಕಿತ್ಸೆಗಳ ಬಗ್ಗೆ ಮಾಹಿತಿ ಕೇಳಿದರು; ಆದರೆ ಅವರ ಪತ್ರಗಳಿಗೆ ಉತ್ತರಗಳು ದೊರೆಯಲಿಲ್ಲ. ಸರಕಾರದಿಂದ ಆರ್ಥಿಕ ಲಾಭ ಪಡೆದಿದ್ದರೂ ಧರ್ಮದಾಯ ಆಸ್ಪತ್ರೆಗಳು ಬಡವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡದಿರುವ ಗಂಭೀರ ಪ್ರಕರಣವನ್ನು ಅರಿತ ನಂತರ, ಈ ಚಿಕಿತ್ಸೆಗಳ ಬಗ್ಗೆ ಮಾರ್ಗದರ್ಶನವನ್ನು ಖಚಿತಪಡಿಸಲು ಯೋಜನೆಯನ್ನು ರೂಪಿಸಬೇಕು ಎಂದು ನ್ಯಾಯವಾದಿ ಸಂಜೀವ ಪುನಾಳೇಕರರವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಆಧಾರದ ಮೇಲೆ ನ್ಯಾಯಾಲಯವು ಬಡ ಮತ್ತು ನಿರ್ಗತಿಕರಿಗೆ ಆಸ್ಪತ್ರೆಗಳ ಚಿಕಿತ್ಸೆ ವೆಚ್ಚಕ್ಕಾಗಿ ಧರ್ಮಾರ್ಥ ಆಸ್ಪತ್ರೆಗಳು ರೋಗಿಗಳಿಂದ ಪಡೆದ ಒಟ್ಟು ಆದಾಯದ ಶೇ.2 ನಿಧಿಯನ್ನು ಸಂಗ್ರಹಿಸುವ ಯೋಜನೆಯನ್ನು ನಿಗದಿಪಡಿಸಿತು. ನ್ಯಾಯವಾದಿ ಸಂಜೀವ ಪುನಾಳೇಕರರವರ ಪ್ರಯತ್ನಗಳಿಂದ ಇಡೀ ಮಹಾರಾಷ್ಟ್ರದ ಬಡ ರೋಗಿಗಳಿಗೆ ಈ ಯೋಜನೆಯ ಲಾಭವಾಗುತ್ತಿದೆ.

5. ಹಿಂದೂ ವಿಧಿಜ್ಞ ಪರಿಷತ್ತಿನ ಮೂಲಕ ನ್ಯಾಯವಾದಿಗಳ ಸಂಘಟನೆ !

ನ್ಯಾಯವಾದಿ ಸಂಜೀವ ಪುನಾಳೇಕರರವರು ಹಿಂದುತ್ವನಿಷ್ಠರಿಗಾಗಿ ಕೇವಲ ನ್ಯಾಯಾಲಯದ ಹೋರಾಟವನ್ನು ನಡೆಸಿದ್ದಲ್ಲದೆ, ಹಿಂದುತ್ವಕ್ಕಾಗಿ ಕೊಡುಗೆ ನೀಡುವ ಇನ್ನೂ ಅನೇಕ ನ್ಯಾಯವಾದಿಗಳೂ ರೂಪುಗೊಳ್ಳಬೇಕು ಎಂದು ಹಿಂದು ವಿಧಿಜ್ಞ ಪರಿಷತ್ತಿನ ಮೂಲಕ ನ್ಯಾಯವಾದಿಗಳ ಪರಿಣಾಮಕಾರಿ ಸಂಘಟನೆ ಮಾಡಿದರು. ಹಿಂದು ವಿಧಿಜ್ಞ ಪರಿಷತ್ತಿನ ಮೂಲಕ ನ್ಯಾಯವಾದಿಗಳ ಶಿಬಿರಗಳಲ್ಲಿ ಅವರು ನೀಡಿದ ಮಾರ್ಗದರ್ಶನದಿಂದ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳ ನ್ಯಾಯವಾದಿಗಳು ಹಿಂದುತ್ವದ ಕಾರ್ಯಕ್ಕೆ ಸೇರಿಕೊಂಡರು. ಪ್ರಸ್ತುತ ಅನೇಕ ನ್ಯಾಯವಾದಿಗಳು ವಿವಿಧ ರಾಜ್ಯಗಳಲ್ಲಿ, ವಿವಿಧ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಹಿಂದು ವಿಧಿಜ್ಞ ಪರಿಷತ್ತಿನ ಮೂಲಕ ಅನೇಕ ಪ್ರಕರಣಗಳಲ್ಲಿ ಉಚಿತವಾಗಿ ಹೋರಾಡುತ್ತಿದ್ದಾರೆ. ನ್ಯಾಯವಾದಿಗಳ ಸಂಘಟನಾ ಕಾರ್ಯದಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರವರ ಕೊಡುಗೆಯು ಅಮೂಲ್ಯವಾಗಿದೆ.

6. ಅನೇಕ ಗುಣಗಳ ಸಂಗಮ!

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀ. ಸಂಜೀವ ಪುನಾಳೇಕರರವರು ನಿಪುಣ ನ್ಯಾಯವಾದಿಗಳಾಗಿದ್ದರೂ, ಮೊದಲು ಅವರು ಒಬ್ಬ ಹಿಂದುತ್ವನಿಷ್ಠ ಕಾರ್ಯಕರ್ತರಾಗಿದ್ದಾರೆ. ಅದಕ್ಕಾಗಿಯೇ ಹಿಂದೂತ್ವದ ಕಾರ್ಯಕ್ಕಾಗಿ ಅವರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಪ್ರಭಾವಿ ವಾಕ್ಪಟುತ್ವ, ನೇತೃತ್ವ, ಸಮಾಜದ ವ್ಯಕ್ತಿಗಳನ್ನು ಕಾರ್ಯದೊಂದಿಗೆ ಸೇರಿಸಿಕೊಳ್ಳುವ ಕಲೆ, ಅಧ್ಯಯನಶೀಲತೆ, ಕಷ್ಟಪಡುವ ಸಿದ್ಧತೆ, ಕ್ಷಾತ್ರವೃತ್ತಿ, ನಿರ್ಭಯತೆ, ಸ್ಪಷ್ಟವಕ್ತೃತ್ವ, ಉತ್ಸಾಹ, ಕಾರ್ಯದ ಧ್ಯಾಸ, ಇತರರಿಗೆ ಸಹಾಯ ಮಾಡುವ ಮನಸ್ಸು ಮತ್ತು ಇವೆಲ್ಲದರ ಜೊತೆಗೆ ನಿರಪೇಕ್ಷ ಪ್ರೀತಿಯ ಮನೋಭಾವ – ಇಂತಹ ಅನೇಕ ಗುಣಗಳ ಸಂಗಮ ನ್ಯಾಯವಾದಿ ಸಂಜೀವ ಪುನಾಳೇಕರರವರಲ್ಲಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಒಮ್ಮೆ ನ್ಯಾಯವಾದಿ ಸಂಜೀವ ಪುನಾಳೇಕರ ಅವರ ಬಗ್ಗೆ ‘ಕಾರ್ಯ ಮಾಡಲು ಬೇಕಾದ ಗುಣಗಳನ್ನು ಅವರ ತಳಮಳದಿಂದ ಈಶ್ವರನು ನೀಡುತ್ತಾನೆ’, ಎಂದು ಹೇಳಿದ್ದರು.

7. ಹಿಂದುತ್ವದ ಕಾರ್ಯದೊಂದಿಗೆ ಸಾಧನೆ ಮಾಡುವ ನ್ಯಾಯವಾದಿಗಳು !

ಹಿಂದುತ್ವದ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲು ಆಧ್ಯಾತ್ಮಿಕ ಸಾಮರ್ಥ್ಯವು ಅವಶ್ಯಕವಾಗಿದೆ ಎಂಬುದನ್ನು ನ್ಯಾಯವಾದಿ ಸಂಜೀವ ಪುನಾಳೇಕರರವರು ಅರಿತಿದ್ದಾರೆ ಮತ್ತು ಅನುಭವಿಸಿದ್ದಾರೆ. ಆದುದರಿಂದ, ನಿಯಮಿತವಾದ ಕಾರ್ಯನಿರತ ದಿನಚರಿಯಲ್ಲಿಯೂ ಅವರು ಸಾಧನೆಗೆ ಸಮಯ ನೀಡುತ್ತಾರೆ ಮತ್ತು ಇತರರಿಗೂ ಸಾಧನೆಯ ಮಹತ್ವವನ್ನು ಹೇಳುತ್ತಾರೆ. ಡಾ. ನರೇಂದ್ರ ದಾಭೋಲಕರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ನ್ಯಾಯವಾದಿ ಸಂಜೀವ ಪುನಾಳೇಕರ ಅವರನ್ನು ಜೈಲಿಗೆ ಹಾಕಲಾಯಿತು. ಅವರು 42 ದಿನಗಳ ಕಾಲ ಜೈಲಿನಲ್ಲಿ ಇದ್ದರು; ಆದರೆ ಈ ಅವಧಿಯಲ್ಲಿಯೂ ಅವರು ನಿರಂತರವಾಗಿ ನಾಮಸ್ಮರಣೆಯನ್ನು ಮುಂದುವರಿಸಿದರು.

ಪತ್ನಿಯ ದೃಢವಾದ ಬೆಂಬಲವು ಪತಿಯ ಸಮಷ್ಟಿ ಕಾರ್ಯದ ಯಶಸ್ಸಿನಲ್ಲಿ ಅಮೂಲ್ಯವಾಗಿರುತ್ತದೆ. ಅದರ ಶ್ರೇಯವನ್ನು ನ್ಯಾಯವಾದಿ ಸಂಜೀವ ಪುನಾಳೇಕರರವರ ಪತ್ನಿ ಸೌ. ಅನಿತಾರವರಿಗೆ ಸಲ್ಲುತ್ತದೆ. ಗಿರಣಿ ಕಾರ್ಮಿಕರ ನಾಯಕನಿಂದ ಯಶಸ್ವಿ ನ್ಯಾಯವಾದಿಗಳಾಗಿ ನ್ಯಾಯವಾದಿ ಸಂಜೀವ ಪುನಾಳೇಕರ ಅವರ ಜೀವನ ಪಯಣವು ಅತ್ಯಂತ ಸಂಘರ್ಷಮಯವಾಗಿತ್ತು. ಸಮಾಜ, ರಾಷ್ಟ್ರ ಮತ್ತು ಧರ್ಮ – ಈ ಎಲ್ಲಾ ಕ್ಷೇತ್ರಗಳಲ್ಲಿನ ಅನ್ಯಾಯದ ವಿರುದ್ಧ ಅವರು ಒಬ್ಬ ಕರ್ತವ್ಯನಿಷ್ಠ ನ್ಯಾಯವಾದಿಯಂತೆ ಧ್ವನಿ ಎತ್ತಿದರು ಮತ್ತು ಅದಕ್ಕಾಗಿ ಹೋರಾಟವನ್ನೂ ಮಾಡಿದರು. ಅವರ ಈ ರಾಷ್ಟ್ರ ಮತ್ತು ಧರ್ಮ ಕಾರ್ಯದ ಕೊಡುಗೆ ಹಿಂದುತ್ವನಿಷ್ಠರಿಗೆ ಸ್ಪೂರ್ತಿದಾಯಕವಾಗಿದೆ.