ಸ್ವಧರ್ಮ, ಸ್ವದೇಶ ಹಾಗೂ ಸ್ವಕುಲದ ಬಗ್ಗೆ ಅಭಿಮಾನವಿದ್ದ ಮಹಾರಾಣಾ ಪ್ರತಾಪ

ಜ್ಯೇಷ್ಠ ಶುಕ್ಲ ತೃತೀಯಾ (೨೯ ಜೂನ್‌ ೨೦೨೫) ರಂದು ಮಹಾರಾಣಾ ಪ್ರತಾಪ ಜಯಂತಿಯಿದೆ. ಅದರ ನಿಮಿತ್ತ…

ಅಪಾರ ಪರಾಕ್ರಮ, ಸಂಪೂರ್ಣ ಸ್ವಾರ್ಥತ್ಯಾಗ, ದೇಶಾಭಿಮಾನ ಮತ್ತು ಧರ್ಮಾಭಿಮಾನದ ಸಾಕಾರ ಮೂರ್ತಿ ಇತ್ಯಾದಿ ಗುಣಗಳಿಂದಾಗಿ ಮಹಾರಾಣಾ ಪ್ರತಾಪಸಿಂಹ ಇವರ ಹೆಸರು ಅಜರಾಮರವಾಗಿದೆ. ಪ್ರತಾಪಸಿಂಹ ಇವರು ಗದ್ದುಗೆಯನ್ನೇರಿದ ದಿನದಿಂದ ಚಿತ್ತೋಡದ ಹಿಂದಿನ ವೈಭವ ಹಾಗೂ ಸಾಮರ್ಥ್ಯವನ್ನು ಹಿಂತಿರುಗಿ ತರುವ ಸಿದ್ಧತೆಗಾಗಿ ರಾಣಾ ಪ್ರತಾಪ ಇವರು ಪ್ರಯತ್ನವನ್ನು ಆರಂಭಿಸಿದರು. ಪರಿಸ್ಥಿತಿ ಪ್ರತಿಕೂಲವಾಗಿತ್ತು. ಬಹಳಷ್ಟು ರಜಪೂತರು ಪರಕೀಯರೊಂದಿಗೆ ತಮ್ಮ ಪುತ್ರಿಯರನ್ನು ನೀಡಿ ವಿವಾಹ ಸಂಬಂಧವನ್ನು ಮಾಡಿಕೊಂಡಿದ್ದರು. ಪ್ರತಾಪಿ ರಾಜನಿಗೆ ಇದನ್ನು ಸಹಿಸಲು ಸಾಧ್ಯವಾಗಲಿಲ್ಲ. ಹಿಂದಿನ ರಾಜರು ದುರ್ಬಲರಾದರು, ಅಷ್ಟರಲ್ಲಿಯೆ ಅಕ್ಬರ ಬಾದಶಾಹನು ಎಲ್ಲ ರಜಪೂತ ರಾಜ್ಯಗಳನ್ನು ವಶಪಡಿಸಿಕೊಳ್ಳುವ ಒಳಸಂಚು ರಚಿಸಿದ್ದನು. ಚಿತ್ತೋಡವನ್ನು ಹಿಂತಿರುಗಿ ಪಡೆಯುವುದು ಮಹಾರಾಣಾ ಪ್ರತಾಪರ ಧ್ಯೇಯವಾಗಿತ್ತು. ಅದಕ್ಕಾಗಿ ಅವರಿಗೆ ಅನೇಕ ದಿನಗಳ ವರೆಗೆ ಕಾಡುಮೇಡುಗಳಲ್ಲಿ ಅಲೆದಾಡಬೇಕಾಯಿತು, ಗೆಡ್ಡೆಗೆಣಸುಗಳನ್ನು ಸೇವಿಸಬೇಕಾಯಿತು. ಅವರ ಧೈರ್ಯವನ್ನು ನೋಡಿ ಅಕ್ಬರನು ಹೇಳುತ್ತಿದ್ದನು, ”ನನಗೆ ಶರಣಾಗು, ನಾನು ನಿನಗೆ ನಿನ್ನ ರಾಜ್ಯವನ್ನು ಕೊಡುತ್ತೇನೆ.’’ ಅದಕ್ಕೆ ರಾಣಾ ಪ್ರತಾಪರು ಹೇಳುತ್ತಿದ್ದರು, ”ನಾನು ರಾಜ್ಯಪ್ರಾಪ್ತಿಗಾಗಿ ಶತ್ರುವಿಗೆ ಶರಣಾಗಿ ಅಭಿಮಾನಶಾಲಿ ರಜಪೂತ ಕುಲವನ್ನು ಕಳಂಕಿಸುವುದಿಲ್ಲ.’’ ಚಿತ್ತೋಡವನ್ನು ಹಿಂತಿರುಗಿ ಪಡೆಯುವ ವರೆಗೆ ಬೆಳ್ಳಿಬಂಗಾರದ ಬಟ್ಟಲುಗಳ ಬದಲು ಪತ್ರಾವಳಿಯಲ್ಲಿ ಭೋಜನ ಮಾಡುವೆನು, ಹಾಸಿಗೆಯ ಮೇಲೆ ಮಲಗದೆ ಹುಲ್ಲಿನ ಹಾಸಿಗೆಯಲ್ಲಿ ಮಲಗುವೆನು’, ಎಂದು ಮಹಾರಾಣಾ ಪ್ರತಾಪರು ಪ್ರತಿಜ್ಞೆ ಮಾಡಿದ್ದರು.

ಮಹಾರಾಣಾ ಪ್ರತಾಪರು ನಿಜವಾದ ಯೋಧರಾಗಿದ್ದರು. ಪ್ರತ್ಯಕ್ಷ ಶತ್ರುಗಳು ಕೂಡ ಅವರ ಶೌರ್ಯವನ್ನು ಕೊಂಡಾಡುತ್ತಿದ್ದರು. ”ಅವರ ಸ್ವಧರ್ಮ, ಸ್ವದೇಶ ಹಾಗೂ ಸ್ವಕುಲದ ಬಗ್ಗೆ ಇರುವ ಅಭಿಮಾನವು ಸೂರ್ಯನಷ್ಟು ತೇಜಸ್ವಿ ಹಾಗೂ ಪ್ರಖರವಾಗಿತ್ತು. ಅಕ್ಬರನೊಂದಿಗೆ ಯುದ್ಧ ಮಾಡುವಾಗ ತೋರಿಸಿದ ಶೌರ್ಯ ಅಲೌಕಿಕವಾಗಿತ್ತು. ಅವರು ಅನೇಕ ಬಾರಿ ಯುದ್ಧದ ಪ್ರಸಂಗದಲ್ಲಿ ಸಿಲುಕಿದ ಬೇಗಮ್‌ರೊಂದಿಗೆ ಸನ್ಮಾನದಿಂದ ವರ್ತಿಸಿದರು. ಅವರ ಮರಣದ ನಂತರ ಶತ್ರುಗಳು ಕೂಡ ಕಣ್ಣೀರಿಟ್ಟರು.’’

(ಆಧಾರ : ‘ದಿನವಿಶೇಷ’)