೨೦೨೫ ರ ಯುಗಾದಿಯಿಂದ ಅಂದರೆ ೩೦.೩.೨೦೨೫ ರಿಂದ ‘ಶಾಲಿವಾಹನ ಶಕೆ ೧೯೪೭ – ‘ವಿಶ್ವಾವಸು’ನಾಮ ಸಂವತ್ಸರ’ ಆರಂಭವಾಗುತ್ತಿದೆ. ‘ವಿಶ್ವಾವಸು’ವಿನ ಅರ್ಥ ‘ಎಲ್ಲರಿಗೂ ಲಾಭದಾಯಕ’ ಎಂದಾಗುತ್ತದೆ. ‘ಈ ಸಂವತ್ಸರ ಭಾರತಕ್ಕೆ ಹೇಗಿರುವುದು ?’, ಎಂಬುದರ ಜ್ಯೋತಿಷ್ಯಶಾಸ್ತ್ರಕ್ಕನುಸಾರ ವಿವೇಚನೆಯನ್ನು ಮುಂದೆ ಕೊಡಲಾಗಿದೆ.
೧. ಶನಿ ಮತ್ತು ರಾಹುವಿನ ಯೋಗದಿಂದ ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವಾಗುವುದು : ೨೯ ಮಾರ್ಚ್ ೨೦೨೫ ರಂದು ಖಂಡಗ್ರಾಸ ಸೂರ್ಯಗ್ರಹಣವಿರಲಿದೆ. (ಈ ಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ.) ಆಗ ಶನಿ ಮತ್ತು ರಾಹುವಿನ ಯೋಗವಿರುತ್ತದೆ. ಈ ಯೋಗ ಮೇ ೨೦೨೫ ರ ಕೊನೆಯ ವರೆಗೆ ಇರುತ್ತದೆ. ಈ ಯೋಗದಿಂದ ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವಾಗುವುದು. ಈ ಅವಧಿಯಲ್ಲಿ ರೋಗ-ರುಜಿನ ಹೆಚ್ಚಾಗುವ ಸಾಧ್ಯತೆಯಿದೆ. ಸಮಾಜದಲ್ಲಿ ಗಾಳಿಸುದ್ದಿ ಹರಡುವುದು ಮತ್ತು ಭ್ರಾಂತಿ ಹೆಚ್ಚಾಗುವುದು. ಭ್ರಷ್ಟಾಚಾರ ಹೆಚ್ಚಾಗುವುದು. ವೈಯಕ್ತಿಕ ಸ್ತರದಲ್ಲಿ ಸಂಕುಚಿತ ವೃತ್ತಿ, ಸ್ವಾರ್ಥ, ಒತ್ತಡ, ಚಿಂತೆ, ಭೌತಿಕವಾದ ಇತ್ಯಾದಿ ತಾಮಸಿಕ ಘಟಕಗಳು ಹೆಚ್ಚಾಗುವವು.
೨. ಗುರು ಮತ್ತು ಶನಿ ಇವುಗಳ ಕೇಂದ್ರಯೋಗದಿಂದ ದೇಶದ ಆರ್ಥಿಕ ಪ್ರಗತಿ ಕುಸಿಯುವುದು : ೧೪ ಮೇ ೨೦೨೫ ರಂದು ಗುರು ಗ್ರಹ ಮಿಥುನ ರಾಶಿಗೆ ಪ್ರವೇಶ ಮಾಡುತ್ತದೆ. ಆಗ ಗುರು ಮತ್ತು ಶನಿ ಇವುಗಳ ಕೇಂದ್ರಯೋಗ (ಎರಡು ಗ್ರಹಗಳು ಒಂದಕ್ಕೊಂದು ೯೦ ಅಂಶ ದೂರದಲ್ಲಿರುವುದು) ಆಗುವುದು. ಈ ಯೋಗವು ಸಮಾಜದ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಪರಸ್ಪರ ವಿರೋಧಿ ವಿಚಾರಶೈಲಿ ಇರುವ ಜನರಲ್ಲಿ ವೈಚಾರಿಕ ಸಂಘರ್ಷವಾಗುವುದು. ಆಕ್ಷೇಪ-ಖಂಡನೆ, ಆರೋಪ-ಪ್ರತ್ಯಾರೋಪ ಇತ್ಯಾದಿಗಳ ಪ್ರಮಾಣ ಹೆಚ್ಚಾಗುವುದು. ಮೇ ಮತ್ತು ಜೂನ್ ೨೦೨೫ ಈ ಅವಧಿಯಲ್ಲಿ ಆರ್ಥಿಕ ಕುಸಿತದ ವಾತಾವರಣ ಇರುವುದು. ದೊಡ್ಡ ವಿಕಾಸ ಕಾರ್ಯ ದಲ್ಲಿ ಅಡತಡೆಗಳು ಬರುವವು. ಹೊಸ ಕಾನೂನುಗಳು ಅನುಮೋದನೆಯಾಗುವಲ್ಲಿ ಅಡತಡೆಬರುವುದು.
೩. ರವಿ ಮತ್ತು ಗುರು ಇವರ ಯೋಗದಿಂದ ಸಕಾರಾತ್ಮಕತೆ ಹೆಚ್ಚಾಗುವುದು : ಜುಲೈ ೨೦೨೫ ರಲ್ಲಿ ರವಿ ಮತ್ತು ಗುರು ಇವರ ಯೋಗವಿರುತ್ತದೆ. ಇದು ಸಕಾರಾತ್ಮಕತೆಯನ್ನು ಹೆಚ್ಚಿಸುವ ಯೋಗವಾಗಿರುತ್ತದೆ. ಧಾರ್ಮಿಕ ಕ್ಷೇತ್ರಗಳು, ಮಂದಿರಗಳು ಮತ್ತು ಆಧ್ಯಾತ್ಮಿಕ ಸಂಸ್ಥೆ ಇತ್ಯಾದಿಗಳಿಗೆ ಲಾಭವಾಗುವುದು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುವವು. ವೈಯಕ್ತಿಕ ಸ್ತರದಲ್ಲಿ ಈ ಯೋಗದಿಂದ ವಿಚಾರಶೀಲತೆ, ಸಂಯಮ, ಪರೋಪಕಾರ ಇತ್ಯಾದಿ ಸಕಾರಾತ್ಮಕ ಘಟಕಗಳಲ್ಲಿ ಹೆಚ್ಚಳವಾಗುವುದು.

೪. ಮಳೆಯ ಪ್ರಮಾಣ ಕಡಿಮೆ ಇರುವುದು : ಈ ವರ್ಷ ಮಳೆ ತಡವಾಗಿ ಆರಂಭವಾಗುವುದು. ಜೂನ್ ತಿಂಗಳಲ್ಲಿ ಕಡಿಮೆ, ಜುಲೈ ತಿಂಗಳಲ್ಲಿ ಮಧ್ಯಮ, ಆಗಸ್ಟ್ ತಿಂಗಳಲ್ಲಿ ಅಧಿಕ ಮಳೆಯಾಗುವುದು. ಗುರು ಮಿಥುನ ಇವು ವಾಯುತತ್ತ್ವದ ರಾಶಿಯಲ್ಲಿ ಇರುವುದರಿಂದ ಒಟ್ಟು ಮಳೆಯ ಪ್ರಮಾಣ ಕಡಿಮೆಯಿರುತ್ತದೆ.
೫. ಮಂಗಳ ಮತ್ತು ಕೇತುವಿನ ಯೋಗದಿಂದ ನೈಸರ್ಗಿಕ ಆಪತ್ತುಗಳು ಸಂಭವಿಸಬಹುದು : ಜುಲೈ ೨೦೨೫ ರಲ್ಲಿ ಮಂಗಳ ಮತ್ತು ಕೇತುವಿನ ಯೋಗವಿರುತ್ತದೆ. ಇದು ನಕಾರಾತ್ಮಕ ಯೋಗವಾಗಿದೆ. ಈ ಯೋಗ ಅಗ್ನಿಪ್ರಕೋಪ, ಭೂಸ್ಖಲನ, ಭೂಕಂಪ ಇತ್ಯಾದಿ ನೈಸರ್ಗಿಕ ಆಪತ್ತುಗಳನ್ನು ದರ್ಶಿಸುತ್ತದೆ. ದೇಶದ ಸಾಧನಸಂಪತ್ತುಗಳಿಗೆ ಹಾನಿಯಾಗಬಹುದು.
೬. ಶನಿ ಮತ್ತು ಮಂಗಳ ಇವರ ಪ್ರತಿಯೋಗದಿಂದ ದುರ್ಘಟನೆಗಳ ಪ್ರಮಾಣ ಹೆಚ್ಚಾಗುವುದು : ಆಗಸ್ಟ್ ೨೦೨೫ ರಲ್ಲಿ ಶನಿ ಮತ್ತು ಮಂಗಳ ಇವುಗಳ ಪ್ರತಿಯೋಗ (ಎರಡು ಗ್ರಹಗಳು ಒಂದಕ್ಕೊಂದು ೧೮೦ ಅಂಶ ದೂರದಲ್ಲಿರುವುದು) ಇರುತ್ತದೆ. ಇದು ದಾಹಕ ಪರಿಣಾಮವನ್ನುಂಟು ಮಾಡುವ ಯೋಗವಾಗಿದೆ. ನೆರೆ, ಬಿರುಗಾಳಿ, ಭೂಸ್ಖಲನ, ಅಪಘಾತ, ದುರ್ಘಟನೆಗಳು ಇತ್ಯಾದಿಗಳ ಪ್ರಮಾಣ ಹೆಚ್ಚಾಗಬಹುದು. ಶತ್ರು ದೇಶಗಳಿಂದ ನುಸುಳುವಿಕೆ, ಭಯೋತ್ಪಾದನಾ ಆಕ್ರಮಣಗಳು ಇತ್ಯಾದಿ ಘಟನೆಗಳು ಘಟಿಸಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಬಹುದು.
೭. ಸಪ್ಟೆಂಬರ್ ೨೦೨೫ ರಲ್ಲಿನ ಸೂರ್ಯಗ್ರಹಣದಿಂದ ಆಗುವ ನಕಾರಾತ್ಮಕ ಪರಿಣಾಮ : ೨೧ ಸಪ್ಟೆಂಬರ್ ೨೦೨೫ ರಂದು ಖಂಡಗ್ರಾಸ ಸೂರ್ಯ ಗ್ರಹಣ ಇರುತ್ತದೆ. (ಈ ಗ್ರಹಣ ಭಾರತ ದಲ್ಲಿ ಕಾಣಿಸುವುದಿಲ್ಲ.) ಈ ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರ ಇವರ ಶನಿ ಗ್ರಹದೊಂದಿಗೆ ಪ್ರತಿಯೋಗ (ಎರಡೂ ಗ್ರಹಗಳು ಒಂದಕ್ಕೊಂದು ೧೮೦ ಅಂಶ ದೂರದಲ್ಲಿರುವುದು) ಇರುತ್ತದೆ. ಈ ಕಾಲ ಅಧಿಕಾರರೂಢರಿಗೆ ಪ್ರತಿಕೂಲವಾಗಿರುತ್ತದೆ. ವಿಪಕ್ಷಗಳಿಂದ ತೀವ್ರ ವಿರೋಧವಾಗುತ್ತದೆ. ಅಧಿಕಾರ ಬದಲಾವಣೆಗಾಗಿ ಷಡ್ಯಂತ್ರ ರಚಿಸಲಾಗುವುದು. ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಸೋಂಕು ರೋಗಗಳ ಪ್ರಮಾಣ ಹೆಚ್ಚಾಗಬಹುದು. ವೈಯಕ್ತಿಕ ಸ್ತರದಲ್ಲಿ ನಿರುತ್ಸಾಹ ಹೆಚ್ಚಾಗಿ ಕೆಲಸಕಾರ್ಯದಲ್ಲಿ ಅಡತಡೆ ಬರುವುದು.
೮. ಗುರು ಮತ್ತು ಮಂಗಳ ಇವರ ಶುಭಯೋಗದಿಂದ ಸಕಾರಾತ್ಮಕ ಪರಿಣಾಮವಾಗುವುದು : ಅಕ್ಟೋಬರ್ ೨೦೨೫ ರ ಉತ್ತರಾರ್ಧದಲ್ಲಿ ಗುರು ಮತ್ತು ಮಂಗಳ ಇವರಲ್ಲಿ ನವಪಂಚಮಯೋಗ (ಶುಭ ಯೋಗ) ಉಂಟಾಗುತ್ತದೆ. ಈ ಯೋಗದಿಂದ ಸಪ್ಟೆಂಬರ್ ೨೦೨೫ ರಲ್ಲಿ ನಿರ್ಮಾಣವಾದ ನಕಾರಾತ್ಮಕತೆ ದೂರವಾಗಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಅಧಿಕಾರರೂಢರರಿಗೆ ಬಲ ಪ್ರಾಪ್ತಿಯಾಗುತ್ತದೆ. ವಿಕಾಸ ಕಾರ್ಯದ ವೇಗ ಹೆಚ್ಚಾಗುತ್ತದೆ. ಧೈರ್ಯದಿಂದ ನೇತೃತ್ವ ವಹಿಸುವ ಜನರು ಮುಂದೆ ಬರುವರು. ದೇಶಹಿತದ ಬಗ್ಗೆ ನಿರ್ಣಯ ತೆಗೆದುಕೊಳ್ಳುವರು. ವಿದೇಶ ಸಂಬಂಧಗಳಲ್ಲಿ ಸುಧಾರಣೆಯಾಗುತ್ತದೆ. ರಾಷ್ಟ್ರಭಾವನೆ ಜಾಗೃತವಾಗುತ್ತದೆ. ಸಂಘಟನೆ ಹೆಚ್ಚಾಗುತ್ತದೆ. ವಿಜ್ಞಾನ, ಸಂಶೋಧನೆ ತಂತ್ರಜ್ಞಾನ ಇತ್ಯಾದಿಗಳಿಗೆ ಈ ಕಾಲ ಲಾಭದಾಯಕವಾಗಿರುತ್ತದೆ.
೯. ನವೆಂಬರ್ ೨೦೨೫ ರ ನಂತರ ಸರಕಾರ ದೇಶಹಿತ ಕಾಯುವ ದೊಡ್ಡ ಹಾಗೂ ಧೈರ್ಯದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ : ನವೆಂಬರ್ ೨೦೨೫ ರ ಉತ್ತರಾರ್ಧದಲ್ಲಿ ಹಾಗೂ ಡಿಸೆಂಬರ್ ೨೦೨೫ ರ ಪೂರ್ವಾರ್ಧದಲ್ಲಿ ರವಿ, ಗುರು ಮತ್ತು ಶನಿ ಇವರ ಪರಸ್ಪರರೊಂದಿಗೆ ನವಪಂಚಯೋಗ (ಶುಭಯೋಗ) ಇರುತ್ತದೆ. ಅದೇ ರೀತಿ ರವಿ ಮತ್ತು ಮಂಗಳ ಇವರ ಯೋಗವಿರುತ್ತದೆ. ಇದು ತುಂಬಾ ಬಲಶಾಲಿ ಗ್ರಹಸ್ಥಿತಿಯಾಗಿದೆ. ಈ ಅವಧಿಯಲ್ಲಿ ಸರಕಾರ ದೇಶಹಿತ ಸಾಧಿಸುವ ದೊಡ್ಡ ಹಾಗೂ ಧೈರ್ಯದ ನಿರ್ಣಯ ತೆಗೆದುಕೊಳ್ಳಬಹುದು. ಇದಕ್ಕೆ ದೇಶಪ್ರೇಮಿ ನಾಗರಿಕರ ಬೆಂಬಲ ಸಿಗುತ್ತದೆ. ಇದು ಪರಿವರ್ತನೆಯ ಕಾಲವಾಗಿರುವುದು. ದೇಶವಿರೋಧಿ ಶಕ್ತಿಗಳ ಶಕ್ತಿ ಕ್ಷೀಣವಾಗುತ್ತದೆ. ಸರಕಾರ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡುತ್ತದೆ.
೧೦. ಶನಿ ಮತ್ತು ಮಂಗಳ ಇವರ ಕೇಂದ್ರಯೋಗದಿಂದ ದೇಶವಿರೋಧಿ ಶಕ್ತಿಗಳ ಶಕ್ತಿ ಹೆಚ್ಚಾಗುವುದು : ಡಿಸೆಂಬರ್ ೨೦೨೫ ರ ಉತ್ತರಾರ್ಧದಲ್ಲಿ ರವಿ ಮತ್ತು ಮಂಗಳ ಇವರ ಯೋಗ ಹಾಗೂ ಶನಿ ಮತ್ತು ಮಂಗಳ ಇವರ ಕೇಂದ್ರಯೋಗ (ಅಶುಭ ಯೋಗ) ಇರುತ್ತದೆ. ಈ ಯೋಗ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ಫಲವನ್ನು ದರ್ಶಿಸುತ್ತದೆ. ಈ ಅವಧಿಯಲ್ಲಿ ದೇಶವಿರೋಧಿ ಶಕ್ತಿಗಳ ಬಲ ಹೆಚ್ಚಾಗುತ್ತದೆ. ಅವರ ವಿರೋಧ ತೀವ್ರವಾಗುತ್ತದೆ. ಹಿಂಸಾತ್ಮಕ ಘಟನೆಗಳು ನಡೆಯುವವು. ವಿರೋಧಿಗಳಿಗೆ ಕಡಿವಾಣ ಹಾಕಲು ಸರಕಾರ ಕಠೋರವಾದ ಹೆಜ್ಜೆ ಇಡಬೇಕಾಗುತ್ತದೆ. ಈ ಅವಧಿಯಲ್ಲಿ ಶತ್ರು ದೇಶಗಳಿಂದ ಉಪದ್ರವ ಆಗಬಹುದು. ಗಡಿಯಲ್ಲಿ ಸಂಘರ್ಷವಾಗಬಹುದು.
೧೧. ಜನವರಿ ಮತ್ತು ಫೆಬ್ರವರಿ ೨೦೨೬ ರಲ್ಲಿ ಸರಕಾರಕ್ಕೆ ಪುನಃ ಬಲ ಪ್ರಾಪ್ತಿಯಾಗುತ್ತದೆ ಹಾಗೂ ಜಾಗತಿಕ ಸ್ತರದಲ್ಲಿನ ಭಾರತ ಬಲಿಷ್ಟವಾಗುವುದು : ಜನವರಿ ೨೦೨೬ ರಲ್ಲಿ ರವಿ ಮತ್ತು ಮಂಗಳ ಇವರ ಯೋಗದಿಂದ ಗುರು ಗ್ರಹದೊಂದಿಗೆ ಪ್ರತಿಯೋಗವಾಗು ತ್ತದೆ. ಇದರಿಂದ ಡಿಸೆಂಬರ್ ೨೦೨೫ ರಲ್ಲಿ ಹೆಚ್ಚಾಗಿರುವ ಅಸ್ಥಿರತೆ ಈ ಅವಧಿಯಲ್ಲಿ ಕಡಿಮೆಯಾಗುತ್ತದೆ. ಸರಕಾರ ಪುನಃ ಬಲಿಷ್ಟವಾಗುತ್ತದೆ. ಸರಕಾರ ಪರಿಸ್ಥಿತಿಯನ್ನು ನಿಯಂತ್ರಿಸುತ್ತದೆ. ಜನರಿಂದ ಹೆಚ್ಚೆಚ್ಚು ಬೆಂಬಲ ಸಿಗುತ್ತದೆ. ಅನೇಕ ಕ್ಷೇತ್ರಗಳಲ್ಲಿ ಭಾರತದ ಖ್ಯಾತಿ ಹೆಚ್ಚಾಗುತ್ತದೆ. ಜಾಗತಿಕ ಸ್ತರದಲ್ಲಿ ಭಾರತ ಬಲಿಷ್ಠ ದೇಶವಾಗುತ್ತದೆ. ಫೆಬ್ರವರಿ ೨೦೨೬ ರಲ್ಲಿ ಸಾಧಾರಣ ಸ್ಥಿತಿ ಇದೇ ಆಗಿರುವುದು.
೧೨. ಮಾರ್ಚ್ ೨೦೨೬ ರಲ್ಲಿ ಸಕಾರಾತ್ಮಕ ಪರಿವರ್ತನೆಗಾಗಿ ಸಂಘರ್ಷವಾಗುವುದು : ಮಾರ್ಚ್ ೨೦೨೬ ರಲ್ಲಿ ರವಿ, ಮಂಗಳ ಮತ್ತು ರಾಹು ಇವರ ಯೋಗವಾಗುತ್ತದೆ, ಅದೇ ರೀತಿ ಈ ಗ್ರಹಗಳ ಗುರುಗ್ರಹದೊಂದಿಗೆ ನವಪಂಚಮಯೋಗ (ಶುಭಯೋಗ) ಆಗುತ್ತದೆ. ಈ ಕಾಲ ಸಕಾರಾತ್ಮಕ ಪರಿವರ್ತನೆಗಾಗಿ ಸಂಘರ್ಷವನ್ನು ತೋರಿಸುತ್ತದೆ. ಸರಕಾರ ತನ್ನ ನಿರ್ಣಯದಲ್ಲಿ ಸ್ಥಿರವಾಗಿರುತ್ತದೆ. ಕಾನೂನು ವ್ಯವಸ್ಥೆಯನ್ನು ಕಾಪಾಡಲು ಪ್ರಸಂಗಾನುಸಾರ ಸೇನಾಬಲ ಉಪಯೋಗಿಸಬೇಕಾಗಬಹುದು. ಈ ಅವಧಿಯಲ್ಲಿ ಜಗತ್ತಿನಲ್ಲಿ ಕೆಲವು ದೇಶಗಳಲ್ಲಿ ಯುದ್ಧ ಆರಂಭವಾಗಬಹುದು. ದೊಡ್ಡ ಪ್ರಮಾಣದ ಬೆಂಕಿ, ಅಪಘಾತ ಆಗುವುದು, ಉಷ್ಣತೆ ವಿಪರೀತವಾಗಿ ಜಗತ್ತಿನ ತಾಪಮಾನ ಹೆಚ್ಚಾಗುವುದು ಇತ್ಯಾದಿ ಪರಿಣಾಮವಾಗಬಹುದು.
ಸಾರಾಂಶ : ಎಪ್ರಿಲ್‌ನಿಂದ ಸಪ್ಟೆಂಬರ ೨೦೨೫ ಈ ೬ ತಿಂಗಳ ಕಾಲ ಸಾಮಾನ್ಯವಾಗಿರುತ್ತದೆ. ಅದರಲ್ಲಿ ಮೊದಲ ೩ ತಿಂಗಳಲ್ಲಿ ಹಣಕಾಸು ದುಬ್ಬರದ ಸಾಧ್ಯತೆಯಿದೆ. ನಂತರದ ೩ ತಿಂಗಳು ನೈಸರ್ಗಿಕ ಆಪತ್ತುಗಳು ಮತ್ತು ರಾಜಕೀಯ ಬದಲಾವಣೆಯ ಸಾಧ್ಯತೆ ಇದೆ. ಈ ೬ ತಿಂಗಳಲ್ಲಿ ದೇಶದಲ್ಲಿ ದೊಡ್ಡ ಪರಿವರ್ತನೆಯಾಗುವ ಲಕ್ಷಣ ಕಾಣಿಸುವುದಿಲ್ಲ. ಅಕ್ಟೋಬರ್ ೨೦೨೫ ರಿಂದ ಮಾರ್ಚ್ ೨೦೨೬ ಪರಿವರ್ತನೆಯ ಕಾಲವಾಗಿರುವುದು. ಈ ಅವಧಿಯಲ್ಲಿ ಸರಕಾರ ದೊಡ್ಡ ಹಾಗೂ ಧೈರ್ಯದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಯಿದೆ. ಭಾರತದ ಇತರ ದೇಶಗಳೊಂದಿಗಿರುವ ರಾಜನೈತಿಕ ಸಂಬಂಧ ದೃಢವಾಗುತ್ತದೆ. ಭಾರತ ಜಾಗತಿಕ ಸ್ತರದಲ್ಲಿ ಬಲಿಷ್ಠ ದೇಶವಾಗಿ ಹೊರಹೊಮ್ಮುತ್ತದೆ.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೩.೨೦೨೫)