ಇಡೀ ಜಗತ್ತನ್ನು ವ್ಯಾಪಿಸಿರುವ ಶಿವ ಮಹಾತ್ಮೆ !

೨೬ ಫೆಬ್ರವರಿ ೨೦೨೫ ರಂದು ಅಂದರೆ ಮಾಘ ಕೃಷ್ಣ ತ್ರಯೋದಶಿಯಂದು ‘ಮಹಾಶಿವರಾತ್ರಿ’ ಇದೆ. ಆ ನಿಮಿತ್ತ ಭಗವಾನ ಶಿವನ ಚರಣಗಳಲ್ಲಿ ಭಾವಪೂರ್ಣ ವಂದನೆಗಳು !

ಮಹಾಶಿವರಾತ್ರಿಯ ವ್ರತವನ್ನು ಏಕೆ ಮತ್ತು ಯಾವುದಕ್ಕಾಗಿ ಮಾಡಬೇಕು ಎಂದು ಸಾಮಾನ್ಯವಾಗಿ ಬಹಳಷ್ಟು ಜನರ ಮನಸ್ಸಿನಲ್ಲಿ ಪ್ರಶ್ನೆ ಬರುತ್ತಿರುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ನಮ್ಮ ಪೂರ್ವಜರು ನಮಗೆ ಕೊಟ್ಟಿದ್ದಾರೆ. ಅದು ಹೀಗಿದೆ…

ಮಾಘ ಕೃಷ್ಣ ತ್ರಯೋದಶಿಯ ದಿನದಂದು ಮಹಾಶಿವರಾತ್ರಿಯ ವ್ರತವನ್ನು ಮಾಡುವ ಸಂಪ್ರದಾಯ ನಮ್ಮಲ್ಲಿದೆ. ಈ ವ್ರತದ ಸಂಪ್ರದಾಯವು ನಮ್ಮನ್ನು ಶಿವನಂತೆ ರೂಪಿಸಲು ಪ್ರೇರಣೆ ನೀಡುತ್ತದೆ. ಆದುದರಿಂದಲೇ ಈ ದಿನವನ್ನು ಪವಿತ್ರ ಮತ್ತು ಶುದ್ಧವೆಂದು ತಿಳಿಯಲಾಗುತ್ತದೆ. ಮಹಾಶಿವರಾತ್ರಿಯ ದಿನವು ಎಲ್ಲ ಮಾನವರಿಗೆ ಶಿವತತ್ತ್ವದ ಸಂದೇಶವನ್ನು ನೀಡುತ್ತಿರುತ್ತದೆ. ‘ಯಾವಾಗಲೂ ಎಚ್ಚರದಿಂದಿರಿ’, ಎಂದು ಈ ಮಹಾಶಿವರಾತ್ರಿ ಹೇಳುತ್ತದೆ. ಹಾಗೆ ನೋಡಿದರೆ, ನಾವು ಪ್ರತಿದಿನ ಒಳ್ಳೆಯದನ್ನೇ ಯೋಚಿಸಬೇಕು; ಆದರೆ ನಮಗೆ ಈ ದಿನದ ಮಹತ್ವ ಮತ್ತು ಮಹಾತ್ಮೆ ಗೊತ್ತಿಲ್ಲದಿದ್ದರೂ, ಇಂದಿನ ಶುಭ ದಿನದಿಂದಲೇ ನಾವು ನಿರಂತರವಾಗಿ ಒಳ್ಳೆಯ ಚಿಂತನ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದೇ ಮಹಾಶಿವರಾತ್ರಿಯ ವ್ರತವಾಗಿದೆ.

ಶ್ರೀ. ದುರ್ಗೇಶ ಪರುಳಕರ

೧. ಮಹಾಶಿವರಾತ್ರಿಯ ವ್ರತ ನಮ್ಮ ಉನ್ನತಿಗಾಗಿಯೇ ಇದೆ

ನಮ್ಮ ಮನಸ್ಸಿನಲ್ಲಿ ಅನೇಕ ಒಳ್ಳೆಯ-ಕೆಟ್ಟ ವಿಚಾರಗಳು ಬರುತ್ತವೆ. ಕೆಲವೊಮ್ಮೆ ನಮ್ಮ ವೈರಿಗಳ ಮನಸ್ಸಿನಲ್ಲಿಯೂ ಬರದಂತಹ ವಿಚಾರಗಳು ನಮ್ಮ ಮನಸ್ಸಿನಲ್ಲಿ ಬರುತ್ತವೆ. ಆದುದರಿಂದಲೇ ಇಂದಿನ ಪರಿಭಾಷೆಯಲ್ಲಿ ಶುಭಚಿಂತನೆಯ ಅರ್ಥವೆಂದರೆ ಸಕಾರಾತ್ಮಕ ಚಿಂತನೆಯ ಅಭ್ಯಾಸವನ್ನು ಮಾಡು ವುದು. ಈ ರೀತಿಯ ಶಿಕ್ಷಣವನ್ನು ಉದ್ದೇಶಪೂರ್ವಕವಾಗಿ ನಾವೇ ನಮ್ಮ ಮನಸ್ಸಿಗೆ ನೀಡಬೇಕು. ನಮ್ಮ ಮನಸ್ಸನ್ನು ಯಾವಾಗಲೂ ಇಂತಹ ಶ್ರೇಷ್ಠ ವಿಚಾರಗಳ ಕಡೆಗೆ ಒಯ್ಯಲು ಪರಾಕಾಷ್ಠೆಯಯಿಂದ ಪ್ರಯತ್ನಿಸಬೇಕು. ಸ್ವತಃದ ಉನ್ನತಿಗಾಗಿ ಮಹಾಶಿವರಾತ್ರಿಯ ವ್ರತವನ್ನು ಆಚರಿಸಬೇಕು. ಶಿವ ಈ ಶಬ್ದದ ಅರ್ಥ ‘ಕಲ್ಯಾಣಕಾರಿ’ ಮತ್ತು ‘ಉಪಕಾರಿ’ ಎಂದಾಗಿದೆ. ಮನುಷ್ಯನು ‘ಇಡೀ ಜೀವಸೃಷ್ಟಿಯ ಕಲ್ಯಾಣವಾಗ ಬೇಕು’, ಎಂದು ಸಂಕಲ್ಪ ಮಾಡಿ ಶಿವನ ಉಪಾಸನೆಯನ್ನು ಮಾಡಬೇಕು. ಇದಕ್ಕೆ ‘ಶಿವೋ ಭೂತ್ವಾ ಶಿವಂ ಯಜೇತ್‌ |’ ಅಂದರೆ ‘ಸ್ವತಃ ಶಿವನಾಗಿ ಶಿವನ ಉಪಾಸನೆಯನ್ನು ಮಾಡಬೇಕು’, ಎಂದು ಹೇಳುತ್ತಾರೆ.

೨.ಭಗವಾನ ಶಿವ ಮತ್ತು ವಿಷ್ಣುವಿನ ಪರಸ್ಪರ ಸಂಬಂಧ

ನಾವು ಭಗವಾನ ಶಂಕರನನ್ನು ಮಹಾದೇವ ಎನ್ನುತ್ತೇವೆ. ಅವನೇ ಶಿವನಾಗಿದ್ದಾನೆ. ಶಿವ ಎಂದರೆ ಕಲ್ಯಾಣಕಾರಿ. ಶಿವನು ಜ್ಞಾನದ ದೇವತೆಯಾಗಿದ್ದಾನೆ. ‘ನಾವು ಪ್ರಾಪ್ತಮಾಡಿಕೊಂಡ ಜ್ಞಾನವನ್ನು ಸಂಪೂರ್ಣ ಜೀವಸೃಷ್ಟಿಯ ಕಲ್ಯಾಣಕ್ಕಾಗಿಯೇ ಉಪಯೋಗಿಸಬೇಕು’, ಎಂದು ಭಗವಾನ ಮಹಾದೇವನು ನಮಗೆ ಸಂದೇಶವನ್ನು ನೀಡುತ್ತಾನೆ. ಇದರ ಅರ್ಥ ಮಹಾದೇವನ ಬಳಿ ಜ್ಞಾನದ ದೃಷ್ಟಿ ಇದೆ. ಕೇವಲ ಜ್ಞಾನದ ದೃಷ್ಟಿ ಪರಿಪೂರ್ಣವಲ್ಲ. ಜ್ಞಾನದ ದೃಷ್ಟಿಗೆ ಪ್ರೇಮದ(ಪ್ರೀತಿಯ) ಜೊತೆ ಇರಬೇಕು. ‘ಸೃಷ್ಟಿಯು ಉಪಭೋಗದ ವಸ್ತುವಲ್ಲ, ಆದರೆ ಅದು ನಮ್ಮೆಲ್ಲರ ತಾಯಿಯಾಗಿದೆ’, ಎಂಬ ಅರಿವು ಇದರಿಂದಲೇ ಮೂಡುತ್ತದೆ.

ನಿಸರ್ಗದಲ್ಲಿ ಸೃಷ್ಟಿಯಾದ ವಸ್ತುಗಳು ಮಾನವನಿಗೆ ಬಹಳ ಉಪಯುಕ್ತವಾಗಿವೆ. ಮಾನವನಿಗೆ ಜ್ಞಾನ ಪ್ರಾಪ್ತವಾದರೆ, ಉಪಯುಕ್ತ ವಸ್ತುಗಳನ್ನು ಹೆಚ್ಚೆಚ್ಚು ಬಳಸಬೇಕು ಎಂಬ ಬಯಕೆ ಹೆಚ್ಚಾಗುತ್ತದೆ. ಆದುದರಿಂದ ಪ್ರಾಪ್ತವಾದ ಜ್ಞಾನದಿಂದ ಮನುಷ್ಯನು ಸೃಷ್ಟಿಯನ್ನು ದೋಚತೊಡಗುತ್ತಾನೆ. ಮನುಷ್ಯನ ಈ ವೃತ್ತಿಯು ಅಪಾಯಕಾರಿಯಾಗಿದೆ. ಆದುದರಿಂದ ನಮ್ಮ ಸಂಸ್ಕೃತಿಯು ಸೃಷ್ಟಿಯನ್ನು ‘ತಾಯಿ’ ಎಂದು ನೋಡಲು ಕಲಿಸಿತು. ಈ ಭಾಗ ವನ್ನು ನಾವು ಭಗವಾನ ಮಹಾದೇವ ಮತ್ತು ವಿಷ್ಣು ಇವರ ಪರಸ್ಪರರ ಸಂಬಂಧಗಳಿಂದ ತಿಳಿದುಕೊಳ್ಳಲು ಪ್ರಯತ್ನಿಸೋಣ.

೨ ಅ. ಜ್ಞಾನಕ್ಕೆ ಪ್ರೀತಿಯ ದೃಷ್ಟಿ ದೊರಕಿದರೆ ಪರಿಪೂರ್ಣತೆ ಬರುತ್ತದೆ :

ಮಹಾದೇವನು ಜ್ಞಾನ ಮತ್ತು ವಿಷ್ಣು ಪ್ರೀತಿ ಮತ್ತು ವೈಭವದ ದೇವರಾಗಿದ್ದಾರೆ. ಈ ಇಬ್ಬರೂ ದೇವರು ನಮಗೆ ಭಿನ್ನವೆನಿಸಿದರೂ, ಅವರು ಪರಸ್ಪರರಿಂದ ಭಿನ್ನವಾಗಿಲ್ಲ. ಈ ವಿಷಯವನ್ನು ನಾವು ಗಮನದಲ್ಲಿಡಬೇಕು. ಮಹಾದೇವನ ಜ್ಞಾನಕ್ಕೆ ವಿಷ್ಣುವಿನ ಪ್ರೀತಿಯ ದೃಷ್ಟಿಯು ಪ್ರಾಪ್ತವಾದರೆ, ಪರಿಪೂರ್ಣತೆ ಬರುತ್ತದೆ. ಪ್ರೀತಿಯ ಹೊರತಾಗಿ ಪ್ರಾಪ್ತಮಾಡಿಕೊಂಡ ಜ್ಞಾನವು ಜೀವನಕ್ಕೆ ಮತ್ತು ಜಗತ್ತಿಗೆ ಆನಂದವನ್ನು ನೀಡಲಾರದು.

೨ ಆ. ವಿರಕ್ತಿ ಮತ್ತು ವೈರಾಗ್ಯ ಪ್ರಾಪ್ತಿಗಾಗಿ ಶಿವತತ್ತ್ವವು ಆವಶ್ಯಕ : ಜ್ಞಾನವು ವಿಶ್ಲೇಷಣೆಗೆ ಒತ್ತಾಯಿಸುತ್ತದೆ, ಆದರೆ ಪ್ರೇಮದ(ಪ್ರೀತಿಯ) ಒಲವು ಸಮನ್ವಯದ ಕಡೆಗೆ ಬಾಗುತ್ತದೆ. ಜ್ಞಾನ ಮತ್ತು ಪ್ರೀತಿಯ ಸಂಯೋಗವಾದರೆ, ಅದರಿಂದ ಸೌಂದರ್ಯವು ಉದಯಿಸುತ್ತದೆ. ಮಹಾದೇವ ಮತ್ತು ವಿಷ್ಣು ಇವರ ಸಂಯೋಗವು ನಮಗೆ ಜ್ಞಾನ, ವೈಭವ, ಪ್ರೀತಿ ಮತ್ತು ಸೌಂದರ್ಯವನ್ನು ಪ್ರದಾನಿಸುತ್ತದೆ. ಈ ನಾಲ್ಕೂ ವಿಷಯಗಳು ಪ್ರಾಪ್ತವಾದರೂ, ಮನುಷ್ಯನು ವಿರಕ್ತ ಮತ್ತು ವಿರಾಗಿ ಅವಸ್ಥೆಯಲ್ಲಿ ಆನಂದದಿಂದ ಜೀವಿಸಬಹುದು; ಏಕೆಂದರೆ ಮಹದೇವನು ಕಲ್ಯಾಣವನ್ನು ಮಾಡುವ ಜ್ಞಾನಿಯಾಗಿದ್ದು ವಿರಕ್ತ ಮತ್ತು ವಿರಾಗಿಯಾಗಿದ್ದಾನೆ. ವಿಷ್ಣುವಿನ ಉಪಾಸನೆಯಿಂದ ವೈಭವಪ್ರಾಪ್ತವಾದರೆ ನಮಗೆ ವಿರಕ್ತಿ ಮತ್ತು ವೈರಾಗ್ಯ ಪ್ರಾಪ್ತ ಮಾಡಿಕೊಳ್ಳಲು ಶಿವತತ್ತ್ವವೇ ಉಪಯುಕ್ತವಾಗಿದೆ. ಈ ರೀತಿ ಮಹಾದೇವ ಮತ್ತು ವಿಷ್ಣು ಇವರಿಬ್ಬರ ಉಪಾಸನೆ ನಮಗೆ ಜ್ಞಾನ, ಪ್ರೀತಿ, ವೈಭವ ಮತ್ತು ಸೌಂದರ್ಯವನ್ನು ಪ್ರದಾನಿಸುತ್ತದೆ. ಆದುದರಿಂದ ಈ ಎರಡೂ ದೇವತೆಗಳನ್ನು ಪರಸ್ಪರ ಭಿನ್ನವೆಂದು ತಿಳಿಯಲಾಗದು.

೩. ಮಹಾದೇವ ಮತ್ತು ವಿಭೂತಿಯ ಸಾಂಕೇತಿಕ ಅರ್ಥ ಮಹಾದೇವನು ವಿರಕ್ತ ಮತ್ತು ವಿರಾಗಿಯಾಗಿದ್ದಾನೆ. ಅವನು ತನ್ನ ದೇಹಕ್ಕೆ ವಿಭೂತಿಯನ್ನು ಬಳಿದುಕೊಂಡಿರುತ್ತಾನೆ. ಶಿವನ ಉಪಾಸನೆಯನ್ನು ಮಾಡುವ ಉಪಾಸಕನು ಜ್ಞಾನಾಸಕ್ತ, ವಿರಕ್ತ, ವಿರಾಗಿಯೂ ಇರಬೇಕಾಗುತ್ತದೆ. ಇದರ ಅರ್ಥ ಅವನು ವೈಭವವನ್ನು ಕೀಳು ಎಂದು ತಿಳಿಯಬೇಕು ಎಂದಲ್ಲ. ಪ್ರಾಪ್ತವಾದ ವೈಭವದ ಮೇಲೆ ಆಸಕ್ತಿ ಇಟ್ಟುಕೊಳ್ಳುವುದು ಬೇಡ. ವಿರಕ್ತಿ ಮತ್ತು ವೈರಾಗ್ಯವೂ ವೈಭವಗಳೇ ಆಗಿವೆ, ಎಂದು ಹೇಳುವುದಕ್ಕಾಗಿಯೇ ವಿಭೂತಿಯನ್ನು ಸ್ವೀಕರಿಸಬೇಕು.

೪. ಕೊರಳಲ್ಲಿ ರುಂಡಗಳ ಮಾಲೆ ಇರುವ ಹಿಂದಿನ ಅರ್ಥ

ಈ ರೀತಿ ಜ್ಞಾನವನ್ನು ಸಂಪಾದಿಸಿ ಆ ಜ್ಞಾನಕ್ಕೆ ಪ್ರೇಮದ(ಪ್ರೀತಿಯ) ಜೊತೆಯನ್ನು ನೀಡಬೇಕು ಮತ್ತು ಕಲ್ಯಾಣಕಾರಿ ವಿಷಯಗಳ ಚಿಂತನ ಮಾಡಬೇಕು. ಇದನ್ನು ಮಾಡುವಾಗ ವಿಭೂತಿಯನ್ನೇ ವೈಭವವೆಂದು ತಿಳಿಯಬೇಕು. ಈ ರೀತಿಯ ಬೋಧನೆ ನೀಡುವ ಈ ವ್ರತವನ್ನು ಯಾರು ಶ್ರದ್ಧೆಯಿಂದ ಮಾಡುವರೋ, ಅವರು ಪ್ರಾಪ್ತಮಾಡಿಕೊಂಡ ಜ್ಞಾನ ಅವರ ಮೃತ್ಯುವಿನ ನಂತರವೂ ನಾಶವಾಗುವುದಿಲ್ಲ. ಇಂತಹ ಭಕ್ತನ ಅಥವಾ ಉಪಾಸಕನ ಮೃತ್ಯುವಿನ ನಂತರ ಆ ಜ್ಞಾನವು ಮಹಾದೇವನ ಕೊರಳಲ್ಲಿ ಸಹಜವಾಗಿ ಬೀಳುತ್ತದೆ; ಏಕೆಂದರೆ ಯಾವುದೇ ಕಲ್ಯಾಣಕಾರಿ, ಉಪಕಾರವಿರುವ ವಿಷಯವು ಪ್ರೀತಿ ಯನ್ನು ಸೇರಿಸಿರುವ ಜ್ಞಾನದಿಂದಲೇ ಬರುತ್ತದೆ. ಇಂತಹ ಜ್ಞಾನವು ಕೊನೆಗೆ ಶಿವನಲ್ಲಿಯೇ ವಿಲೀನವಾಗುತ್ತದೆ. ಇದನ್ನು ಹೇಳಲೆಂದೇ ಮಹಾದೇವನ ಕೊರಳಲ್ಲಿ ರುಂಡಗಳ ಮಾಲೆ ಇರುತ್ತದೆ.

೫. ಮಹಾದೇವನಿಗೆ ೩ ಕಣ್ಣುಗಳಿವೆ. ಏಕೆ ?

ಇವೆಲ್ಲವುಗಳ ಬಗ್ಗೆ ನಾವು ವಿಚಾರ ಮಾಡಿದರೆ ‘ಮಹಾದೇವ ನಿಗೆ ೩ ಕಣ್ಣುಗಳಿವೆ ಏಕೆ ? ಎಂದು ಗಮನಕ್ಕೆ ಬರುತ್ತದೆ.

ಶಿವನು ಜ್ಞಾನದ ದೇವತೆ ಅಂದರೆ ಶಿವನಿಗೆ ಜ್ಞಾನದ ದೃಷ್ಟಿ ಇದ್ದಂತೆ ಪ್ರೀತಿಯ ಮತ್ತು ನ್ಯಾಯದ ದೃಷ್ಟಿಯೂ ಇದೆ, ಅಂದರೆ ಮಹಾದೇವನಿಗೆ ಜ್ಞಾನ, ಪ್ರೀತಿ ಮತ್ತು ನ್ಯಾಯ ಈ ಮೂರು ಕಣ್ಣುಗಳಿವೆ. ಆದುದರಿಂದ ಅವನಿಗೆ ೩ ಕಣ್ಣುಗಳಿವೆ. ಈ ೩ ಕಣ್ಣುಗಳಿಂದ ಮಹಾದೇವನು ಸಾಮಾನ್ಯ ಮುಗ್ಧ ಜನರನ್ನು ರಕ್ಷಿಸುವ ಕೆಲಸ ಮಾಡುತ್ತಾನೆ. ಸಾದಾ ಮುಗ್ಧ ಭಕ್ತರ ನಾಥನೆಂದೇ ಮಹಾದೇವನನ್ನು ‘ಭೋಲೆನಾಥ’ ಎಂದೂ ಸಂಬೋಧಿಸಲಾಗುತ್ತದೆ.

೬. ಅರ್ಧ ಪ್ರದಕ್ಷಿಣೆಯ ಹಿಂದಿನ ಕಾರ್ಯಕಾರಣಭಾವ

ಶಿವಮಂದಿರದಲ್ಲಿ ಅರ್ಧ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ಇದರ ಹಿಂದಿನ ಕಾರಣವೇನೆಂದರೆ, ಶಿವನ ನಿರ್ಮಾಲ್ಯವನ್ನು ದಾಟುವುದರಿಂದ ಮಾನವನ ಶಕ್ತಿಯು ನಾಶವಾಗುತ್ತದೆ. ‘ಪುಷ್ಪದಂತ’ ಹೆಸರಿನ ಓರ್ವ ಗಂಧರ್ವನಿದ್ದನು. ಹೂವುಗಳನ್ನು ತರಲು ಹೋಗುತ್ತಿರುವಾಗ ಅವನು ಗೊತ್ತಿಲ್ಲದೇ ಶಿವನ ನಿರ್ಮಾಲ್ಯವನ್ನು ದಾಟಿದನು. ಆದುದರಿಂದ ಅವನ ಶಕ್ತಿಯು ನಾಶವಾಯಿತು. ತನ್ನ ಕಳೆದುಹೋದ ಶಕ್ತಿಯನ್ನು ಹಿಂದಿರುಗಿ ಪಡೆಯಲು ಅವನು ಶಿವನ ಮಹಿಮೆಯನ್ನು ಹಾಡಿದನು. ಪುಷ್ಪದಂತ ಗಂಧರ್ವನು ಹಾಡಿದ ಶಿವಮಹಿಮೆ ಎಂದರೆ ‘ಶಿವಮಹಿಮ್ನಸ್ತೋತ್ರ’ವಾಗಿದೆ. ಶಿವನ ಈ ಸ್ತುತಿಯನ್ನು ಮಾಡಿದಾಗ ಅವನು ಕಳೆದುಕೊಂಡ ಶಕ್ತಿಯು ಅವನಿಗೆ ಪುನಃ ಪ್ರಾಪ್ತವಾಯಿತು.

ಅನೇಕ ಶಿವಭಕ್ತರು ಅಂದರೆ ಋಷಿ, ಸಂತಪುರುಷರು, ಮಹಾತ್ಮರು, ಸಾಧುಗಳು, ಕರ್ಮಯೋಗಿಗಳು ಮತ್ತು ಜ್ಞಾನಯೋಗಿಗಳು ತಮ್ಮ ಸಂಪೂರ್ಣ ಜೀವನವನ್ನು ಶಿವನ ಚರಣಗಳಲ್ಲಿ ಅರ್ಪಿಸಿದ್ದಾರೆ, ಅಂದರೆ ಅವರು ತಮ್ಮ ಜೀವನಪುಷ್ಪವನ್ನು ಶಿವನಿಗೆ ಅರ್ಪಿಸಿದ್ದಾರೆ. ಇಂತಹ ಮಹಾಪುರುಷರನ್ನು ನಿಂದಿಸುವುದು, ಅವರನ್ನು ಟೀಕಿಸುವುದು ಎಂದರೆ ಶಿವನಿರ್ಮಾಲ್ಯದ ಉಲ್ಲಂಘನೆಯಾಗಿದೆ. ಈ ರೀತಿ ಶಿವಭಕ್ತರನ್ನು ಅವಮಾನಿಸುವುದನ್ನು ದೊಡ್ಡ ಅಪರಾಧವೆಂದು ನಂಬಲಾಗಿದೆ. ನಮ್ಮ ಕೈಯಿಂದ ಇಂತಹ ಪಾಪ ಸಂಭವಿಸಬಾರದು, ಇದು ಸಾಮಾನ್ಯ ಜನರಿಗೆ ತಿಳಿಯಬೇಕು ಎಂದು ಶಿವಮಂದಿರದಲ್ಲಿ ಅರ್ಧ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ.

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ (೭.೨.೨೦೨೩)