ಗೂಗಲ್‌ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ

ಸಿರಿ’ಯಿಂದ ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡದಿರುವ ಕುರಿತು ಆಪಲ್ ಸಂಸ್ಥೆಯಿಂದ ಇನ್ನೂ ಉತ್ತರವಿಲ್ಲ !

​(‘ಸಿರಿ’ ಎಂದರೆ ‘ಆಪಲ್’ ಸಂಸ್ಥೆಯ ಮೊಬೈಲ್‌ ನಲ್ಲಿರುವ ಒಂದು ಸೌಲಭ್ಯವಾಗಿದ್ದು, ಅದರ ಮೂಲಕ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಬಹುದಾಗಿದೆ)

ನವದೆಹಲಿ – ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯ ಹಿಂದುತ್ವನಿಷ್ಠ ಸಂಘಟನೆಗಳು ‘ಆಪಲ್’ ಸಂಸ್ಥೆಯ ‘ಐಫೋನ್’ ಮೊಬೈಲ್‌ ನಲ್ಲಿರುವ ‘ಸಿರಿ’ ಸೌಲಭ್ಯದ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ದೂರು ನೀಡಿದ್ದವು. ‘ಸಿರಿ’ಗೆ ‘ಜಯ ಶ್ರೀರಾಮ’ ಎಂದು ಹೇಳಿದರೆ, ಅದು ಪ್ರತಿಕ್ರಿಯೆಯಾಗಿ ‘ಜಯ ಶ್ರೀರಾಮ’ ಎಂದು ಹೇಳುವುದಿಲ್ಲ; ಆದರೆ ಮುಸಲ್ಮಾನರು ಹೇಳುವಂತೆ ‘ಸಲಾಂ ವಾಲೇಕುಮ್’ (‘ನಿಮಗೆ ಶಾಂತಿ ಸಿಗಲಿ’) ಎಂದು ಹೇಳಿದರೆ ‘ವಾಲೇಕುಮ್ ಸಲಾಂ’ (‘ನಿಮಗೂ ಶಾಂತಿ ಸಿಗಲಿ’) ಎಂದು ಹೇಳುತ್ತದೆ. ಇದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದವು. ಇದರ ಬೆನ್ನಲ್ಲೇ ಆಪಲ್‌ ನಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ​ಮತ್ತೊಂದೆಡೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಜ್ಞರು, ಈ ವಿಷಯದಲ್ಲಿ ವಿವಾದ ಮಾಡುವುದು ತಪ್ಪು ಎಂದು ವಾದಿಸುತ್ತಿದ್ದಾರೆ. ಆಪಲ್ ಸಂಸ್ಥೆಯು ಸಿರಿಯ ಕಂಪ್ಯೂಟರ್ ವ್ಯವಸ್ಥೆಯನ್ನು (ಪ್ರೋಗ್ರಾಂ) ರೂಪಿಸಿದೆ. ಅದರಂತೆಯೇ ಅದರಿಂದ ಪ್ರತಿಕ್ರಿಯೆ ಸಿಗಲಿದೆ. ಜಗತ್ತಿನಲ್ಲಿ ವಿವಿಧ ರೀತಿಯಲ್ಲಿ ಶುಭ ಹಾರೈಸುವ ಪದ್ಧತಿಗಳಿದ್ದು, ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡುವ ಪ್ರೋಗ್ರಾಮನ್ನು ಆಪಲ್ ಸಂಸ್ಥೆಗೆ ಸಿದ್ಧಪಡಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಪ್ರಸಾರವಾಗುತ್ತಿದ್ದು, ಅದರಲ್ಲಿ ಗೂಗಲ್‌ ನ ‘ಜೆಮಿನಿ’ ಎಂಬ ಎಐ ಜಾಲತಾಣಕ್ಕೆ ‘ಜಯ ಶ್ರೀರಾಮ’ ಅಥವಾ ‘ಜಯ ಮಹಾಕಾಲ’ ಎಂದು ಹೇಳಿದರೆ, ಅದು ಕೂಡ ಅದೇ ರೀತಿ ‘ಜಯ ಶ್ರೀರಾಮ’ ಮತ್ತು ‘ಜಯ ಮಹಾಕಾಲ’ ಎಂದು ಪ್ರತಿಕ್ರಿಯಿಸುತ್ತದೆ. ಜೆಮಿನಿಗೆ ಇದು ಸಾಧ್ಯವಿರುವಾಗ ಆಪಲ್‌ ಗೆ ಏಕೆ ಸಾಧ್ಯವಿಲ್ಲ ?, ಎಂದು ಈಗ ಪ್ರಶ್ನಿಸಲಾಗುತ್ತಿದೆ. ಭಾರತದಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸಿದರೂ ತನ್ನ ವಾಯ್ಸ್ ಅಸಿಸ್ಟೆಂಟ್ ಅನ್ನು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಏಕೆ ಸುಧಾರಿಸಿಲ್ಲ (ಅಪ್‌ಗ್ರೇಡ್ ಮಾಡಿಲ್ಲ) ಎಂದು ಜನರು ಈಗ ಆಪಲ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

​ಆಪಲ್ ನಮ್ಮ ದೇವರ ಹೆಸರಿಗೆ ಗೌರವ ನೀಡುತ್ತಿಲ್ಲ !

ಈ ವಿಡಿಯೋವನ್ನು ಪ್ರಸಾರ ಮಾಡಿದ ವ್ಯಕ್ತಿಯು, ಐಫೋನ್ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಮತ್ತು ಕೋಟ್ಯಂತರ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ. ದೇಶಾದ್ಯಂತ ಕೋಟ್ಯಂತರ ಹಿಂದುಗಳು ಇಷ್ಟಪಟ್ಟು ಐಫೋನ್ ಖರೀದಿಸುತ್ತಾರೆ; ಆದರೆ ಸಂಸ್ಥೆಯು ನಮಗೆ ವಂಚಿಸುತ್ತಿದೆ. ನಮ್ಮ ಎಲ್ಲಾ ‘ಡೇಟಾ’ (ಮಾಹಿತಿ) ಈ ಸಂಸ್ಥೆಯ ಬಳಿ ಇದೆ ಮತ್ತು ಇದು ನಮ್ಮ ವಿರುದ್ಧ ರೂಪಿಸಲಾದ ಒಂದು ವ್ಯವಸ್ಥಿತ ಪಿತೂರಿಯಾಗಿದೆ. ಇಂದು ಭಾರತದಲ್ಲಿ ಐಫೋನ್ ತೋರಿಸುವುದು ಒಂದು ಫ್ಯಾಷನ್ ಆಗಿದೆ. ಜನರ ಬಳಿ ಹಣವಿಲ್ಲದಿದ್ದರೂ ಸಾಲ ಮಾಡಿ ಅಥವಾ ದುಬಾರಿ ಕಂತುಗಳಲ್ಲಿ ಐಫೋನ್ ಖರೀದಿಸುತ್ತಾರೆ. ಹೀಗಿದ್ದರೂ ಈ ವಿದೇಶಿ ಸಂಸ್ಥೆಯು ನಮ್ಮ ದೇವರ ಹೆಸರನ್ನು ಗೌರವಿಸುತ್ತಿಲ್ಲ.

​ಧಾರ್ಮಿಕ ಘೋಷಣೆಗಳಿಗೆ ಸ್ಥಾನವಿಲ್ಲ !

ಸಿರಿಯಂತಹ ವರ್ಚುವಲ್ ಅಸಿಸ್ಟೆಂಟ್‌ಗಳು ಭಾಷೆಯ ಒಂದು ನಿರ್ದಿಷ್ಟ ನಿಘಂಟಿನ ಆಧಾರದ ಮೇಲೆ ಕೆಲಸ ಮಾಡುತ್ತವೆ ಎಂದು ತಜ್ಞರು ವಾದಿಸುತ್ತಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಮಾತನಾಡಲಾಗುವ ಕೆಲವು ಸಾಮಾನ್ಯ ಅಭಿವಾದನೆಗಳಾದ ‘ಹಲೋ’, ‘ಹಾಯ್’, ‘ಸಲಾಂ ವಾಲೇಕುಮ್’ ಮತ್ತು ಕೆಲವು ಆಯ್ದ ಭಾಷೆಗಳಲ್ಲಿ ‘ನಮಸ್ತೆ’ ಪದಗಳಿಗೆ ‘ಹಾರ್ಡ್-ಕೋಡೆಡ್’ (Hard-coded) ಉತ್ತರಗಳನ್ನು ಅವುಗಳ ವ್ಯವಸ್ಥೆಯಲ್ಲಿ ಮೊದಲೇ ಪ್ರೋಗ್ರಾಂ ಮಾಡಲಾಗಿರುತ್ತದೆ. ‘ಸಲಾಂ ವಾಲೇಕುಮ್’ ಎಂಬುದನ್ನು ಜಗತ್ತಿನಾದ್ಯಂತ ಒಂದು ಸಾಮಾನ್ಯ ಅಭಿವಾದನೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ‘ಜಯ ಶ್ರೀರಾಮ’ ಅಥವಾ ‘ಹರ ಹರ ಮಹಾಕಾಲ’ ಎಂಬ ಪದಗಳನ್ನು ಈ ಸಂಸ್ಥೆಗಳು ಧಾರ್ಮಿಕ ಘೋಷಣೆ ಎಂದು ಪರಿಗಣಿಸುತ್ತವೆಯೇ ಹೊರತು ಸಾಮಾನ್ಯ ನಮಸ್ಕಾರವಲ್ಲ. ಈ ಕಾರಣದಂದಲೇ ಸಿರಿಯ ಕೋಡಿಂಗ್ ಪಟ್ಟಿಯಲ್ಲಿ ಈ ಪದವು ಸೇರಿರಲಿಲ್ಲ. ‘ಹರ ಹರ ಮಹಾದೇವ’ ಅಥವಾ ‘ಅಲ್ಲಾ-ಹು-ಅಕ್ಬರ’ ಇವು ಧಾರ್ಮಿಕ ಘೋಷಣೆಗಳಾಗಿದ್ದು, ಇವುಗಳಿಗೆ ಸಾಮಾನ್ಯ ಅಭಿವಾದನೆಯ ಪಟ್ಟಿಯಲ್ಲಿ ಸ್ಥಾನ ಸಿಗುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

​ತಂತ್ರಜ್ಞಾನದ ಜಗತ್ತಿನಲ್ಲಿ ಹಿಂದುಗಳ ಭಾವನೆಗಳನ್ನು ಯಾವಾಗಲೂ ಏಕೆ ನಿರ್ಲಕ್ಷಿಸಲಾಗುತ್ತದೆ ?

ಹಿಂದುತ್ವನಿಷ್ಠರ ಅನುಸಾರ, ಸಂಸ್ಥೆಗಳು ಭಾರತದಂತಹ ವಿಶಾಲ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ದೇಶದಲ್ಲಿ ವ್ಯಾಪಾರ ಮಾಡುವಾಗ, ಅಲ್ಲಿನ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ‘ಜಯ ಶ್ರೀರಾಮ’ ಅಥವಾ ‘ಜಯ ಶ್ರೀ ಮಹಾಕಾಲ’ ಎಂಬುದು ಕೇವಲ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಘೋಷಣೆಯಲ್ಲ, ಬದಲಿಗೆ ಇದು ಕೋಟ್ಯಂತರ ಜನರ ದೈನಂದಿನ ಜೀವನದಲ್ಲಿ ಒಬ್ಬರನ್ನೊಬ್ಬರು ಭೇಟಿಯಾದಾಗ ಬಳಸುವ ಅತ್ಯಂತ ದೊಡ್ಡ ನಮಸ್ಕಾರ ಅಥವಾ ಅಭಿವಾದನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಜಯ ಶ್ರೀರಾಮ ಎಂಬುದು ಅಭಿವಾದನೆ ಅಲ್ಲ’ ಎಂದು ಹೇಳುವುದು ಸಂಪೂರ್ಣವಾಗಿ ಆಧಾರರಹಿತ ಮತ್ತು ವಾಸ್ತವಕ್ಕೆ ದೂರವಾಗಿದೆ. ಇದನ್ನು ಕೋಡಿಂಗ್ ಭಾಷೆಯಲ್ಲಿ ಕೇವಲ ಒಂದು ‘ಮಿಸ್ಸಿಂಗ್ ವರ್ಡ್’ (ಬಿಟ್ಟುಹೋದ ಪದ) ಎಂದು ಪರಿಗಣಿಸಿದರೂ, ಭಾರತವನ್ನು ಅತ್ಯಂತ ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸುವ ‘ಆಪಲ್’ ಸಂಸ್ಥೆಯು ಇಷ್ಟು ದೊಡ್ಡ ನಿರ್ಲಕ್ಷ್ಯವನ್ನು ಹೇಗೆ ಮಾಡಲು ಸಾಧ್ಯ? ಎಂಬ ಪ್ರಶ್ನೆ ಏಳುತ್ತದೆ. ಗೂಗಲ್‌ ನ ಜೆಮಿನಿ ಮತ್ತು ಇತರ ವರ್ಚುವಲ್ ಅಸಿಸ್ಟೆಂಟ್‌ ಗಳು ಈ ವಿಷಯಗಳನ್ನು ಅರ್ಥಮಾಡಿಕೊಂಡು ಯೋಗ್ಯವಾದ ಉತ್ತರ ನೀಡಬಲ್ಲವು ಎಂದಾದರೆ, ‘ಆಪಲ್’ನ ‘ಸಿರಿ’ ಇಲ್ಲಿ ಏಕೆ ವಿಫಲವಾಯಿತು? ಕೋಟ್ಯಂತರ ಭಾರತೀಯ ಗ್ರಾಹಕರು ಈ ಸಂಸ್ಥೆಯ ದುಬಾರಿ ಫೋನ್‌ ಗಳನ್ನು ಖರೀದಿಸಿ ಅವರಿಗೆ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನೀಡುತ್ತಿದ್ದಾರೆ ಎಂದರೆ, ಬದಲಾಗಿ ಅವರು ತಮ್ಮ ಸಂಸ್ಕೃತಿ ಮತ್ತು ಶ್ರದ್ಧೆಗೆ ಗೌರವ ಸಿಗಬೇಕೆಂದು ಬಯಸುತ್ತಾರೆ. ಇದನ್ನು ಕೇವಲ ಒಂದು ತಾಂತ್ರಿಕ ದೋಷ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಆಪಲ್ ಸಂಸ್ಥೆಯು ಈ ಸಂಪೂರ್ಣ ವಿವಾದದ ಕುರಿತು ಇದುವರೆಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಆಪಲ್ ಈ ತಾಂತ್ರಿಕ ದೋಷವನ್ನು ಸರಿಪಡಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸುವವರೆಗೆ, ಭಾರತದ ಬಹುಸಂಖ್ಯಾತ ಸಮಾಜದಲ್ಲಿ ಈ ಅಸಮಾಧಾನ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಹಿಂದುಗಳ ಭಾವನೆಗಳನ್ನು ಯಾವಾಗಲೂ ಏಕೆ ನಿರ್ಲಕ್ಷಿಸಲಾಗುತ್ತದೆ? ಎಂಬ ಪ್ರಶ್ನೆ ಖಂಡಿತವಾಗಿಯೂ ಉಳಿಯುತ್ತದೆ.

ಸಂಪಾದಕೀಯ ನಿಲುವು

ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡದ ಇಂತಹ ಜಾಗತಿಕ ಸಂಸ್ಥೆಗಳ ಉತ್ಪನ್ನಗಳ ಮೇಲೆ ಹಿಂದುಗಳು ಬಹಿಷ್ಕಾರದ ಅಸ್ತ್ರವನ್ನು ಬಳಸದ ಹೊರತು ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !