ದೇವರಕೋಣೆ

ವಾಸ್ತುಶಾಸ್ತ್ರ ವಿಷಯದ ಲೇಖನಮಾಲೆ: ಲೇಖನ ಕ್ರ. ೧೮

ಹಿಂದಿನ ಲೇಖನ ಸಂಖ್ಯೆ ೧೭ ಓದಲು  ಇಲ್ಲಿ ಲಿಂಕ್ ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/180847.html

ಹಿಂದಿನ ಲೇಖನದಲ್ಲಿ ನಾವು ಪ್ರವೇಶದ್ವಾರ ಮತ್ತು ಅದರ ನಿಯಮಗಳ ಬಗ್ಗೆ ತಿಳಿದುಕೊಂಡೆವು. ಈಗ ಮುಖ್ಯ ಕಟ್ಟಡದ ಆಂತರಿಕ ರಚನೆಯಲ್ಲಿ ದೇವರಕೋಣೆಯ ಬಗ್ಗೆ ತಿಳಿದುಕೊಳ್ಳೋಣ.

೧. ದೇವರಕೋಣೆಯ ಮಹತ್ವ

ದೇವರಕೋಣೆಯು ನಮ್ಮ ಮನೆಯಲ್ಲಿನ ಅತ್ಯಂತ ಮಹತ್ವದ ಭಾಗವಾಗಿದೆ. ದೇವರಕೋಣೆಯಿಂದ ಇಡೀ ಮನೆಯಲ್ಲಿ ವೈಶ್ವಿಕ ಶಕ್ತಿ, ಅಂದರೆ ‘ಚೈತನ್ಯ’ವು ಪ್ರಕ್ಷೇಪಿಸಲ್ಪಡುತ್ತದೆ. ಮನೆಯಲ್ಲಿ ವಾಸಿಸುವ ಎಲ್ಲರಿಗೂ ಇಲ್ಲಿಂದ ಶಕ್ತಿಯು ದೊರೆಯುತ್ತಿರುತ್ತದೆ; ಆದರೆ ಪ್ರಸ್ತುತ ವಾಸ್ತು ನಿರ್ಮಾಣದ ಸಮಯದಲ್ಲಿ ದೇವರಕೋಣೆಗೆ ಅಷ್ಟೊಂದು ಆದ್ಯತೆ ನೀಡುತ್ತಿರುವುದು ಕಂಡು ಬರುತ್ತಿಲ್ಲ. ಮನೆ ಕಟ್ಟಿದ ನಂತರ ಅಡುಗೆಮನೆಯಲ್ಲಿನ ಸ್ವಲ್ಪ ಜಾಗವನ್ನು ದೇವರಕೋಣೆಗಾಗಿ ಇರಿಸಲಾಗುತ್ತದೆ. ಈಗಿನ ಹೆಚ್ಚಿನ ಫ್ಲಾಟ್‌ಗಳಲ್ಲಿ ದೇವರಕೋಣೆಗಾಗಿ ಪ್ರತ್ಯೇಕ ವ್ಯವಸ್ಥೆ ಇರುವುದಿಲ್ಲ, ಇಂತಹ ಸಮಯದಲ್ಲಿ ಯಾವುದಾದರೊಂದು ಗೋಡೆಯ ಮೇಲೆ ಮರದ ದೇವರಮಂಟಪವನ್ನು ಅಳವಡಿಸಿ ಅದನ್ನು ಸಿದ್ಧ ಪಡಿಸಲಾಗುತ್ತದೆ. ಈ ಸಮಯದಲ್ಲಿ ದೇವರಕೋಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಷ್ಟ ವಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಉಳಿಯುವ ಪ್ರಮಾಣವೂ ಕಡಿಮೆಯಾಗಿದೆ. ಆದ್ದರಿಂದ ಹೊಸ ಮನೆ ಕಟ್ಟುವಾಗ ನಾವು ಯಾವ ವಿಷಯಗಳನ್ನು ಗಮನಿಸಬೇಕು ಎಂಬುದನ್ನು ಈಗ ನೋಡೋಣ.

ಶ್ರೀ. ಶ್ರೇಯಸ್ ಪಿಸೋಳಕರ

೨. ದೇವರಕೋಣೆ ಯಾವ ದಿಕ್ಕಿನಲ್ಲಿರಬೇಕು ? ಮತ್ತು ದೇವರಮಂಟಪದಲ್ಲಿನ ಮೂರ್ತಿಗಳ ಎತ್ತರ ‘ಈಶಾನ್ಯಾಂ ದೇವತಾಗೇಹಂ |’ – ಬೃಹತ್ಸಂಹಿತಾ

ದೇವರಕೋಣೆಯು ಮನೆಯ ಈಶಾನ್ಯ ದಿಕ್ಕಿನಲ್ಲಿ ಇರಬೇಕು, ಎಂದು ಎಲ್ಲಾ ವಾಸ್ತುಶಾಸ್ತ್ರಜ್ಞರು ಹೇಳಿದ್ದಾರೆ. ಶಿಖಿ ಪದದಲ್ಲಿ ಪೂರ್ವಕ್ಕೆ ತಮ್ಮ ಮುಖ ಬರುವಂತೆ ಮಾಡಿ ದೇವರ ಮನೆಯನ್ನು ನಿರ್ಮಿಸಿದರೆ ಅಥವಾ ಆದಿತಿ ಪದದಲ್ಲಿ ಉತ್ತರಕ್ಕೆ ನಮ್ಮ ಮುಖ ಬರುವಂತೆ ದೇವರ ಮನೆಯನ್ನು ನಿರ್ಮಿಸಿದರೆ, ಅಲ್ಲಿ ವಾಸಿಸುವವರ ದೇಹವು ಸದೃಢವಾಗಿರಲು ಮತ್ತು ಆರೋಗ್ಯವು ಉತ್ತಮವಾಗಿರಲು ಸಕಾರಾತ್ಮಕ ಶಕ್ತಿಯ ಲಾಭ ದೊರೆಯುತ್ತದೆ.

ಆರಭ್ಯೈಕಾಙ್ಗುಲಾದೂರ್ಧ್ವಂ ಪರ್ಯಂತಂ ದ್ವಾದಶಾಙ್ಗುಲಾ |

ಗೃಹೇಷು ಪ್ರತಿಮಾ ಪೂಜ್ಯಾ ನಾಧಿಕಾ ಶಸ್ಯತೇ ತತಃ ||

ತದೂರ್ಧ್ವಂ ನವಹಸ್ತಾಂತಂ ಪೂಜನೀಯಾ ಸುರಾಲಯೇ |

ದಶಹಸ್ತಾದಿತೋ ಯಾಽರ್ಚಾ ಪ್ರಾಸಾದೇನ ವಿನಾರ್ಚಯೇತ್ ||

– ರೂಪಮಂಡನ, ಅಧ್ಯಾಯ ೧, ಶ್ಲೋಕ ೭, ೮

ಅರ್ಥ : ಮನೆಯಲ್ಲಿ ಪೂಜಿಸಬೇಕಾದ ಮೂರ್ತಿಯು ೧ ಅಂಗುಲ (೩ ರಿಂದ ೪ ಇಂಚ್) ದಿಂದ ೨  ಅಂಗುಲ (೯ ಇಂಚ್) ಗಳ ನಡುವೆ ಇರಬೇಕು. ಒಂದು ವೇಳೆ ಮೂರ್ತಿಯ ಎತ್ತರವು ೧೨ ಅಂಗುಲಕ್ಕಿಂತ ಹೆಚ್ಚಿದ್ದರೆ ಅಂತಹ ಮೂರ್ತಿಗಳನ್ನು ದೇವಸ್ಥಾನದಲ್ಲಿಟ್ಟು ಪೂಜಿಸಬೇಕು. ೧೦ ಹಸ್ತಗಳಿಗಿಂತ (ಎಂದರೆ ಸುಮಾರು ೧೫ ಅಡಿ ಎತ್ತರ) ಹೆಚ್ಚು ಎತ್ತರವಿರುವ ಮೂರ್ತಿಗಳನ್ನು ದೇವಸ್ಥಾನದ ಹೊರಗೆ ಇಟ್ಟು ಪೂಜಿಸಬೇಕು.

೩. ಮೂರ್ತಿಯ ವಿಧಗಳು ಮತ್ತು ಅವುಗಳ ಪರಿಣಾಮಗಳು

ಅ. ಚಿನ್ನ : ಶಾಂತಿ, ಐಶ್ವರ್ಯ, ಮೋಕ್ಷ.

ಆ. ಬೆಳ್ಳಿ : ಸಮೃದ್ಧಿ, ಧನವೃದ್ಧಿ, ಸುಖ, ಸಂತೋಷ.

ಇ. ತಾಮ್ರ : ಸಂತಾನಭಾಗ್ಯ, ಸಮೃದ್ಧಿ.

ಈ. ಹಿತ್ತಾಳೆ : ವಿದ್ಯೆ, ಆಯುಷ್ಯ, ಆರೋಗ್ಯ, ಧನವೃದ್ಧಿ.

ಉ. ಕಂಚು : ಆರೋಗ್ಯ, ಆಯುಷ್ಯ.

ಊ. ಕಬ್ಬಿಣ, ಸೀಸ ಮತ್ತು ಸತುವು (ಝಿಂಕ್) : ಕಹಿ ಅನುಭವ, ದುಃಖ, ಅನಾರೋಗ್ಯ, ಹಿಂಸಾತ್ಮಕ ವೃತ್ತಿ.

ಎ. ಮಣ್ಣು : ಕಾಮನಾಪೂರ್ತಿ (ಅಲ್ಪಕಾಲ ಲಾಭದಾಯಕ)

ಏ. ಸ್ಫಟಿಕ : ಧನಲಾಭ

ಐ. ಪಂಚಲೋಹ (ಹಿತ್ತಳೆ ೫, ತಾಮ್ರ ೪, ಕಂಚು ೩, ಬೆಳ್ಳಿ ೨, ಚಿನ್ನ ೧ ಈ ಪ್ರಮಾಣದಲ್ಲಿ) : ಸರ್ವಾರ್ಥ ಸಾಧನಗಳು ಮನೆಯ ದೇವರಕೋಣೆಯಲ್ಲಿ ೨ ಶಿವಲಿಂಗಗಳು, ೨ ಸಾಲಿಗ್ರಾಮಗಳು (ಇದ್ದರೆ ೧, ೪, ೬, ೮ ರ ಪ್ರಮಾಣದಲ್ಲಿರಬೇಕು), ೨ ಸೂರ್ಯಕಾಂತ ಶಿಲೆಗಳು, ೩ ದೇವಿ ವಿಗ್ರಹಗಳು, ೩ ಗಣಪತಿ, ೨ ಶಂಖಗಳು, ಆಯುಧ ಸಹಿತ ಉಗ್ರ ದಶಾವತಾರಿ ಮೂರ್ತಿ, ಬೆಂಕಿಯಿಂದ ಸುಟ್ಟ ಮೂರ್ತಿ, ಭಗ್ನಗೊಂಡ ಮೂರ್ತಿ ಮತ್ತು ಮೃತ ವ್ಯಕ್ತಿಯ ಫೋಟೋ ದೇವರಕೋಣೆಯಲ್ಲಿರಬಾರದು.

ದೇವರಮಂಟಪವು ನೆಲದಿಂದ ಸ್ವಲ್ಪ ಎತ್ತರದಲ್ಲಿರಬೇಕು; ಆದರೆ ಪೂಜೆಯನ್ನು ಯಾವಾಗಲೂ ಕುಳಿತು ಮಾಡುವಂತೆ ವ್ಯವಸ್ಥೆ ಇರಬೇಕು, ಮನೆಯ ದೇವರಕೋಣೆಗೆ ಕಳಸ ಇರಬಾರದು. ಪೂಜೆ ಮಾಡುವಾಗ ಪೂಜೆ ಮಾಡುವವನ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು.

(ಆಧಾರ ಗ್ರಂಥ : ‘ಮಯಮತಮ್’, ‘ಮಾನಸಾರ’, ‘ರೂಪ ಮಂಡನ’, ಬ್ರಹತ್ಸಂಹಿತಾ’)

– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ) ಫೋಂಡಾ, ಗೋವಾ. (೧೯.೩.೨೦೨೬)

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ