ಪ್ರಯಾಗರಾಜ (ಉತ್ತರಪ್ರದೇಶ) ದಲ್ಲಿ ನಡೆಯುತ್ತಿರುವ ಮಹಾಕುಂಭದ ನಿಮಿತ್ತ …
![]() ‘ಯಾವುದೇ ಆಮಂತ್ರಣವಿಲ್ಲದೆ ಕೋಟ್ಯಾಂತರ ಹಿಂದೂ ಭಕ್ತರು ಮತ್ತು ಸಾಧು-ಸಂತರನ್ನು ಒಟ್ಟುಗೂಡಿಸುವ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಧಾರ್ಮಿಕ ಉತ್ಸವವೆಂದರೆ ಕುಂಭಮೇಳ. ಸತ್ಯಯುಗದ ಇತಿಹಾಸದ ಶ್ರೇಷ್ಠ ಆಧ್ಯಾತ್ಮಿಕ ಹಾಗೂ ಪೌರಾಣಿಕ ಹಿನ್ನೆಲೆ ಇರುವ ಈ ಕುಂಭಮೇಳವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕುಂಭಮೇಳವು ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಪ್ರತಿರೂಪವಾಗಿದೆ. ಕುಂಭಮೇಳದ ಈ ಕಾಲಪರ್ವವೇ ಭಾರತದ ಖಗೋಳಶಾಸ್ತ್ರಾಭ್ಯಾಸದ ಉಚ್ಚಮಟ್ಟದ ಒಂದು ಉದಾಹರಣೆಯಾಗಿದೆ. ಇದು ಹಿಂದೂಸಂಘಟನೆಯ ಸಂಕೇತವಾಗಿದೆ, ಹಾಗೆಯೆ ಶ್ರಾದ್ಧವಿಧಿಯಿಂದ ಯೊಗಾಭ್ಯಾಸದವರೆಗಿನ ವಿವಿಧ ಪ್ರಕಾರದ ಆಧ್ಯಾತ್ಮಿಕ ಘಟಕಗಳು ಹಾಗೂ ಸಾಧಕರ ಜಾತ್ರೆಯಾಗಿದೆ. ಸಾಧು-ಸಂತರಿಂದ ಹಿಡಿದು ಸಾಮಾನ್ಯ ಜನರವರೆಗೆ ‘ಎಲ್ಲ ಜೀವಗಳ ಜನ್ಮ ಈಶ್ವರಪ್ರಾಪ್ತಿಗಾಗಿ ಆಗಿದೆ’, ಎಂಬ ಆಧ್ಯಾತ್ಮಿಕ ಸತ್ಯವನ್ನು ಪುರಸ್ಕರಿಸುವ ಉತ್ಸವ ಇದಾಗಿದೆ. ಸಾವಿರಾರು ಜನರು ಕುಂಭಮೇಳದಲ್ಲಿ ಭಾಗವಹಿಸುವುದರ ಅರ್ಥ ದೇವತೆಗಳ ಅಸ್ತಿತ್ವವನ್ನು ಸ್ವೀಕರಿಸುವುದು, ಭಾರತೀಯ ಶಾಸ್ತ್ರಗಳನ್ನು ಸಾಕ್ಷಿಯೆಂದು ಸ್ವೀಕರಿಸುವುದು ಇವೆಲ್ಲ ಧರ್ಮಶಾಸ್ತ್ರ ಹಾಗೂ ಅಧ್ಯಾತ್ಮದ ವಿವಿಧ ಅಂಗಗಳ ಕೊಡುಕೊಳ್ಳುವಿಕೆ ಯಾಗಿದೆ. ಇಂತಹ ಶ್ರೇಷ್ಠ ಕುಂಭಮೇಳದ ಮಹತ್ವವನ್ನು ತಿಳಿದುಕೊಳ್ಳೋಣ. ಸಂಕಲನ : ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ. |
೧. ಜಗತ್ತಿನಾದ್ಯಂತದ ಹಿಂದೂಗಳಿಗೆ ಮಹತ್ವದ್ದಾಗಿರುವ ಕುಂಭಮೇಳ ಮತ್ತು ಕುಂಭಪರ್ವಕ್ಷೇತ್ರದ ಮಹತ್ವ !
ಕುಂಭಮೇಳ ಕೇವಲ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಪ್ರದರ್ಶನವಲ್ಲ, ಅದು ಸಂತರ ಸಹವಾಸವನ್ನು ನೀಡುವ ಒಂದು ಆಧ್ಯಾತ್ಮಿಕ ಸಮ್ಮೇಳನವೂ ಆಗಿದೆ. ಪ್ರಯಾಗ, ಹರಿದ್ವಾರ, ಉಜ್ಜೈನಿ ಮತ್ತು ತ್ರ್ಯಂಬಕೇಶ್ವರ-ನಾಶಿಕ ಈ ೪ ಕ್ಷೇತ್ರಗಳಲ್ಲಿ ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವಕ್ಕೆ ಹಿಂದೂ ಜೀವನ ತತ್ತ್ವಜ್ಞಾನದಲ್ಲಿ ಮಹತ್ವದ ಸ್ಥಾನವಿದೆ. ಕುಂಭಮೇಳದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಅದ್ವಿತೀಯವಾಗಿದೆ. ಇಲ್ಲಿ ಕೋಟ್ಯಂತರ ಭಕ್ತರು ಗಂಗಾಸ್ನಾನ, ಧ್ಯಾನ, ದಾನ, ಪೂರ್ವಜರಿಗೆ ಅರ್ಪಣೆ, ಶ್ರಾದ್ಧ ಸಮಾರಂಭ, ಸಂತರ ಭೇಟಿ ಹಾಗೂ ಆಧ್ಯಾತ್ಮಿಕ ಚರ್ಚೆಯಂತಹ ಧಾರ್ಮಿಕ ಕಾರ್ಯಕ್ಕಾಗಿ ಬರುತ್ತಾರೆ. ಇದು ಭಕ್ತರ ಉತ್ಸವ ಆಗಿದೆ. ಇಷ್ಟು ಮಾತ್ರವಲ್ಲ, ದೇವತೆಗಳು, ಋಷಿಗಳು, ಸಂತರು ಮತ್ತು ೩೩ ಕೋಟಿ ತೀರ್ಥಗಳೂ ಈ ಕುಂಭಪರ್ವದಲ್ಲಿ ಭಾಗವಹಿಸುತ್ತಾರೆ, ಇದೊಂದು ಅದ್ವಿತೀಯ ಘಟನೆಯಾಗಿದೆ. ಕುಂಭಮೇಳದ ಆಧ್ಯಾತ್ಮಿಕ ಲಾಭ ಕೇವಲ ಧಾರ್ಮಿಕ ಶ್ರದ್ಧೆಯ ಮೂಲಕ ಆಚರಣೆ ಮಾಡುವ ಭಕ್ತರಿಗೆ ಮಾತ್ರ ಸಿಗಲು ಸಾಧ್ಯ. ಕೃತಯುಗದಲ್ಲಿ (ಸತ್ಯಯುಗದಲ್ಲಿ) ಸಮುದ್ರಮಂಥನ ನಡೆಯಿತು, ಅಂದಿನಿಂದ ಕುಂಭಮೇಳ ನಡೆಯುತ್ತಿದೆ, ಎನ್ನುವ ಶ್ರದ್ಧೆ ಇದೆ.

ಅ. ‘ಕುಂಭ’ ಈ ಶಬ್ದದ ಜನಪ್ರಿಯ ಅರ್ಥ ‘ಕಲಶ’, ‘ಪಾತ್ರೆ (ಮಡಕೆ), ಅಥವಾ ಕೊಡ ಎಂಬುದಾಗಿದೆ. ‘ಕಲಶ’ ಇದು ಪವಿತ್ರ ಹಾಗೂ ಮಾಂಗಲ್ಯದ ಸಂಕೇತವಾಗಿದೆ. ಋಗ್ವೇದದ ಬ್ರಹ್ಮಕರ್ಮ ಸಮುಚ್ಛಯಕ್ಕನುಸಾರ ಕಲಶದ ಮುಖದಲ್ಲಿ ಭಗವಾನ ವಿಷ್ಣು, ಕಂಠದಲ್ಲಿ ರುದ್ರ (ಮಹಾದೇವ), ತಳದಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ಮಾತೃಕಾಗಣಗಳು ಮತ್ತು ಮಗ್ಗುಲಲ್ಲಿ ೭ ಸಮುದ್ರ ಹಾಗೂ ೭ ದ್ವೀಪಗಳ ಸಹಿತ ಪೃಥ್ವಿ ಸಮಾವೇಶವಾಗಿದೆ. ಇದೇ ರೀತಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳು ತಮ್ಮ ಪಾಲುಸಹಿತ ಕಲಶದಲ್ಲಿ ವಾಸ ಮಾಡುತ್ತವೆ.
ಆ. ಜ್ಯೋತಿಷ್ಯಶಾಸ್ತ್ರಕ್ಕನುಸಾರ ಕುಂಭವೆಂದರೆ ೧೨ ರಾಶಿಗಳ ಪೈಕಿ ಒಂದು ರಾಶಿಯಾಗಿದೆ. ಕುಂಭಪರ್ವದ ವಿಷಯದಲ್ಲಿ ಮೇಲೆ ಉಲ್ಲೇಖಿಸಿದ ಎರಡೂ ಅರ್ಥ ಸ್ವೀಕಾರಾರ್ಹವೆಂದು ತಿಳಿಯಲಾಗುತ್ತದೆ.
ಇ. ಮಾನವ ದೇಹದ ಸಂಕೇತ ಕುಂಭ : ಮಾನವ ಶರೀರಕ್ಕೆ ‘ಪಾರ್ಥಿವ’ (ಪೃಥ್ವಿತತ್ತ್ವದ ವರ್ಚಸ್ಸಿರುವ) ಎನ್ನುತ್ತಾರೆ. ಕುಂಭಕ, ಅಂದರೆ ಪಾತ್ರೆ ಇದನ್ನು ಮಾನವ ಶರೀರದ ಸಂಕೇತವೆಂದು ತಿಳಿಯಲಾಗುತ್ತದೆ; ಏಕೆಂದರೆ ಶರೀರ ಮಣ್ಣಿನಿಂದ ತಯಾ ರಾಗಿರುತ್ತದೆ ಹಾಗೂ ಮರಣದ ನಂತರ ಅದು ಮಣ್ಣಿನಲ್ಲಿಯೇ ವಿಲೀನವಾಗುತ್ತದೆ. ಪಾಪ, ವಾಸನೆ, ಲೈಂಗಿಕ ಇಚ್ಛೆ, ಕ್ರೋಧ, ಇಂತಹ ವಿವಿಧ ದುರ್ಗುಣಗಳಿಂದ ತುಂಬಿರುವ ಶರೀರದಂತಹ ಪಾತ್ರೆ ಖಾಲಿ ಮಾಡುವ ಸಂದರ್ಭವೇ ಕುಂಭಮೇಳ.
ಸಂತ ನಾಮದೇವ ಮಹಾರಾಜರಿಗೆ ‘ದೇವರು ನನ್ನೊಂದಿಗೆ ಮಾತನಾಡುತ್ತಾರೆ’, ಎನ್ನುವ ವಿಷಯದಲ್ಲಿ ಅಹಂಕಾರವಿತ್ತು. ಆದ್ದರಿಂದ ಒಂದು ದಿನ ಸಂತ ಸಭೆಯಲ್ಲಿ ಸಂತ ಮುಕ್ತಾಬಾಯಿ ಹೇಳಿದರು, ”ನಾಮದೇವ ಮಹಾರಾಜರ ಕುಂಭ ಅಹಂಕಾರದಿಂದ ತುಂಬಿದೆ; ಆದ್ದರಿಂದ ನಾಮದೇವರು ಇನ್ನೂ ಅಪಕ್ವ ಆಗಿದ್ದಾರೆ.” ನಮ್ಮೆಲ್ಲರ ಪಾತ್ರೆಗಳೂ ಅಪಕ್ವವಾಗಿವೆ; ಏಕೆಂದರೆ ನಮಗೆ ನಮ್ಮ ಸ್ವರೂಪ, ಸಂಪತ್ತು, ಕಾರ್ಯ ಇತ್ಯಾದಿ ಅಥವಾ ಇವುಗಳಲ್ಲಿ ಯಾವುದಾದರೊಂದು ವಿಷಯದ ಅಭಿಮಾನವಿರುತ್ತದೆ. ಅದೇ ವೇಳೆಗೆ ನಮ್ಮ ಮನಸ್ಸು ವಾಸನೆ, ಕ್ರೋಧ ಇತ್ಯಾದಿ ಅನೇಕ ದುರ್ಗುಣಗಳಿಂದ ತುಂಬಿರುತ್ತದೆ. ಕುಂಭಮೇಳ ಅನೇಕ ಪಾಪ ಗಳು, ಇಚ್ಛೆ, ವಾಸನೆ, ಕ್ರೋಧ ಇಂತಹ ಅನೇಕ ದುರ್ಗುಣ ಗಳಿಂದ ತುಂಬಿರುವ ಶರೀರವನ್ನು ಖಾಲಿ ಮಾಡಲು ಅತೀ ಉತ್ತಮ ಸ್ಥಳ ಹಾಗೂ ಸಮಯವಾಗಿದೆ.
ಕುಂಭಮೇಳದಲ್ಲಿ (ಆ ಸ್ಥಳದಲ್ಲಿ ಮತ್ತು ಆ ಸಮಯದಲ್ಲಿ) ಮಾಡಿದ ದಾನ, ಧಾರ್ಮಿಕ ಕೃತಿ, ನಾಮಸಾಧನೆ ಅಥವಾ ಧ್ಯಾನ ಇತ್ಯಾದಿಗಳ ಫಲ ಇನ್ನಿತರ ಯಾವುದೇ ಸ್ಥಳದಲ್ಲಿ ಮಾಡಿದ ಇಂತಹ ಕೃತಿಯಿಂದ ಸಿಗುವ ಫಲಕ್ಕಿಂತ ೧ ಸಾವಿರ ಪಟ್ಟು ಹೆಚ್ಚು ಪ್ರಮಾಣದಲ್ಲಿರುತ್ತದೆ. ನಮ್ಮ ಆಧ್ಯಾತ್ಮಿಕ ಪ್ರಗತಿಯ ವೇಗ ಹೆಚ್ಚಿಸಲು ದೇವರು ನಮಗೆ ಕುಂಭಮೇಳದ ರೂಪದಲ್ಲಿ ಒಂದು ಸುವರ್ಣಾವಕಾಶವನ್ನೇ ಅನುಗ್ರಹಿಸಿ ದ್ದಾರೆ; ಏಕೆಂದರೆ ಕುಂಭಮೇಳದಲ್ಲಿ ಅನೇಕ ದೇವತೆಗಳು, ಜ್ಞಾನಿಗಳು, ವಿವಿಧ ಯೋಗಮಾರ್ಗಗಳ ಸಂತರು ಮತ್ತು ಋಷಿಮುನಿಗಳು ಒಟ್ಟಾಗಿ ಬರುತ್ತಾರೆ ಹಾಗೂ ಅವರ ಸಹವಾಸದ ಲಾಭ ಅತ್ಯಲ್ಪ ಕಡಿಮೆ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಸಿಗುತ್ತದೆ. ಕುಂಭಮೇಳಕ್ಕೆ ಹೋಗಿ ಅಲ್ಲಿ ಕೇವಲ ಸ್ನಾನ ಮಾಡಿದರೆ ನಮಗೆ ಹೆಚ್ಚಿನ ಲಾಭವಾಗಲಿಕ್ಕಿಲ್ಲ. ತೀರ್ಥಕ್ಷೇತ್ರದಲ್ಲಿನ ಕುಂಭಮೇಳದಲ್ಲಿ ನಾವು ನಮ್ಮ ಇಚ್ಛೆ, ಸ್ವಭಾವದೋಷ ಹಾಗೂ ಅಹಂಕಾರಗಳಿಂದ ತುಂಬಿರುವ ನಮ್ಮ ಮನಸ್ಸು, ಬುದ್ಧಿ ಮತ್ತು ಅಹಂಕಾರವನ್ನು ಖಾಲಿ ಮಾಡಿದಾಗಲೇ ನಮಗೆ ದೇವಿ-ದೇವತೆಗಳು ಮತ್ತು ಸಂತರ ಆಶೀರ್ವಾದ ಸಿಗಬಹುದು, ಅದೇ ರೀತಿ ನಮ್ಮ ಜೀವನ ಸಾರ್ಥಕವಾಗುವುದು.
೨. ಕುಂಭಮೇಳದ ವಿಷಯದಲ್ಲಿ ಪುರಾಣಗಳಲ್ಲಿರುವ ಮಾಹಿತಿ
ನಾವೆಲ್ಲರೂ ಕುಂಭಮೇಳದ ಉತ್ಪತ್ತಿಯ ಕಥೆ ಕೇಳಿದ್ದೇವೆ. ಅಮೃತ ಕುಂಭ ಸಿಗಬೇಕೆಂದು ದೇವತೆಗಳು ಮತ್ತು ದಾನವರು ಒಟ್ಟಾಗಿ ಕ್ಷೀರಸಾಗರವನ್ನು (ಹಾಲಿನ ಸಮುದ್ರ) ಮಂಥನ ಮಾಡಲು ನಿರ್ಣಯಿಸಿದರು. ಸಮುದ್ರಮಂಥನಕ್ಕಾಗಿ ಸರ್ಪರಾಜ ವಾಸುಕಿಗೆ ಮೇರೂ ಪರ್ವತ ಅಂದರೆ ಮಂದಾರ ಪರ್ವತವನ್ನು ತಿರುಗಿಸುವ ಹಗ್ಗವಾಗಲು ವಿನಂತಿಸಲಾಯಿತು. ವಾಸುಕಿ ನಾಗ ಹಗ್ಗವಾದನು ಹಾಗೂ ಅವನು ಮೇರೂ ಪರ್ವತದ ಸುತ್ತಲೂ ತನ್ನನ್ನು ಸುತ್ತಿಕೊಂಡನು. ಅವನ ತಲೆಯ ಬದಿಗೆ ರಾಕ್ಷಸರಿದ್ದರು ಹಾಗೂ ಬಾಲದ ಕಡೆಗೆ ದೇವತೆಗಳಿದ್ದರು. ಈ ರೀತಿ ಸಮುದ್ರಮಂಥನ ನಡೆಯಿತು. ಈ ಸಮುದ್ರಮಂಥನದಿಂದ ಹಾಲಾಹಲ ವಿಷ, ಕಾಮಧೇನು ಹಸು, ಬಿಳಿ ಕುದುರೆ ಉಚ್ಚೈಃಶ್ರವಾ, ೪ ಹಲ್ಲು ಗಳಿರುವ ಆನೆ ಐರಾವತ, ಕೌಸ್ತುಭಮಣಿ, ಪಾರಿಜಾತ, ಕಲ್ಪವೃಕ್ಷ, ರಂಭೆಯಂತಹ ಸ್ವರ್ಗೀಯ ಅಪ್ಸರೆಯರು, ಶ್ರೀ ಲಕ್ಷ್ಮೀದೇವಿ, ಸುರ ಅಂದರೆ ಮದ್ಯ, ಸೋಮ ಅಂದರೆ ಚಂದ್ರ, ಹರಿಧನು ಅಂದರೆ ಧನುಷ್ಯ, ಶಂಖ, ದೇವರ ವೈದ್ಯ ಧನ್ವಂತರಿ, ಅಮೃತಕಲಶ, ಅಂದರೆ ಕುಂಭ ಇತ್ಯಾದಿ ೧೪ ರತ್ನಗಳು ಹೊರಗೆ ಬಂದುವು. ನಂತರ ಭಗವಾನ ಧನ್ವಂತರಿಯವರು ಅಮೃತದ ಪಾತ್ರೆಯನ್ನು ಹಿಡಿದುಕೊಂಡು ಸಮುದ್ರದಿಂದ ಹೊರಗೆ ಬಂದರು.
ಆ ಕ್ಷಣವೇ ‘ಅಮೃತ ಕುಡಿದು ರಾಕ್ಷಸರು ಅಮರರಾದರೆ, ಅವರು ಕೋಲಾಹಲವೆಬ್ಬಿಸುವರು, ಎಂಬ ವಿಚಾರ ದೇವತೆಗಳ ಮನಸ್ಸಿನಲ್ಲಿ ಬಂತು. ಇಂದ್ರನ ಮಗ ಜಯಂತನಿಗೆ ಸಂಕೇತ ನೀಡಿದರು. ಅದಕ್ಕನುಸಾರ ಅವನು ಧನ್ವಂತರಿಯ ಕೈಯಿಂದ ಅಮೃತಕುಂಭವನ್ನು ತೆಗೆದುಕೊಂಡು ಸ್ವರ್ಗದ ಕಡೆಗೆ ಹೊರಟನು. ಈ ಅಮೃತಕುಂಭವನ್ನು ವಶಪಡಿಸಿಕೊಳ್ಳಲು ದೇವತೆಗಳು ಮತ್ತು ದಾನವರ ನಡುವೆ ೧೨ ದಿನ ಮತ್ತು ೧೨ ರಾತ್ರಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಅಮೃತದ ಕುಂಭವನ್ನು ೧೨ ಸಲ ಕೆಳಗಿಡಲಾಯಿತು. ಆಗ ಸೂರ್ಯದೇವರು ಅಮೃತಕಲಶದ ರಕ್ಷಣೆ ಮಾಡಿದರು. ಚಂದ್ರನು ಕಲಶದಲ್ಲಿನ ಅಮೃತ ಹಾರಿ ಚೆಲ್ಲಿಹೋಗದಂತೆ ಕಾಳಜಿ ವಹಿಸಿದನು ಹಾಗೂ ಗುರು ರಾಕ್ಷಸರೊಂದಿಗೆ ಯುದ್ಧ ಮಾಡಿ ಕಲಶವನ್ನು ರಕ್ಷಿಸಿದನು. ಆಗ ಸೂರ್ಯ, ಚಂದ್ರ ಮತ್ತು ಗುರು ಈ ಗ್ರಹಗಳ ಒಕ್ಕೂಟದಿಂದ ಕುಂಭದಿಂದ ಅಮೃತದ ಬಿಂದು ಬಿದ್ದ ೧೨ ಸ್ಥಳಗಳಲ್ಲಿ ಕುಂಭ ಮೇಳ ಆಚರಿಸಲಾಗುತ್ತದೆ. ಈ ೧೨ ಸ್ಥಳಗಳಲ್ಲಿ ೮ ಸ್ಥಳಗಳು ಬೇರೆ ಲೋಕಗಳಲ್ಲಿವೆ ಹಾಗೂ ಉಳಿದ ೪ ಸ್ಥಳಗಳು ಭೂಲೋಕದ ಪ್ರಯಾಗ, ಹರಿದ್ವಾರ, ಉಜ್ಜೈನ ಮತ್ತು ತ್ರ್ಯಂಬಕೇಶ್ವರ-ನಾಶಿಕದಲ್ಲಿವೆ. ಈ ಸ್ಥಳಗಳಲ್ಲಿ ಯಾವ ತಿಥಿಗೆ ಮತ್ತು ಗ್ರಹಸ್ಥಿತಿಯಂದು ಅಮೃತ ಬಿಂದು ಬಿದ್ದಿತ್ತೊ, ಆ ತಿಥಿಯಂದು ಮತ್ತು ಗ್ರಹಸ್ಥಿತಿಯಂದು ಕುಂಭಮೇಳವನ್ನು ಆಚರಿಸಲಾಗುತ್ತದೆ. ಕುಂಭಮೇಳದಲ್ಲಿ ಈ ಅಮೃತಕುಂಭವನ್ನೂ ಸ್ಮರಿಸಲಾಗುತ್ತದೆ.
೩. ಕುಂಭಮೇಳದ ಅವಧಿ ಮತ್ತು ಸ್ಥಳ ನಿರ್ಧಾರದ ಹಿಂದಿನ ಶಾಸ್ತ್ರ
ಪ್ರತಿ ೧೨ ವರ್ಷಗಳಿಗೊಮ್ಮೆ ಪ್ರಯಾಗ, ಹರಿದ್ವಾರ, ಉಜ್ಜೈನ ಮತ್ತು ತ್ರ್ಯಂಬಕೇಶ್ವರ-ನಾಶಿಕದಲ್ಲಿ ಈ ಪುಣ್ಯಯೋಗ ಬರುತ್ತದೆ. ಗುರುಗ್ರಹಕ್ಕೆ ರಾಶಿಚಕ್ರದಿಂದ ಪ್ರವಾಸವನ್ನು ಪೂರ್ಣಗೊಳಿಸಲು ೧೨ ವರ್ಷಗಳು ಬೇಕಾಗುತ್ತವೆ. ಆದ್ದರಿಂದ ಪ್ರತಿ ೧೨ ವರ್ಷಗಳಿಗೊಮ್ಮೆ ಕುಂಭಯೋಗ ಬರುತ್ತದೆ, ಅಂದರೆ ಪ್ರತಿ ೧೨ ವರ್ಷಗಳಿಗೊಮ್ಮೆ ಗುರು ಗ್ರಹವು ರಾಶಿಚಕ್ರದ ಸುತ್ತಲೂ ತಿರುಗುತ್ತಾನೆ ಹಾಗೂ ಕುಂಭ ರಾಶಿಗೆ ಬರುತ್ತಾನೆ. ಈ ಸಮಯವನ್ನು ‘ಕುಂಭಪರ್ವ’ ಎನ್ನುತ್ತಾರೆ ಹಾಗೂ ಈ ಸಂದರ್ಭದಲ್ಲಿ ಪೃಥ್ವಿಯಲ್ಲಿ ಹಿಂದೂಗಳ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಹೇಗೆ ಗುರು ಕುಂಭ ರಾಶಿಯಲ್ಲಿರುವಾಗ ‘ಕುಂಭಪರ್ವ’ ಆಚರಿಸಲಾಗುತ್ತದೊ, ಹಾಗೆಯೆ ಗುರು ಸಿಂಹ ರಾಶಿಯಲ್ಲಿರುವಾಗ ‘ಸಿಂಹಸ್ಥ’ ಸಮ್ಮೇಳನ ಆಚರಿಸಲಾಗುತ್ತದೆ ಹಾಗೂ ಗುರು ಕನ್ಯಾ ರಾಶಿಯಲ್ಲಿರುವಾಗ ‘ಕನ್ಯಾಗತ’ ಸಮ್ಮೇಳನ ಆಚರಿಸಲಾಗುತ್ತದೆ. ಕುಂಭಮೇಳ ಯಾವಾಗ ಹಾಗೂ ಎಲ್ಲಿ ಆಯೋಜಿಸಬೇಕು, ಎಂಬುದು ಗ್ರಹಗಳ ಗಣಿತವನ್ನು ಆಧರಿಸಿರುತ್ತದೆ. ದೇವತೆಗಳು ಮತ್ತು ದಾನವರ ನಡುವಿನ ಯುದ್ಧದಲ್ಲಿ ಚಂದ್ರ, ರವಿ ಮತ್ತು ಗುರು ಇವರು ದೇವತೆಗಳಿಗೆ ತುಂಬಾ ಸಹಾಯ ಮಾಡಿದರು. ಆದ್ದರಿಂದ ಕುಂಭಮೇಳದ ಅವಧಿಯನ್ನು ಅವುಗಳ ವಿಶಿಷ್ಟ ಪರಿಸ್ಥಿತಿಗನುಸಾರ ನಿರ್ಧರಿಸಲಾಗುತ್ತದೆ.
ಒಂದು ವೇಳೆ ಗುರು ಕುಂಭ ರಾಶಿಯಲ್ಲಿದ್ದರೆ, ಸೂರ್ಯ ಮೇಷ ರಾಶಿಯಲ್ಲಿದ್ದರೆ, ಹರಿದ್ವಾರದಲ್ಲಿ; ಗುರು ಮೇಷ ರಾಶಿಯಲ್ಲಿದ್ದರೆ, ಸೂರ್ಯ ಮಕರ ರಾಶಿಯಲ್ಲಿದ್ದರೆ ಪ್ರಯಾಗದಲ್ಲಿ; ಗುರು ಸಿಂಹ ರಾಶಿಯಲ್ಲಿದ್ದರೆ ಸೂರ್ಯ ಮೇಷ ರಾಶಿಯಲ್ಲಿದ್ದರೆ, ಆಗ ನಾಶಿಕದ ತ್ರ್ಯಂಬಕೇಶ್ವರದಲ್ಲಿ ಕುಂಭಮೇಳ ಆಚರಿಸಲಾಗುತ್ತದೆ.
ಹರಿದ್ವಾರೆ ಕುಂಭಯೋಗೊ ಮೇಷಾರ್ಕೆ ಕುಂಭಗೆ ಗುರೌ |
ಪ್ರಯಾಗೆ ಮೇಷಸಂಸ್ಥೇಜ್ಯೆ ಮಕರಸ್ಥೆ ದಿವಾಕರೆ ||
ಉಜ್ಜಯಿನ್ಯಾಂ ಚ ಮೇಷಾರ್ಕೆ ಸಿಂಹಸ್ಥೇ ಚ ಬೃಹಸ್ಪತೌ |
ಸಿಂಹಸ್ಥಿತೇಜ್ಯೆ ಸಿಂಹಾರ್ಕೆ ನಾಶಿಕೆ ಗೌತಮೀತಟೆ || ಸುಧಾಬಿನ್ದುವಿನಿಕ್ಷೇಪಾತ್ ಕುಂಭಪರ್ವೇತಿ ವಿಶ್ರುತಮ್ ||
– ಶ್ರೀ. ರಮೇಶ ಶಿಂದೆ. ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.