ಪ್ರಯಾಗರಾಜದಲ್ಲಿ ಮಹಾ’ಕುಂಭ’

‘ಕುಂಭ’ ಪದದ ಅರ್ಥ

‘ಕುಂಭ’ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಭಾರತೀಯ ಸಂಸ್ಕೃತಿಯಲ್ಲಿ ಮಂಗಳದ ಸಂಕೇತವಾಗಿದೆ, ಶಕುನದ ಸಂಕೇತವಾಗಿದೆ, ಇದು ಶೋಭೆ, ಸೌಂದರ್ಯ ಮತ್ತು ಪರಿಪೂರ್ಣತೆಯ ಸಂಕೇತವಾಗಿದೆ. ನೀರು ತುಂಬಿದ ಕಲಶದ ಮೇಲೆ ಕೆಂಪು ಕುಂಕುಮದಿಂದ ಸ್ವಸ್ತಿಕ ಚಿಹ್ನೆಯನ್ನು ಗುರುತಿಸಿದ ನಂತರ, ಅಕ್ಷತೆ ಮತ್ತು ದೂರ್ವೆಯನ್ನು ಕಲಶದಲ್ಲಿ ಹಾಕಲಾಗುತ್ತದೆ. ಕಲಶದ ಮೇಲೆ ಮಾವಿನ ಎಲೆಗಳನ್ನು ಇಟ್ಟು ತೆಂಗಿನಕಾಯಿಯನ್ನು ಇಡುತ್ತಾರೆ, ಅಂತಹ ಕಲಶವನ್ನು ಪ್ರಾಚೀನ ಕಾಲದಿಂದಲೂ ಇಂದಿನವರೆಗೂ ಮಂಗಳದ ಸಂಕೇತವಾಗಿ ಬಳಸಲಾಗುತ್ತದೆ. ‘ಕುಂಭ ಪರ್ವ’ದಲ್ಲಿ ನೆನಪಾಗುವ ಐತಿಹಾಸಿಕ ಕುಂಭವೆಂದರೆ ಅಮೃತ ಕುಂಭ ಅಂದರೆ ‘ಸುಧಾ-ಕಲಶ’ವಾಗಿದೆ.

ಕುಂಭಮೇಳವು ಭಾರತದ ಸಾಂಸ್ಕೃತಿಕ ಮಹಾನತೆಯ ಕೇವಲ ಒಂದು ನೋಟವಲ್ಲದೇ ಸಂತರ ಸಂಗವನ್ನು ನೀಡುವ ಆಧ್ಯಾತ್ಮಿಕ ಸಮ್ಮೇಳನವಾಗಿದೆ. ಇದು ಜಗತ್ತಿನ ಅತಿ ದೊಡ್ಡ ಧಾರ್ಮಿಕ ಹಬ್ಬ! ಕುಂಭ ಉತ್ಸವದ ಆಚರಣೆಯು ಪ್ರಯಾಗ, ಹರದ್ವಾರ (ಹರಿದ್ವಾರ), ಉಜ್ಜಯಿನಿ ಮತ್ತು ತ್ರ್ಯಂಬಕೇಶ್ವರ-ನಾಸಿಕ ಎಂಬ ನಾಲ್ಕು ಪ್ರದೇಶಗಳಲ್ಲಿ ನಡೆಯುತ್ತದೆ. ಇವುಗಳಲ್ಲಿ, ಪೌರಾಣಿಕ ತೀರ್ಥಯಾತ್ರೆಗಳು ಮತ್ತು ಪ್ರಮುಖ ನಗರಗಳು ಹರಿದ್ವಾರದಲ್ಲಿ ಗಂಗಾ ದಡದಲ್ಲಿ, ಪ್ರಯಾಗದಲ್ಲಿ ಗಂಗಾ-ಯಮುನೆಯ ಸಂಗಮದಲ್ಲಿ, ಉಜ್ಜಯಿನಿಯ ಕ್ಷಿಪ್ರಾ ನದಿಯ ದಡದಲ್ಲಿ ಮತ್ತು ನಾಸಿಕದಲ್ಲಿ ನರ್ಮದಾ ತೀರದಲ್ಲಿ ನೆಲೆಗೊಂಡಿವೆ. ಅರ್ಧ ಕುಂಭ ಉತ್ಸವವನ್ನು ಹರಿದ್ವಾರ ಮತ್ತು ಪ್ರಯಾಗದಲ್ಲಿ ಮಾತ್ರ ಆಯೋಜಿಸಲಾಗಿದೆ.

ಪ್ರತಿ ೧೨ ವರ್ಷಗಳಿಗೊಮ್ಮೆ ನಡೆಯುವ ಈ ಹಬ್ಬವು ಹಿಂದೂ ಜೀವನದ ತತ್ವಶಾಸ್ತ್ರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಗುರುಗ್ರಹವು ರಾಶಿಚಕ್ರದ ಮೂಲಕ ಹೋಗಲು ೧೨ ವರ್ಷಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ, ಈ ಕಾರಣದಿಂದಾಗಿ ಕುಂಭಯೋಗವು ಪ್ರತಿ ೧೨ ವರ್ಷಗಳ ನಂತರ ಸಂಭವಿಸುತ್ತದೆ. ಈ ವರ್ಷ ಉತ್ತರಾಖಂಡದ ಪ್ರಯಾಗದಲ್ಲಿ ಮಹಾಕುಂಭ ಉತ್ಸವ ನಡೆಯುತ್ತದೆ.

ಪ್ರಯಾಗರಾಜದಲ್ಲಿ ಜನವರಿ ೧೩ ರಿಂದ ಫೆಬ್ರವರಿ ೨೬, ೨೦೨೫ ರ ಕಾಲಾವಧಿಯಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮುಖ್ಯ ಪರ್ವಕಾಲವು ಜನವರಿ ೧೪, ೨೯ ಮತ್ತು ಫೆಬ್ರವರಿ ೩ ರಂದು ಇರಲಿದೆ.

‘ಕಲ್ಪವಾಸ’ದ ಲಾಭ ಪಡೆಯಿರಿ !

ಪುಷ್ಯ ಶುಕ್ಲ ಏಕಾದಶಿಯಿಂದ ಮಾಘ ಹುಣ್ಣಿಮೆಯವರೆಗೆ ಭಕ್ತರು ಪ್ರಯಾಗದಲ್ಲಿ ‘ಕಲ್ಪವಾಸ (ನೆಲದ ಮೇಲೆ ಮಲಗುವುದು, ತ್ರಿಕಾಲ ಸ್ನಾನ, ವಿಷ್ಣುಪೂಜೆ, ಉಪವಾಸ ಮಾಡುವುದು)’ ಮಾಡುತ್ತಾರೆ. ಇದರಿಂದ ‘ಪಿತೃಗಳಿಗೆ ತೃಪ್ತಿ, ಪಾಪನಾಶ ಮತ್ತು ಭವಸಾಗರದಿಂದ ಮುಕ್ತಿ’ ಈ ಅಕ್ಷಯ ಫಲಗಳು ಸಿಗುತ್ತವೆ.

(ಓದಿ : ಸನಾತನದ ಗ್ರಂಥ ‘ಕುಂಭಪರ್ವದ ಮಹಾತ್ಮೆ’)