ಕೇಂದ್ರ ಸಚಿವ ರಾಮದಾಸ್ ಆಠವಲೆ ಇವರ ಆರೋಪ

ನವದೆಹಲಿ – ಪ್ರಯಾಗರಾಜ್‌ನಲ್ಲಿನ ಮಹಾಕುಂಭವು ಫೆಬ್ರವರಿ 27 ರಂದು ಅಧಿಕೃತವಾಗಿ ಮುಕ್ತಾಯವಾಯಿತು. ಈ ಅವಧಿಯಲ್ಲಿ, ಭಾರತ ಮತ್ತು ವಿದೇಶಗಳಿಂದ 66 ಕೋಟಿ 30 ಲಕ್ಷ ಜನರು ಪವಿತ್ರ ಸ್ನಾನ ಮಾಡಿದರು; ಆದರೆ ಕಾಂಗ್ರೆಸ್ ನ ನಾಯಕರು, ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಉದ್ಧವ್ ಠಾಕ್ರೆ ಮಹಾಕುಂಭಕ್ಕೆ ಹೋಗಲಿಲ್ಲ. ಈ ಬಗ್ಗೆ ಕೇಂದ್ರ ಸಚಿವ ರಾಮದಾಸ್ ಆಠವಲೆ ಟೀಕಿಸುತ್ತಾ, ರಾಹುಲ್ ಗಾಂಧಿ ಮತ್ತು ನಮ್ಮ ಉದ್ಧವ್ ಠಾಕ್ರೆ ಸಾಹೆಬ್ ಕುಂಭಮೇಳಕ್ಕೆ ಹೋಗಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ಹಿಂದೂ ಹೌದೊ ಅಲ್ಲವೋ? ಉದ್ಧವ್ ಠಾಕ್ರೆ ಹಿಂದೂ ಹೌದೊ ಅಲ್ಲವೋ? ಒಂದು ವೇಳೆ ಹಿಂದೂ ಆಗಿದ್ದರೆ ಅವರು ಕುಂಭಮೇಳಕ್ಕೆ ಹೋಗಲೇಬೇಕಿತ್ತು; ಆದರೆ ಈ ಜನರು ಕುಂಭಮೇಳಕ್ಕೆ ಹೋಗಲಿಲ್ಲ. ಇದರ ಅರ್ಥ ಅವರು ಹಿಂದೂ ಧರ್ಮದಲ್ಲಿ ನಂಬಿಕೆ ಇಡುವುದಿಲ್ಲ ಎಂದಾಗುತ್ತದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಹಿಂದೂ ಧರ್ಮದ ಜನರು ಅವರಿಗೆ ಮತ ಹಾಕಬಾರದು. ಕುಂಭಮೇಳಕ್ಕೆ ಹೋಗದಿರುವುದಕ್ಕೆ ಅವರಿಗೆ ಖಂಡಿತವಾಗಿಯೂ ಪಶ್ಚಾತ್ತಾಪ ಆಗುವುದು, ಎಂದು ಹೇಳಿದರು.
ಆಠವಲೆಯವರು ಮುಂದೆ ಮಾತನಾಡಿ, ಈ ಕುಂಭ ಮೋದಿಯವರದ್ದಲ್ಲ. ಈ ಕುಂಭ ಯಾವುದೇ ಯೋಗಿಯವರದ್ದೂ ಅಲ್ಲ. ಈ ಕುಂಭ ಹಿಂದೂ ಧರ್ಮದ ಜನರದ್ದಾಗಿತ್ತು. 144 ವರ್ಷಗಳ ನಂತರ ನಡೆದ ಕುಂಭಮೇಳಕ್ಕೆ ಗಾಂಧಿ ಮತ್ತು ಠಾಕ್ರೆ ಈ ಇಬ್ಬರು ನಾಯಕರು ಸಹಭಾಗ ಆಗುವುದು ಅವಶ್ಯಕವಾಗಿತ್ತು; ಆದರೆ ಅವರು ಹೋಗಲಿಲ್ಲ. ಆದ್ದರಿಂದಲೇ ಜನರು ಅವರನ್ನು ಅಧಿಕಾರದಿಂದ ದೂರ ಇಟ್ಟಿದ್ದಾರೆ. ಈ ಮುಂದೆಯೂ ಜನರು ಅವರಿಗೆ ತಕ್ಕ ಪಾಠ ಕಲಿಸುವರು ಮತ್ತು ರಾಜಕೀಯದಲ್ಲಿ ಅವರ ಸ್ಥಿತಿ ಇನ್ನಷ್ಟು ಹದಗೆಡಲಿದೆ, ಎಂದು ಹೇಳಿದರು.